ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿಯನ್ ಅಮರವಾಗಿಸಲು ಅಭಿಮಾನಿಯ ಅಲೆದಾಟ

Last Updated 21 ಸೆಪ್ಟೆಂಬರ್ 2017, 7:23 IST
ಅಕ್ಷರ ಗಾತ್ರ

ಶಿವಮೊಗ್ಗ: ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣದಿಂದೆತ್ತ ಸಂಬಂಧವಯ್ಯ ಸಮುದ್ರದ ಉಪ್ಪು ಬೆಟ್ಟದ ನೆಲ್ಲಿ... –ಅಕ್ಕ ಮಹಾದೇವಿಯ ಈ ವಚನದ ಸಾಲುಗಳು ಭಾರತದ ಕ್ಷೀರ ಕ್ರಾಂತಿಯ ಹರಿಕಾರ ಕೇರಳದ ವರ್ಗಿಸ್ ಕುರಿಯನ್ ಹಾಗೂ ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟದ ಮಾಚೇನಹಳ್ಳಿ ಉತ್ಪಾದನಾ ಘಟಕದ ಎಂಜಿನಿಯರ್ ಡಿ.ವಿ. ಮಲ್ಲಿಕಾರ್ಜುನ ಅವರಿಗೆ ಅಕ್ಷರಶಃ ಅನ್ವಯಿಸುತ್ತದೆ.

ಕುರಿಯನ್‌ (1921–2012) ಅವರ ಸಾಧನೆಗೆ ನೂರಾರು ಪ್ರಶಸ್ತಿ, ಪುರಸ್ಕಾರ, ಮನ್ನಣೆ ದೊರೆತಿದ್ದರೂ, ಅವರ ಹೆಸರಿನಲ್ಲಿ ದೇಶದ ಯಾವ ವಿಶ್ವವಿದ್ಯಾಲಯದಲ್ಲೂ ಅಧ್ಯಯನ ಪೀಠ ಸ್ಥಾಪನೆಯಾಗಿಲ್ಲ. ಅದಕ್ಕೆ ಮಲ್ಲಿಕಾರ್ಜುನ್ ಸದ್ದಿಲ್ಲದೇ ದಶಕದಿಂದ ಹೋರಾಟ ನಡೆಸುತ್ತಿದ್ದಾರೆ. ಅವರು ಪ್ರಥಮ ಬಾರಿ ಅಮುಲ್‌ ಘಟಕ ಸ್ಥಾಪಿಸಿದ್ದ ಗುಜರಾತ್‌ನ ಆನಂದ್ ಕೃಷಿ ವಿಶ್ವ ವಿದ್ಯಾಲಯದಲ್ಲಿ ಡಾ.ವರ್ಗಿಸ್ ಕುರಿಯನ್‌ ಅಧ್ಯಯನ ಪೀಠ ಸ್ಥಾಪಿಸ ಬೇಕು ಎಂದು ಹಲವು ಬಾರಿ ದೆಹಲಿಗೆ ಹೋಗಿ ಮನವಿ ಸಲ್ಲಿಸಿದ್ದಾರೆ.

ದೇಶದ ಪ್ರಧಾನಮಂತ್ರಿ, ಕೃಷಿ ಮಂತ್ರಿಗಳನ್ನು ಭೇಟಿಯಾಗಿ ಪೀಠ ಸ್ಥಾಪನೆಗೆ ಅಗತ್ಯ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಲ್ಲಿ ಸ್ಥಾಪನೆಯಾದ ನಂತರ ದೇಶದ ಎಲ್ಲ ಕೃಷಿ ಹಾಗೂ ಪಶು ಸಂಗೋಪನಾ ವಿಶ್ವವಿದ್ಯಾಲಯಗಳಲ್ಲೂ ಅಧ್ಯಯನ ಪೀಠ ಸ್ಥಾಪನೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎನ್ನುವುದು ಅವರ ಆಶಯ.

ಮಲ್ಲಿಕಾರ್ಜುನ್‌ ಅವರ ಶ್ರಮದ ಫಲವಾಗಿ ಈಗಾಗಲೇ ಕುರಿಯನ್ ಅವರು 1948ರಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಓದಿದ್ದ ಅಮೆರಿಕದ ಮಿಚಿಗನ್‌ ಸ್ಟೇಟ್ ಯೂನಿವರ್ಸಿಟಿ ಆವರಣದಲ್ಲಿ ಅವರ ಕಂಚಿನ ಪ್ರತಿಮೆ ಸ್ಥಾಪನೆಯಾಗಿದೆ. ಈಚೆಗೆ ದೆಹಲಿಗೆ ತೆರಳಿ ಕೇಂದ್ರ ಕೃಷಿ ಮಂತ್ರಿ ರಾಧಾ ಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಅಧ್ಯಯನ ಪೀಠ ಸ್ಥಾಪನೆಗೆ ಒತ್ತಾಯ ಮಾಡಿದ್ದಾರೆ. ಈ ಎಲ್ಲ ಖರ್ಚು ವೆಚ್ಚಗಳನ್ನೂ ಮಲ್ಲಿಕಾರ್ಜುನ್, ಅಮೆರಿಕದಲ್ಲಿ ನೆಲೆಸಿರುವ ಅವರ ಮಗಳು ಸ್ಮಿತಾ ಹಾಗೂ ಅಳಿಯ ವಿಕ್ರಮ್‌ ಅವರೇ ಭರಿಸುತ್ತಿದ್ದಾರೆ ಎನ್ನುವುದು ವಿಶೇಷ.

ಕುರಿಯನ್ ಅವರಿಂದ ಕೋಟ್ಯಂತರ ಜನರು ಉಪಯೋಗ ಪಡೆದಿದ್ದರೂ, ಅವರ ಋಣ ತೀರಿಸಲುಮುಂದಾದ ಜನರು ವಿರಳ. ಹಾಗಾಗಿಯೇ ಮಲ್ಲಿಕಾರ್ಜುನ್ ಅವರು ಎಲ್ಲರ ನಡುವೆ ವಿಭಿನ್ನವಾಗಿ ಕಾಣುತ್ತಾರೆ. ಕ್ಷೀರ ಕ್ರಾಂತಿಯ ಹರಿಹಾರ ಕುರಿಯನ್‌: ಕೇರಳದಲ್ಲಿ ಹುಟ್ಟಿದ ಕುರಿಯನ್ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಓದಿದ್ದರೂ ಭಾರತದ ಕೃಷಿ ವ್ಯವಸ್ಥೆ ಸುಧಾರಿಸಲು, ಬಡತನ ನಿರ್ಮೂಲನೆಗಾಗಿ ಪಣತೊಟ್ಟಿದ್ದರು. ಆರಂಭದಲ್ಲಿ ಗುಜರಾತ್‌ನ ಆನಂದ್ ಬಳಿ ಸಹಕಾರ ತತ್ವದ ಅಡಿ ಅವರು ಸ್ಥಾಪಿಸಿದ್ದ ಆನಂದ್‌ ಹಾಲು ಉತ್ಪಾದಕರ ಸಹಕಾರಿ ನಿಯಮಿತ ಇಂದು ವಿಶ್ವಾದ್ಯಂತ ‘ಅಮುಲ್‌’ ಎಂದೇ ಪ್ರಸಿದ್ಧ.

ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಬಳಸುವ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಶಿಮುಲ್ ದೇಶದ ಕೋಟ್ಯಂತರ ಜನರ ಬಡತನ ನಿರ್ಮೂಲನೆಗೆ ನಾಂದಿ ಹಾಡಿತ್ತು. ಕುರಿಯನ್ ಮತ್ತು ಅವರ ತಂಡದ ಶ್ರಮದ ಫಲವಾಗಿ ಭಾರತ ಹೈನು ಉತ್ಪಾದನೆಯಲ್ಲಿ ಎತ್ತರದ ಸ್ಥಾನಕ್ಕೆ ತಲುಪಿತ್ತು. ಒಂದು ಕಡೆ ಹಾಲು ಉತ್ಪದನೆಗೆ ದೊರೆತ ಉತ್ತೇಜನದಿಂದ ಕೋಟ್ಯಂತರ ರೈತರು ಆರ್ಥಿಕ ಸ್ವಾವಲಂಬನೆ ಸಾಧಿಸಿದರೆ, ಲಕ್ಷಾಂತರ ಜನರಿಗೆ ಉದ್ಯೋಗಾವಕಾಶ ದೊರೆತವು. ಮತ್ತೊಂದು ಕಡೆ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ದೇಶದ ಮಕ್ಕಳಿಗೆ ನಿಗದಿತ ಪ್ರಮಾಣದಲ್ಲಿ ಹಾಲು ದೊರೆಯುವಂತಾಯಿತು.

ಕುರಿಯನ್ ಅವರ ಸಾಧನೆಗೆ ಭಾರತ ಸರ್ಕಾರ ಪದ್ಮವಿಭೂಷಣ ನೀಡಿ ಗೌರವಿಸಿದೆ. ವಿವಿಧ ರಾಜ್ಯಗಳು, ದೇಶವಿದೇಶಗಳು ಪ್ರಶಸ್ತಿ ನೀಡಿ ಪುರಸ್ಕರಿಸಿವೆ. ವಿವಿಧ ರಾಷ್ಟ್ರಗಳ 11 ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿರವುದು ಅವರ ಸಾಧನೆಯ ಶಿಖರದ ಧ್ಯೇತಕ.

ಹೈನುಗಾರಿಕೆ ಘಟಕದ ಎಂಜಿನಿಯರ್: ಮಲ್ಲಿಕಾರ್ಜುನ್ ಅವರದು ಹೊಳಲ್ಕೆರೆ ತಾಲ್ಲೂಕು ರಾಮಗಿರಿ. ತಂದೆ ಡಿ. ವೀರಭದ್ರಪ್ಪ ಎಂಜಿನಿಯರ್ ಆಗಿದ್ದರು. ತಾಯಿ ನಾಗರತ್ನಮ್ಮ ಗೃಹಿಣಿ. ರಾಯಚೂರಿನ ಕೃಷಿ ವಿವಿಯಲ್ಲಿ ಕೃಷಿ ಎಂಜಿನಿಯರಿಂಗ್, ಹರಿಯಾಣದ ರಾಷ್ಟ್ರೀಯ ಹೈನುಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. 1982ರಲ್ಲಿ ಕರ್ನಾಟಕ ಹೈನು ಅಭಿವೃದ್ಧಿ ನಿಗಮದ ಎಂಜಿನಿಯರ್ ಆಗಿ ನೇಮಕಗೊಂಡು ಮೈಸೂರು, ಬೆಂಗಳೂರು, ದಾವಣಗೆರೆ, ಶಿವಮೊಗ್ಗದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಹಲವು ಸಂಘ, ಸಂಸ್ಥೆಗಳಲ್ಲೂ ತೊಡಗಿಸಿಕೊಂಡಿರುವ ಅವರು ಮರ, ಗಿಡ ಬೆಳೆಸುವ ಉದ್ಯಾನ ನಿರ್ವಹಣೆ, ಪರಿಸರ ಜಾಗೃತಿ, ಸ್ವಚ್ಛತೆಯ ಪರಿಕಲ್ಪನೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT