ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿವರೆಗೆ ನಾಲೆಗೆ ನೀರು ಹರಿಸುವುದು ಬೇಡ ಎನ್ನುವ ರೈತರು

Last Updated 21 ಸೆಪ್ಟೆಂಬರ್ 2017, 7:36 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಭತ್ತದ ಬೆಳೆಯಿಂದ ವಂಚಿತರಾಗಿದ್ದೇವೆ. ಭತ್ತ ಬೆಳೆಯಲು ಪೂರಕವಲ್ಲದ ಈ ಸಂದರ್ಭದಲ್ಲಿ ನೀರು ಬಿಟ್ಟರೇ ಮತ್ತೊಂದು ಬೆಳೆ ನಾಶ ಖಂಡಿತ. ಹಾಗಾಗಿ ಜನವರಿಯಲ್ಲಿ ಭದ್ರಾ ನಾಲೆಗೆ ನೀರು ಹರಿಸಲು ಈ ಭಾಗದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಒಕ್ಕೊರಲ ಧ್ವನಿ ಆಗಿದೆ.

ಹೋಬಳಿಯಲ್ಲಿ 2500 ಹೆಕ್ಟೇರ್ ನೀರಾವರಿ ಪ್ರದೇಶ ವ್ಯಾಪಿಸಿದೆ. ಕೆಲ ರೈತರು ಮಳೆಯಾಧಾರಿತ ಪರ್ಯಾಯ ಬೆಳೆಗಳನ್ನು ಬಿತ್ತನೆ ನಡೆಸಿದ್ದಾರೆ. ಮಂಗೇನಹಳ್ಳಿ, ತಣಿಗೆರೆ, ಮೆದಿಕೆರೆ ಸುಮಾರು 350 ಹೆಕ್ಟೇರ್ ಗದ್ದೆಗಳಲ್ಲಿ ಅಲಸಂದೆ, ಜೋಳ, ರಾಗಿ ಹಾಕಲಾಗಿದೆ. ಭೀಮನೆರೆ ಭಾಗದಲ್ಲಿ ಸಿರಿಧಾನ್ಯ ಬೆಳೆದಿದ್ದಾರೆ. ಉಳಿದಂತೆ ನಾಲೆ ನೀರು ನೆಚ್ಚಿದ ಬಹುತೇಕ ನೀರಾವರಿ ಪ್ರದೇಶ ಬೀಳು ಬಿದ್ದಿದೆ.

ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಬಿದ್ದ ಮಳೆಯಿಂದ ಬೆಳೆ, ತೋಟಗಳು ಬದುಕಿವೆ. ನಾಲೆಯಲ್ಲಿ ಈಗ ನೀರು ಹರಿಸಿದರೆ ಭತ್ತ ಬೆಳೆಯಲು ಸಾಧ್ಯವಿಲ್ಲ. ಜಲಾಶಯದಲ್ಲಿ ಒಂದು ಬೆಳೆಗೆ ಸಾಕಾಗುವಷ್ಟು ನೀರು ಸಂಗ್ರಹವಾಗಿದೆ. ಈಗಲೇ ನೀರು ಬಿಟ್ಟರೆ ರೈತರಿಗೆ ಮತ್ತೊಂದು ಭತ್ತದ ಬೆಳೆ ಕಳೆದುಕೊಳ್ಳುವ ಭೀತಿ ಇದೆ. ಜನವರಿಯಲ್ಲಿ ನೀರು ಬಿಟ್ಟರೆ ಒಳಿತು ಎನ್ನುತ್ತಾರೆ ಮಲ್ಲಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕರಿಯಪ್ಪ.

ಭತ್ತದ ಬೆಳೆ ಬದಲು ಜೋಳ ಬಿತ್ತನೆ ಮಾಡಲಾಗಿತ್ತು. ಆದು ಹುಟ್ಟಲೇ ಇಲ್ಲ. ಈಗ ಅಲಸಂದೆ ಬಿತ್ತನೆ ನಡೆಸಲಾಗಿದೆ. ಸದ್ಯ ಬೀಳುವ ಮಳೆಗೆ ಬೆಳೆ ಕೈ ಸೇರುವ ಭರವಸೆ ಇದೆ. ಭದ್ರಾ ನಾಲೆಗೆ ಈಗ ನೀರು ಹರಿಸುವುದು ಬೇಡ. ಜನವರಿಯಲ್ಲೇ ನೀರು ಬಿಡಲಿ ಎನ್ನುತ್ತಾರೆ ತಣಿಗೆರೆ ರೈತರಾದ ಗುರುಮೂರ್ತಿ, ಜಗದೀಶ್‌, ಸವಿತಾ.

ಸತತ ಎರಡು ಭತ್ತದ ಬೆಳೆ ಇಲ್ಲದೇ ಗದ್ದೆಗಳು ಬೀಳು ಬಿದ್ದಿವೆ. ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ನಾಲೆಯಲ್ಲಿ ಜನವರಿಗೆ ನೀರು ಬಿಟ್ಟರೆ ಮೂರು ತಿಂಗಳಲ್ಲಿ ಭತ್ತ ಬೆಳೆಯಲು ಅನುಕೂಲ. ಸದ್ಯಕ್ಕೆ ನಮಗೆ ನಾಲೆ ನೀರು ಬೇಡ. ಜನವರಿಯಲ್ಲಿ ಬೇಸಿಗೆ ಬೆಳೆಗೆ ನೀರು ಕೊಡಿ ಎನ್ನುತ್ತಾರೆ ಮೆದಿಕೆರೆ ರೈತ ಬಸಪ್ಪ.

ಪ್ರಸ್ತುತ ಭದ್ರಾ ಜಲಾಶಯದಲ್ಲಿ 168 ಅಡಿಯಷ್ಟು ನೀರು ಸಂಗ್ರಹವಾಗಿದೆ. ಬೇಸಿಗೆಯಲ್ಲಿ ನೀರು ಹರಿಸಿದರೆ. ಭತ್ತದ ಬೆಳೆ, ಕುಡಿಯುವ ನೀರು, ಅಂತರ್ಜಲದ ವೃದ್ಧಿ ಆಗುತ್ತವೆ. ಕೆರೆ, ಕಟ್ಟೆಗಳು ಖಾಲಿಯಾಗಿರುವ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ತೀವ್ರ ಸಂಕಷ್ಟ ಎದುರಿಸಬೇಕಾದೀತು. ಈಗ ನಿಭಾಯಿಸಬಹುದಾದ ನೀರಿನ ಪರಿಸ್ಥಿತಿ ಬೇಸಿಗೆಯಲ್ಲಿ ಸಾಧ್ಯವಿಲ್ಲ. ಬೇಸಿಗೆಯ ಆರಂಭದ ಜನವರಿಗೆ ಭದ್ರಾ ನಾಲೆಯಲ್ಲಿ ನೀರು ಹರಿಸಲು ಕಾಡಾ ಸಮಿತಿ ತೀರ್ಮಾನ ಕೈಗೊಳ್ಳಬೇಕು ಎನ್ನುತ್ತಾರೆ ಈ ಭಾಗದ ರೈತರು.
                                                       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT