ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಹಾಕಿ ವಿಶ್ವಕಪ್‌: ವೀಸಾ, ಸೂಕ್ತ ಭದ್ರತೆಗೆ ಬೇಡಿಕೆಯಿಟ್ಟ ಪಾಕಿಸ್ತಾನ

Last Updated 22 ಸೆಪ್ಟೆಂಬರ್ 2017, 11:32 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ವರ್ಷ ಒಡಿಶಾದಲ್ಲಿ ನಡೆಯಲಿರುವ ಪುರುಷರ ಹಾಕಿ ವಿಶ್ವಕಪ್‌ ಪಂದ್ಯಾವಳಿ ವೇಳೆ ತಂಡದ ಆಟಗಾರರಿಗೆ ಸರಿಯಾದ ಸಮಯಕ್ಕೆ ಭಾರತೀಯ ವೀಸಾ ಹಾಗೂ ಸೂಕ್ತ ಭದ್ರತೆ ಒದಗಿಸಿಕೊಡಬೇಕು ಎಂದು ಪಾಕಿಸ್ತಾನ ಹಾಕಿ ಮಂಡಳಿ(ಪಿಎಚ್‌ಎಫ್‌) ಅಂತರರಾಷ್ಟ್ರೀಯ ಹಾಕಿ ಮಂಡಳಿ(ಎಫ್‌ಐಎಚ್‌) ಎದುರು ಬೇಡಿಕೆ ಇಟ್ಟಿದೆ.

ಇದರೊಂದಿಗೆ ಹಾಕಿಯಲ್ಲಿಯೂ ರಾಜಕೀಯ ಮೇಲಾಟಗಳು ಆರಂಭವಾದಂತಾಗಿದೆ. ಹೀಗಾಗಿ ಈ ಬಾರಿ ಪಾಕ್‌ ತಂಡ ಕಣ‌ಕ್ಕಿಳಿಯುವುದು ಇನ್ನೂ ಸ್ಪಷ್ಟವಾಗಿಲ್ಲ.

ಶುಕ್ರವಾರ ದುಬೈನಲ್ಲಿ ನಡೆದ ಎಫ್‌ಐಎಚ್‌ ಅಧ್ಯಕ್ಷ ನರೀಂದರ್‌ ಬಾತ್ರ ಅವರೊಂದಿಗಿನ ಸಭೆಯಲ್ಲಿ ಮಾತನಾಡಿದ ಪಿಎಚ್‌ಎಫ್‌ ಅಧ್ಯಕ್ಷ ಖಾಲಿದ್‌ ಖೋ‌ಲ್ಕರ್‌, ‘ಸದ್ಯ ಆತಂಕದ ವಾತಾವರಣವಿದೆ. ವಿಶ್ವಕಪ್‌ ಪಂದ್ಯಾವಳಿಗೆ ಸೂಕ್ತ ಭದ್ರತೆಯ ಹಾಗೂ ಸುಲಭವಾಗಿ ವೀಸಾ ದೊರೆಯುವ ಭರವಸೆ ಸಿಗದ ಹೊರತು ಭಾರತಕ್ಕೆ ತಂಡವನ್ನು ಕಳುಹಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಹಾಕಿ ಇಂಡಿಯಾ ಮುಖ್ಯಸ್ಥರೂ ಆಗಿರುವ ಬಾತ್ರ, ‘ಪಾಕಿಸ್ತಾನ ತಂಡಕ್ಕೆ ವೀಸಾ ನಿಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು’ ಎಂದು ಹೇಳಿದ್ದಾರೆ.

ಜೂನ್‌ನಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪಿಎಚ್‌ಎಫ್‌ ಕಾರ್ಯದರ್ಶಿ ಶಬಾಜ್‌ ಅಹ್ಮದ್‌ ಅವರು, ‘ಭಾರತ, ಪಾಕಿಸ್ತಾನ ನಡುವಣ ಲಂಡನ್‌ನಲ್ಲಿ ನಡೆದ ವಿಶ್ವ ಹಾಕಿ ಲೀಗ್‌ ಪಂದ್ಯ ವೀಕ್ಷಿಸಲು ಸಾಕಷ್ಟು ಜನ ಕ್ರೀಡಾಂಗಣಕ್ಕೆ ಬಂದಿದ್ದರು. ಆದರೆ ದ್ವಿಪಕ್ಷೀಯ ಸರಣಿಗಳನ್ನು ನಡೆಸಲು ವಿಫಲವಾಗುತ್ತಿರುವುದು ‘ಏಷ್ಯಾ ಹಾಕಿ’ಯನ್ನು ಸಾಕಷ್ಟು ಬಾಧಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದರು.

‘ರಾಜತಾಂತ್ರಿಕ ಕಾರಣಗಳು ಕ್ರೀಡೆಗೆ ಹಿನ್ನಡೆ ಉಂಟು ಮಾಡುತ್ತಿರುವುದು ನೋವಿನ ಸಂಗತಿ. ಕ್ರಿಕೆಟ್‌ಗಾಗಿ ಎರಡೂ ದೇಶಗಳಲ್ಲಿ ಸಾಕಷ್ಟು ತುಡಿತವಿದೆ. ಅದನ್ನು ನಾವು ಹಾಕಿ ವಿಚಾರದಲ್ಲಿಯೂ ಕಾಣಬಹುದು’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT