ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ತೆನೆಯಲ್ಲೇ ಮೊಳಕೆಯೊಡೆದ ರಾಗಿ

Last Updated 21 ಸೆಪ್ಟೆಂಬರ್ 2017, 6:53 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನಲ್ಲಿ ಕಟಾವು ಆಗಿರುವ ರಾಗಿ ಬೆಳೆಯು ಜಡಿ ಮಳೆಗೆ ಮೊಳಕೆಯೊಡೆದು ರೈತರಿಗೆ ಹೆಚ್ಚಿನ ನಷ್ಟವಾಗಿದೆ. ಮುಂಗಾರು ಆರಂಭಕ್ಕೂ ಮೊದಲು ತಾಲ್ಲೂಕಿನ ಹಲವೆಡೆ ಮಳೆಯಾಗಿತ್ತು. ಹೀಗಾಗಿ ಆ ಭಾಗದ ರೈತರು ರಾಗಿ ಬಿತ್ತನೆ ಮಾಡಿದ್ದರು. ಇತ್ತೀಚೆಗೆ ರೈತರು ರಾಗಿ ಬೆಳೆ ಕಟಾವು ಮಾಡಿ ಕಣಕ್ಕೆ ಹಾಕಿದ್ದರೆ. ಈ ನಡುವೆ ವಾರದ ಹಿಂದೆ ತಾಲ್ಲೂಕಿನಾದ್ಯಂತ ಮಳೆಯಾಗಿದ್ದರಿಂದ ರಾಗಿ ತೆನೆಗಳು ಕಣದಲ್ಲಿ ಮೊಳಕೆಯೊಡೆದಿವೆ.

ಕದರಿಪುರ, ಆವಣಿ, ಕೆಂಪಾಪುರ, ಪುತ್ತೇರಿ, ಕೀಲುಹೊಳಲಿ, ಹೊಸಕೆರೆ, ದೇವರಾಯಸಮುದ್ರ, ಹನುಮನಹಳ್ಳಿ, ವಮ್ಮಸಂದ್ರ, ಕುರುಡುಮಲೆ, ಮಲ್ಲಕಚ್ಚನಹಳ್ಳಿ, ಖಾದ್ರಿಪುರ, ತಾಯಲೂರು, ಮೋತಕಪಲ್ಲಿ, ಮಡಿವಾಳ, ದೂಲಪಲ್ಲಿ, ಕಪ್ಪಲಮಡಗು, ದುಗ್ಗಸಂದ್ರ, ಮಲ್ಲನಾಯಕನಹಳ್ಳಿ, ತಿಮ್ಮರಾವುತನಹಳ್ಳಿ, ಮೋಪರಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ರಾಗಿ ತೆನೆಗಳು ಮೊಳಕೆಯೊಡೆದಿವೆ. ರಾಗಿ ಹುಲ್ಲು ಸಹ ಕೊಳೆಯಲಾರಂಭಿಸಿದೆ.

ಕೆಲ ಜಮೀನುಗಳಲ್ಲಿ ಕಟಾವಿಗೆ ಬಂದಿರುವ ರಾಗಿ ಬೆಳೆ ನೆಲಕ್ಕೆ ಬಾಗಿ ತೆನೆಗಳು ಕೊಳೆತಿವೆ. ಜಡಿ ಮಳೆಯಿಂದಾಗಿ ರಾಗಿ ಒಕ್ಕಣೆ ಮಾಡಲು ಅವಕಾಶವಾಗಿಲ್ಲ. ಹೀಗಾಗಿ ರೈತರು ರಾಗಿ ಬೆಳೆಗೆ ಟಾರ್ಪಲ್‌ ಹೊದಿಸಿ ಕಣದಲ್ಲೇ ಬಿಟ್ಟಿದ್ದಾರೆ.

‘ಗ್ರಾಮೀಣ ಭಾಗದ ಕೆಲ ರೈತರು ವಾಡಿಕೆ ಬೆಳೆಯಾಗಿ ಮುಂಗಾರಿಗೂ ಮೊದಲೇ ರಾಗಿ ಬೆಳೆಯುತ್ತಾರೆ. ಆದರೆ, ಇತ್ತೀಚಿಗೆ ಸುರಿದ ಮಳೆಯಿಂದ ರಾಗಿ ತೆನೆಗಳು ಕಣದಲ್ಲೇ ಮೊಳಕೆಯೊಡೆದಿವೆ. ಇದರಿಂದ ಸಾಕಷ್ಟು ನಷ್ಟವಾಗಿದೆ’ ಎಂದು ಚೆನ್ನಾಪುರ ಗ್ರಾಮದ ರೈತ ಕೊದಂಡರಾಮ ಅಳಲು ತೋಡಿಕೊಂಡರು.\

‘ಕೃಷಿ ಇಲಾಖೆ ಅಧಿಕಾರಿಗಳು ರಾಗಿ ಬೆಳೆ ನಷ್ಟವಾಗಿರುವ ಬಗ್ಗೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ನಂತರ ಸರ್ಕಾರ ರೈತರಿಗೆ ಬೆಳೆ ಪರಿಹಾರ ಕೊಡಬೇಕು’ ಎಂದು ಅಂಬ್ಲಿಕಲ್ ಗ್ರಾಮದ ರೈತ ನಾರಾಯಣಸ್ವಾಮಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT