ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತ್ರದಾನ ಎಂಬ ವರದಾನ

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಗೆಳತಿ ಕರೆ ಮಾಡಿ ಕೇಳಿದ್ದಳು, ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅತ್ತೆಯವರು ಈಗಷ್ಟೆ ತೀರಿಕೊಂಡಿದ್ದಾರೆ. ಅವರು ತಮ್ಮ ಕಣ್ಣುಗಳನ್ನು ದಾನ ಮಾಡಬೇಕೆಂದು ಸದಾ ಹೇಳುತ್ತಿದ್ದರು. ಆದರೆ ಅದಕ್ಕೆ ಸಂಬಂಧಿಸಿದ ದಾನಪತ್ರವನ್ನು ಮಾಡಿಸಿಕೊಂಡಿಲ್ಲ. ಈಗ ಅವರ ಕಣ್ಣುಗಳನ್ನು ದಾನ ಮಾಡಲು ಸಾಧ್ಯವೇ..? ನಾನು 'ಖಂಡಿತ ಮಾಡಬಹುದು' ಎಂದು ಹೇಳಿ ಆ ಬಗ್ಗೆ ಸೂಕ್ತ ಮಾಹಿತಿಯನ್ನು ಗೆಳತಿಗೆ ತಿಳಿಸಿದ್ದೆ.

ಹೌದು, ನಮ್ಮ ಮರಣದ ನಂತರವೂ ನಮ್ಮ ಕಣ್ಣುಗಳು ಕುರುಡುತನದಿಂದ ಬಳಲುವ ಎರಡು ಜೀವಗಳಿಗೆ ದೃಷ್ಟಿ ಕೊಡಬಲ್ಲವು; ಇನ್ನೊಬ್ಬರ ಬದುಕಿಗೆ ಬೆಳಕಾಗಬಲ್ಲವು. ಹಾಗಾದರೆ, ನಾವೇಕೆ ಇಂದೇ ನಮ್ಮ ನೇತ್ರಗಳನ್ನು ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಬಾರದು?

ಕುರುಡುತನವು ವ್ಯಕ್ತಿಯ ವೈಯಕ್ತಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಜೀವನದ ಮೇಲೆ ತೀವ್ರತರವಾದ ಪರಿಣಾಮವನ್ನು ಬೀರುತ್ತದೆ. ಕುರುಡುತನಕ್ಕೆ ಕಾರಣಗಳು ಹಲವಾರು. ಕಣ್ಣಿನ ಪೊರೆ(ಕ್ಯಾಟರ‍್ಯಾಕ್ಟ್), ಕಣ್ಣಿನ ಒಳಭಾಗದಲ್ಲಿ ಏರಿದ ಒತ್ತಡ (ಗ್ಲಾಕೋಮ), ಕಣ್ಣಿನ ಒಳಪರದೆ (ರೆಟಿನಾ)ಯಲ್ಲಿನ ದೋಷ ಹಾಗೂ ಕಣ್ಣಿನ ಮುಂಭಾಗಲ್ಲಿರುವ ಪಾರದರ್ಶಕ ಪಟಲದಲ್ಲಿನ(ಕಾರ್ನಿಯ) ದೋಷ - ಇವೇ ಮುಂತಾದುವು ಕುರುಡುತನಕ್ಕೆ ಮುಖ್ಯ ಕಾರಣಗಳು. 

ವಿಶ್ವದಾದ್ಯಂತ ನಲವತ್ತೈದು ದಶಲಕ್ಷಕ್ಕೂ ಹೆಚ್ಚು ಜನರು ಕುರುಡುತನದಿಂದ ಬಳಲುತ್ತಿದ್ದಾರೆ. ಭಾರತದಲ್ಲಿಯೇ ಸುಮಾರು ಹದಿನೈದು ದಶಲಕ್ಷದಷ್ಟು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಸುಮಾರು ಶೇ.75ರಷ್ಟು ಕಾರ್ನಿಯ ದೋಷದಿಂದ ಉಂಟಾಗಿರುವಂತಹದ್ದು ಎನ್ನುತ್ತದೆ, ಅಂಕಿ-ಅಂಶ. ಕಾರ್ನಿಯಾ ದೋಷದಿಂದ ಉಂಟಾದ ಕುರುಡುತನವನ್ನು ಆರೋಗ್ಯವಾಗಿರುವ ಕಾರ್ನಿಯಾದ ಅಳವಡಿಕೆಯಿಂದ ಸರಿ ಪಡಿ ಸಬಹುದು.

ಆದರೆ ಆರೋಗ್ಯವಾಗಿರುವ ಕಾರ್ನಿಯಾವನ್ನು ಕೃತಕವಾಗಿ ತಯಾರಿಸಲು ಆಗುವುದಿಲ್ಲ.  ಇನ್ನೊಬ್ಬ ವ್ಯಕ್ತಿಯಿಂದ ಪಡೆದ ಕಾರ್ನಿಯಾ ಮಾತ್ರ ಈ ಬಗೆಯ ಉಪಯೋಗಕ್ಕೆ ಬರುತ್ತದೆ. ಆದರೆ, ಹೀಗೆ ದಾನಿಗಳಿಂದ ದೊರೆಯುವ ಕಾರ್ನಿಯಾದ ಸಂಖ್ಯೆ ಬಹಳವೇ ಕಡಿಮೆಯಿರುವುದರಿಂದ ಬಹಳಷ್ಟು ಜನರು ಕುರುಡುತನದ ಸಮಸ್ಯೆಯಿಂದ ಮುಕ್ತರಾಗದೆ ಉಳಿದಿದ್ದಾರೆ. ಭಾರತದಲ್ಲಿ ಪ್ರತಿ ವರ್ಷವೂ ಸುಮಾರು ಇಪ್ಪತ್ತು ದಶಲಕ್ಷಗಳಷ್ಟು ಕಾರ್ನಿಯಾದ ಅವಶ್ಯಕತೆಯಿದೆ. ಆದರೆ ದೊರೆಯುತ್ತಿರುವ ಕಾರ್ನಿ ಯಾಗಳು ಕೇವಲ 44,806. ಅದರಲ್ಲಿಯೂ ಶೇ.46ರಷ್ಟು ಮಾತ್ರವೇ ರೋಗಿಗಳ ಜೋಡಣೆಗೆ ಯೋಗ್ಯವಾಗಿರುತ್ತವೆ.

ಹಾಗಾಗಿ, ದಿನದಿಂದ ದಿನಕ್ಕೆ ಕಾರ್ನಿಯಾದ ಅವಶ್ಯಕತೆಯಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ನೇತ್ರದಾನ ಮಾಡುವವರ ಸಂಖ್ಯೆ ಈ ದಿನಗಳಲ್ಲಿ ಹೆಚ್ಚುತ್ತಿದ್ದರೂ ನಮ್ಮ ದೇಶದಲ್ಲಿನ ಬೇಡಿಕೆಯನ್ನು ಪೂರೈಸಲು ಅದು ವಿಫಲವಾಗಿದೆ. ನಮ್ಮ ನೆರೆ ರಾಷ್ಟ್ರ ಶ್ರೀಲಂಕಾವು ಈಗಾಗಲೇ ಜನರಲ್ಲಿ ಈ ನೇತ್ರದಾನದ ಬಗ್ಗೆ ಜಾಗೃತಿಯನ್ನು ಮೂಡಿಸಿದ್ದು ಇಡೀ ವಿಶ್ವಕ್ಕೇ ಮಾದರಿಯಾಗಿದೆ. ವಿಶ್ವದ ಅತ್ತಂತ ಹೆಚ್ಚು ನೇತ್ರದಾನವನ್ನು ಪಡೆಯುವ ದೇಶಗಳಲ್ಲಿ ಶ್ರೀಲಂಕಾವು ಪ್ರಮುಖ ರಾಷ್ಟ್ರವಾಗಿದ್ದು ಜಪಾನ್, ಚೀನಾ ಮುಂತಾದ ಸುಮಾರು 57 ರಾಷ್ಟ್ರಗಳಿಗೆ ತಾನು ಸಂಗ್ರಹಿಸಿದ ಕಣ್ಣುಗಳನ್ನು ರೋಗಿಗಳಿಗೆ ಅಳವಡಿಸಲು ಕೊಡುತ್ತಿದೆ.

ಯಾರು ನೇತ್ರ ದಾನ ಮಾಡಬಹುದು?

* ಪ್ರತಿಯೊಬ್ಬರೂ ತಮ್ಮ ಮರಣದ ನಂತರ ನೇತ್ರದಾನವನ್ನು ಮಾಡಬಹುದು. ಯಾವುದೇ ವಯಸ್ಸಿನ ಹಾಗೂ ಯಾವುದೇ ರಕ್ತದ ಗುಂಪಿನ ಮಹಿಳೆಯರೂ ಪುರುಷರೂ ನೇತ್ರದಾನ ಮಾಡಬಹುದು.

* ಮಧುಮೇಹ ಅಥವಾ ರಕ್ತದೊತ್ತಡದಿಂದ ಬಳಲಿದ್ದ ವ್ಯಕ್ತಿಯೂ ನೇತ್ರದಾನ ಮಾಡಬಹುದು.

* ಕಣ್ಣಿನ ದೋಷಕ್ಕಾಗಿ ಕನ್ನಡಕ ಧರಿಸುವವರೂ ನೇತ್ರದಾನ ಮಾಡಬಹುದು.

*ಜೀವಿತಾವಧಿಯಲ್ಲಿ ಕಣ್ಣಿನ ಪೊರೆ ಅಥವಾ ಇನ್ನ್ಯಾವುದೇ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದವರೂ ತಮ್ಮ ಕಣ್ಣುಗಳನ್ನು ದಾನ ಮಾಡಬಹುದು.

ವ್ಯಕ್ತಿಯ ಮರಣಾನಂತರ ಕುಟುಂಬ ಸದಸ್ಯರು ಮಾಡಬೇಕಾದುದೇನು?
ವ್ಯಕ್ತಿಯ ಮರಣದ ನಂತರ ಆದಷ್ಟು ಬೇಗನೇ ಆತ ಅಥವಾ ಆಕೆ ನೊಂದಾಯಿಸಿದ ನೇತ್ರ ಭಂಡಾರಕ್ಕೆ ದೂರವಾಣಿ ಕರೆಯನ್ನು ಮಾಡಬೇಕು. ಏಕೆಂದರೆ, ಸಾವು ಸಂಭವಿಸಿದ ಕನಿಷ್ಠ ಆರರಿಂದ ಎಂಟು ಗಂಟೆಗಳೊಳಗಾಗಿ ನೇತ್ರದಾನದ ಪ್ರಕ್ರಿಯೆ ನಡೆಯಬೇಕು. ಒಂದು ವೇಳೆ, ವ್ಯಕ್ತಿಯು ನೇತ್ರ ಭಂಡಾರದಲ್ಲಿ ಹೆಸರನ್ನು ನೊಂದಾಯಿಸದೇ ಇದ್ದರೂ ಕುಟುಂಬ ಸದಸ್ಯರ ಇಚ್ಛೆ ಹಾಗೂ ಒಪ್ಪಿಗೆಯ ಮೇರೆಗೆ ನೇತ್ರದಾನ ಮಾಡಬಹುದು.

* ಮೃತದೇಹದ ಕಣ್ಣುಗಳ ಮೇಲೆ ತೇವಾಂಶವಿರುವ ಹತ್ತಿಯನ್ನು ಇರಿಸಿರಿ.

* ಮೃತದೇಹದ ಮೇಲೆ ನೇರವಾಗಿ ಪಂಕ (ಫ್ಯಾನ್) ತಿರುಗುತ್ತಿದ್ದರೆ ಅದನ್ನು ನಿಲ್ಲಿಸಿ.

* ಸಾಧ್ಯವಾದಲ್ಲಿ, ಮೃತದೇಹದ ಕುತ್ತಿಗೆ ಮತ್ತು ತಲೆಯ ಭಾಗವು ಸ್ವಲ್ಪ (ಆರು ಇಂಚುಗಳಷ್ಟು) ಎತ್ತರದಲ್ಲಿರುವಂತೆ ಇಟ್ಟರೆ ಒಳ್ಳೆಯದು.

* ನಿಮಗೆ ಲಭ್ಯವಿದ್ದರೆ ಯಾವುದಾದರೂ ಆಂಟಿಬಯಾಟಿಕ್ ಔಷಧದ ಹನಿಗಳನ್ನು ಅರ್ಧ ತಾಸಿಗೊಮ್ಮೆ ಕಣ್ಣಗಳಿಗೆ ಹಾಕಿರಿ. ಇದು ಕಣ್ಣುಗಳಿಗೆ ಸೋಂಕು ತಗಲದಂತೆ ಕಾಪಾಡುತ್ತದೆ.

ಈ ರೀತಿಯಾಗಿ ಮೃತದೇಹದಿಂದ ಸಂಗ್ರಹಿಸಿದ ಕಾರ್ನಿಯಾವನ್ನು ವಿಶೇಷವಾದ ದ್ರವದಲ್ಲಿ ಇರಿಸಲಾಗುತ್ತದೆ. ಸಂಗ್ರಹಿಸಿದ ಎರಡು ವಾರಗಳ ಒಳಗಾಗಿ ಕುರುಡುತನದಿಂದ ಬಳಲುವ ವ್ಯಕ್ತಿಗೆ ಅದನ್ನು ಅಳವಡಿಸಲಾಗುತ್ತದೆ. ಯಾವ ವ್ಯಕ್ತಿಯ ಕಾರ್ನಿಯಾವನ್ನು ರೋಗಿಗೆ ಅಳವಡಿಸಲಾಗಿದೆ ಎಂಬುದನ್ನು ಗೌಪ್ಯವಾಗಿ ಇಡಲಾಗುತ್ತದೆ.

ಭಾರತದಲ್ಲಿನ ನೇತ್ರ ಭಂಡಾರಗಳ ಒಕ್ಕೂಟವು ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡುತ್ತಿದೆ. ಈ ಕಾರ್ಯಕ್ಕೆ ತಂತ್ರಜ್ಞರನ್ನು ನೇಮಿಸಿ, ಅವರಿಗೆ ಈ ಬಗ್ಗೆ ತರಬೇತಿಯನ್ನು ಕೊಡುತ್ತಿದೆ. ರಾಷ್ಟ್ರದಾದ್ಯಂತ ಸಾರ್ವಜನಿಕರಿಗೆ ಉಚಿತವಾಗಿ ಈ ಸೇವೆಯನ್ನು ಒದಗಿಸಿಕೊಡುತ್ತಿದೆ.

ಭಾರತದಾದ್ಯಂತ ಲಭ್ಯವಿರುವ ಉಚಿತ ದೂರವಾಣಿ ಸಂಖ್ಯೆ 1919ಕ್ಕೆ ಕರೆ ಮಾಡಿ ನೇತ್ರ ಭಂಡಾರಗಳ ಸಹಾಯ ಪಡೆಯಬಹುದು. ನೀವು ವಿಷಯ ತಿಳಿಸಿ ಸ್ವಲ್ಪ ಸಮಯದೊಳಗಾಗಿ ನಿಮ್ಮ ಹತ್ತಿರದ ನೇತ್ರ ಭಂಡಾರದಿಂದ ನೇತ್ರದಾನದಲ್ಲಿ ಪರಿಣತಿ ಹೊಂದಿರುವ ತಂಡವು ನಿಮ್ಮಲ್ಲಿಗೆ ಬಂದು ಉಚಿತ ಸೇವೆಯನ್ನು ಒದಗಿಸಿಕೊಡುವುದು. ಬನ್ನಿ, ನಮ್ಮ ಮರಣದ ನಂತರ ಮಣ್ಣಿನಲ್ಲಿ ಮಣ್ಣಾಗುವ ಕಣ್ಣುಗಳನ್ನು ದಾನ ಮಾಡುವ ಪ್ರತಿಜ್ಞೆ ಮಾಡೋಣ, ಮತ್ತೊಬ್ಬರ ಬದುಕಿಗೆ ಬೆಳಕಾಗೋಣ.

ನೇತ್ರದಾನ ಮಾಡಲಿಚ್ಚಿಸುವವರು ಮಾಡಬೇಕಾದುದೇನು..?
ನಿಮ್ಮ ಹತ್ತಿರದ ನೇತ್ರ ಭಂಡಾರದಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿರಬೇಕು. ಅಲ್ಲಿ ಅವರು ಕೊಡುವ ನೇತ್ರದಾನದ ಪ್ರತಿಜ್ಞಾಪತ್ರದಲ್ಲಿ ನಿಮ್ಮ ಸಂಪೂರ್ಣ ವಿವರಗಳನ್ನು ಬರೆದು, ನಿಮ್ಮ ಸಹಿ ಹಾಕಬೇಕು. ಜೊತೆಯಲ್ಲಿಯೇ ಇಬ್ಬರು ಸಾಕ್ಷಿಗಳ ಸಹಿಯೂ ಇರಬೇಕು. ನೇತ್ರ ಭಂಡಾರದಿಂದ ನಿಮಗೆ ದಾನಿಗಳ ಚೀಟಿಯನ್ನು ಕೊಡಲಾಗುತ್ತದೆ.

ಈ ಚೀಟಿಯನ್ನು ನೀವು ಸದಾ ನಿಮ್ಮ ಬಳಿ ಇರಿಸಿಕೊಂಡಿರಬೇಕು. ಅಥವಾ ಮನೆಯಲ್ಲಿ, ಕುಟುಂಬದ ಸದಸ್ಯರಿಗೆ ಸುಲಭದಲ್ಲಿ ದೊರಕುವಂತಹ ಸ್ಥಳದಲ್ಲಿ ಇರಿಸಿರಬೇಕು. ನಿಮ್ಮ ಹತ್ತಿರದ ಸಂಬಂಧಿಕರಲ್ಲಿ/ ಕುಟುಂಬ ಸದಸ್ಯರಲ್ಲಿ ನಿಮ್ಮ ನೇತ್ರದಾನದ ಒಲವನ್ನು ಮೊದಲೇ ತಿಳಿಸಿರಬೇಕು. ಏಕೆಂದರೆ, ಅವರ ಸಹಕಾರವಿಲ್ಲದೆ ನೇತ್ರದಾನ ಅಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT