ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡಿ ವಿಹಾರದಲ್ಲಿ ಅಥ್ಲೀಟ್‌ಗಳ ಕಲರವ

Last Updated 22 ಸೆಪ್ಟೆಂಬರ್ 2017, 7:35 IST
ಅಕ್ಷರ ಗಾತ್ರ

ಮೈಸೂರು: ದಸರಾ ಉತ್ಸವದ ಕ್ರೀಡಾಕೂಟಕ್ಕೆ ಗುರುವಾರ ಚಾಲನೆ ದೊರೆತಿದ್ದು, ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣ ಅಥ್ಲೀಟ್‌ಗಳ ಜಿದ್ದಾಜಿದ್ದಿನ ಪೈಪೋಟಿಗೆ ವೇದಿಕೆಯಾಗಲಿದೆ. ಸೆ. 24ರ ವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಗುರುವಾರ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಉದ್ಘಾಟಿಸಿದರು. ಅಥ್ಲೀಟ್‌ ಎಚ್‌.ಎಂ.ಜ್ಯೋತಿ, ಬ್ಯಾಸ್ಕೆಟ್‌ಬಾಲ್‌ ಆಟಗಾರ್ತಿ ಎಚ್‌.ಎಂ.ಬಾಂಧವ್ಯ, ಅಥ್ಲೀಟ್‌ ರೀನಾ ಜಾರ್ಜ್‌ ಮತ್ತು ಜೂನಿಯರ್‌ ಹಾಕಿ ತಂಡದ ಆಟಗಾರ್ತಿ ಲೀಲಾವತಿ ಅವರು ಕ್ರೀಡಾಜ್ಯೋತಿಯನ್ನು ಕ್ರೀಡಾಂಗಣಕ್ಕೆ ತಂದರು.

ಗ್ರ್ಯಾಂಡ್‌ ಮಾಸ್ಟರ್‌ ಪದವಿ ಪಡೆದ ಕರ್ನಾಟಕದ ಮೊದಲ ಚೆಸ್‌ ಸ್ಪರ್ಧಿ ಎನಿಸಿರುವ ಎಂ.ಎಸ್‌.ತೇಜ್‌ಕುಮಾರ್‌, ಕ್ರಿಕೆಟ್‌ ಆಟಗಾರ್ತಿಯರಾದ ವೇದಾ ಕೃಷ್ಣಮೂರ್ತಿ ಮತ್ತು ರಾಜೇಶ್ವರಿ ಗಾಯಕ್ವಾಡ್‌ ಅವರು ಜ್ಯೋತಿ ಸ್ವೀಕರಿಸಿದರು. ಕ್ರೀಡಾಜ್ಯೋತಿಯ ಯಾತ್ರೆಗೆ ಗುರುವಾರ ಬೆಳಿಗ್ಗೆ ಚಾಮುಂಡಿಬೆಟ್ಟದಲ್ಲಿ ಚಾಲನೆ ನೀಡಲಾಗಿತ್ತು. ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿದ ಜ್ಯೋತಿಯನ್ನು ಬಳಿಕ ನಜರಾಬಾದ್‌ನ ನಿಂಬುಜಾಂಬ ದೇವಸ್ಥಾನಕ್ಕೆ ತರಲಾಗಿತ್ತು. ಸಂಜೆಯ ವೇಳೆ ಜ್ಯೋತಿಯನ್ನು ಕ್ರೀಡಾಂಗಣಕ್ಕೆ ತರಲಾಯಿತು.

ರೀನಾ ಜಾರ್ಜ್‌ ಅವರು ಎಲ್ಲ ಕ್ರೀಡಾಪಟುಗಳ ಪರವಾಗಿ ಪ್ರಮಾಣವಚನ ಸ್ವೀಕರಿಸಿದರು. ಸಮಾರಂಭದಲ್ಲಿ ಕ್ರೀಡಾಪಟುಗಳು ಆಕರ್ಷಕ ಪಥಸಂಚಲನ ನಡೆಸಿದರು. ತೇಜ್‌ಕುಮಾರ್‌, ವೇದಾ ಮತ್ತು ರಾಜೇಶ್ವರಿ ಅವರನ್ನು ದಸರಾ ಕ್ರೀಡಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ದಸರಾ ಸಾಧಕರಿಗೆ ಮಾನ್ಯತೆ: ‘ದಸರಾ ಕ್ರೀಡಾಕೂಟದಲ್ಲಿ ಸಾಧನೆ ಮಾಡುವವರಿಗೆ ಸರಿಯಾದ ಮಾನ್ಯತೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಇನ್ನು ಮುಂದೆ ಹಾಗಾಗದಂತೆ ನೋಡಿಕೊಳ್ಳುತ್ತೇನೆ. ದಸರಾ ಸಾಧಕರಿಗೆ ಸೂಕ್ತ ಮಾನ್ಯತೆ ದೊರೆಯುವಂತೆ ಇಲಾಖೆಯು ಕ್ರಮ ಕೈಗೊಳ್ಳಲಿದೆ’ ಎಂದು ಕ್ರೀಡಾ ಸಚಿವರು ಹೇಳಿದರು.

ರಾಜ್ಯ ಸರ್ಕಾರ ಕ್ರೀಡಾಪಟುಗಳಿಗೆ ಉತ್ತೇಜನ ನೀಡುತ್ತಿದೆ. ಕ್ರೀಡಾನೀತಿಯನ್ನು ರೂಪಿಸುವ ಕೆಲಸ ಅಂತಿಮ ಹಂತದಲ್ಲಿದ್ದು, ಅತಿಶೀಘ್ರದಲ್ಲೇ ಪ್ರಕಟಿಸುತ್ತೇವೆ. ರಾಜ್ಯದ 1,000 ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಲು ಸರ್ಕಾರ ನಿರ್ಧರಿಸಿದೆ. ದಸರಾದಲ್ಲಿ ಗೆದ್ದವರನ್ನು ಕೂಡಾ ಈ ಯೋಜನೆಯಡಿ ಸೇರಿಸುವ ಚಿಂತನೆ ನಡೆಸುತ್ತೇವೆ ಎಂದು ಹೇಳಿದರು.

ಕ್ರೀಡಾ ಇಲಾಖೆ ನಿರ್ದೇಶಕ ಅನುಪಮ್‌ ಅಗರವಾಲ್‌, ಸಹಾಯಕ ನಿರ್ದೇಶಕ ಕೆ.ಸುರೇಶ್‌, ದಸರಾ ಕ್ರೀಡಾ ಉಪಸಮಿತಿ ಅಧ್ಯಕ್ಷ ಜಿ.ಸೋಮಶೇಖರ್‌, ಎಸ್ಪಿ ರವಿ.ಡಿ.ಚನ್ನಣ್ಣನವರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT