ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದುಮ: ಹಿಂದೂ ಧರ್ಮಕ್ಕೆ ಮರಳಿದ ಆದಿರಾ

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕಾಸರಗೋಡು: ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಸ್ನಾತಕೊತ್ತರ ಪದವೀಧರೆ, ಉದುಮ ನಿವಾಸಿ ಆದಿರಾ (23) ಮರಳಿ ಹಿಂದೂ ಧರ್ಮ ಸ್ವೀಕರಿಸಿದ್ದಾರೆ.

ಗುರುವಾರ ಎರ್ನಾಕುಲಂನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಅವರು, ತನ್ನನ್ನು ಒತ್ತಾಯಪೂರ್ವಕವಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗಿತ್ತು ಎಂದಿದ್ದಾರೆ.

‘ಮುಸ್ಲಿಂ ಸಹಪಾಠಿಗಳ ಒತ್ತಾಯಕ್ಕೆ ಮಣಿದ ನನ್ನನ್ನು ಕಡ್ಡಾಯವಾಗಿ ಮತಾಂತರಗೊಳಿಸಲಾಗಿತ್ತು. ಎರ್ನಾಕುಲಂನ ಆರ್ಷ ವಿದ್ಯಾ
ಸಮಾಜದಲ್ಲಿ ಹಿಂದೂ ಧರ್ಮದ ಬಗ್ಗೆ ಅಧ್ಯಯನ ನಡೆಸಿರುವ ನನಗೆ ಮಾತೃಧರ್ಮದ ಮಹತ್ವ ಮನದಟ್ಟಾಗಿದ್ದು, ಇಷ್ಟೊಂದು ಉತ್ತಮ ಧರ್ಮ ಬೇರೊಂದಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಕಳೆದ ಜುಲೈ 10 ರಂದು ಉದುಮದ ಮನೆ ಬಿಟ್ಟು ತೆರಳಿದ್ದ ಆದಿರಾ, ಹಿಂದೂ ಧರ್ಮ ತ್ಯಜಿಸಿ , ಇಸ್ಲಾಂ ಮತ
ಸ್ವೀಕರಿಸಿದ್ದರು. ತಾನು ಇಸ್ಲಾಂ ಮತದ ಬಗ್ಗೆ ಆಸಕ್ತಿ ತಳೆದಿರುವುದಾಗಿಯೂ, ಆ ಧರ್ಮದ ಅಧ್ಯಯನಕ್ಕೆ ತೆರಳುವುದಾಗಿ 15 ಪುಟಗಳ ಪತ್ರವೊಂದನ್ನು ಬರೆದು ಮನೆಯಲ್ಲಿಟ್ಟು ಹೋಗಿದ್ದರು.

ಪೋಷಕರ ದೂರಿನಂತೆ ಜುಲೈ 27ರಂದು ಕಣ್ಣೂರು ಬಸ್‌ ನಿಲ್ದಾಣದಲ್ಲಿ ಆಕೆಯನ್ನು ಪತ್ತೆ ಮಾಡಿದ ಪೊಲೀಸರು, ಕಾಸರಗೋಡು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.

ಆದರೆ ತಂದೆ– ತಾಯಂದಿರ ಜತೆಗೆ ಹೋಗಲು ನಿರಾಕರಿಸಿದ ಆದಿರಾರನ್ನು ಪರವನಡ್ಕ ಸರ್ಕಾರಿ ಮಹಿಳಾ ಮಂದಿರಕ್ಕೆ ಕಳುಹಿಸಲಾಗಿತ್ತು.

ಇಸ್ಲಾಂ ಮತ ಸ್ವೀಕರಿಸಿದ್ದ ಅವರು, ‘ಆಯಿಷಾ’ ಎಂದು ತನ್ನ ಹೆಸರು ಬದಲಾಯಿಸಿಕೊಂಡಿದ್ದರು.

ಬಳಿಕ ಆದಿರಾಳ ತಂದೆ ಹಾಗೂ ತಾಯಿ, ಮಗಳಿಗಾಗಿ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅದರಂತೆ ಆಕೆಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆಕೆಯನ್ನು ತಾಯ್ತಂದೆಯರ ಜತೆ ಬಿಡಲು ಆದೇಶ ನೀಡಿತ್ತು.
ಆದರೆ ಆದಿರಾ ತನ್ನ ಗೆಳತಿ, ಕಣ್ಣೂರು ನಿವಾಸಿ ಆನೀಸಾ ಎಂಬಾಕೆಯ ಜತೆಗೆ ಹೋಗುವುದಾಗಿ ಹೇಳಿದ್ದರು. ‘ಆನೀಸಾಳ ಜತೆಯಲ್ಲಿ ಆದಿರಾರನ್ನು ಬಿಟ್ಟರೆ, ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಆನೀಸಾಳ ಗೆಳೆಯ ಅಂಜಾದ್ ಜತೆಯಲ್ಲಿ ಹೋಗುವ ಸಾಧ್ಯತೆ ಇರುವುದರಿಂದ ಆಕೆ ಸುರಕ್ಷಿತಳಾಗಿರಲು ಸಾಧ್ಯವಿಲ್ಲ‘ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಇದನ್ನು ಮನ್ನಿಸಿದ ನ್ಯಾಯಾಲಯ, ಇಸ್ಲಾಂ ಧರ್ಮದಂತೆ ಆದಿರಾಳಿಗೆ ಜೀವನ ಸಾಗಿಸಲು ಪೋಷಕರು ಅನುವು ಮಾಡಿಕೊಡಬೇಕು ಎಂದು ಆಕೆಯನ್ನು ತಾಯ್ತಂದೆಯರ ಜತೆಯಲ್ಲಿ ಕಳುಹಿಸಿತ್ತು. ಇದಕ್ಕೆ ಒಪ್ಪಿದ ಆಕೆಯ ಪೋಷಕರು ಮನೆಗೆ ಕರೆದೊಯ್ದಿದ್ದರು.

ಆ ಬಳಿಕ ಆದಿರಾಳನ್ನು ಎರ್ನಾಕುಲಂನಲ್ಲಿರುವ ಆರ್ಷ ವಿದ್ಯಾ ಸಮಾಜದವರು ಅಲ್ಲಿಗೆ ಕರೆದೊಯ್ದು ಎಲ್ಲ ಧರ್ಮಗಳ ಬಗ್ಗೆ ಆಕೆಗೆ ಶಿಕ್ಷಣ ನೀಡಿದ್ದರು ಎನ್ನಲಾಗಿದೆ.

ಸನಾತನ ಧರ್ಮದ ಮಹತ್ವದ ಬಗ್ಗೆ ಅರಿವಾದ ಆಕೆ, ಇಸ್ಲಾಂ ತ್ಯಜಿಸಿ ಮತ್ತೆ ಮಾತೃಧರ್ಮಕ್ಕೆ ಮರಳಲು ನಿರ್ಧರಿಸಿದ್ದಳು ಎಂದು ಆಕೆಯ ಕುಟುಂಬದವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT