ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಮೀಸಲು ಜಾರಿಗೊಳಿಸಿ: ಮೋದಿಗೆ ಸೋನಿಯಾ ಪತ್ರ

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಒದಗಿಸುವ ಮಸೂದೆ ಅಂಗೀಕರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ. ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತ ಇದೆ. ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಈ ವಿಚಾರದಲ್ಲಿ ಸರ್ಕಾರಕ್ಕೆ ಕಾಂಗ್ರೆಸ್‌ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಮಹಿಳಾ ಮೀಸಲಾತಿ ಮಹಿಳೆ
ಯರ ಸಬಲೀಕರಣದಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಎಂದು ಸೋನಿಯಾ ಬಣ್ಣಿಸಿದ್ದಾರೆ.

2010ರ ಮಾರ್ಚ್‌ 9ರಂದು ರಾಜ್ಯಸಭೆಯಲ್ಲಿ ಈ ಮಸೂದೆಗೆ ಒಪ್ಪಿಗೆ ನೀಡಿರುವುದನ್ನು ಅವರು ನೆನಪಿಸಿಕೊಂಡಿದ್ದಾರೆ. ಆದರೆ ಒಂದಲ್ಲ ಒಂದು ಕಾರಣದಿಂದ ಲೋಕಸಭೆಯಲ್ಲಿ ಮಸೂದೆ ಅಂಗೀಕಾರ ಆಗಲಿಲ್ಲ ಎಂದು ಸೋನಿಯಾ ಹೇಳಿದ್ದಾರೆ.

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರೂ ಮಸೂದೆಗೆ ಬೆಂಬಲ ಸೂಚಿಸಿ ಟ್ವೀಟ್‌ ಮಾಡಿದ್ದಾರೆ.

ಸೋನಿಯಾ ಅವರು ಪ್ರಧಾನಿಗೆ ಬುಧವಾರ ಬರೆದ ಪತ್ರದ ಬಗ್ಗೆ ಕಾಂಗ್ರೆಸ್‌ ಮುಖಂಡರಾದ ಸುಷ್ಮಿತಾ ದೇವ್‌, ಶೋಭಾ ಓಜಾ, ಶರ್ಮಿಷ್ಠಾ ಮುಖರ್ಜಿ, ಖುಷ್ಬೂ ಸುಂದರ್‌ ಮತ್ತು ಪ್ರಿಯಾಂಕಾ ಚತುರ್ವೇದಿ ಅವರು ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡಿದ್ದಾರೆ.

‘ಗುರುವಾರ ನವರಾತ್ರಿ ಆರಂಭವಾಗಿದೆ. ಈ ಹಬ್ಬದ ಸಂದರ್ಭದಲ್ಲಿ ಎಲ್ಲ ಒಂಬತ್ತು ದಿನ ಉಪವಾಸ ಆಚರಿಸುವ ಮೋದಿ ಅವರು ಮಹಿಳಾ ಸಬಲೀಕರಣದ ವಿಚಾರದಲ್ಲಿಯೂ ಇದೇ ಸ್ಫೂರ್ತಿಯನ್ನು ಅನುಸರಿಸಬೇಕು. ದುರ್ಗಾಮಾತೆಯ ಶಕ್ತಿಯನ್ನು ಗುರುತಿಸಬೇಕು. ಮಹಿಳಾ ಸಶಕ್ತೀಕರಣಕ್ಕೆ ಸಂಬಂಧಿಸಿ ನುಡಿದಂತೆ ನಡೆಯಬೇಕು’ ಎಂದು ಚತುರ್ವೇದಿ ಹೇಳಿದ್ದಾರೆ.

ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಪಂಚಾಯಿತಿ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ವಿಚಾರ
ವನ್ನು ಮುನ್ನೆಲೆಗೆ ತಂದರು. ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಇದನ್ನು ಜಾರಿಗೆ ತರಲಾಯಿತು. 1989ರಲ್ಲಿ ಈ ಮಸೂದೆ ಅಂಗೀಕಾರ
ವಾಗದಂತೆ ವಿರೋಧ ಪಕ್ಷಗಳು ನೋಡಿಕೊಂಡಿದ್ದವು. ಆದರೆ 1993ರಲ್ಲಿ ಎರಡೂ ಸದನಗಳು ಮಸೂದೆ ಅಂಗೀಕರಿಸಿದವು ಎಂದು ಸೋನಿಯಾ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಮುಂಬರುವ ಲೋಕಸಭಾ ಅಧಿವೇಶನದಲ್ಲಿ ಮಹಿಳಾ ಮೀಸಲು ಮಸೂದೆಯನ್ನು ಅಂಗೀಕರಿಸಲು ಪ್ರಧಾನಿ ಮೋದಿ ಅವರು ಯೋಜನೆ ರೂಪಿಸಿದ್ದಾರೆ. ಆದರೆ ಇದರ ರಾಜಕೀಯ ಪ್ರಯೋಜನಪಡೆದುಕೊಳ್ಳುವುದಕ್ಕಾಗಿ ಸೋನಿಯಾ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ದೇವೇಗೌಡ ನೇತೃತ್ವದ ಸರ್ಕಾರ 1996ರಲ್ಲಿ ಈ ಮಸೂದೆಯನ್ನು ರೂಪಿಸಿತ್ತು. ಅದು ಮೇಲ್ಮನೆಯಲ್ಲಿ ಅಂಗೀಕಾರವಾಗಲು ಹಿಂದಿನ ಯುಪಿಎ ಸರ್ಕಾರಕ್ಕೆ ಬಿಜೆಪಿ ನೆರವಾಗಿತ್ತು. ಈಗ ಲೋಕಸಭೆಯಲ್ಲಿಯೂ ಮಸೂದೆ ಅಂಗೀಕಾರಕ್ಕೆ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಬಿಜೆಪಿ ಹೇಳಿದೆ. ಆದರೆ ಈ ಬಗ್ಗೆ ಪ್ರಧಾನಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT