ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಸ್ವಾಗತಕ್ಕೆ ಸಜ್ಜಾದ ನಗರ

Last Updated 22 ಸೆಪ್ಟೆಂಬರ್ 2017, 6:45 IST
ಅಕ್ಷರ ಗಾತ್ರ

ಕೊಪ್ಪಳ: ಮುಖ್ಯಮಂತ್ರಿ ಸ್ವಾಗತಕ್ಕೆ ನಗರ ಸಜ್ಜುಗೊಂಡಿದೆ. ಸೆ. 22ರಂದು ಜಿಲ್ಲಾಧಿಕಾರಿ ಕಚೇರಿ ಪಕ್ಕದ ಮೈದಾನದಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಹಲವು ಸಚಿವರು ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ.

ನಗರದಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳು ರಾರಾಜಿಸುತ್ತಿವೆ. ಸಾವಿರಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತ್‌ಗಾಗಿ ನಿಯೋಜನೆಗೊಂಡಿದ್ದಾರೆ. ಸಂಚಾರ ದಟ್ಟಣೆ ನಿಭಾಯಿಸಲು ಪಾರ್ಕಿಂಗ್‌ ವ್ಯವಸ್ಥೆ, ವಾಹನ ಸಂಚಾರ ಮಾರ್ಗದಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಲಾಗಿದೆ.

ಸಮಾವೇಶದ ಮುಖ್ಯವೇದಿಕೆ, ಸಭಾಂಗಣ ಸಜ್ಜುಗೊಂಡಿದೆ. ಸುಮಾರು 1 ಲಕ್ಷದಷ್ಟು ಜನ ಕುಳಿತುಕೊಳ್ಳಲು ಬೇಕಾದ ಆಸನಗಳು, ಮುಖ್ಯ ವೇದಿಕೆ ಮತ್ತು ಸಭಾಂಗಣದ ಒಳಗೆ ಬೃಹತ್‌ ಎಲ್‌ಇಡಿ ಪರದೆ, ಧ್ವನಿವರ್ಧಕ ಇತ್ಯಾದಿ ಸಜ್ಜುಗೊಂಡಿವೆ.

ಫಲಾನುಭವಿಗಳ ಸಮಾವೇಶ ಸರ್ಕಾರಿ ಕಾರ್ಯಕ್ರಮ ಎಂದೇ ಹೇಳಲಾಗುತ್ತಿದೆಯಾದರೂ ಮುಂದಿನ ಚುನಾವಣೆಯ ಪೂರ್ವಸಿದ್ಧತಾ ವೇದಿಕೆಯೇ ಇದು ಎಂಬ ಮಾತು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. 

ಪ್ರಮುಖ ಯೋಜನೆಗಳು: ಆನೆಗೊಂದಿ ಪ್ರದೇಶ ಹಾಗೂ ಬಳ್ಳಾರಿ ಜಿಲ್ಲೆಯ ಹಂಪಿಯ ಪ್ರದೇಶಕ್ಕೆ ನೇರ ಸಂಪರ್ಕ ಕಲ್ಪಿಸುವ ತುಂಗಭದ್ರಾ ನದಿಗೆ ಗಂಗಾವತಿ ತಾಲ್ಲೂಕು ಕಡೇಬಾಗಿಲು ಬಳಿ ರೂ 32 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆ ಉದ್ಘಾಟನೆ. ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕಿನ ಗ್ರಾಮಗಳಿಗೆ ₹ 763 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವರು.

ಯಲಬುರ್ಗಾ ಮತ್ತು ಕೊಪ್ಪಳ ತಾಲ್ಲೂಕಿನ ಆಯ್ದ ಕೆರೆಗಳಿಗೆ ₹ 290 ಕೋಟಿ ವೆಚ್ಚದಲ್ಲಿ ತುಂಗಭದ್ರಾ ನದಿಯ ನೀರನ್ನು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ. ಕೊಪ್ಪಳದಲ್ಲಿ ₹ 150 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಕಟ್ಟಡದ ಉದ್ಘಾಟನೆ. ಸಿಂಗಟಾಲೂರು ಏತ ನೀರಾವರಿ ಯೋಜನೆ ಅಡಿ ₹ 103 ಕೋಟಿ ವೆಚ್ಚದಲ್ಲಿ ಬನ್ನಿಕೊಪ್ಪ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ.

ಯಲಬುರ್ಗಾ ತಾಲ್ಲೂಕು ತಳಕಲ್ ಬಳಿ ₹ 100 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡದ ಶಂಕುಸ್ಥಾಪನೆ. ಗಂಗಾವತಿಯಲ್ಲಿ ರೂ 25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡದ ಉದ್ಘಾಟನೆ. ಗಂಗಾವತಿ ತಾಲ್ಲೂಕು ಚಿಕ್ಕಬೆಣಕಲ್‍ನಲ್ಲಿ ₹ 10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಹಾಸ್ಟೆಲ್ ಕಟ್ಟಡದ ಉದ್ಘಾಟನೆ.

ಹಿರೇಹಳ್ಳ ಯೋಜನೆಯ ಮುದ್ಲಾಪುರ ಗ್ರಾಮ ಬಳಿ ರೂ 10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೇತುವೆಯ ಉದ್ಘಾಟನೆ. ಯಲಬುರ್ಗಾ ತಾಲ್ಲೂಕು ಕುಕನೂರು ಪಟ್ಟಣದಲ್ಲಿ ₹ 9 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ 60 ಹಾಸಿಗೆಗಳ ಮಹಿಳಾ ಪ್ರಸೂತಿ ಮತ್ತು ಮಕ್ಕಳ ಆಸ್ಪತ್ರೆಯ ಶಂಕುಸ್ಥಾಪನೆ.

ಯಲಬುರ್ಗಾ ತಾಲೂಕು ಕುಕನೂರಿನಲ್ಲಿ ₹ 5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಪ್ರವಾಸಿ ಮಂದಿರವನ್ನು  ಉದ್ಘಾಟಿಸಲಿದ್ದಾರೆ. ಭಾಗವಹಿಸಲಿರುವ ಸಚಿವರು: ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ, ಮಧ್ಯಮ, ಬೃಹತ್‌ ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಆರ್‌.ವಿ.ದೇಶಪಾಂಡೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ.ಪಾಟೀಲ್‌, ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್‌, ಕಾರ್ಮಿಕ ಮತ್ತು ಕೌಶಲ ಅಭಿವೃದ್ಧಿ ಸಚಿವ ಸಂತೋಷ್‌ ಎಸ್‌. ಲಾಡ್‌, ಲೋಕೋಪಯೋಗಿ ಸಚಿವ
ಎಚ್‌.ಸಿ.ಮಹದೇವಪ್ಪ, ಇಂಧನ ಸಚಿವ ಡಿ.ಕೆ.ಶಿವಕುಮಾರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT