ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ವರ್ಷದಿಂದ ಸಿಗದ ಬೋನಸ್‌– ಟೀಕೆ

ಸಕಾಲದಲ್ಲಿ ಸಿಗದ ಆಡಿಟ್‌ ವರದಿ– ಕ್ರಮಕ್ಕೆ ಆಗ್ರಹಿಸಿ ನಿರ್ಣಯ
Last Updated 22 ಸೆಪ್ಟೆಂಬರ್ 2017, 4:48 IST
ಅಕ್ಷರ ಗಾತ್ರ

ಕನಕಪುರ: ಸಂಘದಲ್ಲಿ ಮೂರು ವರ್ಷದಿಂದ ಹಾಲು ಉತ್ಪಾದಕರಿಗೆ ಬೋನಸ್‌ ನೀಡಿಲ್ಲ. ಸಕಾಲಕ್ಕೆ ಆಡಿಟ್‌ ವರದಿ ನೀಡದ್ದಕ್ಕೆ ಕ್ರಮ ಕೈಗೊಳ್ಳಬೇಕೆಂದು ಸರ್ವ ಸದಸ್ಯರು ಒತ್ತಾಯಿಸಿ ನಿರ್ಣಯ ಕೈಗೊಂಡ ಘಟನೆ ನಗರದ ಇಲ್ಲಿ ಗುರುವಾರ ನಡೆಯಿತು.

ನಗರದ ವಿವೇಕಾನಂದ ನಗರ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರು ‘ಸಂಘದಿಂದ ನಮಗೇನು ಸವಲತ್ತುಗಳು ಸಿಗುತ್ತಿಲ್ಲ, ಮೂರು ವರ್ಷವಾದರೂ ನಮಗೆ ಬರಬೇಕಾದ ಲಾಭಾಂಶದ ಬೋನಸ್‌ ಸಿಕ್ಕಿಲ್ಲ’ ಎಂದು ಸಿಟ್ಟಿನಿಂದ ಆಕ್ಷೇಪ ಸೂಚಿಸಿದರು.

ಆಡಳಿತ ಮಂಡಳಿಯ ವಿರುದ್ಧ ಹರಿಹಾಯ್ದರು. ಈ ಸಂದರ್ಭದಲ್ಲಿ ಬೆಂಗಳೂರು ಹಾಲು ಒಕ್ಕೂಟದ ಕನಕಪುರ ಶಿಬಿರ ವಿಸ್ತರಣಾದಿಕಾರಿ ಕೆ.ಎಸ್‌.ಅರುಣ್‌ಕುಮಾರ್‌ ಮಾತನಾಡಿ ‘ನೀವೇ ಆಯ್ಕೆ ಮಾಡಿಕೊಂಡಿರುವ ಆಡಿಟರ್‌ ಈ ವರ್ಷದ ಲೆಕ್ಕಪರಿಶೋಧಕ ವರದಿಯನ್ನು ಈವರೆಗೂ ನೀಡಿಲ್ಲ, ಅವರಿಗೆ ಕೊಡಬೇಕಾದ ಬಾಬ್ತು ಸಂಘದಿಂದ ಕೊಡಲಾಗಿದೆ, ಸಭೆಯಲ್ಲಿ ನಿರ್ಣಯಮಾಡಿ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ’ ಎಂದರು.

ಜಿಲ್ಲಾ ಸಹಕಾರ ಇಲಾಖೆಗೆ ದೂರು ನೀಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅವರನ್ನು ಬದಲಾಯಿಸಿ ಸರ್ಕಾರಿ ಆಡಿಟರ್‌ ನೇಮಕ ಮಾಡಲಾಗುವುದೆಂದು ತಿಳಿಸಿದರು.

ಸದಸ್ಯರು ಮಾತನಾಡಿ, ಸಂಘದಲ್ಲಿ ದಾನ ಧರ್ಮದ ನಿಧಿಯಲ್ಲಿ ಹಣವಿದ್ದರೂ ರಾಸುಗಳು ಅಥವಾ ಹಾಲು ಉತ್ಪಾದಕರು ಸಾವನ್ನಪ್ಪದರೆ ಅಂತ್ಯಸಂಸ್ಕಾರಕ್ಕೂ ಸಂಘದಿಂದ ನೆರವು ಸಿಗುತ್ತಿಲ್ಲ ಎಂದು ದೂರಿದರು.

‘ಒಕ್ಕೂಟ ಮತ್ತು ಡೇರಿಯಿಂದ ಸಿಗುವ ಸವಲತ್ತುಗಳ ಬಗ್ಗೆ ಈವರೆಗೂ ತಿಳಿಸಿಕೊಟ್ಟಿಲ್ಲ, ವರ್ಷಕ್ಕೊಮ್ಮೆ ಸಭೆ ಕರೆಯುತ್ತಾರೆ. ನಾವು ಬಂದು ಸಭೆಯಲ್ಲಿ ಕುಳಿತು ಬಾಳೆಹಣ್ಣು ಬಿಸ್ಕೆಟ್‌ ತಿಂದು ಹೋಗುತ್ತಿದ್ದೇವೆ’ ಎಂದು ತರಾಟೆಗೆ ತೆಗೆದುಕೊಂಡರು.

ಸಂಘದ ನಿರ್ದೇಶಕರು ಮತ್ತು ವಿಸ್ತರಣಾದಿಕಾರಿ ಸದಸ್ಯರಲ್ಲಿ ಕ್ಷಮೆ ಯಾಚಿಸಿದರು. ಪ್ರಾರಂಭದಿಂದಲೇ ಸಂಘದಿಂದ ಸದಸ್ಯರಿಗೆ ಸಿಗುವ ಸವಲತ್ತುಗಳು ಬಗ್ಗೆ ತಿಳಿಸಿ ಕೊಡಬೇಕಾಗಿತ್ತು, ಹಿಂದಿನ ಕಾರ್ಯದರ್ಶಿ ಅವರ ಅವಧಿಯಲ್ಲಿ ಆದ ಲೋಪದೋಷದಿಂದ ಸಂಘದ ಅಭಿವೃದ್ಧಿಗೆ ಹಿನ್ನಡೆಯಾಗಿತ್ತು ಎಂದರು.

ಆ ಅವಧಿಯ ಆಡಿಟ್‌ ಮಾಡಿಸಿ ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ನಂತರ ಮೂರು ವರ್ಷದ ಬೋನಸ್‌ ಶೀಘ್ರವೇ ವಿಲೇವಾರಿ ಮಾಡುವುದಾಗಿ ತಿಳಿಸಿದರು.

ಸಂಘದ ಅಧ್ಯಕ್ಷ ಚನ್ನಮಲ್ಲಯ್ಯ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಕೆ.ಟಿ.ವೆಂಕಟಪತಿ, ಕೆ.ಸಿ.ಶ್ರೀನಿವಾಸ್‌, ಕೆ.ಕೆ.ಸಿದ್ದೇಗೌಡ, ಟಿ.ಎಂ.ಮಲ್ಲೇಶ್‌, ರಾಧಮ್ಮ, ರಮಾಮಣಿ, ಮುಖ್ಯ ಕಾರ್ಯನಿರ್ವಹಣಾದಿಕಾರಿ ಕೆ.ವಿ.ಕೀರ್ತಿ, ಹಾಲು ಪರೀಕ್ಷಕ ಕೆ.ಶಂಕರಯ್ಯ, ಸಹಾಯಕ ಮಧು, ಶುಚಿಗಾರ್ತಿ ಭಾಗಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT