ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ ಗಡಿಗ್ರಾಮದಲ್ಲಿ ತಂಬಾಕು ಕೃಷಿ

Last Updated 22 ಸೆಪ್ಟೆಂಬರ್ 2017, 7:19 IST
ಅಕ್ಷರ ಗಾತ್ರ

ಕುಶಾಲನಗರ: ಉತ್ತರ ಕೊಡಗಿನ ಬಯಲು ಸೀಮೆ ಪ್ರದೇಶಗಳ ಬಹುತೇಕ ಗ್ರಾಮಗಳಲ್ಲಿ ಈ ವರ್ಷ 530 ಹೆಕ್ಟೇರ್ ಪ್ರದೇಶದಲ್ಲಿ ರೈತರು ವಾಣಿಜ್ಯ ಬೆಳೆ ತಂಬಾಕು ಕೃಷಿ ಮಾಡಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ ಗಡಿ ಗ್ರಾಮಗಳಾದ ತೊರೆನೂರು, ಹೆಬ್ಬಾಲೆ, ಶಿರಂಗಾಲ, ಅಳುವಾರ, ಮಣಜೂರ್, ನಲ್ಲೂರು, ಸಿದ್ದಲಿಂಗಪುರ, ಮರೂರು, ಹುಲುಸೆ ಹಾಗೂ ಗೋಣಿಮರೂರು ಗ್ರಾಮಗಳು ಸೇರಿದಂತೆ ಶನಿವಾರಸಂತೆ ವ್ಯಾಪ್ತಿಯ ಕೆಲವು ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ವಾಣಿಜ್ಯ ಬೆಳೆ ತಂಬಾಕು ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕಾಫಿ, ಏಲಕ್ಕಿ, ಕಿತ್ತಳೆ ಹಾಗೂ ಭತ್ತ ಕೃಷಿ ಮಾತ್ರ ಹೆಸರಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೇರಳದಿಂದ ಕೊಡಗಿಗೆ ಕಾಲಿಟ್ಟ ಶುಂಠಿ ಕೃಷಿ ಎಲ್ಲೆಡೆ ವ್ಯಾಪ್ತಿಸಿದೆ. ರೈತರು ತಮ್ಮ ಹೊಲ, ಗದ್ದೆ ಹಾಗೂ ಮೇಡುಗಳಲ್ಲಿ ಶುಂಠಿ ಕೃಷಿ ಕೈಗೊಳ್ಳುವ ಮೂಲಕ ಲಾಭದ ವಾಣಿಜ್ಯ ಬೆಳೆಯತ್ತ ಮುಖ ಮಾಡಿರುವುದು ಕಂಡುಬಂದಿದೆ. ಇದರಿಂದ ಜಿಲ್ಲೆಯಲ್ಲಿ ಭತ್ತ ಹಾಗೂ ತಂಬಾಕು ಕೃಷಿ ಇಳಿಮುಖಗೊಂಡಿದೆ.

ಮೈಸೂರು ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕುಗಳು ತಂಬಾಕು ಕೃಷಿಗೆ ಪ್ರಸಿದ್ಧಿ ಪಡೆದಿವೆ. ತಂಬಾಕು ಬೆಳೆಗಳ ಗುಣಮಟ್ಟವು ಮಣ್ಣಿನ ಗುಣಮಟ್ಟ, ಹವಾಮಾನ ಹಾಗೂ ಬೇಸಾಯದ ಕ್ರಮಗಳ ಮೇಲೆ ಅವಲಂಬಿಸಿದ್ದು, ಕುಶಾಲನಗರ ಹೋಬಳಿ ಕೆಲವು ಗ್ರಾಮಗಳ ಹೊಲಗಳ ಮಣ್ಣು ತಂಬಾಕು ಬೆಳೆಗೆ ಯೋಗ್ಯವಾಗಿದೆ. ತಂಬಾಕು ಕೃಷಿ ಕಡೆಗೂ ರೈತರು ಒಲವು ತೋರಿದ್ದಾರೆ.

ಕೃಷಿ ಇಲಾಖೆ ವತಿಯಿಂದ ತಂಬಾಕು ಕೃಷಿಗೆ ಹೆಚ್ಚಿನ ಒತ್ತು ನೀಡಬಾರದು ಪರ್ಯಾಯ ಬೆಳೆಗಳತ್ತ ರೈತರು ಗಮನ ಹರಿಸಬೇಕು ಎಂದು ಜಾಗೃತಿ ಮೂಡಿಸಿದ ಹಿನ್ನೆಲೆಯಲ್ಲಿ ತಂಬಾಕು ಕೃಷಿ ಇಳಿಮುಖವಾಗಿದೆ ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಸ್. ರಾಜಶೇಖರ್ ತಿಳಿಸಿದ್ದಾರೆ.

ಕಳೆದ ಕೆಲ ವರ್ಷಗಳಿಂದ ತಂಬಾಕು ಬೆಳೆಯುವ ರೈತರು ಮಳೆಯಿಲ್ಲದೆ ಮತ್ತು ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸಿದ್ದು, ಇದರಿಂದ ಬಹಳಷ್ಟು ಮಂದಿ ರೈತರು ತಂಬಾಕು ಬಿಟ್ಟು ಪರ್ಯಾಯ ಬೆಳೆಯತ್ತ ಮುಖ ಮಾಡಿದ್ದಾರೆ ಎಂದು ತೊರೆನೂರಿನ ರೈತ ಟಿ.ಬಿ. ಜಗದೀಶ್ ಹೇಳಿದರು. ತಾಲ್ಲೂಕಿನ 368 ಮಂದಿ ರೈತರು ತಂಬಾಕು ಮಂಡಳಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದು, 451 ಕಡೆ ತಂಬಾಕು ಕೃಷಿ ಕೈಗೊಳ್ಳಲು ಅನುಮತಿ ದೊರೆತಿದೆ.

ಕಳೆದ ವರ್ಷ 7.05 ಲಕ್ಷ ಕೆ.ಜಿ ತಂಬಾಕು ಉತ್ಪಾದನೆಯಾಗಿತ್ತು. ಮಾರುಕಟ್ಟೆಯಲ್ಲಿ ಒಂದು ಕೆ.ಜಿ ತಂಬಾಕಿಗೆ ₨ 160 ಇತ್ತು. ಈ ವರ್ಷ ಸುಮಾರು 7.5 ಲಕ್ಷ ಕೆ.ಜಿ ತಂಬಾಕು ಉತ್ಪಾದನೆ ನಿರೀಕ್ಷೆಯಿದೆ ಹೊಂದಲಾಗಿದೆ ಎಂದು ರಾಮನಾಥಪುರ ತಂಬಾಕು ಮಂಡಳಿ ಕ್ಷೇತ್ರ ಸಹಾಯಕ ಡಿ.ಕೆ. ಕೃಷ್ಣೇಗೌಡ ತಿಳಿಸಿದ್ದಾರೆ.
ರಘು ಹೆಬ್ಬಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT