ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸರ್ಗಿಕ ಕಾಡು ಬೆಳೆಯಲು ಒತ್ತಾಯ

Last Updated 22 ಸೆಪ್ಟೆಂಬರ್ 2017, 9:04 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಅಕೇಶಿಯಾ ಸಸಿ ನೆಡುವುದಕ್ಕೆ ನಿಷೇಧ ಹೇರಲಾಗುವುದು ಎಂಬ ಸರ್ಕಾರದ ಭರವಸೆ ನಡುವೆಯೂ ಲಕ್ಷಾಂತರ ಗಿಡಗಳನ್ನು ತಾಲ್ಲೂಕಿನ ಆಯ್ದ ಪ್ರದೇಶದಲ್ಲಿ ನೆಡಲು ಸರ್ಕಾರ ಅನುಮತಿ ನೀಡಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ತಾಲ್ಲೂಕಿನ ತ್ರಿಯಂಬಕಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಾಮನೆ, ಕೆಳಗಿನಕೊಪ್ಪ, ದತ್ತರಾಜಪುರ, ತ್ರಿಯಂಬಕಪುರ, ಬಾಂಡ್ಯ–ಕುಕ್ಕೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಕೇಶಿಯಾ ನೆಡಲಾಗಿದೆ. ದಾನಸಾಲೆ, ಹೊಸಬೀಡು, ಬಸಾಪುರ, ಗರಗೇಶ್ವರ ಹಾಗೂ ಬೆಜ್ಜವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇರೇಗೋಡು, ಕುಡುವಳ್ಳಿ ಭಾಗದಲ್ಲಿ ಕೂಡ ನೆಡಲಾಗಿದೆ.

2016 ಜುಲೈ 28ರಂದು ತೀರ್ಥಹಳ್ಳಿಗೆ ಬಂದಿದ್ದ ಅರಣ್ಯ ಸಚಿವ ರಮಾನಾಥ ರೈ ಅವರು ಮಲೆನಾಡು ಭಾಗದಲ್ಲಿ ಅಕೇಶಿಯಾ ಸಸಿ ನೆಡದಂತೆ ನಿಷೇಧ ಹೇರಲಾಗುವುದು ಎಂದು ಘೋಷಿಸಿದ್ದರು. ಆದರೆ, ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಎಂಪಿಎಂ ಕಾರ್ಖಾನೆಯು ಅಕೇಶಿಯಾ ಗಿಡಗಳನ್ನು ನೆಡುತ್ತಿರುವುದು ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿದೆ.

ಪ್ರತಿ ವರ್ಷ ಕಟಾವಾದ ಪ್ರದೇಶದಲ್ಲಿ ಅಕೇಶಿಯಾ ಗಿಡಗಳನ್ನು ನೆಡುವಾಗ ಶೇ10ರಷ್ಟು ಸ್ಥಳೀಯ ನೈಸರ್ಗಿಕ ಗಿಡಗಳನ್ನು ನೆಡಬೇಕು ಎಂಬ ಒಪ್ಪಂದ ಪಾಲನೆ ಆಗಿಲ್ಲ. ಅಕೇಶಿಯಾ ನೆಡುತೋಪನ್ನು ಕಟಾವು ಮಾಡಿದಾಗ ಅಲ್ಲಿನ ಭೂ ಪ್ರದೇಶ ಬೋಳು ಬೆಟ್ಟಗಳಾಗುತ್ತಿವೆ. ಒಪ್ಪಂದದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮಲೆನಾಡಿನ ಪರಿಸರ ಉಳಿವನ್ನು ಲೆಕ್ಕಿಸದೇ ಏಕಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರಕ್ಕೆ ಹಾನಿಯಾಗುವಂತೆ ಎಂಪಿಎಂ ವರ್ತಿಸುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ನೆಡುತೋಪು ನಿರ್ಮಾಣಕ್ಕೂ ಮೊದಲಿದ್ದ ಬೃಹತ್‌ ಗಾತ್ರದ ಸ್ಥಳೀಯ ಜಾತಿಯ ರಂಜ, ಮಾವು, ಹೊನ್ನೆ, ಹಲಸು, ಹೆಬ್ಬಲಸು, ಬಸರಿ, ಬಿಳಾಲು, ಜಗಳಗಂಟಿ, ಹೊಳಗಾರ, ಸುರಹೊನ್ನೆ, ಬೀಟೆ, ಶ್ರೀಗಂಧ, ಬಿಲ್ವಾರ, ಧೂಪ ಸೇರಿದಂತೆ ಅನೇಕ ಜಾತಿಯ ಮರಗಳು, ಅಸಂಖ್ಯ ಜಾತಿಯ ಬಳ್ಳಿಗಳು ಪ್ಲಾಂಟೇಷನ್‌ ನಿರ್ಮಾಣಕ್ಕೆ ಬಲಿಯಾಗಿವೆ.

ಅಕೇಶಿಯಾ ಮರಗಳು ಬಿಡುವ ಹೂವಿನ ಮಕರಂದದಿಂದ ಅಸ್ತಮಾದಂತಹ ಕಾಯಿಲೆ ಹರಡುವಂತಾಗಿದೆ. ಜೆಸಿಬಿ ಯಂತ್ರಗಳನ್ನು ಬಳಸುವುದರಿಂದ ಮಣ್ಣಿನ ಸವಕಳಿ ಆಗುತ್ತಿದೆ. ಸಾವಿರಾರು ಬಗೆಯ ಔಷಧೀಯ ಸಸ್ಯಗಳು ನಾಶವಾಗುತ್ತಿದ್ದು, ಅಕೇಶಿಯಾ ಬೆಳೆದ ಪ್ರದೇಶದಲ್ಲಿ ನೈಸರ್ಗಿಕ ಕಾಡಿನ ನಿರ್ಮಾಣವಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅಕೇಶಿಯಾ ಸಸಿ ಬೆಳೆಸಲು, ನೆಡುತೋಪು ನಿರ್ಮಿಸಲು, ಗುಂಡಿ, ಬೇಲಿ, ಗೊಬ್ಬರ, ಕೂಲಿ, ಸಾಗಣೆ ಸೇರಿದಂತೆ ಒಂದು ಗಿಡಕ್ಕೆ ಸುಮಾರು ₨ 30 ವೆಚ್ಚವಾಗಲಿದೆ. ನೆಡುತೋಪು ನಿರ್ಮಾಣಕ್ಕೆ ಸರ್ಕಾರ ಕೋಟ್ಯಂತರ ಹಣವನ್ನು ವ್ಯಯಮಾಡುತ್ತಿದೆ. ಅರಣ್ಯ ಅಭಿವೃದ್ಧಿಯ ಹೆಸರಿನಲ್ಲಿ ಬೆಲೆ ಬಾಳುವ ನೈಸರ್ಗಿಕ ಅರಣ್ಯವನ್ನು ನಾಶಪಡಿಸಿ ಏಕಜಾತಿಯ ಸಸ್ಯವನ್ನು ಬೆಳೆಸುವುದು ನೈಸರ್ಗಿಕ ಪರಿಸರ ನಾಶಕ್ಕೆ ದಾರಿಮಾಡಿಕೊಟ್ಟಿದೆ ಎನ್ನುತ್ತಾರೆ ಪರಿಸರ ಪ್ರೇಮಿ ನಿಶ್ಚಲ್ ಜಾದೂಗಾರ್.

ಸ್ಥಳೀಯ ಜಾತಿಯ ಗಿಡಗಳನ್ನು ಪ್ಲಾಂಟೇಷನ್‌ನಲ್ಲಿ ಬೆಳೆಸುವ ಬದಲು ಪ್ರತ್ಯೇಕ ಸ್ಥಳದಲ್ಲಿ ಬೆಳೆಸಲು ಕ್ರಮ ತೆಗೆದುಕೊಂಡರೆ ನೈಸರ್ಗಿಕವಾಗಿ ಕಾಡಿನ ನಿರ್ಮಾಣ ಸಾಧ್ಯ. ಆದರೆ, ಆ ಕೆಲಸವನ್ನು ಎಂಪಿಎಂ ಮಾಡುತ್ತಿಲ್ಲ ಎನ್ನುತ್ತಾರೆ ಅವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT