ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಮಾರುಕಟ್ಟೆಯಿಂದ ಹೈನುಗಾರಿಕೆಗೂ ಪೈಪೋಟಿ

Last Updated 21 ಸೆಪ್ಟೆಂಬರ್ 2017, 9:07 IST
ಅಕ್ಷರ ಗಾತ್ರ

ಹಾರೋಹಳ್ಳಿ( ಕನಕಪುರ): ‘ನಂದಿನಿ ಹಾಲಿನ ಮೇಲೆ ಗ್ರಾಹಕರಿಗೆ ಅತ್ಯಂತ ವಿಶ್ವಾಸ ಮತ್ತು ನಂಬಿಕೆಯಿದೆ. ಅದಕ್ಕೆ ತಕ್ಕನಾಗಿ ನಾವು ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಿದೆ’ ಎಂದು ಬೆಂಗಳೂರು ಹಾಲು ಒಕ್ಕೂಟ ಕನಕಪುರ ಶಿಬಿರದ ವಿಸ್ತರಣಾಧಿಕಾರಿ ರವೀಂದ್ರ ತಿಳಿಸಿದರು.ತಾಲ್ಲೂಕಿನ ಸೊಂಟೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಬುಧವಾರ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ರೈತರ ಪಾಲಿಗೆ ವರದಾನವಾಗಿರುವ ಹೈನುಗಾರಿಕೆಯು ಇಂದು ಮುಕ್ತ ಮಾರುಕಟ್ಟೆಯಲ್ಲಿ ಪೈಪೋಟಿಯನ್ನು ಎದುರಿಸುತ್ತಿದೆ. ದೇಶದಲ್ಲಿ ಯಾರು ಎಲ್ಲಿ ಬೇಕಾದರೂ ತಮ್ಮ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಬೇಕಿದೆ, ನಂದಿನಿ ಉತ್ಪನ್ನದ ಜತೆಗೆ ಖಾಸಗಿ ಕಂಪೆನಿಗಳ ಹಾಲಿನ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ ಎಂದರು.

‘ವಾರ್ಷಿಕವಾಗಿ ನಮಗೆ ಅಗತ್ಯವಿರುವುದಕ್ಕಿಂತಲೂ ಹೆಚ್ಚಿನ ಹಾಲು ನಮ್ಮಲ್ಲಿ ಉತ್ಪತ್ತಿಯಾಗುತ್ತಿದ್ದು ಹೆಚ್ಚಿನ ಹಾಲನ್ನು ಪೌಡರ್‌ ಆಗಿ ಮಾಡಲಾಗುತ್ತಿದೆ’ ಎಂದರು.
ರಾಜ್ಯ ಸರ್ಕಾರವು ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಿರುವುದರಿಂದ ಪೌಡರ್‌ ಬಳಕೆಯಾಗುತ್ತಿದೆ ಎಂದರು.

ಹಾಲಿಗೆ ಇಂದು ಜಿಡ್ಡಿನ ಅಂಶದ ಮೇಲೆ ದರ ನಿಗದಿ ಮಾಡುತ್ತಿರುವುದರಿಂದ ರೈತರು ಗುಣಮಟ್ಟ ಹಾಗೂ ಜಿಡ್ಡಿನ ಅಂಶವನ್ನು ಕಾಯ್ದುಕೊಳ್ಳಬೇಕಿದೆ. ಹಾಲಿಗೆ ಫ್ಯಾಟ್‌ ಹೆಚ್ಚಿಗೆ ಬರುವಂತೆ ನೋಡಿಕೊಳ್ಳಬೇಕು, ಹಸುಗಳ ನಿರ್ವಹಣೆಯಲ್ಲಿ ಇದು ಸಾಧ್ಯವಿದ್ದು ವೈದ್ಯರು ಮಾರ್ಗದರ್ಶನದಲ್ಲಿ ರಾಸುಗಳಿಗೆ ಮೇವು ಮತ್ತು ಪೌಷ್ಟಿಕ ಆಹಾರವನ್ನು ನೀಡಬೇಕೆಂದು ಸಲಹೆ ನೀಡಿದರು.

ಹಾಲಿನ ಡೇರಿಯ ಅಧ್ಯಕ್ಷ ಎಸ್‌.ಟಿ.ರಾಜು ಮಾತನಾಡಿ ಹಾಲಿನ ಡೇರಿಗೆ ವಾರ್ಷಿಕವಾಗಿ ₹13.60 ಲಕ್ಷ ನಿವ್ವಳ ಲಾಭ ಬಂದಿದೆ. ಸುಮಾರು ₹6 ಲಕ್ಷದಷ್ಟು ರೈತರಿಗೆ ಬೋನಸ್‌ ನೀಡಬೇಕಿದ್ದು ದಾನಧರ್ಮನಿಧಿ ಮತ್ತಿತರರ ನಿಧಿ ಹಾಗೂ ಉಳಿತಾಯ ಸೇರಿ ₹12 ಲಕ್ಷದಷ್ಟು ಹಣ ಉಳಿಯಲಿದ್ದು ಈ ಹಣದಲ್ಲಿ ಡೇರಿಗೆ ನಿವೇಶನ ಖರೀದಿ ಮಾಡುವುದಾಗಿ ತಿಳಿಸಿದರು.

ರಾಸುಗಳು ಮತ್ತು ಹೈನುಗಾರಿಕೆಯ ರೈತರು ಮರಣ ಹೊಂದಿದ ಸಂದರ್ಭದಲ್ಲಿ ಅಂತ್ಯಸಂಸ್ಕಾರಕ್ಕೆ ನೀಡುವ ಸಹಾಯಧನವನ್ನು ಅಂದಿನ ದಿನವೇ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಂಘವು ಎಲ್ಲಾ ನಿರ್ದೇಶಕರ ಸಹಕಾರದಿಂದ ಉತ್ತಮವಾಗಿ ನಡೆಯುತ್ತಿದ್ದು ಯಾವುದೇ ಲೋಪ ದೋಷ ಬರದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿದೆ, ಮುಂದೆಯೂ ಇದೇ ರೀತಿ ಸಂಘವನ್ನು ಮುನ್ನಡೆಸಿಕೊಂಡು ಹೋಗಲಾಗುವುದು, ಸರ್ವ ಸದಸ್ಯರು ಸಹಕಾರ ಮತ್ತು ಸಲಹೆಗಳನ್ನು ನೀಡಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷ ಎಸ್‌.ಸಿ. ಸುರೇಶ್‌ ಮಾತನಾಡಿ ರಾಸುಗಳು ಸಾವನ್ನಪ್ಪಿದ ಸಂದರ್ಭದಲ್ಲಿ ಅಂತ್ಯಸಂಸ್ಕಾರಕ್ಕೆ ನೀಡುವ ಹಣವನ್ನು ತುಂಬಾ ವಿಳಂಬವಾಗಿ ನೀಡಲಾಗುತ್ತಿದೆ, ತ್ವರಿತವಾಗಿ ಕೊಡಬೇಕು ಎಂದರು. ರಾಸುಗಳು ಸಾವನಪ್ಪಿದಾಗ ಕೊಡುವ ₹2 ಸಾವಿರದ ಬದಲು ₹5 ಸಾವಿರ ನೀಡಿದರೆ ರೈತರು ರಾಸುಗಳನ್ನು ಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಗ್ರಾಮದ ಮುಖಂಡ ದಿನೇಶ್‌, ಸಂಘದ ನಿರ್ದೇಶಕರಾದ ಎಸ್‌.ಟಿ. ಚಿನ್ನಗಿರಿಯಪ್ಪ, ಹನುಮಯ್ಯ, ಎಸ್‌.ಜಿ. ಅಪ್ಪಾಜಿ, ನಂಜಪ್ಪ, ಪುಟ್ಟತಾಯಮ್ಮ, ಅಮ್ಮಯ್ಯಮ್ಮ, ಮಂಗಮ್ಮ, ಸಂಜೀವಯ್ಯ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಸ್‌.ಆರ್‌.ಕುಮಾರ್‌, ಹಾಲು ಪರೀಕ್ಷಕ ಕೆ.ಎಸ್‌.ರಾಜೇಶ್‌, ಸಹಾಯಕ ಡಿ.ಕೃಷ್ಣಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT