ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇರೆ ಮೀರಿದ ಟ್ರಂಪ್ ಮಾತು ಅಮೆರಿಕದ ಘನತೆಗೆ ತಕ್ಕದ್ದಲ್ಲ

Last Updated 21 ಸೆಪ್ಟೆಂಬರ್ 2017, 19:57 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ ಮಹಾ ಅಧಿವೇಶನದಲ್ಲಿ ಮೊದಲ ಬಾರಿಗೆ ತಾವು ಮಾಡಿದ ಭಾಷಣದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುದ್ಧೋನ್ಮಾದಿಯ ಮಾತುಗಳನ್ನಾಡಿದ್ದಾರೆ. ಉತ್ತರ ಕೊರಿಯಾವನ್ನು ನಾಶ ಮಾಡುವ ಬೆದರಿಕೆಯನ್ನು 193 ಸರ್ಕಾರಗಳ ಪ್ರತಿನಿಧಿಗಳ ಮುಂದೆ ಉಚ್ಚರಿಸಿದ್ದಾರೆ. ಅಷ್ಟೇ ಅಲ್ಲ, ಇರಾನ್‌ ಜೊತೆಗಿನ 2015ರ ಪರಮಾಣು ಒಪ್ಪಂದ, ಅಮೆರಿಕಕ್ಕೆ ಮುಜುಗರದ ಸಂಗತಿ ಎಂದಿದ್ದಾರೆ.

ಟ್ರಂಪ್ ಅವರು ವಿಶ್ವದ ಪ್ರಭಾವಿ ಹಾಗೂ ಬಲಯುತವಾದ ಪ್ರಜಾಪ್ರಭುತ್ವ ರಾಷ್ಟ್ರದ ನಾಯಕ. ಆದರೆ ಅವರು ಬಳಸಿದ ಭಾಷೆ ಅವರ ಹುದ್ದೆಗೆ ತಕ್ಕುದಾಗಿರಲಿಲ್ಲ. ವಿಶ್ವದ ಈ ಪ್ರಮುಖ ವೇದಿಕೆಯಿಂದ ಸಂಘರ್ಷಾತ್ಮಕ ಶೈಲಿಯ ನಾಯಕತ್ವ ಮುನ್ನೆಲೆಗೆ ಬಂದಂತೆ ಆದದ್ದು ವಿಷಾದನೀಯ.

‘ಪರಮಾಣು ಶಸ್ತ್ರಾಸ್ತ್ರಗಳು ವಿಶ್ವ ಎದುರಿಸುತ್ತಿರುವ ಮುಖ್ಯ ಬೆದರಿಕೆಯಾಗಿದೆ’ ಎಂದು ವಿಶ್ವಸಂಸ್ಥೆ ಮಹಾಧಿವೇಶನದ ಉದ್ಘಾಟನಾ ಭಾಷಣದಲ್ಲಿ ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಅವರು ಹೇಳಿದ್ದರು.

‘ಪರಿಣಾಮಗಳ ಅರಿವಿಲ್ಲದೆ ಯುದ್ಧದತ್ತ ಸಾಗಬಾರದು’ ಎಂದೂ ಎಚ್ಚರಿಸಿದ್ದರು. ಆದರೆ ಈ ಮಾತುಗಳಿಗೆ ತದ್ವಿರುದ್ಧವಾಗಿ ಉತ್ತರ ಕೊರಿಯಾವನ್ನು ನಾಶ ಮಾಡುವ ಬೆದರಿಕೆಯನ್ನು ಅಮೆರಿಕ ಅಧ್ಯಕ್ಷರು ಹಾಕಿದ್ದು ವಿಪರ್ಯಾಸ.

‘ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರು ಆತ್ಮಹತ್ಯಾ ಯೋಜನೆಯ ರಾಕೆಟ್ ಮ್ಯಾನ್’ ಎಂದು ವ್ಯಂಗ್ಯವಾಡಿ, ‘ಪರಮಾಣು ಕಾರ್ಯಕ್ರಮಗಳಿಂದ ಹಿಂದೆ ಸರಿಯದಿದ್ದಲ್ಲಿ, ಉತ್ತರ ಕೊರಿಯಾವನ್ನು ಸಂಪೂರ್ಣ ನಾಶ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದ ರೀತಿ ಆಘಾತಕಾರಿಯಾದುದು.

ಆರಂಭದಿಂದಲೂ ಸಾಂಸ್ಥಿಕ ಪ್ರಯತ್ನಗಳು ಹಾಗೂ ಪ್ರಕ್ರಿಯೆಗಳಿಗೆ ಟ್ರಂಪ್ ಅವರು ಅನಾದರ ತೋರಿಸಿಕೊಂಡೇ ಬಂದಿದ್ದಾರೆ. ಈಗಾಗಲೇ ರಾಜತಾಂತ್ರಿಕ ನಡೆಗಳಲ್ಲಿ ತಳಮಳ ಸೃಷ್ಟಿಸಿರುವ ಅವರು, ಉತ್ತರ ಕೊರಿಯಾಕ್ಕೆ ಸಂಬಂಧಿಸಿದಂತೆ ಅಮೆರಿಕ ರಾಜತಾಂತ್ರಿಕ ಪ್ರಯತ್ನಗಳಿಗೆ ದೊಡ್ಡ ಪೆಟ್ಟು ನೀಡಿದ್ದಾರೆ. ಅಧಿಕಾರ ವಹಿಸಿಕೊಂಡ ನಂತರ ಅನೇಕ ರಾಜತಾಂತ್ರಿಕರನ್ನು ಕೆಲಸದಿಂದ ಕಿತ್ತುಹಾಕಿದ್ದರು ಟ್ರಂಪ್.

ಭಾರತದಲ್ಲೂ ಇನ್ನೂ ಅಮೆರಿಕ ರಾಯಭಾರಿ ಅಧಿಕಾರ ವಹಿಸಿಕೊಂಡಿಲ್ಲ ಎಂಬುದನ್ನೂ ಇಲ್ಲಿ ಪ್ರಾಸಂಗಿಕವಾಗಿ ನೆನಪಿಸಿಕೊಳ್ಳಬಹುದು. ಆದರೆ ಈ ಸಮಕಾಲೀನ ಜಗತ್ತಿನ ಅನೇಕ ತಳಮಳಗಳು ಹಾಗೂ ಅಡೆತಡೆಗಳ ನಡುವೆಯೇ ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಟ್ರಂಪ್ ಅವರು ಶಾಂತಿಯ ದಾರಿಗೆ ದಿಕ್ಸೂಚಿ ತೋರಬಹುದೆಂಬ ನಿರೀಕ್ಷೆ ಇತ್ತು.

ಆದರೆ ‘ಶೀತಲ ಸಮರ’ ತೀವ್ರವಾಗಿದ್ದ ಸಂದರ್ಭದಲ್ಲಿ ಬಳಸುತ್ತಿದ್ದ ಭಾಷೆಗಿಂತ ಕೆಟ್ಟ ಭಾಷೆಯನ್ನು ಟ್ರಂಪ್ ಬಳಸಿದ್ದು ವಿಷಾದನೀಯ. ಇರಾನ್ ಒಪ್ಪಂದವನ್ನು ಈ ಭಾಷಣದಲ್ಲಿ ಎಳೆದು ತಂದಿದ್ದಂತೂ ಅತಿರೇಕದ್ದು. ಪಶ್ಚಿಮ ಏಷ್ಯಾದ ಕೆಲವು ಭಾಗಗಳಲ್ಲಿ ರಷ್ಯಾ ಜೊತೆ ಸೇರಿ ಅಮೆರಿಕದ ಪ್ರಭಾವಕ್ಕೆ ಟೆಹರಾನ್ ಸವಾಲೆಸೆಯುತ್ತಿದೆ ಎಂಬುದು ನಿಜ.

ಹೀಗೆಂದಾಕ್ಷಣ ವಿಶ್ವಕ್ಕೇ  ಇರಾನ್ ಬೆದರಿಕೆ ಎಂದು ಹೇಳಲಾಗದು. ಹಾಗೆಂದು ನಂಬುವಂತೆ ಮಾಡಲು ಯತ್ನಿಸುತ್ತಿರುವ ಟ್ರಂಪ್ ನಿಲುವು ಸರಿಯಲ್ಲ. ಇರಾನ್ ಜೊತೆಗೆ 2015ರ ಅಮೆರಿಕದ ಅಣು ಒಪ್ಪಂದ, ಆ ಕಾಲದಲ್ಲಿ ಅಮೆರಿಕದ ಪ್ರಬುದ್ಧತೆಗೆ ದ್ಯೋತಕವಾಗಿತ್ತು. ಅದು ಮುಜುಗರದ ಸಂಗತಿಯಾಗಿರಲಿಲ್ಲ ಎಂಬುದು ಟ್ರಂಪ್‌ಗೆ ಗೊತ್ತಿರಬೇಕಿತ್ತು.

42 ನಿಮಿಷಗಳ ಭಾಷಣದ ಅವಧಿಯಲ್ಲಿ ‘ಅಮೆರಿಕ ಮೊದಲು’ ನಿಲುವಿಗೇ ಟ್ರಂಪ್ ಅಂಟಿಕೊಂಡಿದ್ದರಿಂದ ಅದು ವಿಶ್ವಸಂಸ್ಥೆಯ ಸಾಮೂಹಿಕ ತಾತ್ವಿಕ ನೆಲೆಗೆ ಈವರೆಗೆ ಅಮೆರಿಕ ನೀಡಿಕೊಂಡು ಬಂದಿದ್ದ ಬೆಂಬಲದ ನಿಲುವಿಗೆ ತದ್ವಿರುದ್ಧವಾಗಿತ್ತು ಎಂಬುದು ವಿಪರ್ಯಾಸ.

ಮಾನವಹಕ್ಕುಗಳಿಗೆ ಪ್ರಾಮುಖ್ಯ ನೀಡುವಂತಹ ವ್ಯವಸ್ಥೆ ಆಧರಿಸಿದ ಪ್ರಜಾಪ್ರಭುತ್ವದ ನೆಲೆಯನ್ನು ವಿಸ್ತರಿಸುವುದು ಮುಖ್ಯ. ಯಾವುದೋ ಕಾರ್ಯತಂತ್ರಕ್ಕಾಗಿ ಇಂತಹ ಪ್ರಮುಖ ಮೌಲ್ಯ ವ್ಯವಸ್ಥೆಯನ್ನು ಬಿಟ್ಟುಕೊಡುವುದಾದರೆ ಅಮೆರಿಕದ ಪ್ರತಿಷ್ಠೆ ವಿಶ್ವದ ದೃಷ್ಟಿಕೋನದಲ್ಲಿ ಕುಂದುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT