ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಲ್ಲಾಪೆಟ್ಟಿಗೆಯಲ್ಲಿ ‘ಭರ್ಜರಿ’ ಸದ್ದು!

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಮೂರನೇ ಚಿತ್ರ ‘ಭರ್ಜರಿ’, ಅವರಿಗೆ ‘ಹ್ಯಾಟ್ರಿಕ್‌ ಸೂಪರ್‌ ಹಿಟ್‌’ ಪಟ್ಟ ಕಟ್ಟಿಕೊಡುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಚೇತನ್‌ ಕುಮಾರ್‌ ನಿರ್ದೇಶನ ಈ ಚಿತ್ರಕ್ಕೆ ಪ್ರೇಕ್ಷಕರು ನೀಡಿದ ಪ್ರತಿಕ್ರಿಯೆಯೂ ಭರ್ಜರಿಯಾಗಿಯೇ ಇದೆ.

ಪತ್ರಕರ್ತರ ಎದುರು ಕೂತ ಚಿತ್ರತಂಡದ ಮಾತಿನಲ್ಲಿ ಸಂತೋಷ ಮತ್ತು ಕೃತಜ್ಞತೆ ಎರಡೂ ಪುಟಿಯುತ್ತಿದ್ದವು.

‘ಜನ ಒಪ್ಪಿಕೊಳ್ಳುತ್ತಾರೆ ಎಂದು ಗೊತ್ತಿತ್ತು. ಆದರೆ ನಿರೀಕ್ಷೆಗೂ ಮೀರಿ ಅವರು ನಮ್ಮ ಸಿನಿಮಾವನ್ನು ಅಪ್ಪಿಕೊಂಡಿದ್ದಾರೆ’ ಎಂದು ಖುಷಿಯಿಂದ ಹೇಳಿಕೊಂಡರು ನಿರ್ದೇಶಕ ಚೇತನ್‌.

‘ಹಲವು ಸಿನಿಮಾಗಳು ನೂರು ದಿನಗಳಲ್ಲಿ ಮಾಡುವ ಗಳಿಕೆಯನ್ನು ನಮ್ಮ ಸಿನಿಮಾ ಮೂರೇ ದಿನಗಳಲ್ಲಿ ಮಾಡಿದೆ’ ಎಂದು ಗಳಿಕೆಯ ಲೆಕ್ಕಾಚಾರವನ್ನೂ ಅವರು ಮುಂದಿಟ್ಟರು.

ಮುನ್ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ‘ಭರ್ಜರಿ’ ಮೂರು ದಿನಗಳಲ್ಲಿ ಹದಿನಾರು ಕೋಟಿ ಗಳಿಕೆ ಮಾಡಿದೆಯಂತೆ. ಅದು ವಾರದ ಹೊತ್ತಿಗೆ ಇಪ್ಪತ್ತೈದರ ಗಡಿಯನ್ನು ಸಲೀಸಾಗಿ ದಾಟುತ್ತದೆ ಎಂಬ ವಿಶ್ವಾಸವೂ ತಂಡಕ್ಕಿದೆ.

‘211 ಕೇಂದ್ರಗಳಲ್ಲಿ ನಿರಂತರವಾಗಿ ಹೌಸ್‌ಫುಲ್‌ ಫಲಕ ಹಾಕಲಾಗಿದೆ. ಬೆಂಗಳೂರು, ಮೈಸೂರು ಅಷ್ಟೇ ಅಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿಯೂ ಜನರಿಂದ ಒಳ್ಳೆಯ ಸ್ಪಂದನ ದೊರೆಯುತ್ತಿದೆ’ ಎಂದು ಅವರು ಹೇಳಿದರು.

‘ನಮ್ಮ ನಿರ್ದೇಶಕ ಚೇತನ್‌ ಅವರು ಈ ಚಿತ್ರವನ್ನು ತೆಲುಗು ಸಿನಿಮಾ ಮಾದರಿಯಲ್ಲಿಯೇ ಮಾಡಿದ್ದಾರೆ. ಈಗ ಯಶಸ್ಸಿನ ಸಮುದ್ರದಲ್ಲಿ ಒಂದು ಅಲೆಯೆದ್ದಿದೆ. ಅದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಯಾರಿಗೂ ಗೊತ್ತಿಲ್ಲ’ ಎಂದು ಉದಾಹರಣೆ ಸಮೇತ ವಿವರಿಸಿದರು ನಿರ್ಮಾಪಕ ಆರ್‌. ಶ್ರೀನಿವಾಸ್‌.

ನಾಯಕ ಧ್ರುವ ಸರ್ಜಾ ಅವರಿಗೆ ಈ ದೊಡ್ಡ ಯಶಸ್ಸಿನಿಂದ ಖುಷಿಯ ಜತೆಗೆ ಆತಂಕವೂ ಶುರುವಾಗಿದೆಯಂತೆ. ನನ್ನ ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆ ಇನ್ನೂ ಹೆಚ್ಚಿದೆ. ಅದನ್ನು ಹೇಗೆ ಪೂರೈಸುವುದು ಎಂಬುದು ನನ್ನ ಆತಂಕಕ್ಕೆ ಕಾರಣ’ ಎಂದು ಅವರು ಹೇಳಿಕೊಂಡರು.

‘ಈ ಚಿತ್ರಕ್ಕೆ ಒಂದೆರಡಲ್ಲ, ನೂರಾ ಒಂದು ವಿಘ್ನಗಳು ಬಂದಿವೆ. ಆದರೆ ಅವೆಲ್ಲವನ್ನೂ ಈ ಯಶಸ್ಸು ಮರೆಸುತ್ತಿದೆ’ ಎಂದೂ ಅವರು ಹೇಳಿದರು.

‘ನನ್ನನ್ನು ಹಲವರು ಹ್ಯಾಟ್ರಿಕ್‌ ಹೀರೊ ಎಂದು ಕರೆಯಲು ಶುರು ಮಾಡಿದ್ದಾರೆ. ಆ ಬಿರುದು ಇರುವುದು ಶಿವರಾಜ್‌ ಕುಮಾರ್‌ ಅವರಿಗೆ. ನಾನು ಅವರ ದೊಡ್ಡ ಅಭಿಮಾನಿ. ನನ್ನನ್ನು ಹಾಗೆ ಕರೆಯಬೇಡಿ. ಬದಲಿಗೆ ‘ಹ್ಯಾಟ್ರಿಕ್‌ ಆ್ಯಕ್ಷನ್‌ ಪ್ರಿನ್ಸ್‌’ ಎಂದೇ ಕರೆಯಿರಿ’ ಎಂದೂ ಅವರು ಅಭಿಮಾನಿಗಳಿಗೆ ವಿನಂತಿ ಮಾಡಿಕೊಂಡರು.

ಅಂದ ಹಾಗೆ ಧ್ರುವ ಸರ್ಜಾ ಅವರ ಮುಂದಿನ ಸಿನಿಮಾ ಹೆಸರು ‘ಪೊಗರು’. ನಂದಕಿಶೋರ್‌ ಅವರ ಈ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯವನ್ನು ಅವರು ಇದೇ ಸಂದರ್ಭದಲ್ಲಿ ಬಹಿರಂಗಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT