ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರೀಶಕ್ತಿಯ ನವರಾತ್ರಿ

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಶ್ರೀ ಹೇಮಲಂಬಿ ಸಂವತ್ಸರದ ವರ್ಷಋತುವು ಕಳೆದು ಶರತ್ಕಾಲವು ಆರಂಭವಾಗಿದೆ. ವಸಂತಋತುವಿನ ಆರಂಭದಂತೆ ಶರತ್ಕಾಲವಾದರೂ ನವರಾತ್ರಿಯ ಸಡಗರದ ಸಮಯವೇ ಆಗಿದೆ. ನವರಾತ್ರಿಯನ್ನು ಸ್ತ್ರೀಪುರುಷ ಭೇದವಿಲ್ಲದೆ ಆಬಾಲವೃದ್ಧರೆಲ್ಲರೂ ಆಚರಿಸುತ್ತಾರೆ. ಅದನ್ನು ಎಲ್ಲರೂ ತಪ್ಪದೇ ಆಚರಿಸಬೇಕೆಂದು ಶ್ರೀ ದೇವೀಭಾಗವತ ಪುರಾಣ(3.26)ವು ಒತ್ತಾಯಿಸುತ್ತದೆ. ಆಸ್ತಿಕ ಸಮಾಜವು ಅನಾದಿ ಕಾಲದಿಂದಲೂ ಅದನ್ನು ಅನುಸರಿಸಿಕೊಂಡು ಬಂದಿದೆ.

ಸ್ತ್ರೀಪ್ರಾಧಾನ್ಯ
ನವರಾತ್ರಿಯ ಆಚರಣೆಯಲ್ಲಿ ಸ್ತ್ರೀಯರ ಪಾತ್ರ ಬಹು ಮುಖ್ಯವಾದುದು. ಎಲ್ಲರೂ ಒಟ್ಟಿಗೆ ಈ ಉತ್ಸವದ ಸಂಭ್ರಮದಲ್ಲಿ ಸಂತೋಷಿಸಿದರೂ ಅದರಲ್ಲಿ ಸ್ತ್ರೀಯರ ಪಾಲು ಹೆಚ್ಚು. ಇಲ್ಲಿ ಸ್ತ್ರೀಯರು ಪೂಜಿಸುವವರಷ್ಟೇ ಅಲ್ಲ, ಪೂಜ್ಯರೂ ಆಗಿರುತ್ತಾರೆ. ಬೆಳಗಿನಿಂದ ಸಂಜೆಯವರೆಗೆ ಸಿದ್ಧತೆಯನ್ನು ಮಾಡುವವರೂ ಅವರೇ, ಪೂಜೆಯಲ್ಲಿ ಪಾಲ್ಗೊಂಡು ಪೂಜೆಯನ್ನು ಪಡೆಯುವವರೂ ಅವರೇ. ಇದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆಯಲ್ಲದೆ ಪುರಾಣ ಪ್ರಾಮಾಣ್ಯವನ್ನೂ ಹೊಂದಿದೆ.

ಗ್ರಂಥ ಪ್ರಾಮಾಣ್ಯ
ಸುಪ್ರಸಿದ್ಧವಾದ ಶ್ರೀಲಲಿತಾ ಸಹಸ್ರನಾಮಗಳಲ್ಲಿ ಶ್ರೀಮಾತೆಯಾದ ಶ್ರೀದೇವಿಯನ್ನು ಸುವಾಸಿನಿಯೆನ್ನಲಾಗಿದೆ (970). ಬಾಲಾ (965) ತರುಣೀ (358) ರಮಣೀ (310) ಮಾತಾ (456) ಎಂಬ ನಾಮವೂ ಅಲ್ಲಿದೆ. ಸುವಾಸಿನಿಯರನ್ನು ಪೂಜಿಸಿದರೆ ಶ್ರೀದೇವಿಯು ಸಂತುಷ್ಟಳಾಗುವಳೆಂದು ಹೇಳಿದೆ (971). ಶ್ರೀದೇವೀ ಮಹಾತ್ಮ್ಯಾದಲ್ಲಿ(11.5)ಯೂ, ಸ್ತ್ರೀಯರೆಲ್ಲರೂ ಶ್ರೀದೇವಿಯೇ ಎಂದು ಬಣ್ಣಿಸಲಾಗಿದೆ. ಮುಂದೆ ರಹಸ್ಯತ್ರಯದಲ್ಲಿ ಶ್ರೀದೇವಿಯೇ ಸಮಸ್ತ ಜಗತ್ತನ್ನೂ ವ್ಯಾಪಿಸಿದ್ದಾಳೆ ಎನ್ನಲಾಗಿದೆ.

ಸ್ತೋತ್ರಪಾಠ
ಸಪ್ತಶತಿಯ ಭಗವತೀವಾಕ್ಯದಲ್ಲಿ ಜಗನ್ಮಾತೆಯು ಹೇಳುವಂತೆ, ಶರತ್ಕಾಲದಲ್ಲಿಯೂ ವರ್ಷದ ಆದಿಯಲ್ಲಿಯೂ ಮಹಾಪೂಜೆಯನ್ನು ಮಾಡುವಾಗ ದೇವೀ ಮಾಹಾತ್ಮ್ಯಾವನ್ನು ಭಕ್ತಿಯಿಂದ ಕೇಳಿದವನಿಗೆ ಎಲ್ಲ ತೊಂದರೆಗಳಿಂದಲೂ ಮುಕ್ತಿ ದೊರೆಯುತ್ತದೆ, ಧನಧಾನ್ಯಗಳು ಉಂಟಾಗುತ್ತವೆ. ಈ ವಿಷಯದಲ್ಲಿ ಸಂಶಯವಿಲ್ಲ (12.11). ಈ ಮಾತನ್ನು ಅನುಸರಿಸಿ ಸಪ್ತಶತಿಯ ಪಾರಾಯಣವನ್ನು ವಿಧಿವತ್ತಾಗಿ ಮಾಡಲಾಗುತ್ತದೆ.

ಶ್ರೀನವಚಂಡಿ
ಶ್ರೀದೇವೀ ಮಾಹಾತ್ಮ್ಯಾದಲ್ಲಿ ಅಂದರೆ ದುರ್ಗಾಸಪ್ತಶತಿಯಲ್ಲಿ ಶ್ರೀದೇವಿಯ ಹಲವಾರು ರೂಪಗಳ ವರ್ಣನೆಯಿದೆ. ಅವುಗಳನ್ನೇ ನವರಾತ್ರಿಯ ದಿನಗಳಲ್ಲಿ ಪೂಜಿಸುವುದುಂಟು. ಮೊದಲನೆಯ ದಿನ ಯೋಗನಿದ್ರೆಯನ್ನೂ ಎರಡನೆಯ ದಿನ ದೇವಜಾತೆಯನ್ನೂ ಮೂರನೆಯ ದಿನ ಮಹಿಷಮರ್ದಿನಿಯನ್ನೂ ನಾಲ್ಕನೆಯ ದಿನ ಶೈಲಜೆಯನ್ನೂ ಐದನೆಯ ದಿನ ಧೂಮ್ರಘಾತಿನಿಯನ್ನೂ ಆರನೆಯ ದಿನ ಚಂಡಮುಂಡಘಾತಿನಿಯನ್ನೂ ಏಳನೆಯ ದಿನ ರಕ್ತಬೀಜಘಾತಿನಿಯನ್ನೂ ಎಂಟನೆಯ ದಿನ ನಿಶುಂಭ ಘಾತಿನಿಯನ್ನೂ ಒಂಬತ್ತನೆಯ ದಿನ ಶುಂಭಘಾತಿನಿಯನ್ನೂ ಪೂಜಿಸುತ್ತಾರೆ. ಈ ದೇವಿಯರ ಕಥೆಗಳು ಕ್ರಮವಾಗಿಯೇ ಸಪ್ತಶತಿಯಲ್ಲಿ ಬರುತ್ತವೆ. ದುಷ್ಟಪುರುಷರ ನಿಗ್ರಹವೇ ಈ ಕಥೆಗಳಲ್ಲಿ ಪ್ರಧಾನ ವಸ್ತುವಾಗಿದೆ.

ಮಾತೃಕೆಯರು
ಶ್ರೀದೇವೀ ಮಾಹಾತ್ಮ್ಯಾದಲ್ಲಿಯೇ ಬ್ರಾಹ್ಮೀ ಮಾಹೇಶ್ವರೀ ಕೌಮಾರೀ ವೈಷ್ಣವೀ ವಾರಾಹೀ ಇಂದ್ರಾಣೀ ಚಾಮುಂಡಾ – ಎಂಬ ಸಪ್ತ ಮಾತೃಕೆಯರ ಉಲ್ಲೇಖವೂ ಇದೆ. ಈ ಮಾತೃಕೆಯರು ಸುಪ್ರಸಿದ್ಧರಾದ ಬ್ರಹ್ಮ ಮಹೇಶ್ವರ ಕುಮಾರ ವಿಷ್ಣು ವರಾಹ ಇಂದ್ರ – ದೇವಾನುದೇವತೆಗಳ ಶಕ್ತಿಗಳು ಎನ್ನಲಾಗಿದೆ. ಕಾಲಿಕಾ ಕೌಶಿಕೀ ನಾರಸಿಂಹೀ ಎಂಬ ಶಕ್ತಿದೇವತೆಗಳೂ ಅಲ್ಲಿಯೇ ಉಕ್ತವಾಗಿವೆ.

ಶ್ರೀನವದುರ್ಗೆಯರು
ನವರಾತ್ರಿಯನ್ನು ನವದುರ್ಗೆಯರ ಪೂಜೆಯೆಂದೂ ಹೇಳುವುದುಂಟು. ಶೈಲಪುತ್ರೀ ಬ್ರಹ್ಮಚಾರಿಣೀ ಚಂಡಘಂಟಾ ಕೂಷ್ಮಾಂಡಾ ಸ್ಕಂದಮಾತಾ ಕಾತ್ಯಾಯನೀ ಕಾಲರಾತ್ರಿ ಮಹಾಗೌರೀ ಸಿದ್ಧಿದಾತ್ರೀ – ಎಂಬ ನವ ದುರ್ಗೆಯರನ್ನು ಪೂಜಿಸುವ ಕ್ರಮವು ಅಲ್ಲಲ್ಲಿ ರೂಢಿಯಲ್ಲಿದೆ. ಇವುಗಳೆಲ್ಲವೂ ಹೈಮವತೀ ಪಾರ್ವತಿಯ ರೂಪಗಳೇ ಆಗಿವೆ.

ಕುಮಾರೀಪೂಜೆ
ಕಲಶಸ್ಥಾಪನೆ ಪೂಜೆಯಾದ ಮೇಲೆ ಪ್ರತಿದಿನವೂ (ಎರಡು ವರ್ಷದಿಂದ ಆರಂಭಿಸಿ ಹತ್ತು ವರ್ಷದ ವರೆಗಿನ) ಕುಮಾರಿಯನ್ನು ವಸ್ತ್ರಾಲಂಕಾರಭೋಜನಾದಿಗಳಿಂದ ಪೂಜಿಸುವ ರೂಢಿಯಿದೆ. ಹೇಮಾದ್ರಿಯಲ್ಲಿ ಪ್ರಥಮ ದಿನದಿಂದ ನವಮಿಯವರೆಗೆ ಕ್ರಮವಾಗಿ ಕುಮಾರಿಯ ಸಂಖ್ಯೆಯನ್ನು ಹೆಚ್ಚಿಸಬೇಕೆಂದಿದೆ. ಸಾಧ್ಯವಾದರೆ ಎರಡು ಅಥವಾ ಮೂರು ಪಟ್ಟು ಸಂಖ್ಯೆಯನ್ನು ವರ್ಧಿಸಿ ಪೂಜಿಸಬೇಕೆಂದೂ ಹೇಳಲಾಗಿದೆ. ಭೂಲಾಭ ಐಶ್ವರ್ಯ ಮುಂತಾದ ಫಲೋತ್ಕರ್ಷವನ್ನೂ ಅಲ್ಲಿಯೇ ತಿಳಿಸಲಾಗಿದೆ. ಇಂತಹ ಫಲಗಳಿಗಾಗಿ ಅಲ್ಲದಿದ್ದರೂ ಮನೆಯ ಹೆಣ್ಣುಮಕ್ಕಳಿಗೆ ಹಸ್ತೋದಕವನ್ನಿತ್ತು, ಊಟ ಮಾಡಿಸಿ, ಯತ್ಕಿಂಚಿತ್ ದಕ್ಷಿಣೆ ಕೊಡುವವರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.

ಪೂಜೆಯ ಸಿದ್ಧತೆ
ಬೆಳಗಿನಲ್ಲಿ ಬೇಗನೆ ಎದ್ದು ಹೊಸ್ತಿಲು ಸಾರಿಸಿ ಸ್ತ್ರೀಯರು ಪೂಜೆಯ ಸ್ಥಳದಲ್ಲಿ ರಂಗವಲ್ಲಿಯನ್ನು ಬಿಡಿಸುತ್ತಾರೆ. ಇದರಲ್ಲಿ ಪರಸ್ಪರ ಪೈಪೋಟಿಯೂ ಇರುವಂತೆ ಕಾಣುತ್ತದೆ. ಚಿತ್ರ ವಿಚಿತ್ರವಾದ ಹೂಗಳನ್ನು ಸಂಗ್ರಹಿಸಿ ಮಾಲೆಗಳನ್ನು ಕಟ್ಟುತ್ತಾರೆ. ನೀರಾಜನಕ್ಕಾಗಿ ತಟ್ಟೆಯಲ್ಲಿ ಅರಿಸಿನ ಕುಂಕುಮ ಮುಂತಾದವುಗಳಿಂದ ಚಿತ್ರಗಳನ್ನು ಬರೆಯುತ್ತಾರೆ.

ನೈವೇದ್ಯಕ್ಕಾಗಿ ಬಗೆ ಬಗೆಯ ಅನ್ನ ಭಕ್ಷ್ಯಗಳನ್ನು ತಯಾರಿಸಿ ಮುಖ್ಯವಾಗಿ ಶಾರದೆಯ ಎಡೆಯನ್ನು ಸಜ್ಜುಗೊಳಿಸುತ್ತಾರೆ. ಮೊಸರನ್ನ ಅಥವಾ ಬುತ್ತಿಯನ್ನ ತುಪ್ಪದನ್ನ ಕೋಸಂಬರಿ ನವರಾತ್ರಿಯಲ್ಲಿ ಮಾಡಲೇಬೇಕು. ಶಾರದೆಯ ಎಡೆಯನ್ನು ಊಟದ ಸಮಯದಲ್ಲಿ ಮನೆಯ ಮಕ್ಕಳಿಗೆ ಹಾಕಿದರೆ ಅವರು ಬುದ್ಧಿವಂತರಾಗುವರೆಂಬ ನಂಬಿಕೆಯಿದೆ. ಅದಕ್ಕಾಗಿ ಅದನ್ನು ಪಡೆಯಲು ಮಕ್ಕಳಲ್ಲಿ ಜಗಳವಾಗುವುದೂ ಉಂಟು.

ಕೆಲವರು ಸುಶ್ರಾವ್ಯವಾಗಿ ಹಾಡುಗಳನ್ನು ಹೇಳುತ್ತಾರೆ:
1) ಶ್ರೀದೇವಿಯ ಕರೆದದ್ದು
ಭಾಗ್ಯಲಕ್ಷ್ಮಿಯು ಮನೆಗೆ ಬಂದಳು ಬೇಗ ಬಾಗಿಲ ತೆಗೆಯಿರೋ
ಕಾಲ ಗೆಜ್ಜೆಯ ಜಣ ಜಣನೆನಿಸುತ ಬಾಗಿಲಲಿ ನಿಂದಿರುವಳು ...

(2) ಶ್ರೀದೇವಿಯ ಪೂಜೆ ಮಾಡಿದ್ದು
ಇನ್ನೇನು ಆನಂದ ಬೇಕಾಗಿದೆ ಶ್ರೀದೇವಿಯಾ ನಾ ಪೂಜಿಪೆ.
ಶ್ರೀಹರಿಯಾ ಸುರನರಸಿಯಾ
ನವರಾತ್ರಿ ವೇಳೆ ಹಾಯಾಗಿದೆ ದೇವಿಯ ಪೂಜೆಗೆ ಅಣಿಯಾಗಿದೆ ...

(3) ಶ್ರೀದೇವಿಗೆ ನೈವೇದ್ಯ ಮಾಡಿದ್ದು
ಭೋಜನಗೈಯ್ಯಲೇಳಮ್ಮ ಶಿವ ಶಕ್ತಿ ಸ್ವರೂಪೆ ಶಾಂಭವಿಯೇ
ಭಕ್ತರುದ್ಧಾಣಿ ಭಕ್ಷ್ಯ ಭೋಜ್ಯಂಗಳ ಭುಂಜಿಸು ಭವಾನಿಯೇ ಭವ ತಾಪ ಹಾರಿಣಿಯೇ

(4) ಶ್ರೀದೇವಿಗೆ ಬಳೆ ತೊಡಸಿದ್ದು
ಬಳೆ ಬಂದವು ಬಾರೆ ಪಾರ್ವತಿ ಬಳೆಯ ಇಡಲು ಬಾರೆ
ಸೃಷ್ಟಿ ಜಾಯೆ ನಿನ್ನ ಶ್ರೇಷ್ಠ ಕರಕೆ ತಕ್ಕಮುಷ್ಟಿತೂಕದ ಬಳೆ ಸೃಷ್ಟಿಗೀಶ್ವರ ತಂದ

(5) ಶ್ರೀದೇವಿಗೆ ಮಂಗಳಾರತಿ ಎತ್ತಿದ್ದು
ಜಯ ಜಯ ಶ್ರೀಮೂಕಾಂಬಿಕೆ ಶಾರದಾಂಬಿಕೆ
ಜಯವೆಂದಾರತಿ ಬೆಳಗುವೆ ಸಲಹೆ ಅಂಬಿಕೆ

(6) ಶ್ರೀದೇವಿಗೆ ನಮಸ್ಕಾರ
ಶಾರದಾಂಬೆಯೆ ವಿಧಿಯ ರಾಣಿಯೆ ವಂದಿಸುವೆ ನಾ ನಿನ್ನನು
ದಾರಿಕಾಣದೆ ಬಳಲುತಿರುವೆನು ತೋರಿಸೈ ಸತ್ಪಥವನು

(7) ಹೂ ಬೇಡಿದ್ದು
ಶಾರದಾಂಬೆಯೆ ಪಾಲಿಸೆನಗೆ ಶಿರದೊಳಿರುವ ಪ್ರಸಾದವ
ಕರವ ಜೋಡಿಸಿ ಬೇಡುವ ಬಾಲಕಿಯರಿಗೆ ಚಿರ ಸೌಭಾಗ್ಯವ

(8) ಶ್ರೀದೇವಿಯ ಪ್ರಾರ್ಥಿಸಿದ್ದು
ಶ್ರೀಜಗದಂಬ ರಾಜೇಶ್ವರಿ ಪೊರೆ ಮೂಕಾಂಬಾ ಮಾಹೇಶ್ವರಿ ...

ಇಂತಹ ಎಷ್ಟೋ ಹಾಡುಗಳು ಸ್ತ್ರೀಯರ ಸ್ಮೃತಿಪಟಲದಲ್ಲಿರುತ್ತವೆ. ಅವುಗಳನ್ನು ಹಾಡುತ್ತಾ ಅವರು ಪೂಜೆಯಲ್ಲಿ ಭಾಗವಹಿಸುತ್ತಾರೆ. ಇದಲ್ಲದೆ ಅವರು ಸಾಮೂಹಿಕವಾಗಿಯೋ ವೈಯಕ್ತಿಕವಾಗಿಯೋ ಶ್ರೀಲಲಿತಾ ಸಹಸ್ರನಾಮಸ್ತೋತ್ರ, ಸೌಂದರ್ಯಲಹರೀ ಮುಂತಾದವುಗಳನ್ನು ಹೇಳುವುದುಂಟು.

ಗೊಂಬೆಗಳ ಸ್ಥಾಪನೆ
ನವರಾತ್ರಿಯ ಹಿಂದಿನ ದಿನವೇ, ಮಹಾಲಯ ಅಮಾವಾಸ್ಯೆಯಂದು ಗೊಂಬೆಗಳನ್ನು ಸ್ವಚ್ಛಗೊಳಿಸಸಲು ತೆಗೆದಿರಿಸುತ್ತಾರೆ. ಮೊದಲ ದಿನವೇ ಪೂಜಾ ಪ್ರದರ್ಶನಕ್ಕಾಗಿ ಗೊಂಬೆಗಳನ್ನು ಸ್ಥಾಪಿಸುತ್ತಾರೆ. ಅವುಗಳ ಜೊತೆಗೆ ವೀಳ್ಯದೆಲೆಗಳಿರುವ ಒಂದು ಚಿಕ್ಕ ಕಲಶವೂ ಇರುತ್ತದೆ. ಮದುವೆಯ ಸಂದರ್ಭದಲ್ಲಿ ತವರಿನಲ್ಲಿ ಕೊಟ್ಟಿರುವ ಪಟ್ಟದ ಗೊಂಬೆಯನ್ನು ಎಲ್ಲಕ್ಕಿಂತ ಮೊದಲು ಮೇಲಿರಿಸುತ್ತಾರೆ. ಅದರ ಜೊತೆಗೆ ಅಷ್ಟಲಕ್ಷ್ಮಿಯರು ದಶಾವತಾರ ರಾಮಾಯಣ – ಮಹಾಭಾರತ ಪಾತ್ರಗಳು, ತ್ರಿಮೂರ್ತಿಗಳು, ಗವಾಯಿಗಳು ಮುಂತಾದವುಗಳೊಂದಿಗೆ ವ್ಯಾಪಾರ ಮಾಡುವ ಸೆಟ್ಟಿ ಮತ್ತು ಅವನ ಹೆಂಡತಿಯ ಗೊಂಬೆ ಇದ್ದೆ ಇರುತ್ತದೆ. ಹಸು ಕರು ಕುದುರೆ ಆನೆ ಮುಂತಾದ ಪ್ರಾಣಿಗಳೊಂದಿಗೆ ಆಧುನಿಕ ಕ್ರೀಡಾ ಸಾಮಗ್ರಿಗಳೂ ಇರುತ್ತವೆ.

ಇತ್ತೀಚೆಗೆ ಗೊಂಬೆಗಳ ಸ್ಥಾಪನೆಯು ತೀರಾ ಆಕರ್ಷಕವಾಗುತ್ತಿದೆ. ಗಂಗಾವತರಣ, ಸಮುದ್ರ ಮಥನ ಮುಂತಾದ ಪುರಾಣ–ಪುಣ್ಯಕಥೆಗಳನ್ನು ಬಿಂಬಿಸುವ ಪ್ರದರ್ಶನವೂ ಅಲ್ಲಿ ನಡೆಯುತ್ತದೆ. ಪ್ರತಿದಿನವೂ ಅವುಗಳನ್ನು ಸಂಜೆ ಪೂಜಿಸಿ ಆರತಿಗೈದು ಮಕ್ಕಳಿಗೆ ಬಗೆ ಬಗೆಯ ತಿನಿಸುಗಳನ್ನು ನೀಡುತ್ತಾರೆ. ಹೆಣ್ಣುಮಕ್ಕಳಿಗೆ ಬಾಗಿನ ಕೊಡುತ್ತಾರೆ.

ಪುಸ್ತಕಪೂಜೆ ನವರಾತ್ರಿಯ ಕೊನೆಯ ಮೂರು ದಿನಗಳು ತುಂಬಾ ಮುಖ್ಯವಾಗಿವೆ. ಮೊದಲಿನ ಆರು ದಿನಗಳಲ್ಲಿ ಪೂಜೆ ಮಾಡಲಾಗದಿದ್ದರೆ, ಕೊನೆಯ ಮೂರು ದಿನಗಳಲ್ಲಿ ಪೂಜಿಸಿದರೂ ಶ್ರೀದೇವಿಯು ಸಂತುಷ್ಟಳಾಗುತ್ತಾಳೆ. ಆ ಮೂರು ದಿನಗಳಲ್ಲಿಯೂ ಪೂಜಿಸುವುದು ಸಾಧ್ಯವಾಗದಿದ್ದರೆ, ಅಷ್ಟಮಿಯ ದಿನ ಪೂಜೆ ಮಾಡಿದರೂ ಸಾಕು ಎಂದು ಶಾಸ್ತ್ರದಲ್ಲಿದೆ. ಈ ದಿನಗಳಲ್ಲಿ ಪುಸ್ತಕವನ್ನು ಜೋಡಿಸಿಟ್ಟು ಪೂಜೆ ಮಾಡಿ, ಪ್ರಸಾದವನ್ನು ಪಡೆದು, ಪುಸ್ತಕಪಠನ ಮಾಡಿದರೆ ಶಾರದೆಯ ಅನುಗ್ರಹವುಂಟಾಗುತ್ತದೆ ಎಂಬ ನಂಬಿಕೆಯಿದೆ.

ವಿಜಯದಶಮಿ ನವರಾತ್ರಿಯ ಹಗಲಿನಲ್ಲಿ ಉಪವಾಸ, ರಾತ್ರಿಯ ಪೂಜೆಯಿಂದ ಸಂಪನ್ನವಾದರೆ, ವಿಜಯ ದಶಮಿಯಂದು ಮಧ್ಯಾಹ್ನವೇ ಪೂಜೆಯಿರುತ್ತದೆ. ಅಂದು ಎಲ್ಲರೂ ಶಕ್ತಿಗೆ ಅನುಸಾರವಾಗಿ ಆಭರಣಗಳನ್ನು ಧರಿಸುತ್ತಾರೆ ಹಾಗೂ ಪುಸ್ತಕಗಳನ್ನು ಓದುತ್ತಾರೆ. ನವರಾತ್ರಿಯ ಕೊನೆಯ ಮೂರು ದಿನಗಳ ಕಾಲ ಓದುವುದಾಗಲಿ, ಬರೆಯುವುದಾಗಲಿ ಶ್ರೀದೇವಿಗೆ ಇಷ್ಟವಾಗುವುದಿಲ್ಲ ಎನ್ನಲಾಗಿದೆ. ಆದರೆ ವಿದ್ಯಾದಶಮಿಯಂದು ಅದನ್ನು ಮಾಡದಿದ್ದರೆ ಜಗನ್ಮಾತೆಯು ಹರಸುವುದಿಲ್ಲ. ಈ ಕಾರಣದಿಂದಲೇ ಅಂದು ಶಾರದಾಪೂಜೆಯನ್ನು ಶಾಲೆಗಳಲ್ಲಿಯೂ ಏರ್ಪಡಿಸುತ್ತಾರೆ.

ಸೂರ್ಯನಾರಾಯಣ ನಾಗೇಂದ್ರ ಭಟ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT