ಆಳ–ಅಗಲ

ಹೊಲಸು ಬಳಿಯುವ ಬದುಕಿನ ಬವಣೆ

ಮಲಹೊರುವ ಪದ್ಧತಿಗೆ ನಿಷೇಧವಿದೆ. ಆದರೆ ಅದನ್ನೇ ವೃತ್ತಿಯಾಗಿಸಿಕೊಂಡ ಜನರು ರಾಜ್ಯದಲ್ಲಿ ಈಗಲೂ ಇದ್ದಾರೆ ಎಂದು ಒಪ್ಪಿಕೊಳ್ಳಲು ಅಧಿಕಾರಿಗಳು ಸಿದ್ಧರಿಲ್ಲ. ಹೀಗಾಗಿ ಇವರಿಗೆ ಸರ್ಕಾರಿ ಸೌಲಭ್ಯಗಳೂ ಇಲ್ಲ. ಈ ಜನರಿಗಂತೂ ಹೊಲಸು ಬಳಿಯುವುದು ಬಿಟ್ಟು ಬೇರೆ ಬದುಕಿಲ್ಲ. ಈ ಹೀನಾಯ ವೃತ್ತಿಯಲ್ಲಿ ತೊಡಗಿಸಿಕೊಂಡವರ ಬವಣೆ ಕುರಿತು ‘ಪ್ರಜಾವಾಣಿ’ಯ ಪ್ರತ್ಯಕ್ಷ ವರದಿ

ಮಲ ಬಾಚುವವರು

‘ಕುರುಬರಪೇಟೆ ಸರ್ಕಲ್ ಪಕ್ಕದಲ್ಲಿರೋ ಕ್ವಾಟ್ರಸ್‌ನಲ್ಲಿ ಹೇಲುಗುಂಡಿ (ಪಿಟ್) ತುಂಬಿದ್ದರಿಂದಾಗಿ ಆ ಗುಂಡಿಗೆ ಸಂಪರ್ಕಿಸಿದ್ದ ಮನೆಯ ಶೌಚಾಲಯ ಕಟ್ಟಿಕೊಂಡಿತ್ತು. ಮಧ್ಯಾಹ್ನದಿಂದ ಕರೆ ಮಾಡಿದ್ದರೂ ಮೈಗೆ ಹುಶಾರು ಇಲ್ಲದೆ ಇದ್ದುದರಿಂದ ಹೋಗಲಿಲ್ಲ. ಸಂಜಿ ಹೊತ್ತಿಗೆ ಗಾಡಿ ತಗಂಡು ಮನೆ ಹತ್ರ ಬಂದರು. ‘ಬರದೇ ಇದ್ರೆ ಮನೆಯಲ್ಲಿ ಇರಕ್ಕಾಗಲ್ಲ, ಏನಾದ್ರೂ ಮಾಡಪ್ಪ’ ಎಂದು ಗೋಗರೆದರು. ‘ಬಂದೆ ನಡೀರಿ ಸ್ವಾಮಿ’ ಎಂದು ಗುದ್ದಲಿ, ಬಕೀಟು, ಹಗ್ಗ ತೆಗೆದುಕೊಂಡು ಇಬ್ಬರನ್ನು ಜತೆಗೂಡಿಸಿಕೊಂಡು ಹೊರಟೆ. ಜೇಬಿನಲ್ಲಿದ್ದ ರಾಜಾವಿಸ್ಕಿಯನ್ನು, ಉಪ್ಪಿನ ಕಾಯಿ ನೆಚ್ಚಿಕೊಂಡವನೇ ಗಟಕ್ಕನೇ ಹೊಟ್ಟೆಗೆ ಸುರಿದುಕೊಂಡು ಸೀದಾ ಹೋಗಿ, ಪಿಟ್‌ಗೆ ಮುಚ್ಚಿದ್ದ ಚಪ್ಪಡಿಗಳನ್ನು ತೆಗೆದು ಜತೆಗಿದ್ದ ಹೆಣ್ಣುಮಕ್ಕಳ ನೆರವಿನಿಂದ ಗಬ್ಬೆದ್ದ ವಾಸನೆ, ಹುಳು ತುಂಬಿದ್ದ ಗುಂಡಿಯಿಂದ ಹಸಿ ಹಸಿ ಮಲದ ಮಿಶ್ರಣವನ್ನು ಬಕೀಟಿನಿಂದ ಮೇಲೆತ್ತಿ ಪಕ್ಕದ ಚರಂಡಿಗೆ ಸುರಿಯಲು ಶುರು ಮಾಡಿದೆವು’.

‘ಅಷ್ಟರಲ್ಲಿ ಪಕ್ಕದ ಮನೆಯವರು ಬಂದು, ‘ಹೊಟ್ಟೆಗೇನು ಹೇಲು ತಿಂತಿರಾ, ನಿಮ್ಮವ್ವನ್, ನಿಮ್ಮಕ್ಕನ್’ ಅಂತ ಬೈಯೋಕೆ ಶುರು ಮಾಡಿದರಲ್ಲದೇ, ‘ಇಲ್ಲಿ ಹಾಕಿದರೆ ಗಬ್ಬುನಾತ ಹೇಗೆ ತಡೆದುಕೊಳ್ಳುವುದು, ಅವನು ನನ್ಮಗ ಕುಡಿದಿದ್ದಾನೆ, ಏ ಮೂದೇವಿಗಳ ನಿಮಗಾದ್ರೂ ಬುದ್ದಿ ಬೇಡ್ವಾ’ ಎಂದು ಹೆಣ್ಣುಮಕ್ಕಳಿಗೂ ಬೈಯಲು ಆರಂಭಿಸಿದರು. ನಮ್ಮ ಜತೆಗಿದ್ದ ಹೆಣ್ಣುಮಕ್ಕಳು ಹೇಲಿನ ಹೊಲಸು ನೀರು ಸುರಿಯುತ್ತಿದ್ದ ಬಕೀಟುಗಳನ್ನು ತಲೆ ಮೇಲೆ ಹೊತ್ತುಕೊಂಡು ಸ್ವಲ್ಪ ದೂರದಲ್ಲಿದ್ದ ನಿರ್ಜನ ಪ್ರದೇಶದ ಕೆರೆಗೆ ಸುರಿಯುತ್ತಿದ್ದರು. ಸುಮಾರು ಮೂರು ಬ್ಯಾರಲ್ ಹೀಗೆ ಹೊತ್ತು ಸುರಿದದ್ದಾಯಿತು. ಪಿಟ್ ಒಳಗೆ ಇಳಿದು, ತಳದಲ್ಲಿದ್ದ ಗಸಿಯನ್ನು ಮೇಲೆತ್ತಿ ತುಂಬಿ ಕೊಡುತ್ತಿದ್ದೆ. ಬಕೀಟು ತುಂಬಿ ಮೇಲೆ ಕೊಡುತ್ತಿದ್ದಂತೆ. . . ಮೇಲಿನಿಂದ (ಮನೆಗೆ ಸಂಪರ್ಕಿಸಿದ್ದ ಪೈಪಿನಿಂದ ಅರ್ಧ ಬಕೀಟ್‌ನಷ್ಟು ಹೇಲಿನ ಹೆಂಟೆಗಳಿದ್ದ ನೀರು ಮಿಶ್ರಿತ ಹೊಲಸು ತೊಪತೊಪ ಅಂತ ಮುಖಕ್ಕೆ ಬಂದು ಬಡಿಯಿತು. ಕೈಯಿಂದ ಸರಿಸಿಕೊಳ್ಳಲು ಹೋದರೆ ಮುಖವೆಲ್ಲ ಹೇಲಿನ ರಾಡಿಯಾಯಿತು. ಮನಸ್ಸಿನಲ್ಲೇ ಬೈದುಕೊಂಡು, ಪಿಟ್ ಮೇಲಿದ್ದವರಿಗೆ ಸ್ವಲ್ಪ ನೀರ ಹಾಕ್ರವ್ವ ಎಂದು ಕೂಗಿದೆ. . .’

‘ಹಾಗೆ ಮುಖವನ್ನೊಮ್ಮೆ ಒರೆಸಿಕೊಂಡು, ಪಿಟ್‌ನಿಂದ ಮೇಲೆ ಬಂದು, ‘ತೊಳೆದುಕೊಳ್ಳುವುದಕ್ಕೆ ನೀರು ಕೊಡ್ರಮ್ಮ’ ಎಂದು ಶೌಚಾಲಯ ಕಟ್ಟಿಕೊಂಡಿದ್ದವರ ಮನೆಯವರನ್ನು ಕೇಳಿದೆ. ನನ್ನ ಮೈಮೇಲೆ ಹೇಲು ಬಿದ್ದಿದ್ದನ್ನು ಕಂಡ ಆ ಜನ, ಸೆರಗಿನಿಂದ ಮೂಗು ಮುಚ್ಚಿಕೊಂಡು ಕೈಸನ್ನೆ ಮೂಲಕವೇ ತೊಲಗೋ ಎಂದರು. ಸೀದಾ ಮನೆಗೆ ಬಂದವನೇ ‌ಮೈತೊಳೆದು ಕುಳಿತೆ. . . ಅಷ್ಟೊತ್ತಿಗೆ ಎಣ್ಣೆಯ ಮತ್ತು ಇಳಿದು ಹೋಗಿತ್ತು. ದೇವರ ಪಟದ ಪಕ್ಕದಲ್ಲಿದ್ದ ರಾಜಾವಿಸ್ಕಿಯನ್ನು ಮತ್ತೆ ಹೊಟ್ಟೆಗೆ ಏರಿಸಿಕೊಂಡೆ. . . ಹಿಟ್ಟು (ರಾಗಿಮುದ್ದೆ) ಬೇಕೆನಿಸಲಿಲ್ಲ. ಹಾಗೇ ಬಿದ್ದುಕೊಂಡೆ. ಎದ್ದ ಮೇಲೆ ತಾಟಿನಲ್ಲಿ ಹಿಟ್ಟು ಕಂಡರೆ. . ಹೇಲಿನ ಹೆಂಟೆಗಳು ತೇಲುತ್ತಿರುವಂತೆ ಅನಿಸಿತು. ಅಂದು ಊಟ ಕೂಡ ಮಾಡದೇ, ಮತ್ತೊಂದು ರಾಜಾವಿಸ್ಕಿ ಏರಿಸಿ ಮಲಗಿದೆ ಸ್ವಾಮಿ. . .’

ಕೋಲಾರ ನಗರದ ಹೊರವಲಯದಲ್ಲಿರುವ ಸ್ಲಂ ಏರಿಯಾ (ಸಮತಾ ನಗರ) ವಾಸಿ ನಾರಾಯಣಸ್ವಾಮಿ ಹೀಗೆ ಒಂದೇ ಉಸಿರಿಗೆ ತನ್ನ ಕಾಯಕವನ್ನು ವಿವರಿಸುತ್ತಿದ್ದರೆ ಸುತ್ತಲೂ ಕುಳಿತಿದ್ದ ಹೆಣ್ಣುಮಕ್ಕಳ ಕಣ್ಣುಗಳಲ್ಲಿ ನೀರು ಜಿನುಗುತ್ತಿತ್ತು. ಕೆಲವರು ತಮ್ಮ ಸೆರಗಿನಿಂದ ಮುಖ ಒರೆಸಿಕೊಂಡರು.

ಮತ್ತೆ ಮಾತು ಮುಂದುವರಿಸಿದ ನಾರಾಯಣಸ್ವಾಮಿ ‘ನೋಡಿ ಸರ್. . . ಹೇಲಿನ ಗುಂಡಿಗೆ ಇಳಿದು ಇಳಿದೂ ನನ್ನ ಮೈಕೈ ಎಲ್ಲ ಅಲರ್ಜಿಯಾಗಿದೆ. ಈಗ ನನ್ನನ್ನು ನೋಡಿದರೆ ಜನ ದೂರ ಹೋಗುತ್ತಾರೆ. ‘ಪಿಟ್‌ ಕ್ಲೀನ್ ಮಾಡುವವ ಬಂದ’ ಎಂದು ಹೀಯಾಳಿಸುತ್ತಾರೆ. ಇದೆಂಥ ಬದುಕು ಸ್ವಾಮಿ. ಸಾವು ಯಾವಾಗ ಕರೆಸಿಕೊಳ್ಳುತ್ತೋ ಗೊತ್ತಿಲ್ಲ’ ಎಂದು ಹೇಳುತ್ತಾ ನಿಟ್ಟುಸಿರಿಟ್ಟರು.

ಪಿಟ್ ಮತ್ತು ಮ್ಯಾನ್‌ಹೋಲ್ ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿರುವ ಸ್ಲಂ ಏರಿಯಾದ ಭಾರತಿ ಅವರನ್ನು ಉದ್ದೇಶಿಸಿ, ‘ಗಂಡಸರು ಕುಡಿದು ಕೆಲಸ ಮಾಡುತ್ತಾರೆ, ನಿಮಗೆ ಏನನ್ನಿಸುತ್ತೆ’ ಎಂದು ಕೇಳಿದಾಗ, ‘ಮೊದಮೊದಲು ಹೇಸಿಗೆ ಅನ್ನಿಸ್ತಾ ಇತ್ತು. ಹೊಟ್ಟೆಪಾಡು... ಹೇಲು ಬಾಚಿ, ಬಳಿಯದಿದ್ದರೆ ಹೊಟ್ಟೆ ಹಿಟ್ಟಿಗೆ ಏನು ಮಾಡೋದು’ ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.

‘ಮನೆಗೆ ಬರುವಷ್ಟರಲ್ಲಿ ಮೈಯೆಲ್ಲ ವಾಸನೆ ಬರುತ್ತಾ ಇರುತ್ತೆ. ಮನೆಗೆ ಬಂದ ಕೂಡಲೇ ಮಕ್ಕಳಿಗೆ ಪ್ರೀತಿಯಿಂದ ಕೈ ತುತ್ತು ಕೊಡಲು ಹೋದರೆ, ಏನಮ್ಮಾ ಕಕ್ಕದ ವಾಸ್ನೆ ಬರ್ತಾ ಇದೆಯಲ್ಲ, ಥೂ ಗಬ್ಬು ಎಂದು ದೂರ ತಳ್ಳುತ್ತವೆ. ಇಂಥ ಕೆಲಸಕ್ಕೆ ಹೋಗಿದ್ದೆ ಎಂದು ಮಕ್ಕಳ ಮುಂದೆ ಹೇಳಿಕೊಳ್ಳುವುದಕ್ಕೂ ನಾಚಿಕೆ ಆಗುತ್ತೆ. ಏಕೆಂದರೆ ನಮ್ಮ ಭವಿಷ್ಯ ಅಂತೂ ಹಾಳಾಗಿ ಹೋಯ್ತು. ಅವುಗಳ ಭವಿಷ್ಯವಾದರೂ ಚೆನ್ನಾಗಿರಲಿ ಎಂದು ಅದನ್ನು ಮುಚ್ಚಿಟ್ಟಿರ್ತೀವಿ’ ಎಂದು ತಮ್ಮ ವೇದನೆ ಹೇಳಿಕೊಂಡರು.

‘ನನ್ನ ಗಂಡ ಅದೇ ಕೆಲಸ ಮಾಡ್ತಾನೆ. ಮನೆಗೆ ಬಂದ ಕೂಡಲೇ ಆತ ಹೇಳೋದು... ‘ಸಂತೂರ್ ತಕಂಬಾ... ಹಿಟ್ ಉಣ್ಣಕ್ಕೆ ಕೈ ಗಂಮ್ ಅನ್ನಬೇಕು’ ಅಂತಾನೆ. ಆ ಕೆಲಸ ಬಿಡು ಅಂದ್ರೂ ಆತ ಬಿಡಲ್ಲ’ ಅಂದರು ರತ್ಮಮ್ಮ.

10 ವರ್ಷದಿಂದ ಇದೇ ಕೆಲಸ ಮಾಡುತ್ತಿರುವ 55 ವರ್ಷದ ವಿನೋದಮ್ಮ ಮಾತಿಗೆ ಮುಂದಾದರು. ‘ಏನೂ ಕಾಯಿಲೆ ಇಲ್ವ’ ಎಂಬ ಪ್ರಶ್ನೆಗೆ, ‘ಚೆನ್ನಾಗಿ ಎಣ್ಣೆ ಸುರಿದು ಚಿತ್ರನ್ನ, ಪುಳಿಯೋಗರೆ ಮಾಡಿಕೊಂಡು ಗಡದ್ದಾಗಿ ತಿನ್ನೋರಿಗೆ ಕಾಯಿಲೆ ಬರುತ್ತೆ. ಪಿಟ್ ವಾಸನೆ ಕುಡಿದು, ಅದರಲ್ಲೇ ಬದುಕು ಸವೆಸುವ ನಮ್ಮನ್ನು ಕಂಡರೆ ಭಯ ಬಂದು ಕಾಯಿಲೆಗಳೇ ಓಡಿಹೋಗ್ತವೆ’ ಎಂದು ವಿಷಣ್ಣತೆಯ ನಗೆ ಬೀರಿದರು ವಿನೋದಮ್ಮ.

‘ನಾವು ಎಲ್ಲರ ಮನೆಯ ಶೌಚಾಲಯ ಕಟ್ಟಿಕೊಂಡರೆ ಕಿಲೀನ್ ಮಾಡ್ತೀವಿ. ಕುಡಿಯಲು ನೀರು ಕೊಡ್ರಿ ಎಂದರೆ ಉಪಯೋಗಿಸಿ ಎಸೆವ ಪಿಲಾಸ್ಟಿಕ್ ಲೋಟದಲ್ಲಿ ಕೊಡ್ತಾರೆ. ಮಕ್ಕಳಿಗೆ ಏನಾದ್ರೂ ಉಣ್ಣಕ್ಕೆ ಕೊಡ್ರವ್ವ ಎಂದರೆ. . ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ದೂರದಿಂದ ಎಸೆಯುತ್ತಾರೆ. ಅವರ ಮನೆಯಲ್ಲಿ ಪಿಲಾಸ್ಟಿಕ್ ಬಾಕ್ಸ್ ಇರಲ್ವ ಸಾರ್’ ಎಂದು ಪ್ರಶ್ನಿಸಿದರು ಭಾಗ್ಯಾ.

‘ನಾವು ಎಲ್ಲಿಯೂ ಹೋಗಂಗಿಲ್ಲ. ಪಿಟ್ ಕ್ಲೀನ್ ಮಾಡುವವರು ಎಂದೇ ಗುರುತಿಸುತ್ತಾರೆ. ನಮ್ಮ ಮಕ್ಕಳಿಗೂ ಪಿಟ್ ಕ್ಲೀನ್ ಮಾಡುವರ ಮಕ್ಕಳು ಎಂದೇ ಗುರುತಿಸುತ್ತಾರೆ. ಇಡೀ ಸಮಾಜದ ಹೊಲಸನ್ನು ನಾವು ಸ್ವಚ್ಛಗೊಳಿಸಿದರೂ ನಮ್ಮನ್ನು ಅಸಹ್ಯದಿಂದ ನೋಡುವುದು ತಪ್ಪಿಲ್ಲ. ಈ ಕೆಲಸ ಬಿಟ್ಟು ಮನೆ ಕೆಲಸ ಮಾಡೋಣ ಅಂದರೆ, ಮನೆಯ ಮೆಟ್ಟಿಲು ಹತ್ತಿರವೇ ಬಿಟ್ಟುಕೊಳ್ಳದವರು ಮನೆಯೊಳಗೆ ನಮ್ಮನ್ನು ಎಲ್ಲಿ ಬಿಡುತ್ತಾರೆ? ಅದಕ್ಕಾಗಿ ಇದೇ ಕೆಲಸ ಅನಿವಾರ್ಯವಾಗಿದೆ’ ಎಂದರು ಲಕ್ಷ್ಮೀದೇವಿ.

‘ಇಂತಹ ಕೆಲಸ ಮಾಡುವ ನಮ್ಮಂತಹವರ ಮನೆಗೆ ಯಾರೂ ಹೆಣ್ಣು ಕೊಡುವುದಿಲ್ಲ, ನಮ್ಮ ಮನೆಯಿಂದ ಹೆಣ್ಣನ್ನು ತೆಗೆದುಕೊಂಡು ಹೋಗುವುದಿಲ್ಲ. ಒಂಥರಾ ಸಾಮಾಜಿಕ ಬಹಿಷ್ಕಾರದ ಸ್ಥಿತಿ ನಮ್ಮದು. ನಮ್ಮ ಏರಿಯಾಕ್ಕೆ ಸಮತಾ ನಗರ ಎಂದು ಹೆಮ್ಮೆಯಿಂದ ಹೆಸರಿಟ್ಟುಕೊಂಡಿದ್ದೇವೆ. ಆದರೆ, ಹಾಗೆಂದು ಯಾರೂ ಗುರುತಿಸುವುದಿಲ್ಲ, ಸ್ಲಂ ಏರಿಯಾ ಎಂದೇ ಗುರುತಿಸುತ್ತಾರೆ’ ಎಂದು ಅವರು ಗೋಳಿಟ್ಟರು.

‘ಬಕೀಟಲ್ಲಿ ಮಲ ತುಂಬಿ ತಲೆ ಮೇಲೆ ಹೊರುವುದು, ಪಿಟ್ ಕ್ಲೀನ್ ‍ಮಾಡುವುದು, ಮ್ಯಾನ್‌ಹೋಲ್‌ಗೆ ಇಳಿಯುವುದನ್ನು, ಚೇಂಬರ್‌ನಲ್ಲಿ ಕಟ್ಟಿಕೊಂಡ ಮಲ ಬಾಚಿ ತೆಗೆಯುವುದನ್ನು ಮಾಡಿ ತೋರಿಸ್ತೇವೆ. ಇವೆಲ್ಲ ನಾವು ನಿತ್ಯವೂ ಮಾಡುತ್ತಿದ್ದರೂ ನಮಗೆ ಮಲ ಹೊರುವವರು, ಮ್ಯಾನ್ಯುಯಲ್ ಸ್ಕಾವೆಂಜರ್ ಎಂದು ಸರ್ಟಿಫಿಕೇಟ್ ಕೊಡಲು ರೆಡಿ ಇಲ್ಲ. ಕೇಳಿದರೆ, ‘ಅದು ಇಡೀ ಕೋಲಾರದಲ್ಲಿ ಇಲ್ಲ’ ಅಂತಾರೆ ಅಧಿಕಾರಿಗಳು. ‘ಸಕ್ಕಿಂಗ್ ಮತ್ತು ಜಟ್ಟಿಂಗ್ ಮೆಷಿನ್ ಇರುವಾಗ ನೀವು ಹೇಗೆ ಕೆಲಸ ಮಾಡುತ್ತೀರಿ. ಎಲ್ಲಿದೆ ಮಲ ಹೊರುವ ಪದ್ಧತಿ’ ಎಂದು ಪ್ರಶ್ನಿಸುತ್ತಾರೆ. ನಾವು ತೋರಿಸುತ್ತೇವೆ ಬನ್ನಿ ಎಂದರೂ ಬರುವುದಿಲ್ಲ. ನಮಗೊಂದು ಗುರುತಿನ ಚೀಟಿ ಕೊಡಿ ಎಂದು ಬೇಡಿಕೊಂಡರೂ ಕೊಡುತ್ತಿಲ್ಲ’ ಎಂದು ಎಲ್ಲರೂ ತಮ್ಮ ಅಳಲು ತೋಡಿಕೊಂಡರು.

ಮಲದ ಗುಂಡಿ ಶುಚಿ

ಮತ್ತೆ ನಮ್ಮ ಪಯಣ ಕೋಲಾರದ ಮೋಚಿಪಾಳ್ಯದ ಕಡೆಗೆ ಸಾಗಿತು. ಜತೆಗಿದ್ದ ‘ಸಫಾಯಿ ಕರ್ಮಚಾರಿ ಕಾವಲು ಸಮಿತಿ’ಯ ವಿಭಾಗೀಯ ಸಂಚಾಲಕಿ ಪದ್ಮಾ, ‘ಇವರದ್ದು ಮತ್ತೊಂದು ಕತೆ ಸಾರ್’ ಎಂದು ಹೇಳಿದರು.

ನೋಡುವುದಕ್ಕೆ 55-58 ವರ್ಷದವರಂತೆ ಕಾಣುತ್ತಿದ್ದ ವೆಂಕಟೇಶ ಅವರನ್ನು ‘ಎಷ್ಟು ವಯಸ್ಸು’ ಎಂದಾಗ, ‘42’ ಅಂದರು. ‘15 ವರ್ಷ ಆಯ್ತು ಸ್ವಾಮಿ ಈ ಕೆಲಸ ಮಾಡಲು ಶುರುಮಾಡಿ’ ಎಂದು ಮಾತು ಆರಂಭಿಸಿದ ಅವರು, ‘ಕೋಲಾರದ ಜಿಲ್ಲಾಧಿಕಾರಿ ಕಚೇರಿ, ಕೋರ್ಟ್ ಆವರಣ, ನಗರಸಭೆ ಕಚೇರಿಯಲ್ಲಿನ ಶೌಚಾಲಯದ ಪೈಪ್ ಕಟ್ಟಿಕೊಂಡಾಗ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದೆ. ನಾನು ಮಲ ಹೊರುವ ಕೆಲಸ, ಪಿಟ್ ಕ್ಲೀನ್ ಮಾಡುವ ಕೆಲಸ ಮಾಡುತ್ತಿದ್ದೇನೆ ಎಂದು ಸಫಾಯ ಕರ್ಮಚಾರಿ ಆಯೋಗದ ಮುಂದೆ ಹೇಳಿಕೊಂಡ ಮೇಲೆ, ಆ ಕೆಲಸ ಕೊಡುವುದನ್ನೇ ನಿಲ್ಲಿಸಿದರು. ಈಗ ಆ ಕೆಲಸವೂ ಇಲ್ಲ. ದುಡಿಮೆ ಇಲ್ಲದಾಗ ಹೆಂಡತಿಯ ತಾಳಿ ಸರ ಮಾರಿ, ಹಿಟ್ಟಿಗೆ ದುಡ್ಡು ಕೊಟ್ಟೆ. ಆಕೆ ಈಗ ಅರಿಶಿನದ ದಾರ ಕಟ್ಟಿಕೊಂಡು, ನನ್ನ ತಾಳಿ ಕಿತ್ಕೊಂಡ್ಯಲ್ಲೋ ಎಂದು ಬೈಯುತ್ತಾ ಓಡಾಡುತ್ತಿದ್ದಾಳೆ’ ಎಂದು ಹೇಳಿದಾಗ ಅವರ ಮುಖದಲ್ಲಿ ದುಗುಡ ತುಂಬಿತ್ತು.

‘ಪ್ರಸಿದ್ಧ ಆಸ್ಪತ್ರೆಯೊಂದರ ಶೌಚಾಲಯದಿಂದ ಒಳಚರಂಡಿ ಸಂಪರ್ಕ ಇದ್ದ ಪೈಪ್ ಕಟ್ಟಿಕೊಂಡಿತ್ತು. ಚೇಂಬರ್ ಕ್ಲೀನ್ ಮಾಡಲು ಮುಂದಾದಾಗ ಹೇಲು, ಕಸ ಒಣಗಿ ಕಟ್ಟಿಕೊಂಡಿತ್ತು. ಹೆರಿಗೆ ವಾರ್ಡ್‌ಗೆ ಶೌಚಾಲಯವಾಗಿದ್ದರಿಂದ ಸ್ಯಾನಿಟರಿ ನ್ಯಾಪಕಿನ್‌ಗಳು ಅಲ್ಲಿ ಅಂಟಿಕೊಂಡಿದ್ದವು. ಹಾಗೂ ಹೀಗೂ ಮಾಡಿ ಚೇಂಬರ್ ಕ್ಲೀನ್ ಮಾಡಿದರೂ ಕಟ್ಟಿಕೊಂಡ ಪೈಪ್ ಓಪನ್ ಆಗಲಿಲ್ಲ. ಪೈಪ್ ವಾಲ್ ಬಿಚ್ಚಿ ಕ್ಲೀನ್ ಮಾಡಬೇಕಿತ್ತು. ಪೈಪ್ ರಿಂಚ್ ಬಳಸಿ ವಾಲ್ ಬಿಚ್ಚಿದೆ. ಮತ್ತೆ ಹೇಲಿನ ಹೆಂಟೆಗಳು, ನ್ಯಾಪ್‌ಕಿನ್‌ಗಳು ಬಂದವು. ಅದನ್ನು ತೆಗೆಯುತ್ತಿದ್ದಂತೆ ಕಣ್ಣುಮೂಗು, ಸಣ್ಣಗೆ ಅರಳಿದ್ದ ಕೈಕಾಲು ಬೆರಳುಗಳಿದ್ದ ನಾಲ್ಕೈದು ತಿಂಗಳ ಭ್ರೂಣ ನನ್ನ ಅಂಗೈಗೆ ಬಂದು ಕುಳಿತಾಗ... ಎದೆ ಝಲ್ಲೆಂದಿತು. ಕೈಯೆಲ್ಲ ಗಲೀಜಾಗಿತ್ತು. ಆಸ್ಪತ್ರೆ ಕೆಲಸ ಎಂದೊಡನೆ ಮತ್ತೆ ಮತ್ತೆ ಆ ಪುಟ್ಟ ಭ್ರೂಣವೇ ಕಣ್ಮುಂದೆ ಬರುತ್ತದೆ. ಎಷ್ಟು ಬಾರಿ ತೊಳೆದು, ಒರೆಸಿಕೊಂಡಿದ್ದೇನೋ...  ಗೊತ್ತಿಲ್ಲ’ ಎಂದು ಹೇಳುತ್ತಾ ಮುಮ್ಮಲ ಮರುಗಿದರು ವೆಂಕಟೇಶ್.

‘ಇದೇ ಕೆಲಸ ಮಾಡುತ್ತಿದ್ದ ಅಪ್ಪ ಕುಡಿದು ಕುಡಿದು ನಲವತ್ತಕ್ಕೆ ಸತ್ತಾಗ ನನಗೆ 9 ವರ್ಷ. ಅಮ್ಮನ ಜತೆಗೆ ನಾನೂ ಈ ಕೆಲಸಕ್ಕೆ ಹೋದೆ. ಸುಮಾರು 27 ವರ್ಷದಿಂದ ಮಾಡುತ್ತಿದ್ದೇನೆ. ನಾಲ್ಕೈದು ಆಡಿ ಆಳ ಇರುವ ಮ್ಯಾನ್‌ಹೋಲ್‌ಗೆ ಇಳಿದು ಅಭ್ಯಾಸವಾಗಿದೆ. ಹಾಗಾಗಿ ಇಳಿಯುವಾಗ ಭಯವಾಗಲ್ಲ. ಆ ದುರ್ನಾತ ನೆನೆಸಿಕೊಂಡರೆ ಅಲ್ಲೇ ಸತ್ತುಹೋದರೆ ಸಾಕು ಎನಿಸಿಬಿಡುತ್ತದೆ. ಅಸಹ್ಯ ಪಟ್ಟುಕೊಂಡರೆ ಮಕ್ಕಳನ್ನು ಸಾಕಬೇಕಲ್ಲ ಎಂದು ಕಷ್ಟಪಟ್ಟು ಮಾಡಿದೆ. ಯಾರಾದ್ರೂ ಮನೆ ಮುಂದೆ ಹೋದರೆ ಗಲೀಜು ಕೆಲಸ ಮಾಡುವವರು ಬಂದ್ರು ಅಂತಾರೆ. ಕನಿಷ್ಠ ಕನಿಕರ, ಮನುಷ್ಯತ್ವದಿಂದ ನೋಡಿಕೊಳ್ಳುವುದಿಲ್ಲ. ನಮ್ಮ ಮಕ್ಕಳನ್ನು ಪಿಟ್ ಕ್ಲೀನ್ ಮಾಡುವವರ ಮಕ್ಕಳು ಎಂದು ಗುರುತಿಸಬಾರದು ಎಂಬ ಕಾರಣಕ್ಕೆ ಬೆಳಗಿನ ಜಾವ 4 ಗಂಟೆಗೆ ಎದ್ದು ಹೋಗುತ್ತೇವೆ. ಹಾಗಿದ್ದರೂ ಸಾಮಾಜಿಕ ಅವಮಾನವೇನೂ ತಪ್ಪಿಲ್ಲ’ ಎಂದು ಅವರು ನೋವಿನಿಂದ ನಿಡುಸುಯ್ದರು ನಾರಾಯಣಮ್ಮ.

ಪ್ರವಾಸಿ ಮಂದಿರದ ಕೂಗಳತೆ ದೂರದಲ್ಲಿರುವ ಜಲಸಂಗ್ರಹಾಗಾರಕ್ಕೆ ಇಡೀ ನಗರದ ಅರ್ಧದಷ್ಟು ಒಳಚರಂಡಿ ನೀರು, ಹೊಲಸು ಬಂದು ಸೇರುತ್ತದೆ. ಇಲ್ಲಿ ಕೆಲಸ ಮಾಡುವ ಗುಂಡಪ್ಪ ಗೂರಲು ಕೆಮ್ಮಿನಿಂದ ನರಳುತ್ತಿದ್ದರು. ‘ಮೊದಲೆಲ್ಲ ಪಿಟ್, ಮ್ಯಾನ್‌ಹೋಲ್ ಸ್ವಚ್ಛ ಮಾಡುತ್ತಿದ್ದೆ. ಈಗ ಕೈಯಲ್ಲಿ ಆಗುವುದಿಲ್ಲ’ ಎಂದು ಬೀಡಿ ಹಚ್ಚಿದರು.

ಉಸಿರು ಎಳೆದುಕೊಳ್ಳಲು ಆಗದೇ ಒತ್ತರಸಿ ಬಂದ ಕೆಮ್ಮನ್ನು ತಡೆದ ಅವರು, ‘ಇಡೀ ನಗರದ ಹೊಲಸು ಇಲ್ಲಿ ಬಂದು ಸೇರುತ್ತದೆ. ಇಲ್ಲಿ ಸೇರುವ ಗಸಿ ಮಿಶ್ರಿತ ನೀರಿನಲ್ಲಿ ನೀರಿನ ಭಾಗ ಮಾತ್ರ ಸಂಸ್ಕರಣೆಗೊಂಡು ಪೈಪ್ ಮೂಲಕ ಕೋಲಾರ ಕೆರೆಗೆ ಹೋಗುತ್ತದೆ. ಆದರೆ ಗಟ್ಟಿ ಕಸ, ನ್ಯಾಪ್‌ಕಿನ್, ಹೇಲು, ಮಾಂಸದ ತುಂಡು, ಮನೆಯಲ್ಲಿ ಶೌಚಾಲಯಕ್ಕೆ ಹಾಕುವ ವೇಸ್ಟ್‌ಗಳು ಸೀದಾ ಇಲ್ಲಿಗೆ ಬಂದು ಸೇರುತ್ತವೆ. 10-15 ಅಡಿ ಆಳಕ್ಕೆ ಇಳಿದು ಅದನ್ನೆಲ್ಲ ಬಕೀಟ್‌ನಲ್ಲಿ ಏಳೆಂಟು ಮೆಟ್ಟಿಲು ಹತ್ತಿ ಮೇಲೆ ತಂದು ಗುಡ್ಡೆ ಹಾಕಬೇಕು. ಅದು ಹೀಗೆ ರಾಶಿ ರಾಶಿ ಕೂಡಿಸಿದ ಮೇಲೆ ಅದನ್ನು ಲಾರಿಯಲ್ಲಿ ಹೇರಿಕೊಂಡು ಹೊರಗೆ ಕೊಂಡೊಯ್ಯುತ್ತಾರೆ. ಲಾರಿಗೆ ತುಂಬುವಾಗಲೂ ತಲೆ ಮೇಲೆ ಹೊತ್ತೇ ಹಾಕಬೇಕು. ಮಲ ಹೊರುವ ಪದ್ಧತಿ ಇಲ್ಲ ಎನ್ನುತ್ತಾರೆ. ನಾವು ಹೊರುತ್ತಿಲ್ಲವೇ’ ಎಂದು ಪ್ರಶ್ನಿಸಿದರು.

‘ಕೆಲಸ ಮಾಡುವಾಗ ಕುಡಿದಿರುತ್ತೇವೆ. ನಾನು ಆಗ ನಾನಾಗಿರುವುದಿಲ್ಲ. ಮಲಹೊರುವ, ಪಿಟ್ ಸ್ವಚ್ಛಗೊಳಿಸುವ ವ್ಯಕ್ತಿಯೊಬ್ಬ ನನ್ನಲ್ಲಿ ಆವಾಹಿಸಿಕೊಂಡಿರುತ್ತೇನೆ. ಹೀಗೆ ಹೇಲುಗುಂಡಿ ಸ್ವಚ್ಛಗೊಳಿಸುವವನೇ ಬೇರೆ, ಈಗ ನಿಮ್ಮ ಮುಂದೆ ಮಾತನಾಡುತ್ತಿರುವವನೇ ಬೇರೆ. ನಾನು ನಾನಾಗಿದ್ದರೆ ಆ ಕೆಲಸ ಹೇಗೆ ಮಾಡಲು ಸಾಧ್ಯ? ಅದೊಂದು ಹೃದಯವಿಲ್ಲದ, ಅಸಹ್ಯ, ಅಮೇಧ್ಯ, ದುರ್ನಾತದ ಅರಿವು ಇರದ ರೋಬೋಟ್ ಇದ್ದಂತೆ. ನಾನು ಹಾಗೆ ಕೆಲಸ ಮಾಡದೇ ಇದ್ದರೆ ವಿಧಿಯಿಲ್ಲ’ ಎಂದು ತಮ್ಮ ದಯನೀಯ ಬದುಕು ತೆರೆದಿಟ್ಟರು ನರಸಿಂಹಯ್ಯ.

ಕೋಲಾರ, ಕೆಜಿಎಫ್, ಚಿಕ್ಕಬಳ್ಳಾಪುರಗಳಲ್ಲಿ ಮಲ ಹೊರುವವರು, ಮ್ಯಾನ್ಯುಯಲ್ ಸ್ಕಾವೆಂಜರ್ಸ್ ಸಮುದಾಯದವರನ್ನು ಸಂಘಟಿಸುತ್ತಿರುವ ಪದ್ಮಾ ಅವರು, ‘ಇವರಲ್ಲಿ ಯಾರಿಗೂ ಈ ಕೆಲಸ ಮಾಡಲು ಇಷ್ಟವಿಲ್ಲ. ಈ ಕೆಲಸ ಮಾಡುತ್ತಿರುವವರಿಗೆ ಗುರುತಿನ ಚೀಟಿ ಕೊಟ್ಟು, ಪ್ಯಾಕೇಜ್ ಘೋಷಿಸಿದರೆ ಅವರೆಲ್ಲರೂ ಬಿಡಲು ಸಿದ್ಧರಿದ್ದಾರೆ. ಅಂತಹ ಹೀನಾಯ ಬದುಕಿನಿಂದ ಅವರೆಲ್ಲ ಮುಕ್ತಿ ಬಯಸಿದ್ದಾರೆ. ಆರು ತಿಂಗಳು ಈ ಕೆಲಸ ಮಾಡದೇ ಇದ್ದರೆ ₹40,000 ಕೊಡಲು ಅವಕಾಶವಿದ್ದು, ₹15 ಲಕ್ಷದವರೆಗೂ ಪುನರ್ವಸತಿ ಪ್ಯಾಕೇಜ್ ಸಿಗಲಿದೆ. ಆದರೆ, ಸರ್ಕಾರದ ಅಧಿಕಾರಿಗಳು ಮ್ಯಾನ್ಯುಯಲ್ ಸ್ಕಾವೆಂಜರ್ಸ್ ಇದ್ದಾರೆ ಎಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ದಶಕಗಳಿಂದ ಕೆಲಸ ಮಾಡುತ್ತಿದ್ದೇವೆ ಎಂದು ದಾಖಲೆ, ಸರ್ಟಿಫಿಕೇಟ್, ಫೋಟೊ ಎಲ್ಲವನ್ನೂ ಕೊಟ್ಟರೂ ಜಿಲ್ಲಾಡಳಿತ ಒಪ್ಪಿಕೊಳ್ಳಲು ತಯಾರಿಲ್ಲ. ಇದೆ ಎಂದು ಒಪ್ಪಿಕೊಂಡರೆ ಅಂತಹ ನಗರಾಡಳಿತದ ಅಧಿಕಾರಿಗಳು ಜೈಲಿಗೆ ಹೋಗಬೇಕಾಗುತ್ತದೆ ಎಂದು ಹೇಳುತ್ತಿದ್ದಾರೆ. ಹಾಗಂತ ಈ ಸಮುದಾಯ ಎಷ್ಟು ದಿನ ಇದೇ ಕೆಲಸ ಮಾಡಬೇಕು’ ಎಂದು ಆಕ್ರೋಶದಿಂದ ಪ್ರಶ್ನಿಸಿದರು.

ರೈಲ್ವೆಗಿಲ್ಲ ‘ಸ್ವಚ್ಛ ಭಾರತ’

ಹೇಲು ಎತ್ತುವ, ಬಾಚುವ ಭೀಕರ ಪರಿಸ್ಥಿತಿಯನ್ನು ಯಾರಾದರೂ ಕಣ್ಣಾರೆ ಕಾಣಬೇಕಾದರೆ ರೈಲು ನಿಲ್ದಾಣಗಳಿಗೆ ಒಮ್ಮೆ ಹೋಗಬೇಕು. ಬೆಳಿಗ್ಗೆ 5, 6 ಗಂಟೆ ಹೊತ್ತಿಗೆ ಯಾವುದೇ ರೈಲು ನಿಲ್ದಾಣಕ್ಕೆ ಹೋದರೆ ಇದರ ನರಕ ದರ್ಶನವಾಗುತ್ತದೆ.

‘ಒಂದು ರೈಲು ಬಂದು ಹತ್ತಾರು ನಿಮಿಷ ನಿಂತು ಮುಂದೆ ಸಾಗುತ್ತಿದ್ದಂತೆ ಪೊರಕೆ, ನೀರಿನ ಕೊಡ, ಬಾಚುವ ಕರಣೆ, ಪ್ಲಾಸ್ಟಿಕ್ ಬಾಂಡ್ಲಿ ತೆಗೆದುಕೊಂಡು ರೈಲ್ವೆ ಹಳಿಯ ಮೇಲೆ ಇಳಿಯುವ, ಸಭ್ಯ ಭಾಷೆಯಲ್ಲಿ ಸ್ಯಾನಿಟರಿ ವರ್ಕರ್ಸ್ ಎಂದು ಕರೆಯುವವರು ಮಾಡುವುದು ಮಾತ್ರ ಹೇಲು ಎತ್ತುವ, ಬಳಿಯುವ ಕೆಲಸವನ್ನೇ. ಹಳಿಯ ಆಚೆ, ಈಚೆ, ಮಧ್ಯೆ ಬಿದ್ದಿದ್ದ ಹೇಲಿನ ಹೆಂಟೆಗಳನ್ನು ಗುಡಿಸಿ, ತಳ್ಳಿ ಅದು ಹೋಗದೇ ಇದ್ದಾಗ ಕೊಡಗಟ್ಟಲೇ ನೀರು ಸುರಿದು ಅದನ್ನು ತಳ್ಳುತ್ತಾರೆ. ಅಲ್ಲಿಗೂ ಅದು ಹೋಗದೇ ಇದ್ದಾಗ ಅದನ್ನು ಕೈಯಿಂದಲೇ ಎತ್ತಿ ತೆಗೆದುಕೊಂಡ ಹೋಗಬೇಕಾದ ಹೀನಾಯ ಸನ್ನಿವೇಶ ಕಾಣಸಿಗುತ್ತದೆ’ ಎಂದು ವಿವರಿಸುವ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್‌ನ ಕರ್ನಾಟಕ ಘಟಕದ ಅಧ್ಯಕ್ಷ ವೈ.ಜೆ. ರಾಜೇಂದ್ರ, ‘ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ರೈಲ್ವೆ ಇಲಾಖೆಗೆ ಅನ್ವಯಿಸುವುದಿಲ್ಲವೇ’ ಎಂದು ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ.

‘ಬಿಬಿಎಂಪಿ ಅಧಿಕಾರಿಗಳು ‘ಬೆಂಗಳೂರಿನಲ್ಲಿ ಸಾಕಷ್ಟು ಜೆಟ್ಟಿಂಗ್, ಸಕ್ಕಿಂಗ್ ಮೆಷಿನ್ ಇವೆ. ಮ್ಯಾನ್ಯುಯಲ್ ಸ್ಕಾವೆಂಜರ್ ಪದ್ಧತಿಯೇ ಇಲ್ಲ’ ಎಂದು ಪ್ರತಿಪಾದಿಸುತ್ತಾರೆ. ಅಕ್ಕಿಪೇಟೆ, ಕಾಟನ್‌ಪೇಟೆ, ತಿಗಳರಪೇಟೆ, ಮಾಮೂಲುಪೇಟೆ ಹೀಗೆ ಅವೆನ್ಯೂ ರಸ್ತೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಜೆಟ್ಟಿಂಗ್ ಮೆಷಿನ್ ಹೋಗಲಿ, ಆಟೊರಿಕ್ಷಾ ಕೂಡ ಹೋಗುವುದಿಲ್ಲ. ಈ ಭಾಗದಲ್ಲಿ ಶೌಚಾಲಯದ ಪೈಪ್, ಮ್ಯಾನ್‌ಹೋಲ್ ಕಟ್ಟಿಕೊಂಡರೆ ಅದನ್ನು ಸ್ವಚ್ಛಗೊಳಿಸಲು ಯಂತ್ರ ಹೋಗಲು ಸಾಧ್ಯವೇ ಇಲ್ಲ. ಜಕ್ಕರಾಯನ ಕೆರೆ, ಅರುಂಧತಿ ನಗರ, ಶಾಸ್ತ್ರೀ ನಗರ, ಆತ್ಮಜ್ಯೋತಿ ನಗರದಲ್ಲಿರುವ ಮಾದಿಗ ಸಮುದಾಯದವರೇ ಬೇಕು’ ಎಂದು ಅವರು ವಿವರಿಸುತ್ತಾರೆ.

‘ಬೆಂಗಳೂರಿನಲ್ಲಿ ಬಿದಿರಿನ ದಬ್ಬೆಯನ್ನು ಹೆಗಲ ಮೇಲೆ ಹಾಕಿಕೊಂಡು ಓಡಾಡುವವರು ಎಲ್ಲ ಕಡೆಗಳಲ್ಲಿ ಕಾಣಸಿಗುತ್ತಾರೆ. ಇವರು ಯಾರೂ ಕಾಯಂ ಪೌರ ಕಾರ್ಮಿಕರಲ್ಲ. ಕೆಲವರು ಗುತ್ತಿಗೆ ಆಧಾರದಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಅದೇ ಜನ ರಾತ್ರಿ ಅಥವಾ ಬೆಳಗಿನ ಜಾವ ಮ್ಯಾನ್‌ಹೋಲ್, ಚೇಂಬರ್, ಪೈಪ್ ಕಟ್ಟಿಕೊಂಡಿದ್ದನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾರೆ. ಯಾವುದೇ ಸುರಕ್ಷತೆಯ ವ್ಯವಸ್ಥೆ, ದೀಪ, ಗ್ಲೌಸ್ ಯಾವುದೂ ಇಲ್ಲ. ತುರ್ತು ಆಮ್ಲಜನಕದ ವ್ಯವಸ್ಥೆ ಕೂಡ ಇರುವುದಿಲ್ಲ. ಹಿಂದಿನಂತೆ ಬುಟ್ಟಿಯಲ್ಲಿ ತುಂಬಿಕೊಂಡು ಮಲ ಹೊರುವವರು ಇಲ್ಲ. ಆದರೆ, ಮ್ಯಾನ್‌ಹೋಲ್, ಮನೆಯ ಶೌಚಾಲಯದ ಚೇಂಬರ್‌ನಲ್ಲಿ ಹೇಲು ಅಲ್ಲದೇ ಅಮೃತ ಹೊರಬರುತ್ತದೆಯೇ? ಅದನ್ನೆಲ್ಲಾ ಕೈಯಿಂದಲ್ಲದೇ ಮೆಷಿನ್‌ನಿಂದ ಕ್ಲೀನ್ ‍ಮಾಡಿಸುತ್ತಾರೆಯೇ’ ಎಂದು ಪ್ರಶ್ನಿಸುತ್ತಾರೆ.

ಖಚಿತ ಮಾಹಿತಿ ಇಲ್ಲ

ಕರ್ನಾಟಕದಲ್ಲಿ ಗ್ರಾಮೀಣ ಮತ್ತು ನಗರಪ್ರದೇಶ ಸೇರಿ 746 ಜನ ಮಲ ಬಾಚುವವರು ಇದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 202, ಕೆಜಿಎಫ್ 87, ಕೋಲಾರ ಗ್ರಾಮೀಣ ಭಾಗದಲ್ಲಿ 149 ಜನರಿದ್ದಾರೆ.

ಆದರೆ, ಅಘೋಷಿತವಾಗಿ, ರಹಸ್ಯವಾಗಿ ಈ ಕೆಲಸ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ಈವರೆಗೆ ಸಮೀಕ್ಷೆಯೇ ನಡೆಯದಿರುವುದರಿಂದ ಮಾಹಿತಿ ಯಾರ ಬಳಿಯೂ ಇಲ್ಲ.

ಕರ್ನಾಟಕದಲ್ಲಿ ಇದ್ದವರಿಗೆ ಪುನರ್ವಸತಿ ಪ್ಯಾಕೇಜ್ ‍ಕೊಟ್ಟು, ಮುಖ್ಯವಾಹಿನಿಗೆ ತರಲಾಗಿದೆ. ಅದಾದ ಬಳಿಕವೂ ಇದ್ದಾರೆ ಎಂದು ನೋಂದಣಿ ಮಾಡಿದರೆ, ಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿದ್ದಕ್ಕೆ ಜೈಲಿಗೆ ಹೋಗಬೇಕಾಗುತ್ತದೆ ಎಂಬ ಭಯಕ್ಕೆ ಅಧಿಕಾರಿಗಳು, ಮಲ ಬಾಚುವವರು ಇದ್ದಾರೆ ಎಂಬುದನ್ನೇ ನಿರಾಕರಿಸುತ್ತಿದ್ದಾರೆ.

ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಪೌರಕಾರ್ಮಿಕರ ಬದುಕಿನ ಅಧ್ಯಯನಕ್ಕಾಗಿ ಬಿನ್ನಿಪೇಟೆ ಶಾಸಕರಾಗಿದ್ದ ಐ.ಪಿ.ಡಿ. ಸಾಲಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದರು. ಅಂದು ನೀಡಿದ ವರದಿಯಲ್ಲಿ ಮಲಹೊರುವ ಭೀಕರ ಪದ್ಧತಿ ಬಗ್ಗೆ ವಿವರ ಇತ್ತು. ಅಂದು ಸಮಾಜ ಕಲ್ಯಾಣ ಸಚಿವರಾಗಿದ್ದ ಬಿ. ಬಸವಲಿಂಗಪ್ಪ ಅವರ ಆಸಕ್ತಿಯ ಫಲವಾಗಿ ದೇಶದಲ್ಲೇ ಮೊದಲ ಬಾರಿಗೆ 1974ರಲ್ಲಿಯೇ ಕರ್ನಾಟಕದಲ್ಲಿ ಮಲ ಹೊರುವ ಪದ್ಧತಿ ನಿಷೇಧಿಸಿ ಕಾನೂನು ಜಾರಿಗೆ ತರಲಾಗಿತ್ತು. ಇದರ ಆಧಾರದ ಮೇಲೆ ದೇಶದಲ್ಲಿಯೂ ಈ ಕಾನೂನು ಜಾರಿಗೆ ಬಂದಿದೆ.

ಮಾನವ ಬಳಕೆಗೆ ಆಕ್ಷೇಪ

ಪಿಯುಸಿಎಲ್, ಕರ್ನಾಟಕ ಹೈಕೋರ್ಟ್‌ನಲ್ಲಿ ಹೂಡಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಆಧರಿಸಿ ಕಾನೂನು ಸೇವಾ ಪ್ರಾಧಿಕಾರದ ಅಂದಿನ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ವಿಶ್ವನಾಥ್ ವಿ. ಅಂಗಡಿ ಅಧ್ಯಕ್ಷತೆಯಲ್ಲಿ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಕೆಲಸಗಾರರ ಬಗ್ಗೆ ಅಧ್ಯಯನ ನಡೆಸಲು ಸಮಿತಿಯೊಂದನ್ನು ಹೈಕೋರ್ಟ್‌ ರಚಿಸಿತ್ತು. 2011ರಲ್ಲಿ ಈ ಸಮಿತಿಯು ಹೈಕೋರ್ಟ್‌ಗೆ ವರದಿ ನೀಡಿತ್ತು. ಆ ವರದಿಯಲ್ಲಿ ಕರ್ನಾಟಕದ ಯಾವ್ಯಾವ ನಗರ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಇದೆ, ಎಲ್ಲಿ ಇಲ್ಲ ಎಂಬ ಬಗ್ಗೆ ಹಾಗೂ ಎಷ್ಟು ಜನ ಪೌರಕಾರ್ಮಿಕರು ಇದ್ದಾರೆ ಎಂಬ ವಿವರ ಇದೆ. ಸ್ವಚ್ಛತಾ ಕೆಲಸಗಾರರನ್ನು ಮ್ಯಾನ್‌ಹೋಲ್‌ಗೆ ಇಳಿಸುವುದು, ಕಟ್ಟಿಕೊಂಡ ಚೇಂಬರ್‌ಗಳನ್ನು ಶುಚಿಗೊಳಿಸುವುದಕ್ಕೆ ಮನುಷ್ಯರನ್ನು ಬಳಕೆ ಮಾಡುವುದಕ್ಕೆ ವರದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಎಲ್ಲ ಕಡೆಗಳಲ್ಲೂ ಯಂತ್ರಗಳನ್ನು ಖರೀದಿಸಬೇಕು ಎಂದೂ ಸೂಚಿಸಿತ್ತು.

Comments
ಈ ವಿಭಾಗದಿಂದ ಇನ್ನಷ್ಟು
'ಎಣ್ಣಿ' ಉಣ್ಣುವ ಸಂಕಟದ ಕಥನ

ಆಳ–ಅಗಲ
'ಎಣ್ಣಿ' ಉಣ್ಣುವ ಸಂಕಟದ ಕಥನ

17 Mar, 2018
ಪರಿತ್ಯಕ್ತ ರೋಗಿಗಳ ಕರುಣಾಜನಕ ಕಥೆ

ಆಳ–ಅಗಲ
ಪರಿತ್ಯಕ್ತ ರೋಗಿಗಳ ಕರುಣಾಜನಕ ಕಥೆ

10 Mar, 2018
ಕೋಳಿಗಳಿಗೆ ಆ್ಯಂಟಿಬಯೊಟಿಕ್‌ ಬಳಕೆ

ಶಿಶುಗಳ ಸಾವಿಗೆ ಕಾರಣ
ಕೋಳಿಗಳಿಗೆ ಆ್ಯಂಟಿಬಯೊಟಿಕ್‌ ಬಳಕೆ

3 Mar, 2018
ರೇಷ್ಮೆ ಗೂಡಿನೊಳು ಬಂದಿಯಾದ ಬದುಕು

ಆಳ–ಅಗಲ
ರೇಷ್ಮೆ ಗೂಡಿನೊಳು ಬಂದಿಯಾದ ಬದುಕು

24 Feb, 2018
ಗೊಂಬೆ ನಂಬಿದವರ ಬಣ್ಣ ಮಾಸಿದ ಬದುಕು

ಆಳ–ಅಗಲ
ಗೊಂಬೆ ನಂಬಿದವರ ಬಣ್ಣ ಮಾಸಿದ ಬದುಕು

17 Feb, 2018