ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬುವ ಹೆಬ್ಬಯಕೆಯ ಚಿಗುರು ಲತೆ

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನೀಳ ಕಾಯ, ಆಕರ್ಷಕ ಮೈಮಾಟ, ಮುಡಿದುಕೊಂಡ ಹೂವೂ ಜಾರಿಬೀಳುವಷ್ಟು ನಯವಾದ ಹೆರಳು, ನಕ್ಕರೆ ಬೆಳದಿಂಗಳು. ಮಾಯಾಜಾಲ ಬೀಸುವ ಹೊಳಪುಕಂಗಳು... ದೇಸಿ ಗೊಂಬೆಗೆ ತುಸುವೇ ವಿದೇಶಿ ಟಚಪ್‌ ಕೊಟ್ಟಂತೆ ಕಾಣುವ ಬೆಡಗಿ ಲತಾ ಹೆಗಡೆ.

ಲತಾ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆ. ಅಮ್ಮನ ಊರು ಹೊನ್ನಾವರ, ಅಪ್ಪ ಶಿರಸಿಯವರು. ಆರು ವರ್ಷದವಳಾಗಿದ್ದಾಗಲೇ ತಂದೆಯ ವೃತ್ತಿನಿಮಿತ್ತ ತವರು ನೆಲ ತೊರೆದು ನ್ಯೂಜಿಲೆಂಡ್‌ ಸೇರಿದ ಇವರು ತೀರಾ ಇತ್ತೀಚೆಗಿನವರೆಗೂ ಭಾರತಕ್ಕೆ ಅಡಿಯಿಟ್ಟವರೇ ಅಲ್ಲ! ನ್ಯೂಜಿಲೆಂಡ್‌ನಲ್ಲಿಯೇ ಬೆಳೆದು ವಿದ್ಯಾಭ್ಯಾಸವನ್ನೂ ಮುಗಿಸಿದ್ದರೂ, ತಾವು ಹುಟ್ಟಿದ ನೆಲದ ಗಂಧವನ್ನು ಮರೆತವರಲ್ಲ. ಅಪ್ಪ – ಅಮ್ಮ ಮನೆಯಲ್ಲಿ ಆಡುತ್ತಿದ್ದ ಕನ್ನಡ ಭಾಷೆ, ಇವರಿಗೂ ಹೃದಯದ ಭಾಷೆಯೇ ಆಗಿ ಉಳಿದಿದೆ. ಜತೆಗೆ ‘ಕನ್ನಡದ ಹುಡುಗಿ’ ಎಂದು ಗುರ್ತಿಸಿಕೊಳ್ಳುವ ಹಂಬಲವಂತೂ ಇದ್ದೇ ಇದೆ. ಕನ್ನಡದ ಬಗ್ಗೆ ಇಷ್ಟು ಪ್ರೀತಿ ಇದ್ದರೂ ಅವರು ಚಿತ್ರರಂಗಕ್ಕೆ ಪ್ರವೇಶಿಸಿದ್ದು ಮಾತ್ರ ತೆಲುಗು ಸಿನಿಮಾ ಮೂಲಕ.

‘ನಾನು ಎಂ.ಬಿ.ಎ. ಓದುತ್ತಿದ್ದೆ. ಆಗ ನಾನು ‘ಮಿಸ್‌ ಇಂಡಿಯಾ ನ್ಯೂಜಿಲೆಂಡ್‌’ ಎಂಬ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಆಗ ನಾನು ಸಿನಿಮಾ – ನಟನೆ ಬಗ್ಗೆಯೆಲ್ಲ ಯೋಚಿಸಿಯೂ ಇರಲಿಲ್ಲ. ಸುಮ್ಮನೆ ಹವ್ಯಾಸಕ್ಕೆ ಅಂತ ಭಾಗವಹಿಸಿದ್ದಷ್ಟೆ. ಆದರೆ ಅಲ್ಲಿ ನನ್ನನ್ನು ನೋಡಿ ತೆಲುಗು ನಿರ್ದೇಶಕ ಕುಮಾರ್‌ ನಾಗೇಂದ್ರ ಅವರು ತಮ್ಮ ‘ತುಂಟರಿ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಅವಕಾಶ ಕೊಟ್ಟರು. ಆ ಸಿನಿಮಾದಲ್ಲಿ ನನ್ನ ನಟನೆಯನ್ನು ನೋಡಿ ತಮಿಳಿನ ‘ಓ ಅಂಧ ನಟ್ಕಲ್‌’ ಎಂಬ ತಮಿಳು ಸಿನಿಮಾದಲ್ಲಿಯೂ ನಟಿಸುವ ಅವಕಾಶ ಸಿಕ್ಕಿತು’ ಎಂದು ಯಾವ ಪೂರ್ವಯೋಜನೆಯೂ ಇಲ್ಲದೆ ಸಿನಿರಂಗ ಪ್ರವೇಶಿಸಿದ ಬಗೆಯನ್ನು ಅವರು ವಿವರಿಸುತ್ತಾರೆ.

ಮೊದಲು ತೆಲುಗು ಸಿನಿಮಾಕ್ಕೆ ಆಯ್ಕೆಯಾದಾಗಲೇ ಅವರಿಗೆ ತಾನು ನಟಿಸಬಲ್ಲೆನಾ ಎಂಬ ಬಗ್ಗೆ ಅನುಮಾನವಿತ್ತು. ಅದನ್ನು ನಿರ್ದೇಶಕರ ಬಳಿ ಪ್ರಾಮಾಣಿಕವಾಗಿ ಹೇಳಿಕೊಂಡಿದ್ದರು ಸಹ. ‘ನನಗೆ ನಟನೆ ಬರಲ್ಲ. ಆಸಕ್ತಿ ಇದೆಯಾ ಅಂತ ನನಗಿನ್ನೂ ಸ್ಪಷ್ಟವಿಲ್ಲ. ನಿಮಗೆ ನನ್ನ ಬಳಿ ನಟನೆ ಮಾಡಿಸಬಹುದು ಎಂಬ ಧೈರ್ಯವಿದ್ದರೆ ಮಾತ್ರ ನಟಿಸುತ್ತೇನೆ ಎಂದು ಹೇಳಿಯೇ ಮೊದಲ ಸಿನಿಮಾಗೆ ಒಪ್ಪಿಕೊಂಡಿದ್ದೆ. ಆ ಸಿನಿಮಾದಲ್ಲಿ ನಟಿಸಿದ್ದು ನನಗೆ ಸಾಕಷ್ಟು  ಆತ್ಮವಿಶ್ವಾಸ ಮತ್ತು ತಿಳಿವಳಿಕೆ ಎರಡನ್ನೂ ನೀಡಿತು’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಸಾಮಾನ್ಯವಾಗಿ ಯಾರಾದರೂ ಸಿನಿಮಾ ಕ್ಷೇತ್ರಕ್ಕೆ ಹೋಗುತ್ತಿದ್ದಾರೆಂದರೆ ಮನೆಯಲ್ಲಿ ವಿರೋಧ ವ್ಯಕ್ತವಾಗುವುದು ಸಹಜ. ಆದರೆ ಲತಾ ವಿಷಯದಲ್ಲಿ ಇದು ಪೂರ್ತಿ ವಿರುದ್ಧ! ಅವರು ನಟಿಸಲೋ ಬೇಡವೋ ಎಂಬ ಗೊಂದಲದಲ್ಲಿದ್ದಾಗ ಅಪ್ಪ– ಅಮ್ಮನೇ ‘ಬದುಕಿನಲ್ಲಿ ಬೇರೆ ಬೇರೆ ರೀತಿಯ ಪ್ರಯೋಗಗಳಿಗೆ ನಮ್ಮನ್ನು ಒಡ್ಡಿಕೊಳ್ಳಬೇಕು. ನಟನೆಯನ್ನೂ ಪ್ರಯತ್ನಿಸಿ ನೋಡು. ಇಷ್ಟ ಆಗಲಿಲ್ಲ ಅಂದರೆ ಓದು – ಕಲಿಕೆ ನೌಕರಿ ಇದ್ದೇ ಇರುತ್ತದೆ’ ಎಂದು ಪ್ರೋತ್ಸಾಹ ನೀಡಿದ್ದು!

ಭಾರತದಿಂದ ದೂರವೇ ಉಳಿದಿದ್ದ ಲತಾ ಅವರಿಗೆ ಭಾರತೀಯ ಚಿತ್ರಗಳಲ್ಲಿ ನಟಿಸುವ ಆಲೋಚನೆಯಂತೂ ತುಂಬ ದೂರವೇ ಉಳಿದಿತ್ತು. ಆದರೆ ಬದುಕು ಅವರನ್ನು ಬಣ್ಣದ ಜಗತ್ತಿಗೆ ತಂದು ನಿಲ್ಲಿಸಿತ್ತು. ಆದರೆ ಯಾವಾಗ ತೆಲುಗು ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತೋ ಆಗ ಮೊದಲಿಗೆ ಅವರಿಗೆ ಅನಿಸಿದ್ದು ‘ಛೆ, ಇದು ಕನ್ನಡ ಸಿನಿಮಾ ಆಗಬೇಕಿತ್ತು’ ಎಂದು! ಆದರೆ ಮುಂದಿನ ಸಿನಿಮಾ ಸಿಕ್ಕಿದ್ದೂ ತಮಿಳಿನಲ್ಲಿ!! ಆಗ ಮತ್ತೆ ಅವರ ಮನಸ್ಸು ‘ನಾನು ಕನ್ನಡ ಸಿನಿಮಾದಲ್ಲಿ ನಟಿಸುವುದು ಯಾವಾಗ?’ ಎಂದು ತಹತಹಿಸುತ್ತಿತ್ತು. ಅವರ ಹಂಬಲಿಕೆ ಹುಸಿಹೋಗಲಿಲ್ಲ. ಲತಾ ಅವರ ವೃತ್ತಿಬದುಕಿನ ಮೂರನೇ ಸಿನಿಮಾದ ‘ಅತಿರಥ’ದ ಮೂಲಕ ಚಂದನವನಕ್ಕೆ ಅಡಿಯಿಟ್ಟಿದ್ದಾರೆ.

ತೆಲುಗು ನಿರ್ದೇಶಕರೊಬ್ಬರ ಶಿಫಾರಸಿನ ಮೇಲೆ ಮಹೇಶ ಬಾಬು ತಮ್ಮ ನಿರ್ದೇಶನದ ‘ಅತಿರಥ’ ಸಿನಿಮಾಕ್ಕೆ ನಾಯಕಿಯನ್ನಾಗಿ ಆಯ್ದುಕೊಂಡರು. ಆಡಿಷನ್‌ ಏನೂ ಮಾಡದೇ ಲತಾ ಅವರನ್ನು ನೋಡಿದ್ದೇ ಮಹೇಶ್‌ ಬಾಬು ‘ನೀನು ಈ ಪಾತ್ರಕ್ಕೆ ಸರಿಯಾಗಿ ಹೊಂದುವ ಹಾಗಿದ್ದೀಯಾ’ ಎಂದು ಗ್ರೀನ್‌ಸಿಗ್ನಲ್‌ ಕೊಟ್ಟುಬಿಟ್ಟರು.

‘ಅತಿರಥ ಮಾಧ್ಯಮದ ಕುರಿತಾಗಿ ಇರುವ ಚಿತ್ರ. ಮಾಧ್ಯಮದ ಜವಾಬ್ದಾರಿ ಮತ್ತು ಶಕ್ತಿ ಎರಡನ್ನೂ ತೋರಿಸುವ ಚಿತ್ರ. ಇದು ಮಾಮೂಲಿ ಪ್ರೇಮಕಥೆ ಅಲ್ಲ. ಸಾಮಾಜಿಕ ಸಮಸ್ಯೆಯೊಂದನ್ನು ಚಿತ್ರದ ಮೂಲಕ ಬಿಂಬಿಸಲು ಹೊರಟಿದ್ದಾರೆ. ಇದೇ ಕಾರಣಕ್ಕೆ ನನಗೆ ಕಥೆ ಇಷ್ಟವಾಯ್ತು’ ಎನ್ನುವ ಲತಾ ಅವರು ಈ ಚಿತ್ರದಲ್ಲಿ ವಿದೇಶಿ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವು ತಮ್ಮ ವೃತ್ತಿಬದುಕಿಗೆ ತಿರುವು ನೀಡುತ್ತದೆ ಎನ್ನುವ ನಂಬಿಕೆಯಲ್ಲಿ ಅವರಿದ್ದಾರೆ.

ಲತಾ ಬರೀ ಗ್ಲ್ಯಾಮರ್‌ ಜಗತ್ತಿನಲ್ಲಿಯೇ ಮುಳುಗಿ ಹೋಗುವ ಮನಸ್ಥಿತಿಯವರಲ್ಲ. ನಟನೆಯ ಜತೆಗೆ ಸಾಮಾಜಿಕ ಜವಾಬ್ದಾರಿಯೂ ಮುಖ್ಯ ಎನ್ನುವ ನಂಬಿಕೆಯ ಅವರಿಗೆ ಕಾಡುಪ್ರಾಣಿಗಳ ರಕ್ಷಣೆಯ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವ ಆಸಕ್ತಿಯಿದೆ.

ಇನ್ನು ಮುಂದೆ ಕನ್ನಡದಲ್ಲಿಯೇ ನಟಿಸುತ್ತೀರಾ? ಎಂದು ಕೇಳಿದರೆ ‘ನನ್ನ ನಟನಾ ಬದುಕಿನ ಭವಿಷ್ಯವನ್ನು ನಾನು ರೂಪಿಸಲು ಸಾಧ್ಯವಿಲ್ಲ. ಚಿತ್ರರಂಗವೇ ಅದನ್ನು ರೂಪಿಸಬೇಕು. ಒಳ್ಳೆಯ ಅವಕಾಶಗಳು ಸಿಗುತ್ತಿದ್ದರೆ ಇಲ್ಲಿಯೇ ನೆಲೆಯೂರುವುದು ಅನಿವಾರ್ಯವಾಗುತ್ತದೆ. ನನ್ನ ಆಸೆಯೂ ಅದೇ ಆಗಿದೆ’ ಎಂದು ಚಂದನವನದಲ್ಲಿಯೇ ಹಬ್ಬಿ ನಗುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ. ಅವರ ಹಂಬಲಕ್ಕೆ ಬೆಂಬಲವೆಂಬಂತೆ ವಿನಯ ರಾಜಕುಮಾರ್‌ ಅಭಿನಯದ ಹೊಸ ಸಿನಿಮಾ ‘ಅನಂತು ವರ್ಸಸ್‌ ನುಸ್ರತ್‌’ ಸಿನಿಮಾದಲ್ಲಿಯೂ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಹಾಗೆಂದು ಬರೀ ಕನ್ನಡಕ್ಕಷ್ಟೇ ಸೀಮಿತವಾಗಿರುವುದೂ ಅವರಿಗೆ ಇಷ್ಟವಿಲ್ಲ. ‘ನನ್ನ ಮೊದಲ ಆದ್ಯತೆ ಕನ್ನಡ. ಆದರೆ ಒಳ್ಳೆಯ ಅವಕಾಶಗಳು ಯಾವ ಭಾಷೆಯಲ್ಲಿ ಬಂದರೂ ನಟಿಸುತ್ತೇನೆ’ ಎಂಬುದು ಅವರ ಸ್ಪಷ್ಟ ನುಡಿ.

ಈಗಾಗಲೇ ಲತಾ ಅವರಿಗೆ ಸಾಕಷ್ಟು ಅವಕಾಶಗಳು ಬರತೊಡಗಿವೆ. ಆದರೆ ಬಂದಿದ್ದೆಲ್ಲವನ್ನೂ ಒಪ್ಪಿಕೊಳ್ಳದೆ ಎಚ್ಚರಿಕೆಯಿಂದ ಒಪ್ಪಿಕೊಳ್ಳುವ ಜಾಣ ನಡೆಯನ್ನು ಇರಿಸಲು ಅವರು ನಿರ್ಧರಿಸಿದ್ದಾರೆ.

***

ಒಳ್ಳೆಯ ನಟಿ ಎನಿಸಿಕೊಳ್ಳಲು ಒಳ್ಳೆಯ ನಿರ್ದೇಶಕರ ಬಳಿ ಕೆಲಸ ಮಾಡುವುದು ಮುಖ್ಯ. ಎಷ್ಟೋ ಕಥೆಗಳು ಕೇಳುವಾಗ ಚೆನ್ನಾಗಿಯೇ ಇರುತ್ತವೆ. ಆದರೆ ಅದನ್ನು ತೆರೆಯ ಮೇಲೆ ಅಷ್ಟೇ ಚೆನ್ನಾಗಿ ಮೂಡಿಸುವುದು ಪ್ರತಿಭಾವಂತ ನಿರ್ದೇಶಕನಿಂದ ಮಾತ್ರ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT