ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಬೇಕೇ? ಸ್ವಚ್ಛತೆ ಕಾಪಾಡಿ

Last Updated 21 ಸೆಪ್ಟೆಂಬರ್ 2017, 19:57 IST
ಅಕ್ಷರ ಗಾತ್ರ

ಬೆಳಗಾವಿ ಬಳಿಯ ಹಳ್ಳಿಯೊಂದರಲ್ಲಿ ಒಂದು ಚಿಕ್ಕ ಚೊಕ್ಕ ಕುಟುಂಬ. ಅಪ್ಪ- ಅವ್ವ ಮತ್ತು ಮಗಳು. ಅಪ್ಪ– ಅವ್ವ ಇಬ್ಬರೂ ದುಡಿಯಲು ಹತ್ತಿರದ ಶಹರಕ್ಕೆ ಹೋಗುತ್ತಿದ್ದರು. ಆ ಬಡ ದಂಪತಿ ಮಗಳ ಹೆಸರು ರಾಧಿಕಾ. ನೋಡಲು ಅಪ್ಸರೆಯಂತಿದ್ದಳು. ಎಂಟನೆಯ ತರಗತಿಯಲ್ಲಿ ಓದುತ್ತಿದ್ದಳು. ಎಷ್ಟೇ ಕಷ್ಟವಾದರೂ ಮಗಳನ್ನು ಓದಿಸಿ ದೊಡ್ಡ ಅಧಿಕಾರಿಯನ್ನಾಗಿಸುವ ಹೊಂಗನಸು ಆ ತಂದೆ– ತಾಯಿಗೆ.

ಆದರೆ, ಅದು ಹೇಗೋ, ಡೆಂಗಿ ಜ್ವರ ಆ ಹುಡುಗಿಯನ್ನು ಆವರಿಸಿಕೊಂಡಿದ್ದು, ಪಾಪ ಆ ಪೋಷಕರಿಗೆ ಗೊತ್ತಾಗಲೇ ಇಲ್ಲ. ಜ್ವರ ತೊಂದರೆ ಕೊಟ್ಟಾಗ, ಅದು ಸಾದಾ ಜ್ವರವೆಂದು ತಿಳಿದು ಅವ್ವ– ಅಪ್ಪ ಗಮನ ಹರಿಸಲು ಹೋಗಲಿಲ್ಲ. ಸಾಲದ್ದಕ್ಕೆ, ಕಾರಣಾಂತರದಿಂದ ಅಪ್ಪ ಬೇರೆ ಊರಿಗೆ ಹೋಗಬೇಕಾಯಿತು. ಇತ್ತ ಮಗಳ ಜ್ವರ ಉಲ್ಬಣಗೊಂಡು ತಾಯಿಗೆ ದಿಕ್ಕೇ ತೋಚದಂತಾಯಿತು. ಹಣ ಹೊಂದಿಸಿಕೊಂಡು ಒಳ್ಳೆಯ ಆಸ್ಪತ್ರೆಗೆ ದಾಖಲಿಸುವ ಹೊತ್ತಿಗೆ ಆ ಸುಂದರ ಹುಡುಗಿ ಮುಚ್ಚಿದ ಕಣ್ಣು ತೆರೆಯಲೇ ಇಲ್ಲ.

ಇದು ರಾಧಿಕಾಳ ಕತೆ ಅಷ್ಟೇ ಅಲ್ಲ. ಹಳ್ಳಿ– ನಗರ ಎನ್ನುವ ಭೇದವಿಲ್ಲದೆ ಡೆಂಗಿ ಜ್ವರ ಮತ್ತೆ ವಕ್ಕರಿಸಿದೆ. ಎಲ್ಲ ಕಡೆಗೂ ಕಾಳ್ಗಿಚ್ಚಿನಂತೆ ಹರಡುತ್ತಿದೆ.

* * *

ಇದು ಮತ್ತೊಂದು ಗ್ರಾಮ. ಡೆಂಗಿ ಕಾಣಿಸಿಕೊಂಡ ನಂತರವಷ್ಟೇ ಎಚ್ಚೆತ್ತುಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದವರು ಮನೆಮನೆಗೆ ಹೋಗಿ ‘ನೋಡ್ರಿ ಊರಾಗ ಡೆಂಗಿ ಬಂದೈತಿ. ಮನಿ ಒಳಗ– ಹೊರಗ ಸ್ವಚ್ಛ ಇಡ್ರಿ, ಎಲ್ಲಿನೂ ನೀರು ನಿಲ್ಲದಂಗ ನೋಡಕೋರಿ. ಸಂಜಿಮುಂದ ಬೇವಿನ ತಪ್ಪಲದ ಹೊಗಿ ಹಾಕ್ರಿ, ಗಟಾರ ಸ್ವಚ್ಛ ಇಟಗೋರಿ, ಸೊಳ್ಳಿ ಪರದೆ ಕಟಗೊಂಡ ಮಕ್ಕೋರಿ, ನೀರು ಕುದಿಸಿ ಆರಿಸಿ ಕುಡೀರಿ’ ಎಂದೆಲ್ಲ ಸಲಹೆ ಕೊಡುತ್ತಿದ್ದರು.

ಆದರೆ ಆ ಹಳ್ಳಿಯ ಹೆಂಗಸರು ಸರಿಯಾಗಿ ಸ್ಪಂದಿಸದೆ ಅಡ್ಡಾದಿಡ್ಡಿ ಪ್ರಶ್ನೆ ಕೇಳತೊಡಗಿದರು. ‘ನಾವೊಬ್ರು ಸ್ವಚ್ಛ ಇಟಗೊಂಡ್ರ? ಊರಾನ ಮಂದಿ ಸ್ವಚ್ಛ ಇಡಬೇಕಲ್ರಿ? ದಿನಾ ನೀರು ಕುದಿಸಿ ಕುಡದ್ರ ಗ್ಯಾಸ್ ಬೇಗ ತೀರತೈತ್ರಿ. ಬರೇ ಮನಿ ಸ್ವಚ್ಛ ಮಾಡಕೊಂತ ಕುಂತ್ರ ಕೆಲ್ಸ ಯಾವಾಗ ಮಾಡೂಣ? ಇದ್ದ ಬೇವಿನ ಗಿಡಾ ಎಲ್ಲಾ ಕಡದ ಒಗದಾರ. ಇನ್ನ ಅದರ ತಪ್ಪಲಾ ಎಲ್ಲಿಂದ ತರೂದ್ರಿ? ಮನಿ ಮುಂದಿನ ಗಟಾರಾನೂ ನಾವ ಬಳಿಯೂಣೇನು? ಹೋಗ್ರಿ ಪಂಚಾಯತಿಗೆ ಹೇಳ ಹೋಗ್ರಿ... ಊರ ಸ್ವಚ್ಛ ಮಾಡ್ರಿ ಅಂತ’ ಎಂದೆಲ್ಲ ವಾದಿಸತೊಡಗಿದರು.

ಇಂತಹ ಜನರ ಮಧ್ಯೆ ಬಹಳ ವರ್ಷ ಸೇವೆ ಸಲ್ಲಿಸಿದ ಆರೋಗ್ಯ ಕಾರ್ಯಕರ್ತರೂ ಸುಮ್ಮನಿರಲಿಲ್ಲ. ‘ನೋಡ್ರಿ... ನೀವು ಏನ ಮಾಡ್ತೀರಿ ನಿಮಗ ಬಿಟ್ಟಿದ್ದು. ನಮ್ಮದಂತೂ ಹೇಳು ಕರ್ತವ್ಯ ಹೇಳತೀವಿ. ಎಮ್ಮಿಗೆ ಜ್ವರಾ ಬಂದ್ರ ಎತ್ತಿಗೆ ಬರಿ ಎಳದ್ರಂತ ಅನ್ನುವಂಗ, ನಿಮಗ ಏನರ ಆಗಿ ಸತ್ತರಿ ಅಂದ್ರ ಸರ್ಕಾರ ನಮ್ಮನ್ನ ಸಸ್ಪೆಂಡ್ ಮಾಡತೈತಿ’ ಎನ್ನುತ್ತ ಮುಂದಿನ ಮನೆ ಕಡೆ ಹೆಜ್ಜೆ ಹಾಕಿದರು.

ಊರು, ಊರಿನ ಚರಂಡಿಗಳನ್ನೆಲ್ಲ ಸ್ವಚ್ಛ ಮಾಡುವುದೇನೋ ಗ್ರಾಮ ಪಂಚಾಯ್ತಿಯ ಕೆಲಸ. ಆದರೆ ಒಂದು ಸಲ ವ್ಯವಸ್ಥಿತವಾಗಿ ಸ್ವಚ್ಛಗೊಳಿಸಿದ ನಂತರ ಅದನ್ನು ಹಾಗೇ ಶುಚಿಯಾಗಿಡುವುದು ಗ್ರಾಮಸ್ಥರೆಲ್ಲರ ಕರ್ತವ್ಯ. ಅದು ಬಿಟ್ಟು, ಅದೇನೂ ತನ್ನ ಮನೆ ಅಲ್ಲ ಎಂಬ ನಿರ್ಲಕ್ಷ್ಯದಿಂದ ಇನ್ನಷ್ಟು ಮತ್ತಷ್ಟು ಹೊಲಸುಗೊಳಿಸಿದರೆ? ಕೊಳೆನೀರು ಹರಿದುಹೋಗಲು ನಿರ್ಮಿಸಿದ ಚರಂಡಿಗಳಲ್ಲಿ ಜನ, ಕಸಕಡ್ಡಿಗಳನ್ನೆಲ್ಲ ಎಸೆಯುವುದನ್ನು ನಾನೇ ಕಣ್ಣಾರೆ ನೋಡಿದ್ದೇನೆ. ಇದು ತಪ್ಪು ಎಂದು ಹೇಳಲು ಹೋಗಿ ‘ಆ ಗಟಾರ ಏನ ನಿಮ್ಮದಾ?’ ಎಂದು ಹೇಳಿಸಿಕೊಂಡದ್ದಿದೆ.

ಗ್ರಾಮಸ್ಥರ ಇಂತಹ ತಪ್ಪು ತಿಳಿವಳಿಕೆ ಹಾಗೂ ಆಲಸ್ಯದಿಂದ ಚರಂಡಿಯ ನೀರು ನಿಂತಲ್ಲಿಯೇ ನಿಂತು ಊರೆಲ್ಲ ಕೊಳೆಯಾಗಿ ರೋಗ ಬಾರದಿರುತ್ತದೆಯೇ? ಊರಿಗೆ ಬಂದ ರೋಗ ಮನೆಗೆ ಬಾರದಿರುತ್ತದೆಯೇ? ಈಗ ಹರಡುತ್ತಿರುವ ಈ ಡೆಂಗಿ ರೋಗಕ್ಕೂ ಸ್ವಚ್ಛತೆಯ ಅಭಾವವೇ ಪ್ರಧಾನ ಕಾರಣ.

ಡೆಂಗಿ ಸಾಮಾನ್ಯ ಜ್ವರವಲ್ಲ. ಆರೋಗ್ಯ ಇಲಾಖೆ ಅಷ್ಟೇ ಅಲ್ಲ, ಬೇರೆ ಬೇರೆ ಇಲಾಖೆಗಳು, ಧಾರ್ಮಿಕ ಸಂಘಟನೆಗಳು, ಸಂಘ– ಸಂಸ್ಥೆಗಳು ಸೇರಿ ಊರಲ್ಲಿ ಜಾಗೃತಿ ಮೂಡಿಸಲು ಜಾಥಾ, ತಿಳಿವಳಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಂಬಂಧಪಟ್ಟ ಇಲಾಖೆಯವರಷ್ಟೇ ಈ ಕೆಲಸ ಮಾಡಬೇಕೆಂದೇನಿಲ್ಲ. ಸುಶಿಕ್ಷಿತರು, ಪ್ರಜ್ಞಾವಂತರು ತಮ್ಮ ಅಕ್ಕಪಕ್ಕದ ಕುಟುಂಬಗಳಿಗೆ ತಿಳಿವಳಿಕೆ ನೀಡುವುದು ಅಗತ್ಯ.

ಹಳ್ಳಿಗರು ಗುಂಪುಗೂಡಿ ಅಗತ್ಯ ಇಲ್ಲದಿದ್ದರೂ ಏನೂ ತಿಳಿಯದಿದ್ದರೂ ರಾಜಕೀಯದ ಬಗ್ಗೆ ತಾಸುಗಟ್ಟಲೆ ಹರಟೆ ಹೊಡೆಯುತ್ತಾರೆ. ಅದರ ಬದಲು ತಮ್ಮ ಗ್ರಾಮದ ಸ್ವಚ್ಛತೆ, ಅನುಕೂಲದ ಬಗ್ಗೆ ಚರ್ಚಿಸಿ, ಆ ಹರಟೆ ಕೊಚ್ಚುವ ಸಮಯವನ್ನೇ ಸ್ವಚ್ಛತಾ ಕಾರ್ಯಕ್ಕೆ ವಿನಿಯೋಗಿಸಬಹುದಲ್ಲ!

ಹಣ ಕಳೆದುಕೊಂಡರೆ ಅದೇನೂ ದೊಡ್ಡ ನಷ್ಟ ಅಲ್ಲ. ಆರೋಗ್ಯ ಕಳೆದುಕೊಂಡರೆ ಸ್ವಲ್ಪ ನಷ್ಟ. ಚಾರಿತ್ರ್ಯ ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ ಎಂಬ ಮಾತಿದೆ. ವಿಪರ್ಯಾಸವೆಂದರೆ ಮನುಷ್ಯ ಹಣ ಗಳಿಕೆಗಾಗಿ ಗುಣ ಹಾಗೂ ಆರೋಗ್ಯ ಎರಡನ್ನೂ ಪಣಕ್ಕಿಟ್ಟು ದುಡಿಯುತ್ತಿದ್ದಾನೆ. ಹಾಗೇ ಇವೆರಡನ್ನೂ ಕಳೆದುಕೊಳ್ಳುತ್ತಿದ್ದಾನೆ.

ಹಣ ಗಳಿಸುವ ಭರದಲ್ಲಿ ತನ್ನನ್ನೇ ತಾನು ಕಳೆದುಕೊಳ್ಳುತ್ತಿದ್ದಾನೆ. ಬದುಕಿನಲ್ಲಿ ಗಳಿಸುವುದು ಎಂದರೆ ಹಣ ಮಾತ್ರ ಎಂದು ಸಾಮಾನ್ಯವಾಗಿ ಎಲ್ಲರೂ ತಿಳಿದುಕೊಂಡಂತಿದೆ. ಹಾಗಾಗಿ ಆರೋಗ್ಯ ಮತ್ತು ಅದಕ್ಕೆ ಸ್ವಚ್ಛ ಪರಿಸರ ಎಷ್ಟು ಅಗತ್ಯ ಎನ್ನುವುದನ್ನು ಮರೆತಿದ್ದಾರೆ.

ಗಡ್ಡಕ್ಕೆ ಬೆಂಕಿ ತಗುಲಿದಾಗ ಬಾವಿ ತೋಡುವ ಬದಲು ಮೊದಲೇ ಎಚ್ಚರಿಕೆ ವಹಿಸುವುದು ಒಳಿತು. ರೋಗ ಬರಲಿ ಬಿಡಲಿ, ಊರು–ಕೇರಿ ಸ್ವಚ್ಛ ಇಡುವುದು ಪ್ರತಿಯೊಬ್ಬರ ಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT