ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಾರ ಕಂಡವರು ಮೋಸ ಹೋದರು

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಸಂಗೀತ ವಾದ್ಯಗಳ ನಾದಕ್ಕೆ ಹೆಜ್ಜೆ ಸೇರಿಸುತ್ತಿದ್ದಳು ಕಲಾವಿದೆ. ನಾಟ್ಯ ಬಯಸುವ ಬಳುಕು, ವೈಯಾರ, ಮುಖದ ಹಾವಭಾವ ಎಲ್ಲವನ್ನೂ ತದೇಕಚಿತ್ತದಿಂದ ಪ್ರೇಕ್ಷಕರು ಗಮನಿಸುತ್ತಲೇ ಇದ್ದರು. ಇಳಿಬಿಟ್ಟ ಜಡೆಯನ್ನು ವಯ್ಯಾರವಾಗಿ ಮುನ್ನೆಲೆಗೆ ತರುತ್ತಾ, ಕೂಚಿಪುಡಿ ನೃತ್ಯಕ್ಕೆ ಆಕೆ ಹೆಜ್ಜೆ ಇಟ್ಟಳು.

‘ಏನೇ ಹೇಳಿ ಹುಡುಗರಿಗಿಂತ ಹುಡುಗಿಯರು ಮಾಡುವ ನಾಟ್ಯವೇ ಅಂದ’ ಪಿಸುಗುಟ್ಟಿದರು ಅಲ್ಲಿದ್ದವರು. ಆದರೆ ಕಾರ್ಯಕ್ರಮ ಮುಗಿದ ಮೇಲೆಯೇ ತಿಳಿದಿದ್ದು, ಇಷ್ಟೊತ್ತು ನರ್ತಿಸಿದ್ದು ಹುಡುಗಿಯಲ್ಲ, ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕು ಬಲ್ಕುಂದ ಗ್ರಾಮದ ಬಿ.ಬಸವರಾಜ್‌ ಎಂದು.

ಬಸವರಾಜ್‌ ನೃತ್ಯ ನೋಡಿದ ಅದೆಷ್ಟೋ ಜನ ಮೋಸ ಹೋಗಿದ್ದಿದೆ. ಹೆಣ್ಣಿನ ಬಾಗುಬಳುಕಿನ ನೃತ್ಯ ವೈಖರಿಯನ್ನು ಸಿದ್ಧಿಸಿಕೊಂಡ ಈ ಕಲಾವಿದ ಕೂಚಿಪುಡಿ ಕ್ಷೇತ್ರದಲ್ಲಿ ಪ್ರತಿಭೆಯಿಂದಲೇ ಹೆಸರಾದವರು. ಟೀವಿ, ಸಿನಿಮಾಗಳಲ್ಲಿ ಗೆಜ್ಜೆ ಕಟ್ಟಿ ಕುಣಿಯುವ ಕಲಾವಿದರನ್ನು ನೋಡುತ್ತಾ ಆಕರ್ಷಿತರಾಗಿದ್ದ ಬಸವರಾಜ್‌ 14ನೇ ವರ್ಷದಿಂದ ನೃತ್ಯ ತರಬೇತಿ ಪಡೆದರು. ಆಂಧ್ರಪ್ರದೇಶದ ಮಹಮ್ಮದ್‌ ಗೌಸ್‌ ಇವರ ಗುರು.

‘ಪುರುಷರೇ ಮಹಿಳಾ ಪಾತ್ರವನ್ನು ತೊಟ್ಟು ನೃತ್ಯ ಮಾಡುತ್ತಿದ್ದರು. ಕೂಚಿಪುಡಿ ನೃತ್ಯದಲ್ಲಿ ಇದೊಂದು ಪರಂಪರೆಯೇ ಇದೆ. ಈ ವಿಷಯ ನನಗೆ ತಿಳಿದಾಗ ನಶಿಸುತ್ತಿರುವ ಈ ಪರಂಪರೆಯನ್ನು ಉಳಿಸುವ ಕೆಲಸ ನನ್ನಿಂದ ಯಾಕಾಗಬಾರದು ಎನಿಸಿತು. ಪ್ರಾರಂಭದಲ್ಲಿ ತುಂಬಾ ಕಷ್ಟ ಎನಿಸಿತು. ಹುಡುಗನಾಗಿ ಹುಡುಗಿಯಂತೆ ಚಲನವಲನಗಳನ್ನು ಸಿದ್ಧಿಸಿಕೊಳ್ಳುವುದು ತೀರಾ ಕಷ್ಟವಾಯಿತು. ನಡೆಯುವುದು, ಹಾವಭಾವ, ಕುಳಿತುಕೊಳ್ಳುವುದು, ವಯ್ಯಾರ ಪ್ರತಿಯೊಂದರಲ್ಲೂ ವಿಭಿನ್ನವಾಗಿಯೇ ಇರಬೇಕು. ಎಷ್ಟೇ ಕಷ್ಟವಾದರೂ ಗುರುಗಳ ಮಾರ್ಗದರ್ಶನದಿಂದ ಈ ಕಲೆಯನ್ನು ಸಿದ್ಧಿಸಿಕೊಂಡೆ’ ಎನ್ನುತ್ತಾರೆ ಬಸವರಾಜ್‌.

25 ವರ್ಷದ ಬಸವರಾಜ್‌ ದೇಶ ವಿದೇಶಗಳಲ್ಲಿ ಈಗಾಗಲೇ ಏಳುನೂರು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವರು ಕಳೆದ ಐದು ವರ್ಷದಿಂದ ಕೇವಲ ಮಹಿಳಾ ಪಾತ್ರದಲ್ಲಿ ರಂಗ ಏರುತ್ತಾರೆ. ಹೊಸ ಕಾರ್ಯಕ್ರಮ, ಹೊಸ ಜನ, ವಿಶಿಷ್ಟ ಕಾರ್ಯಕ್ರಮ ಎಂದಾದರೆ ಅವರು ಅದಕ್ಕೆ ಹೊಂದುವ ಮತ್ತೊಂದು ವಿಶೇಷ ದಿರಿಸನ್ನು ಹೊಲಿಸಿಕೊಳ್ಳುತ್ತಾರೆ. ಹೀಗೆ ಸದ್ಯ ಅವರ ಬಳಿ 40 ನೃತ್ಯಕ್ಕೆ ಬೇಕಾಗುವ ದಿರಿಸುಗಳಿವೆ. ದಿನದ ಹೆಚ್ಚಿನ ಭಾಗ ನೃತ್ಯ ಚಿಂತನೆಯಲ್ಲೇ ಇರುವ ಬಸವರಾಜ್‌ ನೃತ್ಯದ ಮೂಲಕ ಜನರನ್ನು ರಂಜಿಸಬೇಕು, ಅವಕಾಶ ಸಿಕ್ಕರೆ ಟೀವಿ, ಸಿನಿಮಾಗಳಲ್ಲಿಯೂ ಅಭಿನಯಿಸಬೇಕು ಎಂಬ ಆಸೆ ಹೊಂದಿದ್ದಾರೆ.

ಸಮೂಹ ನೃತ್ಯವಾದರೆ ಅವರು ಹೆಚ್ಚು ಇಷ್ಟಪಡುವ ಪಾತ್ರ ಭಸ್ಮಾಸುರ ಪ್ರಸಂಗದಲ್ಲಿನ ಮೋಹಿನಿ ಪಾತ್ರ. ಸೀತಾ ಸ್ವಯಂವರದ ಸೀತೆ, ಪಾರ್ವತಿ ಕಲ್ಯಾಣದ ಪಾರ್ವತಿ, ಮಹಿಷಾಸುರ ಮರ್ದಿನಿಯಲ್ಲಿ ಚಾಮುಂಡಿ ಪಾತ್ರದಲ್ಲಿ ಅಭಿನಯಿಸುತ್ತಾರೆ. ಏಕಾಂಗಿಯಾಗಿ ಮಂಡೂಕ ಶಬ್ದ, ಜಣತ ಶಬ್ದ, ಮಂಡೋದರಿ ಶಬ್ದ... ಇಂಥ ಪ್ರಸಂಗಗಳನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ.

ಮಲೇಷ್ಯಾ ಹಾಗೂ ದುಬೈಗಳಲ್ಲಿಯೂ ನೃತ್ಯ ಕಾರ್ಯಕ್ರಮ ನೀಡಿ ಮೆಚ್ಚುಗೆಗಳಿಸಿದ್ದಾರೆ. ಇತರೆ ದೇಶಗಳಲ್ಲಿ ನೃತ್ಯ ಮಾಡಿ ಭಾರತೀಯ ನೃತ್ಯ ಶ್ರೀಮಂತಿಕೆಯನ್ನು ವಿಶ್ವಕ್ಕೆ ತಿಳಿಸಬೇಕು ಎಂಬುದು ಅವರ ಮಹದಾಸೆ. ಅಲ್ಲದೆ ತನ್ನ ಈ ಕಲಾ ಪ್ರತಿಭೆಯಿಂದ ಬಂದ ಹಣದಿಂದ ಅನಾಥಾಶ್ರಮ ಹಾಗೂ ವೃದ್ಧಾಶ್ರಮದಲ್ಲಿರುವವರಿಗೆ ನೆರವು ನೀಡಬೇಕು ಎನ್ನುವ ಆಸೆಯೂ ಅವರದ್ದು. ‘ನಾನು ಬಡತನದಲ್ಲಿಯೇ ಬೆಳೆದೆ. ಅಜ್ಜಿ, ಅಮ್ಮ ನನ್ನನ್ನು ಸಾಕಿದರು. ಕಷ್ಟದಲ್ಲಿರುವವರನ್ನು ಕಂಡರೆ ಕರುಳು ಚುರ್‌ ಎನ್ನುತ್ತದೆ. ಹೀಗಾಗಿ ಆಯೋಜಕರು ಸಿಕ್ಕಿದರೆ ಒಂದು ಪೈಸೆಯನ್ನೂ ನಾನು ಪಡೆಯದೆ ತಿಂಗಳಿಗೊಂದು ಕಾರ್ಯಕ್ರಮ ಮಾಡಲು ಸಿದ್ಧನಿದ್ದೇನೆ. ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣವನ್ನೆಲ್ಲಾ ಅನಾಥಾಶ್ರಮ ಹಾಗೂ ವ್ರದ್ಧಾಶ್ರಮಕ್ಕೆ ನೀಡಬೇಕು’ ಎನ್ನುತ್ತಾರೆ ಬಸವರಾಜ್‌.

ಪದವಿಪೂರ್ವ ಕಾಲೇಜು ಶಿಕ್ಷಣ ಮುಗಿಸಿರುವ ಬಸವರಾಜ್‌, ಈಗ ಸಿರಗು‍ಪ್ಪ ಶಾಲೆಯಲ್ಲಿ ನೃತ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ‘ನೃತ್ಯ ಕಲಿತು ಮುಗಿಯುವುದಿಲ್ಲ’ ಎನ್ನುವ ಅವರು ಈಗಲೂ ಮಹಮ್ಮದ್‌ ಗೌಸ್‌ ಅವರಿಂದ ನೃತ್ಯಾಭ್ಯಾಸ ಮುಂದುವರೆಸಿದ್ದಾರೆ. ಎಷ್ಟೇ ಬಡತನವಿದ್ದರೂ ನೃತ್ಯ ಕಲಿಸಿ, ಹೆಣ್ಣಿನ ಪಾತ್ರ ಮಾಡುತ್ತೇನೆ ಎಂದಾಗ ಪ್ರೋತ್ಸಾಹಿಸಿದ ಮನೆಯವರೇ ತನ್ನೆಲ್ಲಾ ಸಾಧನೆಗೆ ಸ್ಫೂರ್ತಿ ಎನ್ನುವ ವಿನಯವಂತಿಕೆ ಬಸವರಾಜ್‌ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT