ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನಿರ್ವಹಣಾ ಮಂಡಳಿಗೆ ವಿರೋಧ

ರೈತರ ಹಿತ ಕಾಯಲು ಸರ್ಕಾರ ಬದ್ಧ– ಸಿದ್ದರಾಮಯ್ಯ
Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಕಾವೇರಿ ಜಲ ವಿವಾದ ಪರಿಹಾರ ಸಂಬಂಧ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಪ್ರಸ್ತಾಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಇಲ್ಲಿ ಬಲವಾಗಿ ವಿರೋಧಿಸಿದರು.

ಚಾಮುಂಡಿಬೆಟ್ಟದಲ್ಲಿ ನಡೆದ ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ನಿರ್ವಹಣಾ ಮಂಡಳಿ ಏಕೆ ರಚಿಸಬಾರದೆಂಬ ಪ್ರಸ್ತಾಪವು ಸುಪ್ರೀಂ ಕೋರ್ಟ್‌ನಲ್ಲಿ ಮೂಡಿಬಂದಿದೆ ಅಷ್ಟೆ. ಈ ಸಂಬಂಧ ಯಾವುದೇ ತೀರ್ಪು ನೀಡಿಲ್ಲ. ಮಂಡಳಿ ರಚನೆ ವಿರುದ್ಧ ನಾವು ಮೊದಲಿನಿಂದಲೂ ವಾದ ಮಂಡಿಸುತ್ತಿದ್ದೇವೆ. ಮುಂದೆಯೂ ಸಮರ್ಥವಾಗಿ ವಾದ ಮಂಡಿಸುತ್ತೇವೆ. ವಕೀಲರ ಜತೆಗೂ ಮಾತನಾಡಿದ್ದು, ರೈತರ ಹಿತ ಕಾಯಲು ಬದ್ಧ’ ಎಂದರು.

‘ಜೂನ್‌, ಜುಲೈನಲ್ಲಿ ಸರಿಯಾಗಿ ಮಳೆ ಬರಲಿಲ್ಲ. ಈಗ ಪರವಾಗಿಲ್ಲ. ಆದರೂ ಕಾವೇರಿ ಕಣಿವೆಯ ಜಲಾಶಯಗಳು ಪೂರ್ಣವಾಗಿ ತುಂಬಿಲ್ಲ. ಕೆಆರ್‌ಎಸ್‌ನಲ್ಲಿ ಕಡಿಮೆ ನೀರಿದೆ. ವೈನಾಡಿನಲ್ಲಿ ಜೋರು ಮಳೆ ಬಂದ ಕಾರಣ ಕಬಿನಿ ಭರ್ತಿಯಾಗಿದೆ. ಹಾರಂಗಿ ಕೂಡ ತುಂಬಿದೆ’ ಎಂದು ತಿಳಿಸಿದರು.‌

‘ಜಲಾಶಯಗಳಲ್ಲಿ ನೀರಿಲ್ಲದೆ ಭತ್ತ, ಕಬ್ಬು ಬೆಳೆಯಲು ರೈತರಿಗೆ ನೀರು ಕೊಡಲು ಸಾಧ್ಯವಾಗಲಿಲ್ಲ. ಅದಕ್ಕೆ ವಿಷಾದವಿದೆ. 73 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಬೇಕಿತ್ತು, ಆದರೆ, 60 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ’ ಎಂದು ಹೇಳಿದರು.

ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾಗಲಿ, ರೈತರ ಮೊಗದಲ್ಲಿ ನಗು ಮೂಡಲಿ ಎಂದು ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯನ್ನು ಪ್ರಾರ್ಥಿಸಿರುವುದಾಗಿ ಅವರು ತಿಳಿಸಿದರು.

‘ಸಿದ್ದರಾಮಯ್ಯ ಅವರ ಮಾತು ಒರಟು. ಆದರೆ, ಮೃದು ಹೃದಯಿ’ ಎಂಬ ಸಂಸದ ಪ್ರತಾಪಸಿಂಹ ಹೇಳಿಕೆ ಹಾಸ್ಯಧಾಟಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ಕೆಲವರು ಮೇಲ್ನೋಟಕ್ಕೆ ಮೃದುವಾಗಿರುತ್ತಾರೆ. ಆದರೆ, ಒಳಗೆ ಒರಟಾಗಿರುತ್ತಾರೆ. ಎರಡೂ ರೀತಿಯ ಜನರಿರುತ್ತಾರೆ’ ಎಂದರು.

‘ದಸರಾ ಉದ್ಘಾಟನೆಗೆ ನಿಸಾರ್‌ ಅಹಮದ್‌ ಒಪ್ಪಿಕೊಂಡು ಇಲ್ಲಿಗೆ ಬಂದಿರುವುದು ಅತೀವ ಖುಷಿ ಉಂಟು ಮಾಡಿದೆ. ಇದು ನಿಸಾರ್‌ ಅಹಮದ್ ಅವರಿಗೆ ನಾವು ಗೌರವ ಸೂಚಿಸುವುದಲ್ಲ. ಬದಲಾಗಿ ಅವರನ್ನು ಆಹ್ವಾನಿಸುವ ಮೂಲಕ ನಮಗೆ ಗೌರವ ಬಂದಿದೆ. ಕನ್ನಡ ಸಾಹಿತಿಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ’ ಎಂದು ಬಣ್ಣಿಸಿದರು.

‘1983ರಲ್ಲಿ ಮೊದಲ ಬಾರಿ ಶಾಸಕನಾಗಿ ಆಯ್ಕೆಯಾದ ನನಗೆ ರಾಮಕೃಷ್ಣ ಹೆಗಡೆ ಅವರು ಕನ್ನಡ ಕಾವಲು ಸಮಿತಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ್ದರು. ಸಾಹಿತ್ಯದ ಬಗ್ಗೆ ಏನೂ ಗೊತ್ತಿರಲಿಲ್ಲ. ಸಮಿತಿಯಲ್ಲಿದ್ದ ಸಾಹಿತಿಗಳ ಒಡನಾಟದಿಂದ ಆಸಕ್ತಿ ಮೂಡಿತು. ಆಗ ನನಗೆ ನಿಸಾರ್‌ ಪರಿಚಯವಾಯಿತು’ ಎಂದು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT