ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಶತಮಾನೋತ್ಸವ ಸಂಭ್ರಮ

Last Updated 22 ಸೆಪ್ಟೆಂಬರ್ 2017, 6:06 IST
ಅಕ್ಷರ ಗಾತ್ರ

ಕರ್ನಾಟಕದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘವು ಸ್ಥಾಪನೆಯಾಗಿ ಇದೀಗ ನೂರು ಸಂವತ್ಸರಗಳನ್ನು ಪೂರೈಸಿದೆ.
ಒಂದು ಶತಮಾನದವರೆಗೆ ವಿದ್ಯಾದಾನ ಮಾಡಿದ, ಶೈಕ್ಷಣಿಕ ಗುಣಮಟ್ಟವನ್ನು ಕಾಲಮಾನಕ್ಕೆ ತಕ್ಕಂತೆ ಸುಧಾರಿಸಿಕೊಂಡ ಮತ್ತು ಪೂರ್ಣ ಪ್ರಮಾಣದ ಶ್ರದ್ಧೆ ಮತ್ತು ತಾದಾತ್ಮ್ಯಗಳನ್ನು ಉಳಿಸಿಕೊಂಡ ಈ ಸಂಘವು ಹೆಮ್ಮೆ, ಧನ್ಯತೆ ಮತ್ತು ಸಾರ್ಥಕತೆಗಳನ್ನು ಅನುಭವಿಸುವ ಚಾರಿತ್ರಿಕ ಸಂದರ್ಭಕ್ಕೆ ಬಂದು ತಲುಪಿದೆ.

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಬ್ರಿಟಿಷ್‌ ಆಡಳಿತ ವ್ಯಾಪ್ತಿಯ ವಿಶಾಲ ಪ್ರಾಂತವಾದ ಮದ್ರಾಸ್ ಪ್ರಾವೆನ್ಸಿಗೆ ಸೇರಿದ್ದ ಬಳ್ಳಾರಿಯು ಇಪ್ಪತ್ತು ತಾಲೂಕುಗಳನ್ನೊಳಗೊಂಡ ವಿಶಾಲ ಜಿಲ್ಲೆಯಾಗಿತ್ತು. ರಾಜಕೀಯ ಸ್ಥಿತ್ಯಂತರ, ಅನಿಯಮಿತ ಆಡಳಿತ ಪದ್ಧತಿ, ಅವೈಜ್ಞಾನಿಕ ತಾಲೂಕು ವಿಂಗಡಣೆ, ಸೇರ್ಪಡಿಸುವಿಕೆ, ಪರಿಮಿತಿಯ ಶೈಕ್ಷಣಿಕ ವ್ಯವಸ್ಥೆ ಮತ್ತು ಅನಿರ್ದಿಷ್ಟ ಕ್ರಮದ ಪಠ್ಯಬೋಧನೆ, ಮುಖ್ಯವಾಗಿ ಪ್ರಾವೆನ್ಸಿಯ ಆಡಳಿತ ಕೇಂದ್ರವಾದ ಮದ್ರಾಸ್‌ನಿಂದ ದೂರವಿದ್ದ ಕಾರಣದಿಂದ ಉಂಟಾಗಿದ್ದ ಉಪೇಕ್ಷೆ–ಇಂಥ ಹಲವು ಗೊಂದಲಮಯ ಅನಿಶ್ಚಿತ ವಿದ್ಯಮಾನಗಳಿಂದ ಬಳ್ಳಾರಿ ಜಿಲ್ಲೆಯು ಅಕ್ಷರಶಃ ಹಿಂದುಳಿದ ಜಿಲ್ಲೆಯಾಗಿತ್ತು.

ಸುಮಾರು ಒಂದೂವರೆ ಶತಮಾನಗಳ ಇಂಥ ಅನಾಥಪ್ರಜ್ಞೆಯನ್ನು ಅನುಭವಿಸಿದ್ದ (ಬಿಎಸಿಕೆ– ಬಳ್ಳಾರಿ, ಅನಂತಪುರ, ಕಡಪ ಮತ್ತು ಕರ್ನೂಲು ಸೇರಿದ್ದ) ಈ ಜಿಲ್ಲಾ ಪರಿಸರವನ್ನು ಬ್ಯಾಕ್‌ ಡಿಸ್ಟ್ರಿಕ್ಟ್ಸ್ ಎಂದೇ ಕರೆಯಲಾಗಿತ್ತು. ಇಂಥ ಅರಾಜಕ ರಾಜಕೀಯ ಪರಿಸ್ಥಿತಿ ಮತ್ತು ಅವೈಜ್ಞಾನಿಕ ಆಡಳಿತಾತ್ಮಕ ಕಾರಣಗಳಿಂದ ಸಾಮಾಜಿಕ ಸ್ಥಿತಿ ಸಹಜವಾಗಿ ಗಂಭೀರವಾಗಿಯೇ ಇತ್ತು. ಶೈಕ್ಷಣಿಕ ಸೌಲಭ್ಯವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂಬುದು ತಿಳಿದಿದ್ದರಿಂದ ಅದನ್ನು ಪೂರೈಸುವುದು ಅಂದಿನ ಮೂಲಭೂತ ಅಗತ್ಯವೆನಿಸಿತ್ತು.

ಕನ್ನಡ- ಮನೆಯ ಭಾಷೆಯಾಗಿ, ತೆಲುಗು- ಶಾಲೆಯ ಭಾಷೆಯಾಗಿ, ತಮಿಳು- ಆಡಳಿತ ಭಾಷೆಯಾಗಿ ಇದ್ದ ಸ್ವಾತಂತ್ರ್ಯಪೂರ್ವದ ಕಾಲಘಟ್ಟದಲ್ಲಿ ಇಂಥ ವಿದ್ಯಾವರ್ಧಕ ಸಂಘದ ಸ್ಥಾಪನೆಯ ಅಗತ್ಯವನ್ನು ಗ್ರಹಿಸಿದ್ದು ಇಂದು ಸಾಹಸ ಕಾರ್ಯವೆನಿಸುತ್ತದೆ.

ವಿದ್ಯೆಗೆ ಅನುಕೂಲ ಮಾಡಿಕೊಡುವ ಉದ್ದೇಶ ಸ್ಪಷ್ಟವಾಗಿತ್ತಾದರೂ ಆರ್ಥಿಕ ಮೊದಲಾದ ಸಂಕಷ್ಟಗಳಿದ್ದ ವಾತಾವರಣವು ಸುಗಮದ ಹಾದಿಯನ್ನು ನಿರ್ಮಿಸಿಕೊಡುವಂತಿರಲಿಲ್ಲ! ಆದರೆ ಅದನ್ನು ಅರ್ಥಪೂರ್ಣವಾಗಿ ಸ್ಮರಿಸುವ ಪುಣ್ಯದ ಕಾರ್ಯ ಇಂದು ನಮ್ಮದಾಗಿದೆ. ವೀರಶೈವ ವಿದ್ಯಾವರ್ಧಕ ಸಂಘವು ಸ್ಥಾಪನೆಯಾದ ಆರಂಭ ಕಾಲದಿಂದಲೂ ಹಿಂದುಳಿದ ಬಳ್ಳಾರಿ ಜಿಲ್ಲೆಗೆ ಮೂಲಭೂತ ಅವಶ್ಯಕತೆಯೆನಿಸಿದ್ದ ಆರಂಭಿಕ ಶಿಕ್ಷಣ ಒದಗಿಸುವುದನ್ನೇ ತನ್ನ ಉದ್ದೇಶಗಳ ಕೇಂದ್ರದಲ್ಲಿರಿಸಿಕೊಂಡಿತ್ತು.

* ಮಾತೃಭಾಷೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ
* ಮಹಿಳೆಯರಿಗೆ ಶಿಕ್ಷಣ
* ಗ್ರಾಮೀಣ ವಿದ್ಯಾರ್ಥಿಗಳಿಗೆ ವಿದ್ಯಾನುಕೂಲ
* ಪ್ರಾಥಮಿಕ ಶಿಕ್ಷಣ
* ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
* ಗ್ರಾಮೀಣ ಪರಿಸರದಲ್ಲಿ ಶಿಕ್ಷಣ–ತಾಂತ್ರಿಕ ಶಿಕ್ಷಣ ಇತ್ಯಾದಿ
–ಇದಕ್ಕೆ ಪೂರಕವಾಗಿ ಜಿಲ್ಲೆಯಾದ್ಯಂತ ಉಚಿತ ಪ್ರಸಾದ ನಿಲಯಗಳ ಸ್ಥಾಪನೆ, ಅನ್ಯ ಸ್ವಾಮ್ಯದ ಪ್ರಸಾದ ನಿಲಯಗಳಿಗೆ ಆರ್ಥಿಕ ನೆರವು, ಸ್ಥಳೀಯ ಸಂಪನ್ಮೂಲಗಳ ಕ್ರೋಢೀಕರಣ ಮತ್ತು ವಿತರಣೆ, ಇತ್ಯಾದಿ. ಯಾವುದೇ ಕಾಲದ ಸಮಾಜದ ಸರ್ವತೋಮುಖಿ ಅಭಿವೃದ್ಧಿಯು ಇಂಥ ಶೈಕ್ಷಣಿಕ ಸೌಲಭ್ಯವನ್ನು ವಿವಿಧ ಆಯಾಮಗಳಲ್ಲಿ ಒದಗಿಸುವುದರ ಮತ್ತು ಕ್ರಮೇಣ ವಿಸ್ತರಿಸುವುದರ ಮೂಲಕ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಂಘವು ನಂಬಿಕೊಂಡಿತ್ತು.

ಆದ್ದರಿಂದ ಆರಂಭದಿಂದಲೂ ಜಾತ್ಯತೀತ ಮೌಲ್ಯಗಳು, ವಾಣಿಜ್ಯೇತರ ದೃಷ್ಟಿಕೋನ, ನಿಸ್ವಾರ್ಥ ಮನೋಧರ್ಮಗಳನ್ನು ತನ್ನ ಸೇವೆಯ ಉದ್ದೇಶದಲ್ಲಿ ಧೋರಣೆಯಾಗಿರಿಸಿಕೊಂಡಿತ್ತು. ಒಂದು ನಿರ್ದಿಷ್ಟ ಸಮಾಜದ, ಅಂದರೆ ವೀರಶೈವ ಸಮಾಜದ ಪ್ರಜ್ಞಾವಂತರು– ವಿದ್ಯಾವರ್ಧಕ ಸಂಘ ಎಂಬ ಖಾಸಗಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ನಾಡಿನ ಅಗತ್ಯವನ್ನು ಪೂರೈಸಿದ್ದು ಮದ್ರಾಸ್ ಪ್ರಾವೆನ್ಸಿಯ ಇತಿಹಾಸದಲ್ಲಿ ಪ್ರಪ್ರಥಮವಾಗಿದೆ. ಇದು ಚಾರಿತ್ರಿಕ ಮಹತ್ವದ ಅಂಶ.

ಪ್ರಾವೆನ್ಸಿ ಆಡಳಿತ ಮತ್ತು ಜಿಲ್ಲಾ ಬೋರ್ಡ್–ತಾಲೂಕು ಬೋರ್ಡಗಳಿಗೇ ಶಿಕ್ಷಣ ಸೌಲಭ್ಯವನ್ನು ಒದಗಿಸುವುದು ಕಷ್ಟಸಾಧ್ಯವೆನಿಸಿದ್ದಾಗ ಈ ಯುವ ವೀರಶೈವ ವಿದ್ಯಾವರ್ಧಕ ಸಂಘವು ಖಾಸಗಿ ಶಿಕ್ಷಣ ಸಂಸ್ಥೆಯಾಗಿ ಧೈರ್ಯದ ದಿಟ್ಟಹೆಜ್ಜೆಯನ್ನಿರಿಸಿದ್ದು ಸಾಹಸಮಯ ಅಂಶವೂ ಆಗಿದೆ.

ಸಂಘದ ಈ ಶ್ರೇಷ್ಠ ಶೈಕ್ಷಣಿಕ ನಿರ್ಧಾರದ ಎರಡು ಪ್ರಮುಖ ಅಂಶಗಳೆಂದರೆ, ಪೂರ್ಣ ಪ್ರಮಾಣದ ಕನ್ನಡ ಮಾಧ್ಯಮದ ಪ್ರೌಢಶಿಕ್ಷಣ ಮತ್ತು ಪದವಿ ಶಿಕ್ಷಣ ನೀಡುವ ಈ ಎರಡೂ ವಿದ್ಯಾಲಯಗಳು ಜಿಲ್ಲೆಯ ಮೊಟ್ಟ ಮೊದಲ ವಿದ್ಯಾಲಯಗಳೆಂಬುದು; ಅದೂ ಖಾಸಗಿ ಶಿಕ್ಷಣ ಸಂಸ್ಥೆಯೊಂದರಿಂದ. ಅದೇ ರೀತಿಯಾಗಿ ಮದ್ರಾಸ್‌ ಪ್ರಾವೆನ್ಸಿಯಲ್ಲಿಯೇ ಈ ಪ್ರಯೋಗಾತ್ಮಕ ಸಾಧನೆಯನ್ನು ಮಾಡಿದ ಮೊದಲ ಖಾಸಗಿ ಶಿಕ್ಷಣ ಸಂಸ್ಥೆಯೆಂಬುದು. ದಕ್ಷಿಣ ಭಾರತದ ಖಾಸಗಿ ಸಂಸ್ಥೆಗಳ ಇತಿಹಾಸದಲ್ಲಿ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಈ ಶೈಕ್ಷಣಿಕ ಹಂತವನ್ನು ದಾಟಿದ ಮಹತ್ವದ ಸ್ಥಾನವಂತೂ ಇದರಿಂದ ಲಭ್ಯವಾಗಿದೆ.

ಬಡ ಪ್ರತಿಭಾವಂತ ಮತ್ತು ಗ್ರಾಮೀಣ ಭಾಗದ ಬೆರಳೆಣಿಕೆಯ ವಿದ್ಯಾಕಾಂಕ್ಷಿಗಳಿಗೆ ಅನ್ನದ ಅನುಕೂಲಮಾಡಿ ಪ್ರಸಾದನಿಲಯದ ಮೂಲಕ ಆರಂಭವಾದ ವೀರಶೈವ ವಿದ್ಯಾವರ್ಧಕ ಸಂಘ ನೂರು ತುಂಬಿದ ಈ ಸಂದರ್ಭದಲ್ಲಿ ಅಕ್ಷರ ನೀಡುವ ವಿದ್ಯಾಲಯಗಳನ್ನು ಯಥೇಚ್ಛವಾಗಿ ಜಿಲ್ಲೆಯಾದ್ಯಂತ ನೀಡಿ ಕನ್ನಡನಾಡಿನ ಪ್ರತಿಷ್ಠಿತ ಶಿಕ್ಷಣಸಂಸ್ಥೆಗಳಲ್ಲಿ ಒಂದಾಗಿ ಬೆಳೆದು ನಿಂತಿರುವುದು ಚರಿತ್ರೆಯ ಸಾಕ್ಷ್ಯದಲ್ಲಿ ಈಗಾಗಲೇ ಘಟಿಸಿದೆ.

ನೊಂದು, ಬೆಂದುಹೋಗಿದ್ದ ನೆಲದಲ್ಲಿ ಅಕ್ಷರದ ಬೀಜವ ಬಿತ್ತಿ, ಮೊಳಕೆಯೊಡೆದು ಸಸಿಯಾಗಿ ಬೆಳೆದ ಅದಕ್ಕೆ ಅನ್ನದ ಬೇಲಿಯ ಕಟ್ಟಿ, ನಾಣ್ಯದ ನೀರು ಹಾಕಿ, ಜ್ಞಾನದ ಹಸಿರ ಹಬ್ಬಿಸಿದ ವೀರಶೈವ ವಿದ್ಯಾವರ್ಧಕ ಸಂಘವು ಇದೀಗ ನೂರರ ಹೆಮ್ಮರವಾಗಿ ಬೆಳೆದು ನಿಂತಿದೆ. ನಮ್ಮ ಸಂಘ ನೀಡಿದ ನೆರಳು, ಹಬ್ಬಿಸಿದ ಬೆಳಕು ಶಬ್ದಗಳಿಂದ ಹೇಳಿ ಮುಗಿಸುವಂಥದಲ್ಲ! ಇದು ಕಣ್ಣಿಗೆ ಕಾಣುವ ಹೆಮ್ಮರದ ಬಗ್ಗೆ ಹೇಳುವ ಮಾತಲ್ಲ; ನೋಡುವ ನೋಟ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT