ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನಿಗಳ ಮಾರ್ಗದರ್ಶನ ಪಡೆಯಲು ಸಲಹೆ

‘ಕೃಷಿ ಹೊಂಡ ಮತ್ತು ಜಲ ಮರುಪೂರಣ’ದ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ
Last Updated 22 ಸೆಪ್ಟೆಂಬರ್ 2017, 4:54 IST
ಅಕ್ಷರ ಗಾತ್ರ

ಮಾಗಡಿ: ಕೃಷಿ ವಿಜ್ಞಾನ ಕೇಂದ್ರದಿಂದ (ಕೆವಿಕೆ) ಮಣ್ಣು ಮತ್ತು ನೀರಿನ ಸಂರಕ್ಷಣೆ ಬಗ್ಗೆ ತಾಂತ್ರಿಕ ಮಾಹಿತಿ ತಿಳಿದುಕೊಂಡು ರೈತರು ಕೃಷಿ ಕ್ಷೇತ್ರದಲ್ಲಿ ಬೆಳೆಗಳನ್ನು ಬೆಳೆಯಲು ಮುಂದಾಗುವುದು ಸೂಕ್ತ ಎಂದು ಕೆವಿಕೆ ವಿಜ್ಞಾನಿ ಸೈಯದ್‌ ಮಜರ್‌ ಆಲಿ ತಿಳಿಸಿದರು.

ಚಂದೂರಾಯನ ಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಕೃಷಿ ಹೊಂಡ ಮತ್ತು ಜಲ ಮರುಪೂರಣದ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ ನೆರವೇರಿಸಿ ಅವರು ಮಾತನಾಡಿದರು.

ಮಳೆಯ ನೀರು ಇಳುವರಿಯ ಮೇಲೆ ಬಹಳ ಪ್ರಭಾವ ಬೀರುತ್ತಿದೆ. ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಜಿಲ್ಲೆಯಲ್ಲಿ ಮಾವಿನಲ್ಲಿ ಸೂಕ್ಷ್ಮ ಸಂಗ್ರಹಣಾ ಪ್ರದೇಶ ನಿರ್ಮಾಣ ಮಾಡಿ ಮಣ್ಣು ಮತ್ತು ನೀರು ಸಂರಕ್ಷಣೆ  ಮಾಡುವುದರ ಬಗ್ಗೆ ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.

ಇದರ ಸಂಬಂಧವಾಗಿ ಕೇಂದ್ರದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆಯ ಬಗ್ಗೆ ವಿವಿಧ ತಾಂತ್ರಿಕತೆ ತಿಳಿಸಲು ತರಬೇತಿ ಹಮ್ಮಿಕೊಳ್ಳಲಾಗಿದೆ.

ವಿಜ್ಞಾನಿ ಡಾ.ಕೇಶವ ರೆಡ್ಡಿ ಮಾತನಾಡಿ, ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಕೃಷಿ ಹೊಂಡ, ಕಂದಕದ ನಿರ್ಮಾಣ, ಚೆಕ್ ಡ್ಯಾಮ್, ಬದುಗಳ ಕುರಿತು ವಿವರಿಸಿದರು.

ಮಾವಿನ ತಾಕುಗಳಲ್ಲಿ ಸೂಕ್ಷ್ಮ ಸಂಗ್ರಹಣಾ ಪದ್ಧತಿಗಳಾದ ವೃತ್ತಾಕಾರ, ಚೌಕಾಕಾರ, ಅರ್ಧವೃತ್ತಾಕಾರ ಹಾಗೂ 'ವಿ' ಆಕಾರದ ಸಂಗ್ರಹಣಾ ಪದ್ಧತಿ ಅಳವಡಿಕೆಯ ಅನುಕೂಲವನ್ನು ತಿಳಿಸಿಕೊಟ್ಟರು. ಅವುಗಳನ್ನು ತಾಕುಗಳಲ್ಲಿ ನಿರ್ಮಿಸುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.

ವಿವಿಧ ಬಗೆಯ ಇಳಿಜಾರಿನ ಪ್ರದೇಶಗಳಲ್ಲಿ ಯಾವ ರೀತಿಯ ಸೂಕ್ಷ್ಮ ಸಂಗ್ರಹಣಾ ಪದ್ಧತಿ ಅಳವಡಿಸಬೇಕು. ಇಳಿಜಾರಿನ ಪ್ರದೇಶಗಳಲ್ಲಿ ನಿರ್ಮಿಸಿದ ಬದುಗಳು ಮಣ್ಣು ಕೊಚ್ಚಿ ಹೋಗದಂತೆ ತಡೆಯಲು ಲಾವಂಚ ಹುಲ್ಲನ್ನು ಬದುಗಳ ಮೇಲೆ ಬೆಳೆಯುವುದು ಸೂಕ್ತ ಎಂದು ತಿಳಿಸಿದರು.

ಇದರಿಂದ ಮರಗಳ ಬುಡದಲ್ಲಿ ತೇವಾಂಶ ಸಂರಕ್ಷಿಸಿ ಮಾವಿನ ಇಳುವರಿ  ಹೆಚ್ಚಿಸಬಹುದು ಎಂದು ತಿಳಿಸಿದರು.

ಬತ್ತಿ ಹೋಗಿರುವ ಕೊಳವೆ ಬಾವಿಗಳ ಅಂತರ್ಜಲ ಮರುಪೂರಣ ಮಾಡಿದರೆ ಸುಮಾರು ಎರಡು ವರ್ಷಗಳ ಅಂತರದಲ್ಲಿ ಆ ಕೊಳವೆ ಬಾವಿಗಳಲ್ಲಿ ನೀರನ್ನು ಪುನಶ್ಚೇತನಗೊಳಿಸಬಹುದು ಎಂದು ಕೆವಿಕೆ ಸಂಯೋಜಕ ಡಾ, ಕೆ.ಎಚ್‌. ನಾಗರಾಜು ಕೆಂಕೆರೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT