ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷತೆಗಾಗಿ ಕಂಟೋನ್ಮೆಂಟ್‌ ಸುರಂಗ ನಿಲ್ದಾಣ ಬದಲು

ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ಸಮಜಾಯಿಷಿ
Last Updated 21 ಸೆಪ್ಟೆಂಬರ್ 2017, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಕಂಟೋನ್ಮೆಂಟ್ ರೈಲು ನಿಲ್ದಾಣದ ಕೆಳಗೆ ನಿರ್ಮಿಸಬೇಕಿದ್ದ ಮೆಟ್ರೊ ಸುರಂಗ ನಿಲ್ದಾಣವನ್ನು ಸುರಕ್ಷತೆ, ತಾಂತ್ರಿಕ ಸವಾಲು ಹಾಗೂ ಹಣ ಉಳಿತಾಯದ ಕಾರಣಕ್ಕೆ ಬದಲಿಸಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ಸ್ಪಷ್ಟಪಡಿಸಿದರು.

ಕಂಟೋನ್ಮೆಂಟ್‌ ಮೆಟ್ರೊ ಸುರಂಗ ನಿಲ್ದಾಣವನ್ನು ನ್ಯೂ ಬಂಬೂ ಬಜಾರ್‌ಗೆ ಸ್ಥಳಾಂತರಿಸುವ ಬಿಎಂಆರ್‌ಸಿಎಲ್‌ ನಿರ್ಧಾರ ವಿರೋಧಿಸಿ ಸ್ಥಳೀಯರು ಇತ್ತೀಚೆಗೆ ಪ್ರತಿಭಟಿದ್ದರು.

ಗುರುವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಎಂಆರ್‌ಸಿಎಲ್‌ ತೆಗೆದುಕೊಂಡಿರುವ ನಿರ್ಧಾರ ಸಮರ್ಥಿಸಿಕೊಂಡ ಖರೋಲ, ‘ಶಿವಾಜಿನಗರದಿಂದ ಕಂಟೋನ್ಮೆಂಟ್‌ ರೈಲು ನಿಲ್ದಾಣದವರೆಗಿನ 1.8 ಕಿ.ಮೀ ಉದ್ದದ ಸುರಂಗ ಮಾರ್ಗದಲ್ಲಿ ಸಾಕಷ್ಟು ತಿರುವುಗಳು ಎದುರಾಗಲಿದ್ದವು. ಇಷ್ಟು ದೂರದ ಸುರಂಗ ಕೊರೆಯುವಾಗ ಯಂತ್ರಗಳು ಕೈಕೊಟ್ಟರೆ ಬದಲಿಸಲು ಅಥವಾ ರಿಪೇರಿ ಮಾಡಲು ಕಷ್ಟವಾಗುತ್ತಿತ್ತು. ಮೊದಲ ಹಂತದಲ್ಲಿ ಆಗಿರುವ ಅನುಭವಗಳ ಆಧಾರದ ಮೇಲೆ ಈ ತೀರ್ಮಾನಕ್ಕೆ ಬಂದಿದ್ದೇವೆ’ ಎಂದರು.

‘ಹೊಸ ಪ್ರಸ್ತಾವದ ಪ್ರಕಾರ ನ್ಯೂ ಬಂಬೂ ಬಜಾರ್‌ ರಸ್ತೆಯ ಅಬ್ದುಲ್ ಬ್ಯಾರಿ ಪ್ರಾಥಮಿಕ ಶಾಲೆಯ ಪಕ್ಕದಲ್ಲಿರುವ ಮೈದಾನದಲ್ಲಿ ಮೆಟ್ರೊ ಸುರಂಗ ನಿಲ್ದಾಣ ನಿರ್ಮಾಣವಾಗಲಿದೆ. ಕಂಟೋನ್ಮೆಂಟ್‌ ರೈಲು ನಿಲ್ದಾಣ ಹಾಗೂ ನ್ಯೂ ಬಂಬೂ ಬಜಾರ್‌ ಮೆಟ್ರೊ ನಿಲ್ದಾಣದ ನಡುವೆ ನೆಲದಾಳದಲ್ಲಿ 150 ಮೀಟರ್‌ ಉದ್ದದ ಸಬ್‌ವೇ ಮೆಟ್ರೊದಿಂದಲೇ ನಿರ್ಮಿಸಲಾಗುವುದು’ ಎಂದು ತಿಳಿಸಿದರು.

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಮಾತನಾಡಿ, ’ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎರಡನೇ ಹಂತ–2ಬಿ ಮೆಟ್ರೊ ಯೋಜನೆಗೆ ಬಿಎಂಆರ್‌ಸಿಎಲ್‌ ಅತ್ಯಂತ ಕಡಿಮೆ ಅವಧಿಯಲ್ಲಿ ಡಿಪಿಆರ್‌ ಸಿದ್ಧಪಡಿಸಿದೆ. ಇದನ್ನು ಸರ್ಕಾರಕ್ಕೆ ಸಲ್ಲಿಸಿ, ಒಂದು ತಿಂಗಳ ಒಳಗೆ ಅಂತಿಮ ಒಪ್ಪಿಗೆ ಪಡೆಯುತ್ತೇವೆ’ ಎಂದರು.

ತಾಂತ್ರಿಕ ಸವಾಲು

ರೈಲು ನಿಲ್ದಾಣಗಳ ಕೆಳಗಡೆ ಯಾವುದೇ ಕಾಮಗಾರಿಯನ್ನು 100 ಅಡಿಗಳಿಗಿಂತ ಆಳದಲ್ಲಿ ಮಾಡಬೇಕೆನ್ನುವುದು ರೈಲ್ವೆ ಮಂಡಳಿಯ ನಿಯಮ. ಕಂಟೊನ್ಮೆಂಟ್‌ ನಿಲ್ದಾಣದ ಕೆಳಗೆ ಕನಿಷ್ಠ 30 ಮೀಟರ್‌ (100 ಅಡಿ) ಆಳದಲ್ಲಿ ಸುರಂಗ ಮಾರ್ಗ ಮತ್ತು 40 ಮೀಟರ್‌ ಆಳದಲ್ಲಿ ನಿಲ್ದಾಣ ನಿರ್ಮಿಸಬೇಕಿತ್ತು. ಕೆಂಪೇಗೌಡ ಮೆಟ್ರೊ ನಿಲ್ದಾಣಕ್ಕಿಂತ ಎರಡುಪಟ್ಟು ಆಳದಲ್ಲಿ ಸುರಂಗ ನಿಲ್ದಾಣ ನಿರ್ಮಿಸಬೇಕಾಗುತ್ತದೆ. ಇಷ್ಟು ಆಳದಲ್ಲಿ ಹವಾನಿಯಂತ್ರಣ ಮತ್ತು ಆಮ್ಲಜನಕ ವ್ಯವಸ್ಥೆ ಮಾಡುವುದು ಕಷ್ಟ. ಹೊಸ ಪ್ರಸ್ತಾವನೆ ಪ್ರಕಾರ 15 ಮೀಟರ್‌ ಆಳದಲ್ಲಿ ಸುರಂಗ ಮಾರ್ಗ ನಿರ್ಮಾಣವಾಗಲಿದೆ ಎಂದು ಖರೋಲ ತಿಳಿಸಿದರು.

* ನಾಗವಾರ– ಡೇರಿ ವೃತ್ತ ನಡುವಿನ ಸುರಂಗ ಮಾರ್ಗವನ್ನು 1 ಕಿ.ಮೀ. ಕಡಿಮೆ ಮಾಡುವುದರಿಂದ ₹1000 ಕೋಟಿ ಹಣ ಮತ್ತು ಸಮಯ ಉಳಿತಾಯವಾಗಲಿದೆ.

–ಪ್ರದೀಪ್‌ ಸಿಂಗ್‌ ಖರೋಲ, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT