ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರಿಸಿ ಧೋತಿ

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಸಂಪ್ರದಾಯಿಕ ಉಡುಗೆಗಳು ಫ್ಯಾಷನ್ ಆಗುತ್ತಿರುವ ಜಮಾನಾದಲ್ಲಿ ಧೋತಿಗಳು ಮತ್ತೆ ಅಸ್ತಿತ್ವ ಕಂಡುಕೊಂಡಿವೆ. ಭಾರತೀಯ ವಸ್ತ್ರ ಪರಂಪರೆಯಲ್ಲಿ ಪುರುಷರ ಪ್ರಮುಖ ಉಡುಗೆಯಾಗಿದ್ದ ಧೋತಿ ಮತ್ತು ಪಂಚೆಗಳು ನವಯುಗದ ಯುವಕರನ್ನು ಸೆಳೆಯಲು ಮುಖ್ಯ ಕಾರಣ ಅವುಗಳು ನೀಡುವ ಆರಾಮದಾಯಕ ಅನುಭೂತಿ. ಜೀನ್ಸ್ ಅಥವಾ ಇತರ ಪ್ಯಾಂಟ್ ಗಳಂತೆ ಚರ್ಮಕ್ಕೆ ಅಂಟಿಕೊಂಡು ಕಿರಿ-ಕಿರಿ ಮಾಡುವುದಿಲ್ಲ. ಎಲ್ಲ ಋತುಮಾನಕ್ಕೂ ಒಪ್ಪುವುದು ಮತ್ತೊಂದು ವಿಶೇಷ.

ಸಾಂಪ್ರದಾಯಿಕ ಉಡುಗೆ ಎಂಬ ವಿಶೇಷಣಕ್ಕೆ ತಕ್ಕಂತೆ ಮದುವೆ, ಪೂಜಾ ಕಾರ್ಯಕ್ರಮಗಳಲ್ಲಿ ಧರಿಸಿದರೆ ಗಂಭೀರ ಲುಕ್ ನೀಡುತ್ತದೆ. ಕಾಲೇಜುಗಳಲ್ಲಿ ನಡೆಯುವ ಎಥ್ನಿಕ್ ಡೇ, ಮತ್ತಿತರ ಸಮಾರಂಭಗಳಲ್ಲಿಯೂ ಧೋತಿಗಳು ಎಲ್ಲರ ಗಮನಸೆಳೆಯುವಂತೆ ಮಾಡುತ್ತವೆ. ಕಚೇರಿಗಳಲ್ಲಿಯೂ ಈಚೆಗೆ ಹಬ್ಬವನ್ನು ಸಾಮೂಹಿಕವಾಗಿ ಆಚರಿಸುವ ರೂಢಿ ಬೆಳೆಯುತ್ತಿದೆ. ಇಂಥ ಸಂದರ್ಭಗಳಿಗೂ ಧೋತಿ ಒಪ್ಪುತ್ತದೆ.

ಉಡುವುದು ಹೇಗೆ?

ಧೋತಿಗಳು ಸಣ್ಣ ಮಕ್ಕಳಿಂದ ಮುದುಕವರೆಗೆ ಎಲ್ಲ ವಯೋಮಾನದವರಿಗೂ ಒಪ್ಪುವ ಉಡುಗೆ. ಆದರೆ ಅದು ಆಕರ್ಷಕವಾಗಿ ಕಾಣುವಂತೆ ಉಡುವುದು ಕಲೆ. ಧೋತಿ ಉಟ್ಟು ಮೇಲೆ ಒಂದು ಶಲ್ಯ ಹಾಕಿಬಿಟ್ಟರೆ ಮದುವೆ ಗಂಡಿನ ಲುಕ್ ನಿಮ್ಮದಾಗುತ್ತದೆ. ಆದರೆ ಹೀಗೆ ಬರಿಯ ಶಲ್ಯ ಹಾಕಲು ಹುರಿಗಟ್ಟಿದ ದೇಹವಿರಬೇಕು. ಡೊಳ್ಳು ಹೊಟ್ಟೆಯವರು ಅಥವಾ ಪೀಚಲು ದೇಹಾಕಾರ ಹೊಂದಿರುವವರು ಮೇಲೆ ಕುರ್ತಾ ಅಥವಾ ಶೇರ್ವಾನಿ ಹಾಕಿಕೊಳ್ಳುವುದು ಒಳಿತು. ಬಣ್ಣದ ಆಯ್ಕೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಧೋತಿ ಮತ್ತು ಮೇಲಂಗಿ ಒಂದೇ ಬಣ್ಣದ್ದಾಗಿರದಂತೆ ಎಚ್ಚರ ವಹಿಸಿದರೆ ಸಾಕು. ಬಿಳಿ ಬಣ್ಣದ ಧೋತಿ ಧರಿಸಿದಾಗ ಅದೇ ಬಣ್ಣದ ಮೇಲಂಗಿ ಧರಿಸಲು ಅಡ್ಡಿ ಇಲ್ಲ.

ಧೋತಿ ಧರಿಸಿದಾದ ಮೇಲಂಗಿ ಮತ್ತು ಶಲ್ಯದ ಆಯ್ಕೆಗೆ ಕೊಡುವ ಗಮನವನ್ನೇ ಪಾದರಕ್ಷೆಯ ಕಡೆಗೂ ಗಮನವಹಿಸಬೇಕು. ಕೊಲ್ಹಾಪುರಿ ಅಥವಾ ರಜಪೂತ ಶೈಲಿಯ ಪಾದರಕ್ಷೆ ಧರಿಸಿದರೆ ಧೋತಿಯ ಅಂದ ಹೆಚ್ಚುತ್ತದೆ. ಧೋತಿಯ ಬಣ್ಣಕ್ಕೆ ವಿರುದ್ಧ ಬಣ್ಣದ ಚಪ್ಪಲಿಗಳನ್ನು ಧರಿಸುವುದು ಒಳಿತು. ಶೂಗಳನ್ನು ಧರಿಸುವುದು ಬೇಡ, ಇದು ಧೋತಿಯ ‘ಸಾಂಪ್ರದಾಯಿಕ ಉಡುಗೆ’ ಎಂಬ ವಿಶೇಷಣಕ್ಕೆ ಧಕ್ಕೆ ತರುತ್ತದೆ.

ಆಯ್ಕೆ ಹೀಗಿರಲಿ

ಧೋತಿಯ ಬಣ್ಣ ಯಾವುದಾದರೂ ಗುಣಮಟ್ಟದ ಕಡೆ ಗಮನವಿರಲಿ. ಕಡಿಮೆ ಗುಣಮಟ್ಟದ ಧೋತಿಗಳು ಒಂದೇ ಬಳಕೆಯಲ್ಲಿ ಹಾಳಾಗುವ ಸಂಭವ ಇರುತ್ತದೆ. ಹೆಚ್ಚು ಅಗಲದ ಧೋತಿಗಳ ಆಯ್ಕೆ ಬೇಡ. ಹಾಗೇ ಪಾದ ಮುಚ್ಚುವಷ್ಟು ಉದ್ದದ ಧೋತಿಗಳನ್ನೂ ಕೊಳ್ಳಬೇಡಿ. ರೇಷ್ಮೆ ಧೋತಿಗಳು ರಾಯಲ್ ಲುಕ್ ನೀಡುತ್ತವೆ. ಜರಿ ಮಾದರಿಯ ಅಂಚುಳ್ಳ, ಚಿತ್ತಾರಗಳನ್ನು ಹೊಂದಿದ ಧೋತಿಗಳು ನೋಡಲು ಆಕರ್ಷಕ.

ಮಾರುಕಟ್ಟೆಯಲ್ಲಿ, ಧರಿಸಲು ಅನುಕೂಲವಾಗುವಂತೆ ಜಿಪ್ ಉಳ್ಳ ಧೋತಿಗಳು, ಜೇಬು ಹೊಂದಿದ ಧೋತಿಗಳು ಲಭ್ಯವಿವೆ. ಸಪೂರ ಸೊಂಟದವರಿಗೆಂದೇ ಬೆಲ್ಟ್ ಧರಿಸಬಹುದಾದ ಹಾಗೂ ಎಲಾಸ್ಟಿಕ್ ಧೋತಿಗಳೂ ಲಭ್ಯ.

ಫ್ಲಿಪ್ ಕಾರ್ಟ್, ಅಮೆಜಾನ್ ಇಂಡಿಯಾ, ಮಿಂತ್ರಾ ಸೇರಿ ಹಲವು ಆನ್ ಲೈನ್ ಮಳಿಗೆಗಳಲ್ಲಿ ಧೋತಿಗಳು ಲಭ್ಯ. ಚಿಕ್ಕಪೇಟೆ, ಕಮರ್ಷಿಯಲ್‌ ಸ್ಟ್ರೀಟ್‌ ಸೇರಿದಂತೆ ಹಲವೆಡೆ ಇರುವ ಪ್ರಮುಖ ಮಳಿಗೆಗಳಲ್ಲಿಯೂ ಧೋತಿ ಲಭ್ಯ. ₹200ರಿಂದ ₹15000ವರೆಗೆ ಬೆಲೆ ಇದೆ. ಬಟ್ಟೆಯ ಗುಣಮಟ್ಟ ಮತ್ತು ಕುಸುರಿ ಕೆಲಸದ ಆಧಾರದ ಮೇಲೆ ಬೆಲೆ ನಿಗದಿಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT