ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ನವರಾತ್ರಿಗೆ ಸಿಹಿಯ ಸವಿ

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವರಾತ್ರಿ ಸಂಭ್ರಮದ ಹಬ್ಬ. ದೇಶದಾದ್ಯಂತ ಈ ಹಬ್ಬವನ್ನು ಆಚರಿಸುತ್ತಾರೆ. ದುರ್ಗಾಮಾತೆಯ ನೈವೇದ್ಯಕ್ಕಾಗಿ ದಿನವೂ ಬಗೆ ಬಗೆಯ ಸಿಹಿತಿಂಡಿಯನ್ನು ತಯಾರಿಸುವುದುಂಟು. ದಸರಾಹಬ್ಬದಲ್ಲಿ ವಿಶೇಷವಾಗಿ ತಯಾರಿಸಬಹುದಾದ ಖಾದ್ಯಗಳು ಇಲ್ಲಿವೆ.

ಬೆಲ್ಲದ ದೋಸೆ
ಬೇಕಾಗುವ ಸಾಮಗ್ರಿಗಳು
ಬೆಲ್ಲ – 1/4 ಕಪ್‌
ಅಕ್ಕಿಹಿಟ್ಟು – 1/4 ಕಪ್‌
ಗೋಧಿಹಿಟ್ಟು – 1/4 ಕಪ್‌
ಉಪ್ಪು – ಚಿಟಿಕೆ
ಕೇಸರಿದಳ – ಸ್ವಲ್ಪ
ನೀರು – 1/2 ಕಪ್‌
ತುಪ್ಪ

ತಯಾರಿಸುವ ವಿಧಾನ:
ಮೊದಲು ಒಂದು ಪಾತ್ರೆಯಲ್ಲಿ ಬೆಲ್ಲ, ಕೇಸರಿದಳ ಮತ್ತು ನೀರು ಸೇರಿಸಿ, ಚೆನ್ನಾಗಿ ಕುದಿಸಿ. ಬೆಲ್ಲ ನೀರಿನಲ್ಲಿ ಕರಗಿದ ಮೇಲೆ ತಣಿಯಲು ಬಿಡಿ. ತಣಿದ ನಂತರ ಗೋಧಿಹಿಟ್ಟು ಮತ್ತು ಅಕ್ಕಿಹಿಟ್ಟನ್ನು ನಿಧಾನಕ್ಕೆ ಬೆಲ್ಲದ ಪಾಕಕ್ಕೆ ಹಾಕಿ, ಉಂಡೆಯಾಗದಂತೆ ಮಗುಚುತ್ತಿರಿ. ಹಿಟ್ಟು ಹಾಗೂ ಬೆಲ್ಲದ ಪಾಕದ ಮಿಶ್ರಣ ಸಾಮಾನ್ಯ ದೋಸೆಹಿಟ್ಟಿಗಿಂತ ಸ್ವಲ್ಪ ದಪ್ಪವಾಗಿರಬೇಕು. ಆದರೆ ದೋಸೆ ಹಾಕಲು ಸಾಧ್ಯವಾಗುವಂತಿರಬೇಕು.

ಗ್ಯಾಸ್ ಮೇಲೆ ನಾನ್ ಸ್ಟಿಕ್ ತವಾ ಇಟ್ಟು ಬಿಸಿ ಮಾಡಿ, ತುಪ್ಪ ಹಚ್ಚಿ. ನಂತರ ಸೌಟಿನಲ್ಲಿ ದೋಸೆಹಿಟ್ಟನ್ನು ತೆಗದು ತವಾದ ಮೇಲೆ ಹಾಕಿ ಸ್ವಲ್ಪವೇ ಅಗಲ ಮಾಡಿ. ದೋಸೆ ಒಂದು ಕಡೆ ಬೆಂದ ಮೇಲೆ, ಇನ್ನೊಂದು ಕಡೆ ಮಗುಚಿ ಬಿಸಿಯಿದ್ದಾಗಲೇ ತಿನ್ನಲು ಕೊಡಿ.

ಸಾಬುದಾನಿ ಕಿಚಡಿ
ಬೇಕಾಗುವ ಸಾಮಗ್ರಿಗಳು
ಸಾಬುದಾನಿ – 1 ಕಪ್‌
ಸಕ್ಕರೆ – 1/2 ಕಪ್‌
ಕತ್ತರಿಸಿದ ಹಸಿಮೆಣಸು – 2
ಶೆಂಗಾಬೀಜ – 1/2 ಕಪ್‌
ಬೇಯಿಸಿ ಕತ್ತರಿಸಿದ ಆಲೂಗಡ್ಡೆ – 1
ಎಣ್ಣೆ – 1 ಟೇಬಲ್ ಚಮಚ
ಸಾಸಿವೆ – 1/4 ಟೇಬಲ್ ಚಮಚ
ಇಂಗು – ಚಿಟಿಕೆ
ತೆಂಗಿನತುರಿ – 2 ಟೇಬಲ್ ಚಮಚ
ಉಪ್ಪು – ರುಚಿಗೆ
ಕೊತ್ತುಂಬರಿ ಸೊ‍ಪ್ಪು, ಕರಿಬೇವು – ಸ್ವಲ್ಪ

ತಯಾರಿಸುವ ವಿಧಾನ:
ಸಾಬುದಾನಿಯನ್ನು ಚೆನ್ನಾಗಿ ತೊಳೆದು 2 ಗಂಟೆ ನೀರಿನಲ್ಲಿ ನೆನೆಸಿಡಿ. ಆಲೂಗಡ್ಡೆಯನ್ನು ಚಿಕ್ಕದಾಗಿ ಕತ್ತರಿಸಿ, ಅದಕ್ಕೆ ಪುಡಿ ಮಾಡಿದ ಶೇಂಗಾ ಬೀಜ, ಸಕ್ಕರೆ ಮತ್ತು ಉಪ್ಪು ಸೇರಿಸಿ. ಪಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ ಹಾಕಿ. ಸಾಸಿವೆ ಸಿಡಿದ ಮೇಲೆ ಅದಕ್ಕೆ ಜೀರಿಗೆ, ಹಸಿಮೆಣಸು ಮತ್ತು ಕರಿಬೇವು ಹಾಕಿ. ನಂತರ ಅದಕ್ಕೆ ಆಲೂಗಡ್ಡೆ ಮಿಶ್ರಣವನ್ನು ಹಾಕಿ ಚೆನ್ನಾಗಿ ಹುರಿಯಿರಿ. ಆಲೂಗಡ್ಡೆ ಚೆನ್ನಾಗಿ ಬೆಂದ ಮೇಲೆ ಅದಕ್ಕೆ ಸಾಬುದಾನಿಯನ್ನು ಸೇರಿಸಿ ಮಿಕ್ಸ್ ಮಾಡಿ. ನಂತರ ಅದಕ್ಕೆ ತೆಂಗಿನತುರಿ ಸೇರಿಸಿ ಮಿಕ್ಸ್ ಮಾಡಿ. ಆಮೇಲೆ ಕೊತ್ತುಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ. ನಂತರ ಬೇಕಿದ್ದರೆ ನಾಲ್ಕು ಹನಿ ನಿಂಬೆರಸ ಚುಮುಕಿಸಿ. ಈಗ ಸಾಬುದಾನಿ ಕಿಚಡಿ ರೆಡಿ. ಉತ್ತರಭಾರತದಲ್ಲಿ ಹಬ್ಬದ ಸಂದರ್ಭದಲ್ಲಿ ತಯಾರಿಸಲಾಗುವ ತಿಂಡಿ.

ಬಾದುಶಾ
ಬೇಕಾಗುವ ಸಾಮಗ್ರಿಗಳು
ಮೈದಾಹಿಟ್ಟು – 1 ಕಪ್‌
ಮೊಸರು – 1/2 ಕಪ್‌
ತುಪ್ಪ– 2 ಟೇಬಲ್ ಚಮಚ
ಅಡುಗೆಸೋಡ – ಚಿಟಿಕೆ
ಸಕ್ಕರೆ –1ಕಪ್‌
ನೀರು – 1 ಕಪ್‌ಏಲಕ್ಕಿಪುಡಿ – ಚಿಟಿಕೆ
ಎಣ್ಣೆ

ತಯಾರಿಸುವ ವಿಧಾನ
ಒಂದು ಪಾತ್ರೆಯಲ್ಲಿ ಮೊಸರು, ತುಪ್ಪ ಮತ್ತು ಅಡುಗೆಸೋಡಾಗಳನ್ನು ಸೇರಿಸಿ ಕಲೆಸಿ. ಅನಂತರ ಅಗಲ ಬಾಯಿಯ ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೈದಾಹಿಟ್ಟು ಹಾಕಿ. ನಂತರ ಮೈದಾಹಿಟ್ಟಿಗೆ ಮೊಸರಿನ ಮಿಶ್ರಣ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ನಾದಿ. ನಾದಿದ ಹಿಟ್ಟನ್ನು 10 ನಿಮಿಷ ಹಾಗೇ ಇಡಿ. ನಂತರ ಪಾತ್ರೆಯೊಂದರಲ್ಲಿ ನೀರು ಹಾಗೂ ಸಕ್ಕರೆ ಸೇರಿಸಿ ಕುದಿಯಲು ಬಿಡಿ. ಗ್ಯಾಸ್ ಅನ್ನು ಮೀಡಿಯಂ ಉರಿಯಲ್ಲಿ ಇಟ್ಟು ಸಕ್ಕರೆಯನ್ನು ನೀರಿನಲ್ಲಿ ಕರಗಲು ಬಿಡಿ.

ಸಕ್ಕರೆ ಕರಗಿ ಪಾಕ ಆಗಿದೆ ಅನ್ನಿಸಿದಾಗ ಗ್ಯಾಸ್ ಆರಿಸಿ, ಸಕ್ಕರೆ ಪಾಕಕ್ಕೆ ಏಲಕ್ಕಿಪುಡಿ ಸೇರಿಸಿ. ನಂತರ ನಾದಿ ಇಟ್ಟ ಹಿಟ್ಟನ್ನು ಸ್ವಲ್ಪ ತೆಗೆದುಕೊಂಡು ಉಂಡೆ ಮಾಡಿ. ಆ ಉಂಡೆಯನ್ನು ಅರ್ಧ ಅಂಗೈ ಅಗಲಕ್ಕೆ ತಟ್ಟಿ. ನಂತರ ಪಾನ್ ಒಂದರಲ್ಲಿ ಎಣ್ಣೆ ಹಾಕಿ ಎಣ್ಣೆ ಬಿಸಿ ಮಾಡಿ. ಎಣ್ಣೆ ಕಾದಿದೆ ಎಂದೆನಿಸಿದಾಗ ಅದಕ್ಕೆ ತಟ್ಟಿದ ಉಂಡೆಯನ್ನು ಹಾಕಿ. ತಟ್ಟಿದ ಉಂಡೆ ಎಣ್ಣೆಯಲ್ಲಿ ಕರಿದು ಹೊಂಬಣ್ಣಕ್ಕೆ ತಿರುಗಿದಾಗ ಎಣ್ಣೆಯಿಂದ ತೆಗದು 2ರಿಂದ 3 ನಿಮಿಷ ಒಂದು ತಟ್ಟೆಯಲ್ಲಿ ಹಾಕಿಡಿ. ನಂತರ ಅದನ್ನು ಸಕ್ಕರೆಪಾಕಕ್ಕೆ ಹಾಕಿ, ರಾತ್ರಿಯಿಡಿ ಸಕ್ಕರೆಪಾಕದಲ್ಲಿಡಿ. ನಂತರ ಅದನ್ನು ತೆಗದು ಒಣಹಣ್ಣುಗಳಿಂದ ಸಿಂಗರಿಸಿ.

ಮೈದಾ ಬರ್ಫಿ
ಬೇಕಾಗುವ ಸಾಮಗ್ರಿಗಳು
ಮೈದಾ – 1/2 ಕಪ್‌, ಸಕ್ಕರೆ – 1 ಕಪ್‌, ನೀರು –1/2 ಕಪ್‌, ತುಪ್ಪ– 1/4 ಕಪ್‌, ಏಲಕ್ಕಿಪುಡಿ – ಚಿಟಿಕೆ, ಕಲರ್ ಪುಡಿ – ಚಿಟಿಕೆ, ಚೆನ್ನಾಗಿ ಪುಡಿ ಮಾಡಿದ ಗೋಡಂಬಿ – 1 ಟೇಬಲ್ ಚಮಚ

ತಯಾರಿಸುವ ವಿಧಾನ:
ಮೊದಲು ಪಾತ್ರೆಯೊಂದರಲ್ಲಿ ತುಪ್ಪ ಹಾಕಿ ಬಿಸಿ ಮಾಡಿ. ನಂತರ ಉರಿ ಕಡಿಮೆ ಮಾಡಿ ಆ ತುಪ್ಪಕ್ಕೆ ಮೈದಾಹಿಟ್ಟು ಸೇರಿಸಿ. ಮೈದಾಹಿಟ್ಟು ಮರಳಿನಂತೆ ಆಗುವವರೆಗೂ ತುಪ್ಪದಲ್ಲಿ ಮಿಕ್ಸ್ ಮಾಡಿ. ನಂತರ ಗ್ಯಾಸ್ ಆರಿಸಿ, ನಂತರ ಪಾತ್ರೆ ಅಥವಾ ಪ್ಲೇಟ್ ಒಂದರ ಮೇಲೆ ತುಪ್ಪ ಹಚ್ಚಿ ಹುರಿದ ಮೈದಾಹಿಟ್ಟನ್ನು ಹಾಕಿ. ನಂತರ ಪಾನ್‌ನಲ್ಲಿ ನೀರು, ಸಕ್ಕರೆ ಹಾಕಿ ಕುದಿಯಲು ಬಿಡಿ. ಸಕ್ಕರೆ ನೀರಿನಲ್ಲಿ ಕರಗಿ ಪಾಕದ ರೂಪಕ್ಕೆ ಬರುತ್ತದೆ. ದಪ್ಪದ ಪಾಕ ತಯಾರಾಗುವವರೆಗೂ ಚೆನ್ನಾಗಿ ಕುದಿಸಿ. ಪಾಕ ಎರಡು ಬೆರಳುಗಳ ನಡುವೆ ಅಂಟುವಂತಿರಬೇಕು, ಆಗ ಆ ಪಾಕಕ್ಕೆ ಕಲರ್‌ಪುಡಿ, ಎಲಕ್ಕಿಪುಡಿ ಮತ್ತು ಗೊಡಂಬಿ ಚೂರು, ಮೈದಾಹಿಟ್ಟು ಸೇರಿಸಿ ಗ್ಯಾಸ್ ಆರಿಸಿ. ನಂತರ ಅವೆಲ್ಲವನ್ನು ಚೆನ್ನಾಗಿ ಮಿಕ್ಸ್‌ ಮಾಡಿ, ನಂತರ ಸಣ್ಣ ಉರಿಯಲ್ಲಿ ಮೈದಾಹಿಟ್ಟಿನ ಮಿಶ್ರಣವನ್ನು ಸ್ವಲ್ಪ ಗಟ್ಟಿಯಾಗುವವರೆಗೂ ಮಿಕ್ಸ್ ಮಾಡಿ. ನಂತರ ತುಪ್ಪ ಸವರಿದ ಪಾತ್ರೆಯೊಂದಕ್ಕೆ ಆ ಮಿಶ್ರಣವನ್ನು ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ ಗಟ್ಟಿಯಾಗಲು ಬಿಡಿ. ಈಗ ಮೈದಾ ಬರ್ಫಿ ತಿನ್ನಲು ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT