ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2100: ಸಾಮೂಹಿಕ ವಿನಾಶದ ಮುಹೂರ್ತ!

ಅಮೆರಿಕದ ಮೆಸಾಚುಸೆಟ್ಸ್‌ ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿಗಳ ಪ್ರತಿಪಾದನೆ
Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬಾಸ್ಟನ್‌ : ನಾವು ಜೀವಿಸುತ್ತಿರುವ ಭೂಮಿಯಲ್ಲಿರುವ ಜೀವಿ ಮತ್ತು ಸಸ್ಯ ಸಂಕುಲ ಸಾಮೂಹಿಕವಾಗಿ ನಾಶವಾಗುವ ದಿನ ದೂರವಿಲ್ಲ ಎಂಬ ಆತಂಕವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಸಾಗರಗಳಲ್ಲಿ ಹೆಚ್ಚುತ್ತಿರುವ ಇಂಗಾಲದ (ಕಾರ್ಬನ್‌) ಮಟ್ಟದಿಂದಾಗಿ 2100ನೇ ಇಸವಿಯಿಂದ ಭೂಮಿಯಲ್ಲಿ ಆರನೇ ಸಾಮಾಹಿಕ ವಿನಾಶ ಆರಂಭವಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಅಮೆರಿಕದ ಮೆಸಾಚುಸೆಟ್ಸ್‌ ತಂತ್ರಜ್ಞಾನ ಸಂಸ್ಥೆಯ (ಎಂಐಟಿ) ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.

54 ಕೋಟಿ ವರ್ಷಗಳ ದತ್ತಾಂಶ ಮತ್ತು ಇದುವರೆಗೆ ಭೂಮಿಯಲ್ಲಿ ನಡೆದಿರುವ ಐದು ಸಾಮೂಹಿಕ ಅಳಿವಿನ ಪ್ರಕ್ರಿಯೆಗಳನ್ನು ಅಧ್ಯಯನ ನಡೆಸಿರುವ ವಿಜ್ಞಾನಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಅವಧಿಯಲ್ಲಿ ಇಂಗಾಲ ಚಕ್ರದಲ್ಲಿ (ಕಾರ್ಬನ್‌ ಸೈಕಲ್‌–ನಿಸರ್ಗದಲ್ಲಿ ಇಂಗಾಲ ಪರಿವರ್ತನೆ ಹೊಂದುವ ಆವರ್ತನ ಸರಣಿ) ಆಗಿರುವ ಮಹತ್ವದ ಬದಲಾವಣೆಗಳನ್ನು ಅವರು ವಿಶ್ಲೇಷಿಸಿದ್ದಾರೆ.

ಇಂಗಾಲದ ಚಕ್ರದಲ್ಲಿ ಭಾರಿ ವ್ಯತ್ಯಾಸ ಆಗಿರುವುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಇದು ಮಿತಿ ಮೀರಿದರೆ, ಅದು ಭೂ ವಾತಾವರಣವನ್ನು ಅಸ್ಥಿರಗೊಳಿಸಲಿದೆ. ಅಂತಿಮವಾಗಿ ಇದು ಸಾಮೂಹಿಕ ಅಳಿವಿಗೆ ನಾಂದಿ ಹಾಡಲಿದೆ ಎಂಬುದು ಅವರ ವಾದ.

ಪ್ರಸ್ತುತ, ಜಾಗತಿಕ ಮಟ್ಟದಲ್ಲಿ ಇಂಗಾಲದ ಡೈಆಕ್ಸೈಡ್‌ ಉಗುಳುವಿಕೆ ಪ್ರಮಾಣ ಕಡಿಮೆ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಆರನೇ ಸಾಮೂಹಿಕ ವಿನಾಶದ ಅಪಾಯವನ್ನು ತೆರೆದಿಟ್ಟಿದೆ. ಆದರೆ, ಇದು ಸಾಗರಕ್ಕೆ ಸೇರುವ ಇಂಗಾಲದ ಪ್ರಮಾಣವನ್ನು ಅವಲಂಬಿಸಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

‘ಇದರರ್ಥ ನಾಳೆಯೇ ವಿನಾಶ ಸಂಭವಿಸುತ್ತದೆ ಎಂದಲ್ಲ. ಆದರೆ, ನಾವು ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಇಂಗಾಲದ ಚಕ್ರ ಅಸ್ಥಿರಗೊಳ್ಳಬಹುದು ಮತ್ತು ನಮಗೆ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಅದರ ವರ್ತನೆ ಬದಲಾಗಬಹುದು’ ಎಂದು ಎಂಐಟಿ ಪ್ರಾಧ್ಯಾಪಕ ಡೇನಿಯಲ್‌ ರಾಥ್‌ಮನ್‌ ಎಚ್ಚರಿಸಿದ್ದಾರೆ.

ಎರಡು ಮಿತಿಗಳು...

ಇಂಗಾಲದ ಚಕ್ರಕ್ಕೆ ಸಂಬಂಧಿಸಿದಂತೆ ವಿಜ್ಞಾನಿಗಳು ಎರಡು ಮಿತಿಗಳನ್ನು ನಿಗದಿಪಡಿಸಿದ್ದಾರೆ. ಈ ಪೈಕಿ ಒಂದನ್ನು ದಾಟಿದರೂ ಸಾಮೂಹಿಕ ನಾಶ ಸಂಭವಿಸುತ್ತದೆ ಎಂದು ಅವರು ಹೇಳುತ್ತಾರೆ.

ಮಿತಿ 1: ಸಾಮಾನ್ಯವಾಗಿ ಇಂಗಾಲ ಚಕ್ರದಲ್ಲಿ ಬದಲಾವಣೆಯಾಗಲು ದೀರ್ಘ ಸಮಯ ಹಿಡಿಯುತ್ತದೆ. ಒಂದು ವೇಳೆ, ಜಾಗತಿಕ ಪರಿಸರ ವ್ಯವಸ್ಥೆಗೆ ಹೊಂದಿಕೊಳ್ಳಲು ಸಾಧ್ಯವಾಗದಷ್ಟು ವೇಗದಲ್ಲಿ ಇಂಗಾಲದ ಚಕ್ರ ಬದಲಾಗುತ್ತಿದ್ದರೆ ಸಾಮೂಹಿಕ ಅಳಿವು ಭೂಮಿಯನ್ನು ಹಿಂಬಾಲಿಸುವುದರಲ್ಲಿ ಸಂಶಯವಿಲ್ಲ.

ಮಿತಿ 2: ಇಂಗಾಲದ ಪರಮಾಣುಗಳ ಎಲೆಕ್ಟ್ರಾನುಗಳಲ್ಲಿ ಸಣ್ಣ ಅವಧಿಯಲ್ಲಿ ಬದಲಾವಣೆಗಳು ಆಗುತ್ತಿರುತ್ತವೆ. ಆಗ, ಇಂಗಾಲದ ಚಕ್ರದಲ್ಲಿ ಆಗುವ ಬದಲಾವಣೆಯ ವೇಗ ಹೆಚ್ಚು ಮುಖ್ಯವಾಗುವುದಿಲ್ಲ. ಬದಲಿಗೆ ಇಂಗಾಲದ ಚಕ್ರದಲ್ಲಿ ಆಗುವ ಬದಲಾವಣೆಯ ಪ್ರಮಾಣ ಮತ್ತು ತೀವ್ರತೆ ಹೆಚ್ಚು ಮಹತ್ವ ಪಡೆಯುತ್ತವೆ. ಇದರಿಂದಲೂ ಭೂಮಿ ಸರ್ವನಾಶ ಆಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂಬುದು ವಿಜ್ಞಾನಿಗಳ ವಿವರಣೆ.

ಇಂಗಾಲದ ಚಕ್ರ ಎಂದರೆ...

ಇದೊಂದು ಜೀವರಾಸಾಯನಿಕ ಚಕ್ರವಾಗಿದ್ದು, ಇಂಗಾಲವು (ಸಾಮಾನ್ಯವಾಗಿ ಇಂಗಾಲದ ಡೈಆಕ್ಸೈಡ್) ಭೂಮಿಯ ವಾತಾವರಣದಲ್ಲಿ ವಿವಿಧ ರೂಪದಲ್ಲಿ ಪರಿವರ್ತನೆಗೊಳ್ಳುವ ಸರಣಿ ಪ್ರಕ್ರಿಯೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್‌ ಅನ್ನು ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಹೀರಿಕೊಳ್ಳುತ್ತವೆ. ಪ್ರಾಣಿಗಳು ಉಸಿರಾಟದ ಮೂಲಕ ಇಂಗಾಲದ ಡೈಆಕ್ಸೈಡ್‌ ಅನ್ನು ವಾತಾವರಣಕ್ಕೆ ಬಿಡುತ್ತವೆ. ಜೀವಕಳೆದುಕೊಂಡ ಪ್ರಾಣಿ ಮತ್ತು ಸಸ್ಯಗಳು ಇಂಗಾಲದ ರೂಪದಲ್ಲಿ ಪಳೆಯುಳಿಕೆ ಇಂಧನಗಳಾಗಿ ಮತ್ತೆ ವಾತಾವರಣ ಸೇರುತ್ತವೆ. ಈ ಇಂಧನಗಳನ್ನು ಉರಿಸುವುದರಿಂದ ಮತ್ತೆ ಇಂಗಾಲ ಉತ್ಪತ್ತಿಯಾಗಿ ವಾತಾವರಣ ಸೇರುತ್ತದೆ.... ಹೀಗೆ ಈ ಚಕ್ರ ನಿರಂತರವಾಗಿ ಮುಂದುವರಿಯುತ್ತಲೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT