ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಕರ್ಯ ಕೊರತೆ; 22 ಖಾಸಗಿ ಶಾಲೆಗಳಿಗೆ ನೋಟಿಸ್‌

Last Updated 21 ಸೆಪ್ಟೆಂಬರ್ 2017, 7:01 IST
ಅಕ್ಷರ ಗಾತ್ರ

ಚಿಕ್ಕಮಗಳೂರು:  ಜಿಲ್ಲೆಯಲ್ಲಿ 2017–18ನೇ ಸಾಲಿನಲ್ಲಿ ಆರಂಭವಾಗಿರುವ 22 ಖಾಸಗಿ ಶಾಲೆಗಳಲ್ಲಿ ಸೌಲಭ್ಯಗಳ ಕೊರತೆ ಇದ್ದು, 6 ತಿಂಗಳೊಳಗೆ ಸೌಲಭ್ಯಗಳನ್ನು ಕಲ್ಪಿಸಿಕೊಳ್ಳದಿದ್ದರೆ ಕ್ರಮ ಜರುಗಿಸುವುದಾಗಿ ಶಾಲೆಗಳಿಗೆ ನೋಟಿಸ್‌ ನೀಡಲು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

‘ಹಿಂದಿನ ಡಿಡಿಪಿಐ ಎಸ್‌.ಜಿ.ನಾಗೇಶ್‌ ಮಾಡಿದ ನಿಯಮಗಳನ್ನು ಲೆಕ್ಕಿಸದೆ ಹೊಸ ಶಾಲೆಗಳ ಆರಂಭಕ್ಕೆ ಅನುಮೋದನೆ ನೀಡಿದ್ದಾರೆ’ ಎಂದು ಬಹಳಷ್ಟು ಸದಸ್ಯರು ದೂಷಿಸಿದರು. ಆಟದ ಮೈದಾನ, ಶೌಚಾಲಯ, ಕಾಂಪೌಂಡ್‌, ಕಟ್ಟಡದ 30 ವರ್ಷ ಭೋಗ್ಯ ಕರಾರು ಇಲ್ಲದಿರುವುದು ಪರಿಶೀಲನೆ ವೇಳೆ ಕಂಡುಬಂದಿವೆ.

ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಏಕಾಏಕಿ ಮಾನ್ಯತೆ ರದ್ದುಗೊಳಿಸಿದರೆ ದಾಖಲಾಗಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ವಿದ್ಯಾರ್ಥಿಗಳು ಮತ್ತು ಪೋಷಕರ ಹಿತದೃಷ್ಟಿಯಿಂದ ಶಾಲೆಗಳಿಗೆ ಸೌಕರ್ಯ ಕಲ್ಪಿಸಿಕೊಳ್ಳಲು ಗಡುವು ನೀಡಬೇಕು. ಲೋಪಗಳನ್ನು ಸರಿಪಡಿಸಿಕೊಳ್ಳದಿದ್ದರೆ ಶಾಲೆಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ನಿಲುವು ವ್ಯಕ್ತಪಡಿಸಿದರು.

ಹಿಂದಿನ ಡಿಡಿಪಿಐ ನಾಗೇಶ್‌ ಅವರ ಲೋಪಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜವಾಬ್ದಾರಿ ನಿರ್ವಹಿಸುತ್ತಿರುವ ಜಿಲ್ಲಾಧಿಕಾರಿ ಜಿ.ಸತ್ಯವತಿ ಸಭೆಗೆ ತಿಳಿಸಿದರು.

22 ಶಾಲೆಗಳಿಗೆ ನೋಟಿಸ್‌ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿಪಿಐ) ಎಂ.ಜಿ.ಬಸವರಾಜು ಅವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಸದಸ್ಯೆಗೆ ಅಪಮಾನ; ವರದಿಗೆ ಸೂಚನೆ ‘ಶೃಂಗೇರಿಯ ಸರ್ಕಾರಿ ಪ್ರೌಢಶಾಲೆಗೆ ಶಿಕ್ಷಕರ ದಿನಾಚರಣೆಗೆ ಆಹ್ವಾನಿಸಿ,ನನಗೆ ಆಸನ ವ್ಯವಸ್ಥೆ ಮಾಡದೆ ಅವಮಾನಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಶಾಲೆಯ ಶಿಕ್ಷಕ ಶಿಕ್ಷಕ ಮಂಜುನಾಥ್‌ ವಿರುದ್ಧ ಕ್ರಮ ಜರುಗಿಸಿ, ಪ್ರಮಾದಕ್ಕೆ ಕ್ಷಮೆ ಕೋರುವಂತೆ ತಿಳಿಸಬೇಕು’ ಎಂದು ಮೆಣಸೆ ಕ್ಷೇತ್ರದ ಸದಸ್ಯೆ ಶಿಲ್ಪಾ ರವಿ.ಎಚ್‌.ಎಚ್‌ ಕೋರಿದರು. ‘ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಗೆ ಆಹ್ವಾನವನ್ನೇ ನೀಡಿಲ್ಲ. ಶಿಷ್ಟಾಚಾರ ಪಾಲನೆಯಲ್ಲಿ ಎಡವಟ್ಟುಗಳು ಆಗುತ್ತಿವೆ. ಪ್ರಮಾದ ಎಸಗಿರುವವ ಶಿಕ್ಷಕನಿಗೆ ಕ್ಷಮೆಯಾಚಿಸುವಂತೆ ಸೂಚಿಸಬೇಕು’ ಎಂದು ಕೆಲ ಸದಸ್ಯರು ಹೇಳಿದರು.

ಈ ವಿಷಯವನ್ನು ಸದಸ್ಯರು ನನ್ನ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿ 10 ದಿನಗಳಲ್ಲಿ ವರದಿ ನೀಡುವಂತೆ ಡಿಡಿಪಿಐಗೆ ಸೂಚನೆ ನೀಡಿದ್ದೇನೆ ಎಂದು ಅಧ್ಯಕ್ಷೆ ಚೈತ್ರಶ್ರೀ ತಿಳಿಸಿದರು. ಶಿಕ್ಷಕರ ದಿನಾಚರಣೆ ಆಹ್ವಾನಪತ್ರವನ್ನು ಸದಸ್ಯರಿಗೆ ತಲುಪಿಸುವುದನ್ನು ಸಿಆರ್‌ಪಿಗಳಿಗೆ ವಹಿಸಲಾಗಿತ್ತು. ಯಾವ ಹಂತದಲ್ಲಿ ಲೋಪವಾಗಿದೆ ಎಂಬುದನ್ನು ಪರಿಶೀಲಿಸುತ್ತೇನೆ ಎಂದು ಡಿಡಿಪಿಐ ಹೇಳಿದರು.

ಮೂಡಿಗೆರೆ ತಾಲ್ಲೂಕಿನಲ್ಲಿ ಸುಮಾರು 20 ಶಿಕ್ಷಕರ ಕೊರತೆ ಇದೆ. ಮಲೆನಾಡು ಭಾಗದಲ್ಲಿ ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರತನ್‌ ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 730 ಹೆಚ್ಚುವರಿ ಶಿಕ್ಷಕರು ಇದ್ದು, ಮರು ಹೊಂದಾಣಿಕೆ ಮಾಡಿ ಬಯಲುಸೀಮೆಯಿಂದ 234 ಶಿಕ್ಷಕರನ್ನು ಮಲೆನಾಡು ಭಾಗಕ್ಕೆ ನಿಯೋಜಿಸಲಾಗಿದೆ ಎಂದು ಡಿಡಿಪಿಐ ತಿಳಿಸಿದರು.

234 ಶಿಕ್ಷಕರು ನಿಯೋಜನೆ ಮಾಡಿರುವ ಶಾಲೆಗಳಲ್ಲಿ ಕರ್ತವ್ಯಕ್ಕೆ ಮಾಡಿಕೊಂಡಿರುವ ಬಗ್ಗೆ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿಯವರು ಡಿಡಿಪಿಗೆ ಸೂಚಿಸಿದರು.
ಶಿಕ್ಷಕಿ ಅಮಾನತಿಗೆ ನಿರ್ಧಾರ ‘ಶಿಕ್ಷಕಿ ರೇಣುಕಾ ಅವರು ಶಂಗೇರಿ ತಾಲ್ಲೂಕಿನ ಕಾವಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ₹ 50 ಸಾವಿರ ಹಣ ದುರುಪಯೋಗಿಡಿಸಿಕೊಂಡಿದ್ದಾರೆ. ಅಲ್ಲದೆ ಕೆಲ ತಿಂಗಳಿಂದ ಅನಧಿಕೃತವಾಗಿ ರಜೆ ತೆರಳಿದ್ದಾರೆ. ಈ ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸದಸ್ಯರೊಬ್ಬರು ಒತ್ತಾಯಿಸಿದರು.

ತಕ್ಷಣವೇ ಶಿಕ್ಷಕಿ ಅಮಾನತಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಡಿಡಿಪಿಐಗೆ ಸೂಚನೆ ನೀಡಿದರು. ‘ನನ್ನ ಕ್ಷೇತ್ರ ಲಕ್ಕವಳ್ಳಿ ವ್ಯಾಪ್ತಿಯಲ್ಲಿಯೂ ಮನೆ ಮೇಲೆ ಹಾದುಹೋಗಿರುವ ವಿದ್ಯುತ್‌ ಮಾರ್ಗ ತೆರವುಗೊಳಿಸಿಲ್ಲ. ಮೆಸ್ಕಾಂ ಸಿಬ್ಬಂದಿ ಉದಾಸೀನ ವಹಿಸಿದ್ದಾರೆ. ನನ್ನ ಕ್ಷೇತ್ರ ಲಕ್ಕವಳ್ಳಿ ವ್ಯಾಪ್ತಿಯಲ್ಲಿಯೂ ಮನೆಯೊಂದರ ಮೇಲೆ ಹಾದುಹೋಗಿರುವ ವಿದ್ಯುತ್‌ ಮಾರ್ಗ ತೆರವುಗೊಳಿಸಿಲ್ಲ. ಮೆಸ್ಕಾಂ ಸಿಬ್ಬಂದಿ ಉದಾಸೀನ ವಹಿಸಿದ್ದಾರೆ. ಶಾಲೆ–ಕಾಲೇಜು ಕಟ್ಟಡಗಳ ಮೇಲೆ ಹಾದುಹೋಗಿರುವ ವಿದ್ಯುತ್‌ ಮಾರ್ಗ ಸ್ಥಳಾಂತರ ನಿಟ್ಟಿನಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ’ ಎಂದು ಅಧ್ಯಕ್ಷೆ ಚೈತ್ರಶ್ರೀ ಪ್ರಶ್ನಿಸಿದರು.

‘ಕಡೂರು, ತರೀಕೆರೆ ತಾಲ್ಲೂಕಿನಲ್ಲಿ 53 ಶಾಲೆಗಳ ಮೇಲೆ ಹಾದುಹೋಗಿದ್ದ ವಿದ್ಯುತ್‌ ಮಾರ್ಗವನ್ನು ಈವರೆಗೆ ತೆರವುಗೊಳಿಸಲಾಗಿದೆ’ ಎಂದು ಮೆಸ್ಕಾಂ ಅಧಿಕಾರಿ ತಿಳಿಸಿದರು. ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್‌ನಲ್ಲಿ ನೀರು ಪೂರೈಸಲಾಗಿತ್ತು. ಕೆಲವು ಗ್ರಾಮಗಳಲ್ಲಿ ನಾಲ್ಕು ತಿಂಗಳಿನಿಂದ ಟ್ಯಾಂಕರ್‌ನವರಿಗೆ ಬಾಡಿಗೆ ನೀಡಿಲ್ಲ ಎಂದು ರವೀಂದ್ರ ಬೆಳವಾಡಿ ಗಮನಕ್ಕೆ ತಂದರು. ಇದಕ್ಕೆ ಸದಸ್ಯ ಶರತ್‌ಕೃಷ್ಣಮೂರ್ತಿ, ಆನಂದಪ್ಪ ದನಿಗೂಡಿಸಿದರು.

ಕೆಲವು ಕಡೆ ನೀರಿನ ಸಮಸ್ಯೆ ಈಗಲೂ ಇದೆ. ಅಂಥ ಗ್ರಾಮಗಳಿಗೆ ಟ್ಯಾಂಕರ್‌ನಲ್ಲಿ ನೀರು ಪೂರೈಸಬೇಕು. ಜಾನುವಾರು ತೊಟ್ಟಿಗಳನ್ನು ನಿರ್ಮಿಸಬೇಕು ಎಂದು ರವೀಂದ್ರ ಬೆಳವಾಡಿ ಮನವಿ ಮಾಡಿದರು. ಟ್ಯಾಂಕರ್‌ ಬಾಡಿಗೆ ಪಾವತಿಸದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೀರಿನ ಸಮಸ್ಯೆ, ಟ್ಯಾಂಕರ್‌ನಲ್ಲಿ ನೀರು ಪೂರೈಕೆಗೆ ಸಂಬಂಧಿಸಿದಂತೆ ಸಭೆ ನಡೆಸಿ ತಹಶೀಲ್ದಾರ್‌ಗಳು, ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಸತ್ಯವತಿ ತಿಳಿಸಿದರು. ಜಿಲ್ಲೆಗೆ ಕುಡಿಯುವ ನೀರಿಗೆ ₹ 23. 18 ಕೋಟಿ ಮೊತ್ತದ ಕಂಟಿಜೆಂಟ್‌ ಯೋಜನೆ ಸಿದ್ದಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ತಿಳಿಸಿದರು.

ಕೊಪ್ಪ ತಾಲ್ಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ಸಿಕ್ಕಿದೆ. ಈವರೆಗೆ ಯೋಜನಾ ವರದಿ ತಯಾರಿಸಿಲ್ಲ ಎಂದು ಸಭೆ ಹರಂದೂರು ಕ್ಷೇತ್ರದ ದಿವ್ಯಾ ದಿನೇಶ್‌ ಹೇಳಿದರು. ಯೋಜನೆಗೆ ಸಂಬಂಧಿಸಿದಂತ ಪರಿಷ್ಕತ ಪ್ರಸ್ತಾವ ಸಲ್ಲಿಸಬೇಕಿದೆ. 15 ದಿನಗಳಲ್ಲಿ ಯೋಜನಾ ವರದಿ ಸಿದ್ಧಪಡಿಸಲಾಗುವುದು ಎಂದು ಎಂಜಿನಿಯರ್‌ ತಿಳಿಸಿದರು.

ಕಳಸಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಎಂಟು ವರ್ಷದಿಂದ ನನೆಗುದಿಗೆ ಬಿದ್ದಿದೆ ಎಂದು ಕೆ.ಆರ್‌.ಪ್ರಭಾಕರ್‌ ಗಮನ ಸೆಳೆದರು. ಈ ಯೋಜನೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಸರ್ಕಾರ ಪ್ರಸ್ತಾವ ಕಳಿಸಲಾಗಿದೆ. ಯೋಜನೆಯ ವಿನ್ಯಾಸ, ವರದಿಯನ್ನು ಅನುಮೋದನೆ ಕಳುಹಿಸಲಾಗಿದೆ ಎಂದು ಎಂಜಿನಿಯರ್‌ ತಿಳಿಸಿದರು.

ಕೆಲವೆಡೆ ಶುದ್ಧಗಂಗಾ ಘಟಕಗಳಲ್ಲಿ ಮುಖ್ಯಮಂತ್ರಿ, ಶಾಸಕರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ಭಾವಚಿತ್ರ ಅಳವಡಿಸಿದ್ದಾರೆ. ಯಾವ ಆದೇಶದಂತೆ ಇವರೆಲ್ಲರ ಚಿತ್ರ ಹಾಕಲಾಗಿದೆ. ಯಾರ್‌್ಯಾರ ಚಿತ್ರ ಹಾಕಲು ಅನಮತಿ ಇದೆ ಎಂಬುದನ್ನು ತಿಳಿಸಬೇಕು ಎಂದು ರತನ್‌ ಕೋರಿದರು.

ಶುದ್ಧ ಗಂಗಾ ಘಟಕಗಳಿಗೆ ಸಂಬಂಧಿಸಿದಂತೆ ಸಭೆ ನಡೆಸಲಾಗುವುದು. ಈ ಬಗ್ಗೆ ಮಾಹಿತಿ ಪಡೆಯಲಾಗುವುದು. ಘಟಕದಲ್ಲಿ ಯಾರ ಭಾವಚಿತ್ರ ಹಾಕಲು ಅನುಮತಿ ಇದೆ ಎಂಬ ಕುರಿತು ಎಲ್ಲ ಸದಸ್ಯರಿಗೆ ಸುತ್ತೋಲೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಶಿರವಾಸೆ ಗ್ರಾಮದಲ್ಲಿ ಸುರೇಶ್‌ ಎಂಬುವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಬಿಡುಗಡೆ ಚೀಟಿಯಲ್ಲಿ ಎಚ್‌1ಎನ್‌1 ಶಂಕೆ ವ್ಯಕ್ತಪಡಿಸಲಾಗಿದೆ. ಎಚ್‌1ಎನ್‌1 ನಿಂದ ಅವರು ಮೃತಪಟ್ಟಿದ್ದಾರೆಯೇ ಎಂಬುದನ್ನು ತಿಳಿಸಬೇಕು ಎಂದು ಕವಿತಾ ಲಿಂಗರಾಜ್‌ ಕೋರಿದರು. ಪ್ರಕರಣದ ಬಗ್ಗೆ ವಿಚಾರಣೆ ವರದಿ ನೀಡುವಂತೆ ಚೈತ್ರಶೀ ಅವರು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT