ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ನಿಯಮಾವಳಿ ರೂಪಿಸಲು ವಿಳಂಬ: ಬಿಸಿಸಿಐಗೆ ‘ಸುಪ್ರೀಂ’ ಚಾಟಿ

Last Updated 21 ಸೆಪ್ಟೆಂಬರ್ 2017, 20:12 IST
ಅಕ್ಷರ ಗಾತ್ರ

ನವದೆಹಲಿ : ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮೂವರು ಹಿರಿಯ ಪದಾಧಿಕಾರಿಗಳ ‘ಮೊಂಡುತನ’ಕ್ಕೆ ಚಾಟಿ ಬೀಸಿರುವ ಸುಪ್ರೀಂ ಕೋರ್ಟ್‌ ‘ಇದು ಅತ್ಯಂತ ಗಂಭೀರ ಲೋಪ’ ಎಂದು ಹೇಳಿದೆ. ‘ಈ ಪದಾಧಿಕಾರಿಗಳು ತಮ್ಮ ವರ್ತನೆ ತಿದ್ದಿಕೊಳ್ಳದಿದ್ದರೆ ನ್ಯಾಯಾಂಗ ನಿಂದನೆ ಆರೋಪದಂಥ ಕಠಿಣ ಕ್ರಮಕ್ಕೆ ಒಳಗಾಗಬೇಕಾದೀತು’ ಎಂಬ ಎಚ್ಚರಿಕೆಯನ್ನೂ ನೀಡಿದೆ. 

ಭಾರಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದ ಕಾರಣ ಬಿಸಿಸಿಐನ ಆಡಳಿತ ಸುಧಾರಣೆಗಾಗಿ ಆರ್‌.ಎಂ.ಲೋಧಾ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯ ಶಿಫಾರಸುಗಳನ್ನು ಕಳೆದ ವರ್ಷದ ಜುಲೈ 18ರಂದು ನೀಡಿದ ಆದೇಶದಲ್ಲಿ ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿತ್ತು.

ಗುರುವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಬಿಸಿಸಿಐ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ನ್ಯಾಯಾಲಯ, ಮಂಡಳಿಯ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ, ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಮತ್ತು ಖಜಾಂಚಿ ಅನಿರುದ್ಧ ಚೌಧರಿ ಅವರನ್ನು ತರಾಟೆಗೆ ತೆಗೆದುಕೊಂಡಿತು.

ನ್ಯಾಯಾಲಯದ ಆದೇಶವಿದ್ದರೂ ಮಂಡಳಿಗೆ ಹೊಸ ನಿಯಮಾವಳಿಗಳನ್ನು ರಚಿಸದೇ ಇರುವುದು ಉದ್ಧಟತನದ ಪರಮಾವಧಿ’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ಮೂವರು ಸದಸ್ಯರ ಪೀಠ ಅಭಿಪ್ರಾಯಪಟ್ಟಿತು.

ಈ ಮೂವರು ಪದಾಧಿಕಾರಿಗಳು ಆಡಳಿತಾಧಿಕಾರಿಗಳ ಸಮಿತಿಗೆ (ಸಿಒಎ) ಸಹಕಾರ ನೀಡುತ್ತಿಲ್ಲ ಎಂದು ಹೇಳಿದ ಪೀಠ ಇವರ ಈ ವರ್ತನೆಯಿಂದಾಗಿಯೇ ನಿಯಮಾವಳಿಗೆ ಅಂತಿಮ ರೂಪ ನೀಡಲು ತಡವಾಗಿದೆ ಎಂದು ಅಭಿಪ್ರಾಯಪಟ್ಟಿತು. ಈ  ಮೂವರು ಪದಾಧಿಕಾರಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT