ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ನಿವೇಶನಕ್ಕೂ ಸಹಾಯಧನ ಲಭ್ಯ: ಹಲವು ಹೊಸ ಮಾದರಿ ಘೋಷಣೆ

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮುಂಬೈ: ಅರ್ಹ ಫಲಾನುಭವಿಗಳಿಗಾಗಿ ಕೈಗೆಟುಕುವ ದರದ ಮನೆ ನಿರ್ಮಾಣ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಯನ್ನು ಹೆಚ್ಚಿಸುವುದಕ್ಕಾಗಿ ಸರ್ಕಾರ–ಖಾಸಗಿ ಸಹಭಾಗಿತ್ವದ ಹಲವು ಹೊಸ ಮಾದರಿಗಳನ್ನು ಕೇಂದ್ರ ಪ್ರಕಟಿಸಿದೆ. ಇದರ ಪ್ರಕಾರ, ಖಾಸಗಿ ನಿವೇಶನದಲ್ಲಿ ಖಾಸಗಿ ಬಿಲ್ಡರ್‌ಗಳು ನಿರ್ಮಿಸುವ ಪ್ರತಿ ಮನೆಗೆ ₹2.50 ಲಕ್ಷದ ವರೆಗೆ ಸಹಾಯಧನ ನೀಡಲಾಗುವುದು.

ನಗರ ಪ್ರದೇಶಗಳಲ್ಲಿ ಇರುವ ಸರ್ಕಾರಿ ನಿವೇಶನಗಳಲ್ಲಿ ಮಿತದರದ ಮನೆ ನಿರ್ಮಾಣದಲ್ಲಿ ಖಾಸಗಿಯವರ ಸಹಭಾಗಿತ್ವವನ್ನು ಹೆಚ್ಚಿಸುವುದು ಕೇಂದ್ರದ ಮುಖ್ಯ ಉದ್ದೇಶ. ಇದಕ್ಕಾಗಿ ಒಟ್ಟು ಎಂಟು ಸಹಭಾಗಿತ್ವ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವರಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿರುವ ಹರ್ದೀಪ್‌ ಸಿಂಗ್‌ ಪುರಿ ಹೇಳಿದ್ದಾರೆ.

‘2022ರೊಳಗೆ ಎಲ್ಲರಿಗೂ ಸೂರು ಎಂಬ ಗುರಿಯನ್ನು ಸಾಧಿಸುವ ಹೊಣೆಯನ್ನು ಸರ್ಕಾರ, ಬಿಲ್ಡರ್‌ಗಳು ಮತ್ತು ಹಣಕಾಸು ಸಂಸ್ಥೆಗಳ ನಡುವೆ ಹಂಚುವ ಉದ್ದೇಶವನ್ನು ಹೊಸ ನೀತಿಯು ಹೊಂದಿದೆ. ಜತೆಗೆ, ಬಳಕೆಯೇ ಆಗದ ಮತ್ತು ಅಸಮರ್ಪಕವಾಗಿ ಬಳಕೆಯಾಗಿರುವ ನಿವೇಶನಗಳನ್ನು ಪೂರ್ಣವಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದು ಪುರಿ ಹೇಳಿದ್ದಾರೆ.

ಸರ್ಕಾರ ನಿಗದಿ ಮಾಡಿರುವ ವಿವಿಧ ಮಾದರಿಗಳಲ್ಲಿ ಯಾವುದನ್ನಾದರೂ ಬಿಲ್ಡರ್‌ಗಳು ಆಯ್ಕೆ ಮಾಡಿಕೊಳ್ಳಬಹುದು.  ಈ ಮಾದರಿಗಳಿಗೆ ಗರಿಷ್ಠ ₹2.5 ಲಕ್ಷದವರೆಗೆ ಸರ್ಕಾರದ ಸಹಾಯಧನ ದೊರೆಯುತ್ತದೆ. ಈ ಸಹಾಯಧನದ ಫಲಾನುಭವಿಗಳನ್ನು ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಪುರಿ ತಿಳಿಸಿದ್ದಾರೆ.

ದೊಡ್ಡ ನಗರಗಳಲ್ಲಿ ನಿವೇಶನ ಕೊರತೆಯ ಸಮಸ್ಯೆ ಇದೆ. ಹಾಗಾಗಿ ಅಲ್ಲಿ  ಲಭ್ಯ ಇರುವ ನಿವೇಶನಗಳ ಗರಿಷ್ಠ ಪ್ರಯೋಜನ ಪಡೆದುಕೊಳ್ಳುವುದಕ್ಕಾಗಿ ನಿವೇಶನದ ಅಳತೆ ಆಧರಿತ ಕಟ್ಟಡದ ಅಂತಸ್ತುಗಳ ಮಿತಿಯನ್ನು (ಎಫ್‌ಎಆರ್‌) ಸಡಿಲಿಸಲಾಗಿದೆ. 10ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಮತ್ತು ರಾಜ್ಯ ರಾಜಧಾನಿ ನಗರಗಳಿಗೆ ಇದು ಅನ್ವಯವಾಗುತ್ತದೆ.

ನಗರದ ಹೊರವಲಯದ ಹಳ್ಳಿಗಳಲ್ಲಿ ನಗರದ ಬಡ ಜನರಿಗೆ ಕೈಗೆಟುಕುವ ದರದ ಮನೆಗಳ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳವುದಕ್ಕೆ ಸಂಬಂಧಿಸಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜತೆಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಪುರಿ ತಿಳಿಸಿದ್ದಾರೆ.

ಹಲವು ಮಾದರಿಗಳು

* ನಗರ ಪ್ರದೇಶದಲ್ಲಿ ಖಾಸಗಿ ನಿವೇಶನದಲ್ಲಿ ನಿರ್ಮಾಣವಾಗುವ ಮಿತದರದ ಮನೆಗಳ ಸಾಲಕ್ಕೆ ₹2.5 ಲಕ್ಷ ಬಡ್ಡಿ ಸಹಾಯಧನ ನೀಡಿಕೆ

* ಖಾಸಗಿ ಜಮೀನಿನಲ್ಲಿ ನಿರ್ಮಿಸುವ ಮನೆ ಖರೀದಿಸಲು ಅರ್ಹ ಫಲಾನುಭವಿಗಳು ಬ್ಯಾಂಕ್‌ ಸಾಲ ಪಡೆಯದಿದ್ದರೆ ಅಂಥವರಿಗೆ  ₹1.5 ಲಕ್ಷ ಸಹಾಯಧನ ನೀಡಿಕೆ‌

* ಸರ್ಕಾರಿ ನಿವೇಶನದಲ್ಲಿ ಖಾಸಗಿ ಬಿಲ್ಡರ್‌ಗಳು ಮನೆ ನಿರ್ಮಾಣ ಮಾಡುವುದಕ್ಕೂ ಅವಕಾಶ ಕಲ್ಪಿಸಲಾಗಿದೆ– ಇದರ ಅಡಿಯಲ್ಲಿ ಆರು ಆಯ್ಕೆಗಳನ್ನು ನೀಡಲಾಗಿದೆ

* ಸರ್ಕಾರಿ ನಿವೇಶನದಲ್ಲಿ ಮನೆಗಳ ವಿನ್ಯಾಸ, ನಿರ್ಮಾಣ ಮತ್ತು ಹಸ್ತಾಂತರ

* ದುಬಾರಿ ವೆಚ್ಚದ ಅಥವಾ ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಾಣದ ಆದಾಯವನ್ನು ಮಿತದರದ ಮನೆಗೆ ಬಳಸುವ ಆಯ್ಕೆ

* ಬಿಲ್ಡರ್‌ಗಳು ನಿರ್ಮಾಣಕ್ಕೆ ಬೇಕಿರುವ ಹಣ ಹೂಡಿಕೆ ಮಾಡಿ ಸರ್ಕಾರದಿಂದ ಬಳಿಕ ಅದನ್ನು ಪಡೆದುಕೊಳ್ಳುವ ವ್ಯವಸ್ಥೆ

* ಸರ್ಕಾರದ ಮಧ್ಯಸ್ಥಿಕೆ ಇಲ್ಲದೆ ನೇರವಾಗಿ ಅರ್ಹ ಫಲಾನುಭವಿಗೆ ಮಿತದರದ ಮನೆಯನ್ನು ಬಿಲ್ಡರ್‌ಗಳು ಮಾರಾಟ ಮಾಡಬಹುದು

ಆನ್‌ಲೈನ್‌ ಅನುಮೋದನೆ

ಕಟ್ಟಡ ಯೋಜನೆಗಳ ಅನುಮೋದನೆ ಮತ್ತು ನಿರ್ಮಾಣ ಪರವಾನಗಿಗಳನ್ನು ಕಾಲಮಿತಿಯೊಳಗೆ ನೀಡುವ ಆನ್‌ಲೈನ್‌ ವ್ಯವಸ್ಥೆ ದೆಹಲಿ ಮತ್ತು ಮುಂಬೈಯಲ್ಲಿ ಜಾರಿಯಲ್ಲಿದೆ. 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಿಗೆ ಅದು ವಿಸ್ತರಣೆಯಾಗಲಿದೆ.

ರಾಷ್ಟ್ರೀಯ ಮನೆ ಬಾಡಿಗೆ ನೀತಿ ಮತ್ತು ಮಾದರಿ ಮನೆ ಗುತ್ತಿಗೆ ಕಾಯ್ದೆ ಸದ್ಯವೇ ಘೋಷಣೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT