ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27ರಂದು ಬೃಹತ್ ಉದ್ಯೋಗ, ಕೌಶಲ ಮೇಳ

Last Updated 21 ಸೆಪ್ಟೆಂಬರ್ 2017, 8:51 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ರಾಜ್ಯ ಕೌಶಲ ಅಭಿವೃದ್ದಿ ಇಲಾಖೆ, ಕೌಶಲ ಅಭಿವೃದ್ದಿ ನಿಗಮ ಹಾಗೂ ಎಸ್‌ಜೆಎಂ ವಿದ್ಯಾಪೀಠ ಸಹಯೋಗದಲ್ಲಿ ಇದೇ 27 ರಂದು ಮುರುಘಾಮಠದ ಆವರಣದಲ್ಲಿ  ಬೃಹತ್ ಉದ್ಯೋಗ ಮತ್ತು ಕೌಶಲ ತರಬೇತಿ ಮೇಳ ಏರ್ಪಡಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯವರು ತಿಳಿಸಿದರು.

ಮುರುಘಾಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು. ಅವರಲ್ಲಿನ ಕೌಶಲವನ್ನು ಹೆಚ್ಚಿಸುವ ಮೂಲಕ ಸ್ವ ಉದ್ಯೋಗ ಆರಂಭಕ್ಕೂ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ಕೌಶಲ ಅಭಿವೃದ್ಧಿ ಇಲಾಖೆ ಸ್ಥಾಪಿಸಿದೆ.

ಈ ಇಲಾಖೆ ಮೂಲಕ ಇಲ್ಲಿನ ನಿರುದ್ಯೋಗಿ ಯುವಕ ಯುವತಿಯರಿಗೆ ದೇಶ, ವಿದೇಶಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಯೋಚನೆಯಿದೆ. ಅದರ ಮೊದಲ ಪ್ರಯತ್ನವಾಗಿ ಎಲ್ಲಾ ಜಿಲ್ಲೆಗಳಲ್ಲಿ ಉದ್ಯೋಗಾಸಕ್ತರ ನೊಂದಣಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಕೌಶಲ ತರಬೇತಿಗಳನ್ನು ಪ್ರಾರಂಭಿಸಲಾಗುತ್ತದೆ’ ಎಂದು ವಿವರಿಸಿದರು.

27ರಂದು ನಡೆಯಲಿರುವ ಒಂದು ದಿನದ ಉದ್ಯೋಗ ಮೇಳದಲ್ಲಿ 10 ಸಾವಿರಕ್ಕೂ ಹೆಚ್ಚಿನ ಉದ್ಯೋಗಾಸಕ್ತರು ಭಾಗವಹಿಸುವ ನಿರೀಕ್ಷೆ ಇದೆ. ನೂರು ಕಂಪೆನಿಗಳಿಗೆ ಮೇಳದಲ್ಲಿ ಭಾಗವಹಿಸಲು ಪತ್ರ ಬರೆದಿದ್ದು, ಇಲ್ಲಿಯವರೆಗೆ 42 ಕಂಪೆನಿಗಳು ಒಪ್ಪಿಗೆ ಸೂಚಿಸಿವೆ. 27ರ ಹೊತ್ತಿಗೆ ಈ ಸಂಖ್ಯೆ ಹೆಚ್ಚಾಗುವ ವಿಶ್ವಾಸವಿದೆ’ ಎಂದರು. ಮೇಳಕ್ಕೆ ಮುನ್ನಾದಿನ (26ರಂದು) ಅಭ್ಯರ್ಥಿಗಳಿಗಾಗಿ ಸಂದರ್ಶನ ಪೂರ್ವ ತರಬೇತಿಯನ್ನು ಏರ್ಪಡಿಸಲಾಗಿದೆ’ ಎಂದು ತಿಳಿಸಿದರು.

ಮುರುಘಾ ಶರಣರು ಮಾತನಾಡಿ, ‘ಶರಣ ಸಂಸ್ಕೃತಿ ಉತ್ಸವದಲ್ಲಿ ಪ್ರತಿ ವರ್ಷ ಸರ್ಕಾರದ ನೆರವಿಲ್ಲದೇ ಶ್ರೀಮಠ ಮತ್ತು ಸಂಘಸಂಸ್ಥಗಳ ಸಹಯೋಗದಲ್ಲಿ ಉದ್ಯೋಗ ಮೇಳ ಆಯೋಜಿಸುತ್ತಿದ್ದೆವು. ಈ ವರ್ಷ ಸರ್ಕಾರದ ಸಹಯೋಗ ದೊರೆತಿದೆ. ಹೆಚ್ಚಿನ ಯುವ ಜನರು ಭಾಗವಹಿಸಿ ಉದ್ಯೋಗ ಮೇಳದಲ್ಲಿ ಉದ್ಯೋಗ ಪಡೆಯಬೇಕೆನ್ನುವುದು ನಮ್ಮ  ಆಶಯ’ ಎಂದರು.

‘ಕಳೆದ ವರ್ಷ 15 ಸಾವಿರ ಉದ್ಯೋಗಾಂಕ್ಷಿಗಳು ಮೇಳದಲ್ಲಿ ಪಾಲ್ಗೊಂಡಿದ್ದರು. ಮಠದ ಮೇಳದಿಂದ ನೂರಾರು ಯುವಕರು, ಉದ್ಯೋಗದ ಸೌಲಭ್ಯ ಪಡೆದುಕೊಂಡಿದ್ದಾರೆ’ ಎಂದು ಶರಣರು ಉಲ್ಲೇಖಿಸಿದರು.

ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳೀಧರ್ ಹಾಲಪ್ಪ ಮಾತನಾಡಿ, ‘ಉದ್ಯೋಗ ಮೇಳದ ಜೊತೆಗೆ ಕೌಶಲ ತರಬೇತಿ ಏರ್ಪಡಿಸಲಾಗಿದೆ. 40 ಕ್ಕಿಂತ ಹೆಚ್ಚಿನ ಕೌಂಟರ್‌ಗಳನ್ನು ತೆರೆಯಲಾಗುತ್ತಿದೆ. ಮೇಳದಲ್ಲಿ ಭಾಗವಹಿಸುವವರು ತಮ್ಮ ವಿವರವನ್ನು ನೊಂದಾಯಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಶ್ರೀನಾಥ್ ಎಂ.ಜೋಷಿ, ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ರಾಘವೇಂದ್ರ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಜಿ.ಎನ್.ಮಲ್ಲಿಕಾರ್ಜುನಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT