ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಡುಪಾಳ್ಯ ಗ್ಯಾಂಗ್‌: ಮರು ನ್ಯಾಯಾಂಗ ವಿಚಾರಣೆ

ಮಹಿಳೆ ಹತ್ಯೆಗೈದು ಚಿನ್ನಾಭರಣ ಸುಲಿಗೆ ಮಾಡಿದ್ದ ಪ್ರಕರಣ
Last Updated 21 ಸೆಪ್ಟೆಂಬರ್ 2017, 19:50 IST
ಅಕ್ಷರ ಗಾತ್ರ

ಬೆಂಗಳೂರು: ಮಾಗಡಿ ರಸ್ತೆಯ ಅಗ್ರಹಾರ ದಾಸರಹಳ್ಳಿಯ ಮನೆಯೊಂದಕ್ಕೆ ನುಗ್ಗಿ ನಿವಾಸಿ ಗೀತಾ ಎಂಬುವರನ್ನು ಹತ್ಯೆಗೈದು ಸುಲಿಗೆ ಮಾಡಿದ್ದ ಪ್ರಕರಣದ ಸಂಬಂಧ ದಂಡುಪಾಳ್ಯ ಗ್ಯಾಂಗ್‌ ಸದಸ್ಯರ ವಿರುದ್ಧ ಮರು ನ್ಯಾಯಾಂಗ ವಿಚಾರಣೆ ಆರಂಭವಾಗಿದೆ.

ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ಮೊದಲ ವಿಚಾರಣೆ ಗುರುವಾರ ನಡೆಯಿತು. ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿರುವ ಗ್ಯಾಂಗ್‌ನ ಸದಸ್ಯರಾದ ದೊಡ್ಡ ಹನುಮ, ವೆಂಕಟೇಶ್‌, ಮುನಿಕೃಷ್ಣ, ನಲ್ಲತಿಮ್ಮ ಹಾಗೂ ಲಕ್ಷ್ಮಮ್ಮ ಅವರನ್ನು ವಿಡಿಯೊ ಸಂವಾದ ಮೂಲಕ ವಿಚಾರಣೆಗೆ ಹಾಜರುಪಡಿಸಲಾಯಿತು.

2000ರ ಜುಲೈ 4ರಂದು ನೀರು ಕೇಳುವ ನೆಪದಲ್ಲಿ ಗೀತಾ ಅವರ ಮನೆಗೆ ಹೋಗಿದ್ದ ಆರೋಪಿಗಳು, ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದರು. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕಲಾಸಿಪಾಳ್ಯ ಠಾಣೆಯ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ, ಅವರಿಗೆ ಮರಣ ದಂಡನೆ ವಿಧಿಸಿ ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆಗ ಹೈಕೋರ್ಟ್‌, ಪ್ರಕರಣದ ಬಗ್ಗೆ ಮರು ವಿಚಾರಣೆ ನಡೆಸುವಂತೆ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿತ್ತು. ಈಗ ಆ ಆದೇಶದಂತೆ ಮರು ವಿಚಾರಣೆ ಆರಂಭವಾಗಿದೆ.

ಮರಣ ದಂಡನೆ ಶಿಕ್ಷೆಗೆ ಅರ್ಹರು

ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಿ.ಎಸ್‌.ಪಾಟೀಲ, ‘ಆರೋಪಿಗಳ ವಿರುದ್ಧ ಕೊಲೆ, ಸುಲಿಗೆ ಸೇರಿ 80ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅವರೆಲ್ಲರೂ ಮರಣದಂಡನೆಗೆ ಅರ್ಹರಾಗಿದ್ದು, ಅವರಿಗೆ ಅದೇ ಶಿಕ್ಷೆ ವಿಧಿಸಬೇಕು’ ಎಂದು ನ್ಯಾಯಾಲಯವನ್ನು ಕೋರಿ ಸಾಕ್ಷ್ಯಗಳನ್ನು ಹಾಜರುಪಡಿಸಿದರು. ವಾದ ಆಲಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ಸೆಪ್ಟೆಂಬರ್‌ 28ಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT