ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮ ಟೈಗರ್‌ ಡ್ರೈವರ್‌’ ಆ್ಯಪ್‌ ಬಿಡುಗಡೆ

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಓಲಾ, ಉಬರ್‌ ಕಂಪೆನಿಗಳಿಗೆ ಪರ್ಯಾಯವಾಗಿ ಚಾಲಕರು ಹಾಗೂ ಮಾಲೀಕರು ಹುಟ್ಟುಹಾಕಿರುವ ‘ಹುಲಿ ಟೆಕ್ನಾಲಜೀಸ್‌’ ಕಂಪೆನಿಯು ತನ್ನ ಮೊದಲ ಮೊಬೈಲ್‌ ಆ್ಯಪ್‌ ಅನ್ನು ಗುರುವಾರ ಬಿಡುಗಡೆ ಮಾಡಿದೆ.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಜೆ.ಪಿ.ನಗರದ ಮನೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ, ಕುಮಾರಸ್ವಾಮಿ ಅವರೇ ಮೊದಲಿಗರಾಗಿ ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ‘ನಮ್ಮ ಟೈಗರ್‌ ಡ್ರೈವರ್‌’ ಆ್ಯಪ್‌ ಬಿಡುಗಡೆಗೊಳಿಸಿದರು. ಹೊಸ ವಾಹನಗಳ ನೋಂದಣಿಗೆ ಮಾತ್ರ ಈ ಆ್ಯಪ್‌ ಮೀಸಲಾಗಿದೆ.

‘ಓಲಾ, ಉಬರ್‌ ಕಂಪೆನಿಗಳ ವರ್ತನೆಯಿಂದ ಚಾಲಕರು ಹಾಗೂ ಮಾಲೀಕರು ನೊಂದಿದ್ದರು. ಹೋರಾಟ ಮಾಡಿದರೂ ಪರಿಹಾರ ಸಿಕ್ಕಿರಲಿಲ್ಲ. ಹಲವು ತಿಂಗಳ ಹಿಂದೆಯೇ ಪರ್ಯಾಯ ಆ್ಯಪ್‌ ರೂಪಿಸಲು ನಿರ್ಧರಿಸಲಾಗಿತ್ತು. ಅದರಂತೆ ಸಿದ್ಧತೆ ನಡೆಸಿ, ಇಂದು ಆ್ಯಪ್‌ ಬಿಡುಗಡೆ ಮಾಡಿದ್ದೇವೆ’ ಎಂದು ಕಂಪೆನಿಯ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಟೈಗರ್‌ ಡ್ರೈವರ್‌’ ಆ್ಯಪ್‌ ವಾಹನಗಳ ನೋಂದಣಿಗೆ ಅನುಕೂಲವಾಗಿದೆ. ನಮ್ಮ ಕಂಪೆನಿಯ ಅಡಿಯಲ್ಲಿ ವಾಹನಗಳನ್ನು ಓಡಿಸಲು ಇಚ್ಛಿಸುವವರು ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ವೈಯಕ್ತಿಕ ಹಾಗೂ ವಾಹನದ ಮಾಹಿತಿಯನ್ನು ನೀಡಬೇಕು. ಬಳಿಕ ಪರಿಶೀಲನೆ ನಡೆಸಿ, ಒಪ್ಪಂದದ ಮೂಲಕ ಚಾಲಕರನ್ನು ಕಂಪೆನಿಗೆ ಸೇರಿಸಿಕೊಳ್ಳಲಾಗುವುದು’ ಎಂದು ಅವರು ವಿವರಿಸಿದರು.

18 ದಿನಗಳ ನಿರಂತರ ನೋಂದಣಿ: ‘ಸೆ. 25ರಿಂದ ಆ್ಯಪ್‌ ಮೂಲಕ ವಾಹನಗಳ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, 18 ದಿನಗಳವರೆಗೆ ನಿರಂತರವಾಗಿ ನಡೆಯಲಿದೆ. ನೋಂದಣಿಗೆ ಮಿತಿ ವಿಧಿಸಲಾಗಿಲ್ಲ. ಎಲ್ಲರಿಗೂ ಮುಕ್ತ ಅವಕಾಶವಿದೆ.’

‘ಹೆಸರು ನೋಂದಾಯಿಸಿಕೊಂಡ ಚಾಲಕರು ಹಾಗೂ ಅವರ ವಾಹನಗಳ ಮಾಹಿತಿಯನ್ನು ಕಂಪೆನಿಯ ಪ್ರತಿನಿಧಿಗಳು ಪರಿಶೀಲಿಸಲಿದ್ದಾರೆ. ಅಪರಾಧಗಳಲ್ಲಿ ಭಾಗಿಯಾಗಿದ್ದರೆ ಅಂಥ ಚಾಲಕರ ನೋಂದಣಿಯನ್ನು ರದ್ದುಪಡಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ನೀಡಬೇಕು ಎಂಬ ಉದ್ದೇಶದಿಂದ ಕಂಪೆನಿ ಆರಂಭಿಸಿರುವುದರಿಂದ, ಉತ್ತಮ ನಡತೆಯುಳ್ಳ ಚಾಲಕರನ್ನು ಮಾತ್ರ ನೇಮಕ ಮಾಡಿಕೊಳ್ಳುತ್ತಿದ್ದೇವೆ’ ಎಂದು ಸದಸ್ಯ ಹೇಳಿದರು.

ಪ್ರಯಾಣಿಕರ ಆ್ಯಪ್‌ ಬಿಡುಗಡೆ ಶೀಘ್ರ: ‘ವಾಹನಗಳ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪ್ರಯಾಣಿಕರ ಸೇವೆಗಾಗಿಯೇ ಪ್ರತ್ಯೇಕವಾಗಿ ‘ನಮ್ಮ ಟೈಗರ್‌’ ಆ್ಯಪ್‌ ಬಿಡುಗಡೆ ಮಾಡಲಿದ್ದೇವೆ. ಅದಾದ ನಂತರವೇ ಕಂಪೆನಿ ಟ್ಯಾಕ್ಸಿಗಳು ರಸ್ತೆಗೆ ಇಳಿಯಲಿವೆ’ ಎಂದು ಸದಸ್ಯ ತಿಳಿಸಿದರು.

ನೋಂದಣಿ ವಿವರ
ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ‘Namma TYGR Driver’ ಆ್ಯಪ್‌ ಲಭ್ಯವಿದೆ. ಅದನ್ನು ಡೌನ್‌ಲೋಡ್‌ ಮಾಡಿಕೊಂಡು ಚಾಲಕರು, ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ಬಳಿಕ ಲಾಗ್‌–ಇನ್‌ ಆಗಿ ವಿವರವನ್ನು ಭರ್ತಿ ಮಾಡಬೇಕು. ನಂತರ ಕಂಪೆನಿಯ ಪ್ರತಿನಿಧಿಗಳು ಚಾಲಕರನ್ನು ಸಂಪರ್ಕಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT