ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಮಾನಸಿಕ ಖಿನ್ನತೆ

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಹೆಸರಾಂತ ‘ದಿ ಲ್ಯಾನ್ಸೆಟ್’ ವೈದ್ಯಕೀಯ ನಿಯತಕಾಲಿಕೆ ಕಳೆದ ವಾರ ’ಜಾಗತಿಕ ಅನಾರೋಗ್ಯದ ಹೊರೆ’ಯ ಅಧ್ಯಯನವನ್ನು ಪ್ರಕಟಿಸಿದೆ. ಮನುಷ್ಯರ ಆಯುಸ್ಸು ಎಲ್ಲೆಡೆ ಹೆಚ್ಚಾಗುವಂತೆಯೇ ಅನಾರೋಗ್ಯದ ಹೊರೆಯೂ ಒಂದು ಹೆಜ್ಜೆ ಮುಂದೆ ಇದೆ ಎನ್ನುತ್ತದೆ ಈ ವರದಿ. ಹೃದ್ರೋಗ, ತಂಬಾಕು ಸಂಬಂಧಿತ ಕಾಯಿಲೆಗಳು, ಮಾನವ ಸಂಘರ್ಷಗಳು ಮತ್ತು ಯುದ್ಧಗಳು ಮನುಷ್ಯನ ಆರೋಗ್ಯಕ್ಕೆ ಮಾರಕವಾಗಿರುವುದು ಮತ್ತು ಮಾರಣಾಂತಿಕವಾಗಿರುವುದನ್ನು ಅಲ್ಲಿ ಒತ್ತಿ ಹೇಳಲಾಗಿದೆ.

ಜಗತ್ತಿನಲ್ಲಿ 2016ರಲ್ಲಿದ್ದ 743 ಕೋಟಿ ಜನಸಂಖ್ಯೆಯಲ್ಲಿ 110 ಕೋಟಿ ಜನರು ಒಂದಲ್ಲ ಒಂದು ರೀತಿಯ ಮಾನಸಿಕ ರೋಗದಿಂದ ನರಳಿದ್ದಾರೆ ಎನ್ನುವುದು ವಿಶೇಷವಾಗಿ ಗಮನಿಸುವಂಥದ್ದು. ಇಂತಹ ಗಂಭೀರ ಸಮಸ್ಯೆಗಳಿಗೆ ಭಾರತದಲ್ಲಂತೂ ಅತಿ ಹೆಚ್ಚು ವೈದ್ಯಕೀಯ ಅಸಡ್ಡೆಯನ್ನು ಗಮನಿಸಬಹುದು. 133 ಕೋಟಿ ಜನಸಂಖ್ಯೆಗೆ ಮನೋರೋಗ ಚಿಕಿತ್ಸಕರು (psychiatrist) ಇರುವುದು ಕೇವಲ 5615. ಇನ್ನು ಮನೋವಿಜ್ಞಾನಿಗಳು (psychologist) ಇನ್ನೂ ವಿರಳ.

ಭಾರತದಲ್ಲಿ ಇತ್ತೀಚೆಗೆ ಮಕ್ಕಳಲ್ಲಿ ವಿವಿಧ ರೀತಿಯ ಖಿನ್ನತೆಗಳ ಬಗ್ಗೆ ವರದಿಯಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಅಂರ್ತಜಾಲದಲ್ಲಿ ಆತ್ಮಹತ್ಯೆಗೆ ತಳ್ಳುವಂತಹ ಬ್ಲೂವೇಲ್ ಆಟದ ಬಗ್ಗೆ ಬಹಳಷ್ಟು ದಿನನಿತ್ಯ ವರದಿಗಳಾಗುತ್ತಿವೆ. ಇದರ ವಾಸ್ತವತೆಯ ಬಗ್ಗೆ ಅನೇಕ ಸಂದೇಹಗಳು ಇದ್ದೇ ಇವೆ. ರೋಚಕತೆಯ ಕಾರಣಕ್ಕಾಗಿ ಅಬ್ಬರದ ಪ್ರಚಾರ ನಡೆಯುತ್ತಿದೆ ಎನ್ನಬಹುದು. ಆದರೆ 13ರಿಂದ 17 ವರ್ಷದ ಭಾರತೀಯ ಯುವಕರಲ್ಲಿ ಸುಮಾರು ಒಂದು ಕೋಟಿಯಷ್ಟು ಮಾನಸಿಕ ಖಿನ್ನತೆಯಿಂದ ನರಳುತ್ತಿದ್ದಾರೆಂದು ಬ್ಲೂವೇಲ್ ಕಥೆಯನ್ನೂ ಮೀರಿದ ಗಂಭೀರ ವಿಚಾರವಾಗಿದೆ.

ಹಾಗೆಯೇ ಈ ಎಳೆಯ ಪ್ರಾಯದವರು ಸುಮಾರು 24 ಸಾವಿರ ಜನರು ಪ್ರತಿ ವರ್ಷ ತಮಗೆ ತಾವೇ ಹಾನಿಯನ್ನುಂಟುಮಾಡಿಕೊಂಡು ಸಾವನ್ನಪ್ಪುತ್ತಿದ್ದಾರೆ. ಯುವಕರು ಸಾಮಾನ್ಯವಾಗಿ ಹಿಡಿದ ಅಡ್ಡದಾರಿಯನ್ನು ಯಾವುದೇ ಪರಿಣಾಮ ಮತ್ತು ದುಷ್ಪರಿಣಾಮವನ್ನು ಲಕ್ಕಿಸದೆ ಮುನ್ನುಗ್ಗುವುದು ಸಹಜವಾಗಿರುತ್ತದೆ. ಇದು ಮಕ್ಕಳಿಗೇ ಮಾತ್ರವಲ್ಲದೆ ಮನುಕುಲವೇ ಹಿಡಿದಿರುವ ಹಾದಿ ಎನ್ನಬಹುದು. Our tendency is to pursue the chosen path to our peril.

ಸಾಮಾನ್ಯವಾಗಿ ಸಾವು–ನೋವು ನಮ್ಮ ಬದುಕನ್ನು ನಿರ್ದೇಶಿಸುತ್ತದೆ. ಆದರೆ ಇದನ್ನು ಲೆಕ್ಕಿಸದೆ ನಾವುಗಳು ಮುನ್ನುಗ್ಗುತ್ತಿದ್ದೇವೆ ಎನ್ನಬಹುದು. ಅನೇಕ ದೇಶಗಳಲ್ಲಿ ಗಾಂಜಾ, ಅಫೀಮು ಮತ್ತು ಇತರ ಮಾದಕವಸ್ತುಗಳ ವ್ಯಸನ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವ್ಯಸನಿಗಳಾಗುತ್ತಿದ್ದು ಇಂತಹ ಚಟಕ್ಕೆ ಬಲಿಬಿದ್ದವರಿಗೆ ಹುಟ್ಟುವ ಮಕ್ಕಳಿಗೂ ಆ ವ್ಯಸನದ ಜಾಡು ಗಾಢವಾಗಿ ತಗುಲಿರುತ್ತದೆ.

ಅಂಥವರಿಗೆ ಜನಿಸಿದ ಕೂಸುಗಳಲ್ಲಿಯೂ ಮಾದಕವಸ್ತುಗಳ ದ್ರವ್ಯ ಹೆಚ್ಚಾಗಿ ಕಂಡು ಬಂದಿದೆ. ತಮ್ಮದಲ್ಲದ ತಪ್ಪಿಗಾಗಿ ಆ ಕೂಸುಗಳು ದುರಂತಕ್ಕೆ ತುತ್ತಾಗುತ್ತಿದ್ದಾರೆ. ಹೆತ್ತವರಿಂದ ಹೀಗೆ ಬಳುವಳಿಯಾಗಿ ಬಂದ ವ್ಯಸನದಿಂದ ಹೊರ ತರಲು ಆ ಕೂಸುಗಳನ್ನು ಮೊದಲು ತಾಯಿಯ ಹಾಲಿನಿಂದ ದೂರವಿಡಬೇಕು. ಅನಂತರ ಮಾರ್ಫಿನ್‌ನಂತಹ ಮಾದಕವಸ್ತುಗಳನ್ನು ಕಡಿಮೆ ಪ್ರಮಾಣದಲ್ಲಿ ಕೊಡುತ್ತ ಕ್ರಮೇಣ ಹೊರತರಬೇಕು. ಹೀಗೆ ತಾಯಿಹಾಲನ್ನೂ ಕೊಡದಿರುವುದೇ ಚಿಕಿತ್ಸೆಯಾಗಿರುವುದು ದುರಂತವೇ ಸರಿ.

ರಾಬರ್ಟ್ ಲಸ್ಟಿಗ್ ಇತ್ತೀಚೆಗೆ ’ದಿ ಹ್ಯಾಕಿಂಗ್ ಆಫ್ ದಿ ಅಮೇರಿಕನ್ ಮೈನ್ಡ್’ ಎಂಬ ಪುಸ್ತಕ ಬರೆದಿದ್ದಾನೆ. ಅದರಲ್ಲಿ ಅವನು ನಮ್ಮ ದೇಹ ಮತ್ತು ಮೆದುಳಿನಲ್ಲಿ ಉತ್ಪತ್ತಿಯಾಗುವ ಡೋಪಮೈನ್ ಮತ್ತು ಸೆರೆಟೋನಿನ್ ಎಂಬ ಎರಡು ರಾಸಾಯನಿಕಗಳ ಬಗ್ಗೆ ಉಲ್ಲೇಖಿಸುತ್ತಾನೆ. ಡೋಪಮೈನ್ ತತ್‌ಕ್ಷಣದ ಅಲ್ಪಾವಧಿಯ ಖುಷಿಗೆ ಕಾರಣವಾದರೆ, ಸೆರೆಟೋನಿನ್ ದೀರ್ಘಾವಧಿಯ ಸುಸ್ಥಿರ ಸಂತೋಷಕ್ಕೆ ಮತ್ತು ಆನಂದಕ್ಕೆ ಕಾರಣ ಎನ್ನುತ್ತಾನೆ.

ನಾವು ಇಂದು ಡೋಪಮೈನ್ ಹಿಂದೆ ಬಿದ್ದಿರುವುದು ಮಾನಸಿಕ ಖಿನ್ನತೆಗೆ ಮತ್ತು ದೌರ್ಬಲ್ಯಕ್ಕೆ ಕಾರಣ ಎನ್ನುತ್ತಾನೆ. ಕ್ಷಣಕಾಲದ ಸುಖದ ಹಿಂದೆ ಬಿದ್ದಿದೆ ನಮ್ಮ ಆಹಾರ, ವ್ಯವಹಾರ ಮತ್ತು ಮನೋರಂಜನೆ. ಕ್ಷಣಿಕ ಸುಖಕ್ಕಾಗಿ ನಾವು ಉಪಯೋಗಿಸುವ ವಸ್ತುವನ್ನು ಹೆಚ್ಚಿಸುತ್ತಾ ಹೋದಲ್ಲಿ ಮಾತ್ರ ಆ ಸುಖ ಸಿಗುವಂಥದ್ದು. ಡೋಪಮೈನ್ ಮೆದುಳಿನಿಂದ ಹೊರಹೊಮ್ಮುವ ರಾಸಾಯನಿಕ ವಸ್ತು. ಅದು ಅದರ ಉತ್ಪಾದನೆಗೆ ಕ್ರಮೇಣ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಬೇಡಿಕೆ ಒಡ್ಡುತ್ತದೆ.

ಅದು ಆಹಾರವೇ ಇರಬಹುದು ಅಥವಾ ಮಾದಕ ವಸ್ತುವೇ ಇರಬಹುದು. ಇದೇ ಮುಂದೆ ಚಟವಾಗಿ ಪರಿಣಮಿಸುವುದು. ಇದು ಸತತವಾಗಿ ’ಇಷ್ಟು ಸಾಲದು, ಇನ್ನೂ ಬೇಕು’ ಎನ್ನುವ ಸರಪಳಿ. ಆದರೆ ಲಸ್ಟಿಗ್ ಪ್ರಕಾರ ಸೆರೋಟೋನಿನ್ ರಾಸಾಯನಿಕ ’ನನಗೆ ಇಷ್ಟು ಸಾಕು ಇದು ತೃಪ್ತಿ ತಂದಿದೆ’ ಎನ್ನುವ ಮಾಹಿತಿಯನ್ನು ಒದಗಿಸುವಂಥದ್ದು. ಇನ್ನೂ ಹೆಚ್ಚು ಎಂದರೆ ಹಾನಿ ಎನ್ನುವ ಸೂಚನೆಯನ್ನೂ ಕೊಡುತ್ತದೆ.

ಡೋಪಮೈನ್ ಬೇಡಿಕೆ ಹೆಚ್ಚುಸುವಂತೆ ಮಾಡುವ ಸಾಧನಗಳಲ್ಲಿ ಸಕ್ಕರೆ, ಸಾರಾಯಿ, ತಂಬಾಕು, ಗಾಂಜಾ, ಅಫೀಮುಗಳನ್ನು ಲಸ್ಟಿಗ್ ಪಟ್ಟಿ ಮಾಡುತ್ತಾನೆ. ಸೆರೋಟೊನಿನ್ ಹೆಚ್ಚಿಸುವಲ್ಲಿ ಪರಿಪೂರ್ಣ ಆಹಾರ, ಹಣ್ಣು ತರಕಾರಿ, ವಿಹಾರ, ಮನೋರಂಜನೆಯನ್ನು ಸೇರಿಸುತ್ತಾನೆ. ಹೀಗಾಗಿ ನಮ್ಮನ್ನು ನಾವು ಕ್ಷಣಕಾಲದ ಖುಷಿಗಿಂತ ನಿತ್ಯನಿರಂತರ ಆನಂದದತ್ತ ರೂಢಿಸಿಕೊಳ್ಳುವ ಪ್ರಯತ್ನ ಮಾಡುವುದು ಒಳ್ಳೆಯದು.

ರಘು ಕೆ. ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT