ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಲಂಕೇಶ್‌ ಹತ್ಯೆಯಲ್ಲಿ ಸನಾತನ ಸಂಸ್ಥೆ ಪಾತ್ರವಿಲ್ಲ

ಸಂಸ್ಥೆಯ ವಕ್ತಾರ ಚೇತನ್‌ ರಾಜಹಂಸ ಸ್ಪಷ್ಟನೆ
Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಲ್ಲಿ ಸನಾತನ ಸಂಸ್ಥೆಯ ಪಾತ್ರವಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಹಕಾರ ನೀಡಲು ಸಿದ್ಧರಿದ್ದೇವೆ’ ಎಂದು ಸಂಸ್ಥೆಯ ಗೋವಾದ ವಕ್ತಾರ ಚೇತನ್‌ ರಾಜಹಂಸ ಹೇಳಿದರು.

ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗೌರಿ ಲಂಕೇಶ್‌ ಹತ್ಯೆಯನ್ನು ನಾವೂ ಖಂಡಿಸುತ್ತೇವೆ. ಆದರೆ, ಹತ್ಯೆಯ ಆರೋಪವನ್ನು ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿ ಸೇರಿ ಹಿಂದುತ್ವನಿಷ್ಠ ಸಂಘಟನೆಗಳ ಮೇಲೆ ಹೊರಿಸುವ ಪ್ರಯತ್ನ ನಡೆಯುತ್ತಿದೆ. ಹಿಂದುತ್ವನಿಷ್ಠರು ಹಾಗೂ ನಕ್ಸಲರ ವಿಚಾರಧಾರೆಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಅದನ್ನು ಮುಂದೆ ಮಾಡಿ ಹಿಂದುತ್ವನಿಷ್ಠರನ್ನು ಹತ್ಯೆಯ ದೋಷಿಗಳೆಂದು ಹೇಳುವುದು ತಪ್ಪಾಗುತ್ತದೆ’ ಎಂದರು.

‘ಈ ಪ್ರಕರಣದಲ್ಲಿ ಇದುವರೆಗೂ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ಕೂಡ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೂ ಕೆಲ ರಾಜಕಾರಣಿಗಳು, ಪುರೋಗಾಮಿ ವಿಚಾರವಂತರು ಹಾಗೂ ಪತ್ರಕರ್ತರು ಹಿಂದುತ್ವನಿಷ್ಠ ಸಂಘಟನೆಗಳ ಹೆಸರನ್ನು ಆಗಾಗ್ಗೆ ಉಲ್ಲೇಖಿಸುತ್ತಿದ್ದಾರೆ. ನರೇಂದ್ರ ದಾಭೋಲ್ಕರ್‌, ಗೋವಿಂದ ಪಾನ್ಸರೆ ಹತ್ಯೆಗಳಿಗೂ ಗೌರಿ ಹತ್ಯೆಗೂ ಸಾಮ್ಯತೆ ಇದೆ ಎಂದು ಹೇಳುತ್ತಿದ್ದಾರೆ. ವಾಸ್ತವದಲ್ಲಿ, ಬೇರೆಯವರೂ ಇದೇ ಪದ್ಧತಿ ಅನುಸರಿಸಿ ಹತ್ಯೆ ಮಾಡಿರಬಹುದಲ್ಲವೇ’ ಎಂದು ಪ್ರಶ್ನಿಸಿದರು.

ವಿಚಾರಣೆ ನಡೆಸಿಲ್ಲ: ‘ಸನಾತನ ಸಂಸ್ಥೆಯ ಆಶ್ರಮದ ಮೇಲೆ ಎಸ್‌ಐಟಿ ದಾಳಿ ಮಾಡಿ, ಕೆಲವರನ್ನು ವಿಚಾರಣೆ ನಡೆಸುತ್ತಿದೆ ಎಂಬ ಸುದ್ದಿ ದೇಶದೆಲ್ಲೆಡೆ ಹರಡಿತ್ತು. ಈ ರೀತಿ ಅಪಪ್ರಚಾರ ಮಾಡಿರುವ ಮಾಧ್ಯಮ ಸಂಸ್ಥೆಗಳ ವಿರುದ್ಧ ಕಾನೂನು ಹೋರಾಟ ನಡೆಸಲಿದ್ದೇವೆ’ ಎಂದು ತಿಳಿಸಿದರು.‌‌

‘ಹಿಂದುತ್ವನಿಷ್ಠರ ಹತ್ಯೆ ತನಿಖೆ ಆಗಿಲ್ಲ’: ‘ಕರ್ನಾಟಕದಲ್ಲಿ ನಡೆದಿರುವ ಹಿಂದುತ್ವನಿಷ್ಠರ ಹತ್ಯೆಗಳ ತನಿಖೆ ಸರಿಯಾಗಿ ನಡೆದಿಲ್ಲ. ಡಾ.ಯು.ಚಿತ್ತರಂಜನ್‌ ಮತ್ತು ತಿಮ್ಮಪ್ಪ ನಾಯ್ಕ ಹತ್ಯೆಗಳ ಆರೋಪಿಗಳು ಇಂದಿಗೂ ಪತ್ತೆಯಾಗಿಲ್ಲ. ಆದರೆ, ಈ ಬಗ್ಗೆ ಯಾರೂ ಮಾತನಾಡುವುದಿಲ್ಲ’ ಎಂದರು.

‘ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯಲಿ’
‘ದಾಭೋಲ್ಕರ್‌, ಪಾನ್ಸರೆ ಹತ್ಯೆ ಪ್ರಕರಣಗಳಲ್ಲಿ ಅವರ ಕುಟುಂಬದವರ ಒತ್ತಡಕ್ಕೆ ಮಣಿದ ಮಹಾರಾಷ್ಟ್ರ ಪೊಲೀಸರು, ತಪ್ಪು ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ ಬಾಂಬೆ ಹೈಕೋರ್ಟ್‌ನಿಂದ ಆಗಾಗ್ಗೆ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ.

ಗೌರಿ ಹತ್ಯೆ ಪ್ರಕರಣದಲ್ಲಿ ಕರ್ನಾಟಕದ ಪೊಲೀಸರಿಗೆ ಇಂತಹ ಪರಿಸ್ಥಿತಿ ಬರಬಾರದು. ಈ ಪ್ರಕರಣದಲ್ಲಿ ನಕ್ಸಲ್‌ವಾದ, ಕೌಟುಂಬಿಕ ಕಲಹ, ಆಸ್ತಿ ವಿವಾದ, ಸ್ಥಳೀಯ ವೈಷಮ್ಯ ಸೇರಿ ಎಲ್ಲ ಆಯಾಮಗಳ ಬಗ್ಗೆ ಆಳವಾದ ತನಿಖೆ ನಡೆಸಬೇಕು’ ಎಂದು ಹಿಂದೂ ವಿಧಿಜ್ಞ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿ ಸಂಜೀವ ಪುನಾಳೆಕರ್‌ ಒತ್ತಾಯಿಸಿದರು.

‘ಹಣದ ಮೂಲದ ತನಿಖೆ ನಡೆಯಲಿ’: ‘ದಾಭೋಲ್ಕರ್‌ ಹಾಗೂ ಪಾನ್ಸರೆ ಅವರು ಹಗರಣಗಳಲ್ಲಿ ತೊಡಗಿದ್ದರು. ದಾಭೋಲ್ಕರ್‌ ಅವರು ಕೋಟ್ಯಂತರ ರೂಪಾಯಿ ದೋಚಿದ್ದಾರೆ. ಅದರ ದಾಖಲೆಗಳು ನಮ್ಮ ಬಳಿ ಇವೆ‌. ಗೌರಿ ಲಂಕೇಶ್‌ ಪತ್ರಿಕೆ ಪ್ರಸರಣ ಸಂಖ್ಯೆ ತುಂಬ ಕಡಿಮೆ ಇತ್ತು. ಆದರೂ, ಅವರು ಐಷಾರಾಮಿಯಾಗಿ ಬದುಕುತ್ತಿದ್ದರು. ಆದರೂ, ಅವರಿಗೆ ಎಲ್ಲಿಂದ ಹಣ ಬರುತ್ತಿತ್ತು ಎಂಬ ಬಗ್ಗೆಯೂ ಎಸ್‌ಐಟಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಗೌರಿ ಕಥೆ ಮುಗಿಯಿತು. ಈಗ ನಿಮ್ಮ ಸಮಯ....’
ಹೊಸಪೇಟೆ:
‘ಗೌರಿ ಲಂಕೇಶ್‌ ಕಥೆ ಮುಗಿಯಿತು. ಈಗ ನಿಮ್ಮ ಸಮಯ ಬಂದಿದೆ....’ ನಗರದ ಬಸವ ಕಾಲುವೆ ಬಳಿ ಇರುವ ‘ಸ್ವತಂತ್ರ ಹೋರಾಟ’ ಸ್ಥಳೀಯ ದಿನಪತ್ರಿಕೆ ಕಚೇರಿಗೆ ಅನಾಮಧೇಯ ಬೆದರಿಕೆ ಪತ್ರ ಬಂದಿದ್ದು, ಅದರಲ್ಲಿ ಈ ರೀತಿ ಬರೆಯಲಾಗಿದೆ. ಪತ್ರಿಕೆಯ ಸಂಪಾದಕ ಮನೋಹರ್‌, ಈ ಸಂಬಂಧ ಇಲ್ಲಿನ ಚಿತ್ತವಾಡ್ಗಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪತ್ರದಲ್ಲಿ ಏನಿದೆ?: ‘ಪತ್ರಕರ್ತರೇ ನಿಮಗೆ ಇದು ಒಂದು ಎಚ್ಚರಿಕೆ. ಎಡಪಂಥೀಯ ಹಾಗೂ ಬಲಪಂಥೀಯ ಎಂಬುವ ನೀವು ಮೊದಲು ಕೋಮುವಾದಿಗಳು. ನಮ್ಮ ಧರ್ಮ ಎಂದರೆ ಮುಸ್ಲಿಂ ಧರ್ಮ. ಅದು ಪವಿತ್ರವಾದದ್ದು. ನೀವು ಹಿಂದೂಗಳು ಶಕ್ತಿಶಾಲಿಗಳು ಅಂದುಕೊಂಡರೆ ಅದು ನಿಮ್ಮ ಭ್ರಮೆ. ಗೌರಿ ಲಂಕೇಶ್‌ ಕಥೆ ಮುಗಿಯಿತು. ಈಗ ನಿಮ್ಮ ಸಮಯ ಬಂದಿದೆ. ನಾವು ಹೆಚ್ಚಿನದನ್ನು ನಿಮಗೆ ಏನೂ ಹೇಳುವುದಿಲ್ಲ. ಮಾಡಿ ತೋರಿಸುತ್ತೇವೆ. ‘ಪ್ರಜಾವಾಣಿ’, ‘ವಿಜಯವಾಣಿ’, ‘ವಿಜಯ ಕರ್ನಾಟಕ’, ‘ಸಂಯುಕ್ತ ಕರ್ನಾಟಕ’ ಹಾಗೂ ‘ಟಿವಿ9’– ಇವುಗಳ ಹಾವಳಿ ಜಾಸ್ತಿಯಾಗಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
‘ಕೆನಾಲ್‌ ಹತ್ತಿರ ಇರುವ ಸ್ವತಂತ್ರ ಹೋರಾಟ ಪತ್ರಿಕೆ ಸೇರಿ ಇನ್ನೂ ಕೆಲವು ಪತ್ರಿಕೆಗಳು ಬಾಲ ಬಿಚ್ಚಿವೆ. ಎಚ್ಚರ ಆಮೀನ್‌!!’ ಎಂದು ಬರೆಯಲಾಗಿದೆ.

*
ದಾಭೋಲ್ಕರ್‌, ಪಾನ್ಸರೆ ಪ್ರಕರಣಗಳಲ್ಲಿ ಮಹಾರಾಷ್ಟ್ರ ಪೊಲೀಸರ ತನಿಖೆ ಸಂಪೂರ್ಣವಾಗಿ ದಿಕ್ಕು ತಪ್ಪಿದೆ. ಈ ಬಗ್ಗೆ ಎಲ್ಲ ಮಾಹಿತಿಯನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಪತ್ರದ ಮೂಲಕ ನೀಡಿದ್ದೇವೆ.
– ಸಂಜೀವ ಪುನಾಳೆಕರ್‌, ಹಿಂದೂ ವಿಧಿಜ್ಞ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT