ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿ ಉತ್ಸವ: 500 ಮಾಂಸದಂಗಡಿಗಳನ್ನು ಮುಚ್ಚಿಸಿದ ಶಿವಸೇನಾ ಕಾರ್ಯಕರ್ತರು

Last Updated 22 ಸೆಪ್ಟೆಂಬರ್ 2017, 9:15 IST
ಅಕ್ಷರ ಗಾತ್ರ

ಗುರ್‍‍ಗಾಂವ್: ನವರಾತ್ರಿ ಉತ್ಸವದ ಕಾರಣ ಶುಕ್ರವಾರ ನಗರದ ಸುಮಾರು 500ಕ್ಕೂ ಹೆಚ್ಚು ಮಾಂಸದಂಗಡಿಗಳು ಹಾಗೂ ಕೋಳಿ ಅಂಗಡಿಗಳನ್ನು ಶಿವಸೇನಾ ಕಾರ್ಯಕರ್ತರು ಮುಚ್ಚಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಗುರ್‌ಗಾಂವ್‌ ಶಿವಸೇನಾ ಘಟಕದ ಕಾರ್ಯದರ್ಶಿ ಮತ್ತು ವಕ್ತಾರ ರಿತು ರಾಜ್‌, ‘ಬಹಿರಂಗವಾಗಿ ಮಾಂಸ ಮಾರಾಟ ಮಾಡದ ಕೆಎಫ್‌ಸಿಯಂತಹ ಕೆಲವು ರೆಸ್ಟೋರೆಂಟ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಚಿಕನ್‌ ಅಂಗಡಿಗಳು ಮತ್ತು ಮಾಂಸದಂಗಡಿಗಳಿಗೆ ಈಗಾಗಲೇ ನೋಟಿಸ್‌ ನೀಡಿದ್ದೇವೆ. ಸೂಚನೆಗಳನ್ನು ಪಾಲಿಸದಿದ್ದರೆ ಕ್ರಮ ಎದುರಿಸಬೇಕಾಗುತ್ತದೆ’ ಎಂದಿದ್ದಾರೆ.

‘ಈ ನಿಟ್ಟಿನಲ್ಲಿ ಮಂಗಳವಾರವೇ ಗುರ್‌ಗಾಂವ್‌ ಉಪ ಆಯುಕ್ತ ವಿನಯ್‌ ಪ್ರತಾಪ್‌ ಸಿಂಗ್‌ ಅವರಿಗೆ ಮನವಿ ಸಲ್ಲಿಸಿ ಬೇಡಿಕೆ ಇಟ್ಟಿದ್ದೇವೆ. ಆದರೆ ಅವರು ಮಾಲೀಕರಿಗೆ ಯಾವುದೇ ಸೂಚನೆ ನೀಡಿಲ್ಲ’ ಎಂದೂ ರಿತು ಹೇಳಿದ್ದಾರೆ.

ಕಾರ್ಯಕರ್ತರು ಕೇವಲ ಮಾಂಸದಂಗಡಿಗಳಿಗೆ ಮಾತ್ರವಲ್ಲದೆ ಸಸ್ಯಾಹಾರಿ ಹೋಟೆಲ್‌ಗಳಿಗೂ ಸೂಚನೆ ನೀಡಿದ್ದು, ಒಂಭತ್ತು ದಿನಗಳವರೆಗೆ ಬಾಗಿಲು ತೆರೆಯದಂತೆ ತಿಳಿಸಿದ್ದಾರೆ ಎನ್ನಲಾಗಿದೆ.

ನಗರದ ಪಾಲಂವಿಹಾರ್‌ನಲ್ಲಿ ಸಂಘಟಿತರಾದ ಶಿವಸೇನಾ ಕಾರ್ಯಕರ್ತರು, ಸೂರತ್‌ ನಗರ, ಅಶೋಕ್ ವಿಹಾರದ ಮಾಂಸ ಮಾರುಕಟ್ಟೆ, ಪಟೌಡಿ ಚೌಕ, ಜಾಕೋಬ್‌ ಪುರ, ಸಾದರ್‌ ಬಜಾರ್‌ ಹಾಗೂ ಇತರ ಪ್ರದೇಶಗಳಲ್ಲಿರುವ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದ್ದಾರೆ.

ಪ್ರಕರಣ ಸಂಬಂಧ ಮಾತನಾಡಿರುವ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು, ‘ಪ್ರಕರಣವನ್ನು ಪರಿಶೀಲಿಸುತ್ತಿದ್ದೇವೆ. ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಒಂದು ವೇಳೆ ಕಾರ್ಯಕರ್ತರು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸುವ ಕಾರ್ಯ ಮಾಡಿದರೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT