ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಣ್‌ ಪಟ್ಟು; ಜಿತೇಂದ್ರ ತಬ್ಬಿಬ್ಬು

ದಸರಾ ನಾಡಕುಸ್ತಿ: ಕಾಟೆ–ಸಂತೋಷ್‌ ಸಮಬಲದ ಹೋರಾಟ
Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಅಮೋಘ ತಂತ್ರಗಾರಿಕೆ ಮೂಲಕ ಎದುರಾಳಿಯನ್ನು ಕೇವಲ ಏಳು ನಿಮಿಷಗಳಲ್ಲಿ ಚಿತ್‌ ಮಾಡಿದ ಪುಣೆಯ ಪೈಲ್ವಾನ್‌ ಕಿರಣ್‌ ಭಗತ್‌ ಅವರು ದಸರಾ ನಾಡಕುಸ್ತಿಯ ಮೊದಲ ದಿನ ಕುಸ್ತಿಪ್ರಿಯರ ಮನಗೆದ್ದರು.

ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಮಣ್ಣಿನ ಅಖಾಡದಲ್ಲಿ ಗುರುವಾರ ನಡೆದ ಮಾರ್ಫಿಟ್‌ ಕುಸ್ತಿ ಸ್ಪರ್ಧೆಯಲ್ಲಿ ಕಿರಣ್‌ ತಮ್ಮ ಎದುರಾಳಿ ಪಂಜಾಬ್‌ನ ಜಿತೇಂದ್ರ ಸಿಂಗ್‌ ಅವರನ್ನು ಪಟ್ಟು ಹಾಕಿ ಚಿತ್ ಮಾಡಿದರು.

ಪ್ರೇಕ್ಷಕರ ಮುಗಿಲು ಮುಟ್ಟಿದ ಕರತಾಡನ, ಕೇಕೆ, ಚಪ್ಪಾಳೆಯ ನಡುವೆ ಕಣಕ್ಕಿಳಿದ ಈ ಮಲ್ಲರಿಂದ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿತ್ತು. ಆದರೆ ಅಖಾಡಕ್ಕಿಳಿದ ಮೊದಲ ನಿಮಿಷದಿಂದಲೇ ಎದುರಾಳಿಯ ಮೇಲೆ ಎರಗಿದ ಕಿರಣ್‌ 10 ನಿಮಿಷಗಳ ಒಳಗೆ ಗೆದ್ದು ಬೀಗಿದರು.

ದಾವಣಗೆರೆ ಕ್ರೀಡಾನಿಲಯದ ಕಾರ್ತಿಕ್‌ ಕಾಟೆ ಮತ್ತು ಕೊಲ್ಲಾಪುರದ ಸಂತೋಷ್‌ ಧರೋಡ್‌ ನಡುವಿನ ಒಂದು ಗಂಟೆಯ ಹೋರಾಟ ಸಮಬಲದಲ್ಲಿ ಕೊನೆಗೊಂಡಿತು. ಈ ಇಬ್ಬರು ಕುಸ್ತಿಪಟುಗಳು ತೊಡೆ ತಟ್ಟಿ, ಪಟ್ಟಿಗೆ ಪಟ್ಟು ಹಾಕಿದರೂ ಸ್ಪಷ್ಟ ಫಲಿತಾಂಶ ಹೊರಬೀಳಲಿಲ್ಲ. ಒಂದೆರಡು ಕ್ಷಣಗಳಲ್ಲಿ ಸಂತೋಷ್‌ ಅಲ್ಪ ಮೇಲುಗೈ ಸಾಧಿಸಿದಂತೆ ಕಂಡುಬಂದರೂ ಕಾಟೆ ಛಲಬಿಡದೆ ಹೋರಾಡಿದರು.

75 ಕೆ.ಜಿ ದೇಹತೂಕ ಹೊಂದಿರುವ ಕಾಟೆ ಅವರು 100 ಕೆ.ಜಿ. ತೂಕ ಹೊಂದಿರುವ ಎದುರಾಳಿಯನ್ನು ಚಿತ್‌ ಮಾಡಲು ಇನ್ನಿಲ್ಲದ ಪ್ರಯತ್ನಪಟ್ಟರು. ರಕ್ಷಣೆಗೆ ಹೆಚ್ಚು ಒತ್ತು ನೀಡಿದ ಇವರನ್ನು ಹುರಿದುಂಬಿಸಲು ಪ್ರೇಕ್ಷಕರು ಮಾತ್ರವಲ್ಲ ಸಂಘಟಕರೂ ಪ್ರಯತ್ನಿಸಿದರು. ಮೊದಲ 15 ನಿಮಿಷ ಕೆಲವು ಪಟ್ಟುಗಳನ್ನು ಪ್ರದರ್ಶಿಸಿದ ಬಳಿಕ ಇಬ್ಬರೂ ಆಕ್ರಮಣಕ್ಕೆ ಮುಂದಾಗಲಿಲ್ಲ.

ಫಲಿತಾಂಶ ಹೊರಬೀಳುವ ಲಕ್ಷಣ ಗೋಚರಿಸದೆ ಇದ್ದಾಗ ಸಂಘಟಕರು, ಮುಂದಿನ ಹತ್ತು ನಿಮಿಷಗಳಲ್ಲಿ ಗೆಲ್ಲುವವರಿಗೆ ₹ 25 ಸಾವಿರ ನೀಡುವುದಾಗಿ ಪ್ರಕಟಿಸಿದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ತುಂಬಿ ತುಳುಕಿದ್ದ ಜನರು ಕೂಗಾಡುತ್ತಿದ್ದಂತೆ ಕುಸ್ತಿಪಟುಗಳು ಕಾದಾಡಿದರೂ ಫಲಿತಾಂಶ ಬಾರದೆ ಸಮಯ ಮುಗಿಯಿತು.

ರಮ್ಮನಹಳ್ಳಿಯ ರವಿ– ಧಾರವಾಡದ ದೊರೆಯಪ್ಪ, ಪಾಲಹಳ್ಳಿಯ ಗಿರೀಶ್‌–ಸೀತಾಪುರದ ವಿಕಾಸ್‌ ಗೌಡ ಮತ್ತು ಮೈಸೂರಿನ ಶಾಕೀಬ್‌– ಕನಕಪುರದ ಸ್ವರೂಪ್‌ ಗೌಡ ನಡುವಿನ ಸೆಣಸಾಟ ಸಮಬಲದಲ್ಲಿ ಕೊನೆಗೊಂಡಿತು.

ರೀಟಾಗೆ ಜಯ: ಮೊದಲ ದಿನ ಮಹಿಳೆಯರ ಒಂದು ಜೋಡಿ ಕಣಕ್ಕಿಳಿಯಿತು. ಪಾಲಹಳ್ಳಿಯ ರೀಟಾ ಅವರು ಮಂಡ್ಯದ ರಕ್ಷಿತಾ ವಿರುದ್ಧ ಗೆಲುವು ಪಡೆದರು.

ದಸರಾ ಕಂಠೀರವ ಗೆದ್ದವರಿಗೆ ₹ 50 ಸಾವಿರ
ಮುಂದಿನ ವರ್ಷದಿಂದ ದಸರಾ ಕುಸ್ತಿಯಲ್ಲಿ ‘ದಸರಾ ಕಂಠೀರವ’ ಪ್ರಶಸ್ತಿ ಗೆಲ್ಲುವವರಿಗೆ ₹ 50 ಸಾವಿರ ಮತ್ತು ‘ದಸರಾ ಕೇಸರಿ’ ಬಿರುದು ಪಡೆಯುವವರಿಗೆ ₹ 30 ಸಾವಿರ ನಗದು ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು. ಅವರು ಸುಮಾರು ಒಂದೂವರೆ ಗಂಟೆ ಕುಸ್ತಿ ವೀಕ್ಷಿಸಿದರು.

ಚಿನ್ನ ಗೆದ್ದವರಿಗೆ ₹ 25 ಸಾವಿರ
ದಸರಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಪ್ರತಿ ಸ್ಪರ್ಧಿಗಳಿಗೆ ₹ 25 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಪ್ರಕಟಿಸಿದರು.

ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಬೆಳ್ಳಿ ಮತ್ತು ಕಂಚು ಜಯಿಸುವವರಿಗೆ ಇಲಾಖೆಯ ವತಿಯಿಂದ ಕ್ರಮವಾಗಿ ₹ 15 ಸಾವಿರ ಮತ್ತು ₹ 10 ಸಾವಿರ ನೀಡಲಾಗುವುದು ಎಂದರು. ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ಸ್ಪರ್ಧೆಗಳು ಆರಂಭವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT