ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ ನಾಟಿ ಕೆಲಸ ಚರುಕು

Last Updated 21 ಸೆಪ್ಟೆಂಬರ್ 2017, 6:08 IST
ಅಕ್ಷರ ಗಾತ್ರ

ಸಿಂಧನೂರು: ಪ್ರತಿವರ್ಷ ಮಳೆಗಾಲದಲ್ಲಿ ಭತ್ತ ಬೆಳೆಯುತ್ತಿದ್ದ ಸಿಂಧನೂರು ತಾಲ್ಲೂಕಿನ ನೀರಾವರಿ ಪ್ರದೇಶದ ರೈತರ ಬದುಕು ಈ ಬಾರಿ ಗೊಂದಲದ ಗೂಡಾಗಿ ಪರಿಣಮಿಸಿದೆ. ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಅತ್ಯಂತ ಕಡಿಮೆ ಇರುವುದರಿಂದ ಸೆಪ್ಟೆಂಬರ್ ತಿಂಗಳವರೆಗೂ ನೀರಾವರಿ ಸಲಹಾ ಸಮಿತಿಯು ಎಡದಂಡೆ ನಾಲೆಗೆ ನೀರು ಹರಿಸಲಿಲ್ಲ. ಕುಡಿಯುವ ಉದ್ದೇಶಕ್ಕಾಗಿ ಮಾತ್ರ ನೀರು ಬಿಡಲಾಗಿತ್ತು.

ಈ ಬಾರಿ ಭತ್ತ ನಾಟಿ ಮಾಡಬಾರದು, ಮಳೆಯಾಶ್ರಿತ ಬೆಳೆ ಬೆಳೆಯುವಂತೆ ರೈತರಿಗೆ ಸಲಹೆ ನೀಡಲಾಗಿತ್ತು. ರೈತರ ಹೋರಾಟಗಳ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಸೆಪ್ಟೆಂಬರ್ ಮೊದಲ ವಾರದಲ್ಲಿ ಕಾಲುವೆಗೆ ನೀರು ಹರಿಸಿದೆ. ಅದರೊಂದಿಗೆ ಮಳೆಯು ನಿರಂತರವಾಗಿ ಬೀಳುತ್ತಿರುವುದರಿಂದ ಭತ್ತ ನಾಟಿ ಮಾಡುವ ಕಾಯಕ ಭರದಿಂದ ತಾಲ್ಲೂಕಿನೆಲ್ಲೆಡೆ ನಡೆದಿದೆ.

ಆಗಸ್ಟ್ ಮುಗಿಯುವತನಕ ಕಾಲುವೆಗೆ ನೀರು ಬಾರದ ಕಾರಣದಿಂದ ಶೇ 90 ರಷ್ಟು ರೈತರು ಸಸಿ ಬೆಳೆಸಿಲ್ಲ. ಪ್ರತಿವರ್ಷ ದಢೇಸುಗೂರು ಗ್ರಾಮದ ಬಳಿ ಸಸಿ ಹಾಕಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಈ ಬಾರಿ ನದಿಯಲ್ಲಿ ನೀರು ಇಲ್ಲದಿರುವುದರಿಂದ ಅಲ್ಲಿಯೂ ಸಸಿ ಲಭ್ಯವಿಲ್ಲ. ಆದಾಗ್ಯೂ ಭತ್ತದ ಬೆಳೆಯೊಂದೇ ತಮಗೆ ಇರುವ ಆಸರೆ ಎಂದು ಭಾವಿಸಿರುವ ರೈತರು ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ, ಸುರಪುರ, ಶಹಪುರಗಳಿಂದ ಸಸಿ ತಂದು ಭತ್ತ ನಾಟಿ ಮಾಡತೊಡಗಿದ್ದಾರೆ.

ಈಗ ನಾಟಿ ಮಾಡಿದ ಭತ್ತ ಕಾಳು ಕಟ್ಟುವ ಹೊತ್ತಿಗೆ ಚಳಿಗಾಲ ಆರಂಭವಾಗಿರುತ್ತದೆ. ಆ ಸಮಯದಲ್ಲಿ ತೆನೆ ಬಿಡದಂತಾಗುವ ಸಂಭವ ಇದೆ, ಆದರೂ ಧೈರ್ಯದೊಂದಿಗೆ ರೈತಾಪಿ ವರ್ಗ ಭತ್ತ ನಾಟಿಗೆ ಮುಂದಾಗಿದ್ದಾರೆ. ದೂರದೂರದಿಂದ ಭತ್ತದ ಸಸಿ ತಂದಿರುವ ರೈತರಿಗೆ ಕೂಲಿಕಾರರ ಅಭಾವವಿರುವುದು ಮತ್ತೊಂದು ಸಮಸ್ಯೆ ಎದುರಾಗಿದೆ.
ಸಸಿ ತಂದು ವಾರ ಕಳೆದರೂ ನಾಟಿ ಮಾಡುವ ತಂಡ (ಬಂಟ್)ದವರು ಸಿಗದಿರುವದರಿಂದ ನಾಟಿ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಿ ಆತಂಕ ಪಡುವಂತಾಗಿದೆ.

ಮಳೆಯಾಶ್ರಿತ ಬೆಳೆ ಈ ವರ್ಷ ಅನಿವಾರ್ಯವೆನ್ನುವ ಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಮೆಕ್ಕೆಜೋಳ ಬಿತ್ತಿದ್ದ ರೈತರು ಅದನ್ನು ಹರಗಿ ಭತ್ತ ನಾಟಿಯಲ್ಲಿ ತೊಡಗಿದ್ದಾರೆ. ಈ ಮಧ್ಯೆ ಲೀಸ್ ಆಧಾರದಲ್ಲಿ ಕೃಷಿ ಮಾಡುವ ರೈತರು ಪ್ರತಿವರ್ಷದಂತೆ ಎಕರೆಗೆ 12, 15 ಚೀಲದಂತೆ ಭತ್ತ ಕೊಡಲು ಒಪ್ಪದೆ ಎಲ್ಲ ಖರ್ಚನ್ನು ಭೂಮಾಲೀಕರೇ ಕೊಡಬೇಕು. ಬೆಳೆ ಬಂದ ನಂತರ ಸಮನಾಗಿ ಹಂಚಿಕೊಳ್ಳುವ ಒಪ್ಪಂದಕ್ಕೆ ಬಂದರೆ ಜಮೀನು ಉಳುಮೆ ಮಾಡುವುದಾಗಿ ಹೇಳುತ್ತಿದ್ದಾರೆ. ಇದರಿಂದ ಭೂಮಿ ಹೊಂದಿರುವ ರೈತರಿಗೆ ಮತ್ತೊಂದು ತಲೆನೋವಾಗಿದೆ.

ಲೀಸ್ ಆಧಾರದಲ್ಲಿ ಕೃಷಿ ಮಾಡುವ ರೈತರು ಚಳಿಗಾಲಕ್ಕೆ ಸಿಕ್ಕು ಭತ್ತದ ಇಳುವರಿ ಬರದಿದ್ದರೆ ಹೊಲದ ಮಾಲೀಕರಿಗೆ, ಗೊಬ್ಬರ, ಕ್ರಿಮಿನಾಶಕ ವ್ಯಾಪಾರಸ್ಥರಿಗೆ ಕೊಡಬೇಕಾದ ಹಣ ಎಲ್ಲಿಂದ ಕೊಡಬೇಕೆನ್ನುವುದು ರೈತಾಪಿಗಳಿಗೆ ದೊಡ್ಡ ಚಿಂತೆಯಾಗಿದೆ. ಒಟ್ಟಾರೆ ಈ ಬಾರಿ ಜಮೀನನ್ನು ಆಶ್ರಯಿಸಿದ ಭೂಮಾಲೀಕರು, ಉಳುಮೆ ಮಾಡುವ ರೈತರು, ಕೃಷಿ ಕಾರ್ಮಿಕರು ತಮ್ಮ ತಮ್ಮದೇ ಸಮಸ್ಯೆ ಎದುರಿಸುವ ಗೊಂದಲದಲ್ಲಿದ್ದಾರೆ.

‘ನಿರಂತರವಾಗಿ ಮಳೆಯಾಗುತ್ತಿರು ವುದರಿಂದ ಜೋಳ, ಸೂರ್ಯಕಾಂತಿ ಬಿತ್ತನೆ ಮಾಡಲು ಆಗುತ್ತಿಲ್ಲ. ಇದರಿಂದ ರೈತರು ಬದುಕು ಗೊಂದಲದ ಗೂಡಾಗಿದೆ’ ಎನ್ನುತ್ತಾರೆ ರೈತ ಮುಖಂಡರಾದ ಶರಣೇಗೌಡ ಗೊರೇಬಾಳ, ಶಂಕ್ರಮ್ಮ ಜಂಗಮರಹಟ್ಟಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT