ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನದಾತನ ಘನತೆಯ ಜೀವನಕ್ಕಾಗಿ...

Last Updated 22 ಸೆಪ್ಟೆಂಬರ್ 2017, 7:24 IST
ಅಕ್ಷರ ಗಾತ್ರ

ಮಂಡ್ಯ: ದೇಶದ ಪ್ರತಿಯೊಬ್ಬ ರೈತ ಘನತೆಯಿಂದ ಜೀವಿಸುವುದು ಅವನ ಹಕ್ಕು. ಆದರೆ, ಆಳುವ ಸರ್ಕಾರಗಳ ಕಪಟ ನೀತಿಗಳಿಂದಾಗಿ ಅನ್ನದಾತ ಕೋಟಿ ಕಷ್ಟಗಳ ಜತೆ ತೊಳಲಾಡುತ್ತಿದ್ದಾನೆ. ರೈತರ ಸಂರಕ್ಷಣೆಗಾಗಿ ಈಗ ದೇಶದಾದ್ಯಂತ 170 ರೈತಪರ ಸಂಘಟನೆಗಳು ಒಂದಾಗಿದ್ದು ಹೊಸ ಆಲೋಚನೆಯ ಹೋರಾಟಕ್ಕಾಗಿ ಕಾಂತ್ರಿಕಾರಕ ಹೆಜ್ಜೆ ಇಟ್ಟಿವೆ.

ನ. 20ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ರೈತ ಸಂಸತ್‌ ಗೆ ಪೂರ್ವಭಾವಿಯಾಗಿ ರೈತಪರ ಸಂಘಟನೆಗಳು ರೈತಮುಕ್ತಿ ಜಾಥಾ ನಡೆಸುತ್ತಿದ್ದು ಶುಕ್ರವಾರ (ಸೆ. 22) ಕರ್ನಾಟಕದಲ್ಲಿ ಹೆಜ್ಜೆ ಹಾಕಲಿವೆ. ತೆಲಂಗಾಣದಲ್ಲಿ ಆರಂಭವಾದ ಜಾಥಾ ಆಂಧ್ರಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಸಾಗಿ ರಾಜ್ಯಕ್ಕೆ ಬರುತ್ತಿದೆ. ಶುಕ್ರವಾರ ಮಧ್ಯಾಹ್ನ 2.30ಕ್ಕೆ ಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ರೈತರ ಬೃಹತ್‌ ಸಮಾವೇಶ ನಡೆಯಲಿದ್ದು ದೇಶದ ವಿವಿಧ ಭಾಗಗಳ ರೈತಪರ ಹೋರಾಟಗಾರರು, ಮುಖಂಡರು ಪಾಲ್ಗೊಳ್ಳಲಿದ್ದಾರೆ. 35 ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 70 ವರ್ಷಗಳಾಗುತ್ತಿದ್ದರೂ ಅನ್ನದಾತ ಸಂಕಷ್ಟಗಳಿಂದ ಮುಕ್ತನಾಗಿಲ್ಲ. ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಅನೇಕ ರೈತಪರ ಸಂಘಟನೆಗಳು ಹೋರಾಡುತ್ತಲೇ ಬಂದಿದ್ದರೂ ಪ್ರಯೋಜನವಾಗಿಲ್ಲ. ಸರ್ಕಾರಗಳು ರೈತರನ್ನು ಶಾಶ್ವತವಾಗಿ ಬಡವರನ್ನಾಗಿಯೇ ಮಾಡಿದ್ದು ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಅವರನ್ನು ಬಳಸಿಕೊಳ್ಳುತ್ತಾ ಬಂದಿವೆ. ಆದ್ದರಿಂದ ರಾಷ್ಟ್ರದಾದ್ಯಂತ ರೈತಪರ ಹೋರಾಟಕ್ಕಾಗಿ ಕ್ರಾಂತಿಕಾರಕ ಹೆಜ್ಜೆ ಇಡುವ ಅಗತ್ಯವನ್ನು ಮನಗಂಡ ರೈತ ಮುಖಂಡರು 170 ಸಂಘಟನೆಗಳ ಸಂಗಮದೊಂದಿಗೆ ರೈತ ಹೋರಾಟ ಸಮನ್ವಯ ಸಮಿತಿ ರಚನೆ ಮಾಡಿದ್ದಾರೆ.

ನವದೆಹಲಿಯ ಸಂಸತ್‌ ಭವನದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದರೆ ರಾಮ್‌ ಲೀಲಾ ಮೈದಾನದಲ್ಲಿ ಬೃಹತ್‌ ರೈತ ಸಂಸತ್‌ ನಡೆಸಬೇಕೆನ್ನುವುದೇ ಈ ಸಮನ್ವಯ ಸಮಿತಿಯ ಉದ್ದೇಶ. ಹೀಗಾಗಿ ದೇಶದಾದ್ಯಂತ ರೈತ ಮುಖಂಡರು ರೈತ ಮುಕ್ತಿ ಜಾಥಾ ನಡೆಸುತ್ತಿದ್ದು ರೈತರನ್ನು ಸಂಘಟಿಸುವ ಕೆಲಸ ಮಾಡುತ್ತಿವೆ. ಪಾಂಡವಪುರದಲ್ಲಿ ನಡೆಯುವ ಸಮಾವೇಶದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚಿಂತನ- ಮಂಥನ ನಡೆಯಲಿದೆ.

ಸ್ವರಾಜ್‌ ಇಂಡಿಯಾ ಪಕ್ಷದ ಸಂಸ್ಥಾಪಕರಾದ ಯೋಗೇಂದ್ರ ಯಾದವ್‌ ಸಮಾವೇಶದಲ್ಲಿ ಭಾಷಣ ಮಾಡಲಿದ್ದು ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ, ಡಾ.ವಿಜುಕೃಷ್ಣನ್, ದೇವನೂರು ಮಹಾದೇವ, ಚುಕ್ಕಿನಂಜುಂಡಸ್ವಾಮಿ ಮುಂತಾದವರು ಭಾಗವಹಿಸುತ್ತಿದ್ದಾರೆ.

ಆತ್ಮಹತ್ಯೆ ತಡೆಗೆ ಹೊಸ ನೀತಿ ಬೇಕು: ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾಗದ ಕಾರಣ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆ ತಡೆಯುವುದಕ್ಕಾಗಿ ಸರ್ಕಾರಗಳು ಹೊಸ ಆರ್ಥಿಕ, ಉದ್ಯೋಗ ನೀತಿ ಜಾರಿಗೊಳಿಸಬೇಕು ಎಂಬುದು ಸಮಾವೇಶದ ಒತ್ತಾಯವಾಗಿದೆ. ‘ದೇಶದಲ್ಲಿ 30 ನಿಮಿಷಕ್ಕೆ ಒಬ್ಬರಂತೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆಗೆ ಬೆಳೆ ಸಾಲವೇ ಪ್ರಮುಖ ಕಾರಣ ಎಂದು ಹಲವು ಸಂಘ–ಸಂಸ್ಥೆಗಳು ಸಮೀಕ್ಷೆಯಲ್ಲಿ ಅಭಿಪ್ರಾಯ ಪಟ್ಟಿವೆ.

ಈ ದೇಶದ ಕೃಷಿಕರು ತಮ್ಮ ಜೀವನವನ್ನೇ ತ್ಯಾಗ ಮಾಡುತ್ತಿದ್ದು ವರ್ಷಕ್ಕೆ ₹ 2 ಲಕ್ಷ ಕೋಟಿ ಆದಾಯವನ್ನು ಕಳೆದುಕೊಳ್ಳುತ್ತಿದ್ದಾರೆ. ಆ ಮೂಲಕ ದೇಶವನ್ನು ಜೀವಂತವಾಗಿಡಲು ಯತ್ನಿಸುತ್ತಿದ್ದಾರೆ. ಆದರೆ, ಇವರನ್ನು ಕೈ ಹಿಡಿದು ಮೇಲೆತ್ತುವ ಯತ್ನವನ್ನು ಸರ್ಕಾರ ಮಾಡಿಲ್ಲ. ಇಂತಹ ಸ್ಥಿತಿಗೆ ನಮ್ಮನ್ನು ಆಳುವ ಸರ್ಕಾರಗಳೇ ಕಾರಣವಾಗಿವೆ. ಶುಕ್ರವಾರ ಪಾಂಡವಪುರದಲ್ಲಿ ನಡೆಯುವ ಸಮಾವೇಶದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುವುದು. ರೈತ ಸಂಸತ್‌ ನಲ್ಲಿ ನಡೆಸಬೇಕಾದ ಹೋರಾಟದ ಬಗ್ಗೆ ಚಿಂತನೆ ಮಾಡಲಾಗುವುದು’ ಎಂದು ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಹೇಳಿದರು.

ದೇಶದ ರೈತರ ಸಾಲ ಹಾಗೂ ಆತ್ಮಹತ್ಯೆ ವಿವರ
* ₹ 12,285 2003ರಲ್ಲಿ ಭಾರತದ ಪ್ರತಿ ರೈತ ಕುಟುಂಬದ ಸರಾಸರಿ ಸಾಲ
* ₹ 47,000 2013ರಲ್ಲಿ ದೇಶದ ಪ್ರತಿ ರೈತ ಕುಟುಂಬದ ಸರಾಸರಿ ಸಾಲ
* ಶೇ 373  10 ವರ್ಷದಲ್ಲಿ ಏರಿಕೆಯಾದ ರೈತರ ಸಾಲ
* 12,000 ಪ್ರತಿ ವರ್ಷ ದೇಶದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರು
* 1,002 ಏ.1, 2015ರಿಂದ ಜ.11, 2016ವರೆಗೆ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರು
* 230 2015ರಿಂದ ಮಂಡ್ಯ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT