ಜಿಜ್ಞಾಸೆ

ಋತುಚಕ್ರದಲ್ಲಿ ದೇವರ ಪೂಜೆ ಮಾಡಬಾರದೆ?

ಇಂದ್ರನು ತನ್ನ ಪುರೋಹಿತನಾಗಿದ್ದ ವಿಶ್ವರೂಪನೆಂಬವನು ರಾಕ್ಷಸರಿಗೆ ಒಳಗಿಂದೊಳಗೆ ಸಹಾಯ ಮಾಡುತ್ತಿದ್ದುದನ್ನು ಸಹಿಸಲಾರದೆ ಅವನನ್ನು ಕೊಂದು ಹಾಕಿದ. ಅದರಿಂದ ಅವನಿಗೆ ಬ್ರಹ್ಮಹತ್ಯೆಯ ಪಾತಕ ಅಂಟಿಕೊಂಡಿತು...

ಎಂ.ಎ. ಹೆಗಡೆ

ಪ್ರಶ್ನೆ: ಮುಟ್ಟಾದ ಮಹಿಳೆಯರು ದೇವಾಲಯಕ್ಕೆ ಹೋಗಬಾರದು, ಧಾರ್ಮಿಕ ಕ್ರಿಯೆಗಳಲ್ಲಿ ಭಾಗವಹಿಸಬಾರದು ಎಂಬ ನಿಷೇಧವನ್ನು ಹೇರಲಾಗಿದೆ. ಇಂಥ ನಿಷೇಧಗಳು ಶಾಸ್ತ್ರಗಳಲ್ಲಿಯೇ ಇವೆಯೆ? ಇದ್ದರೆ ಅವಕ್ಕೆ ಕಾರಣಗಳೇನು?
– ಅರುಂಧತಿ ದೇಶಪಾಂಡೆ, ಬೆಂಗಳೂರು


ಉತ್ತರ: ಶಾಸ್ತ್ರಗಳು ಸ್ತ್ರೀಯರ ರಜೋದರ್ಶನವನ್ನು ಶುದ್ಧಿ ಪ್ರಕ್ರಿಯೆಯಲ್ಲಿ ಸೇರಿಸಿವೆ. ಪುರಾಣಗಳಲ್ಲಿ ಬರುವ ಕಥೆಯೊಂದು ಹೀಗಿದೆ: ಇಂದ್ರನು ತನ್ನ ಪುರೋಹಿತನಾಗಿದ್ದ ವಿಶ್ವರೂಪನೆಂಬವನು ರಾಕ್ಷಸರಿಗೆ ಒಳಗಿಂದೊಳಗೆ ಸಹಾಯ ಮಾಡುತ್ತಿದ್ದುದನ್ನು ಸಹಿಸಲಾರದೆ ಅವನನ್ನು ಕೊಂದು ಹಾಕಿದ. ಅದರಿಂದ ಅವನಿಗೆ ಬ್ರಹ್ಮಹತ್ಯೆಯ ಪಾತಕ ಅಂಟಿಕೊಂಡಿತು.

ಆನಂತರ ಬ್ರಹ್ಮಾದಿಗಳ ಸಲಹೆಯಂತೆ ಅವನು ಆ ದೋಷವನ್ನು ಪೃಥ್ವಿ, ಸಮುದ್ರ, ವೃಕ್ಷಗಳು ಹಾಗೂ ಸ್ತ್ರೀಯರಲ್ಲಿ ಹಂಚಿಹಾಕಿದ. ಅದರಿಂದ ಸ್ತ್ರೀಯರು ಸದಾಕಾಲವೂ ಬಾಧೆ ಪಡಬಾರದೆಂದು ತಿಂಗಳಲ್ಲಿ ಮೂರು ದಿನಗಳವರೆಗೆ ಅನುಭವಿಸುವಂತೆ ಅನುಗ್ರಹಿಸಿದ. ಅದು ರಜಸ್ಸಿನ ರೂಪದಲ್ಲಿ ಹೊರಹೋಗುವ ಸಮಯವೇ ಮುಟ್ಟಿನ ಸಮಯ.

ಶಾಸ್ತ್ರಗಳ ಪ್ರಕಾರ ರಕ್ತಸ್ರಾವವು ಅವಳನ್ನು ಬಹುಮಟ್ಟಿನ ಪಾಪಗಳಿಂದ ಮುಕ್ತವನ್ನಾಗಿಸುತ್ತದೆ. ಯಾಜ್ಞವಲ್ಕ್ಯರ ಪ್ರಕಾರ – ದೈಹಿಕವಾದ ವ್ಯಭಿಚಾರವನ್ನು ಹೊರತುಪಡಿಸಿ ಇತರ ಎಲ್ಲ ಸಾಮಾನ್ಯ ಪಾಪಗಳು ದೂರವಾಗುತ್ತವೆ. ನಮ್ಮ ಶರೀರದ ಕೊಳೆಯನ್ನು ಕಳೆಯುವ ಸಮಯವನ್ನು ಅಪವಿತ್ರವೆಂದು ಭಾವಿಸಲಾಗುತ್ತದೆ.

ಮಲ–ಮೂತ್ರವಿಸರ್ಜನೆಯಂಥವುಗಳನ್ನು ಇಲ್ಲಿ ಗಮನಿಸಬಹುದು. ಇಂಥ ಕಾರ್ಯದಲ್ಲಿ ತೊಡಗಿಕೊಂಡಿರುವಾಗ ದೇವಾರ್ಚನೆಯೇ ಮುಂತಾದವುಗಳನ್ನು ಮಾಡುವುದಿಲ್ಲ. ಮುಟ್ಟಿನ ಸಮಯದಲ್ಲಿ ರಕ್ತಸ್ರಾವವಾಗುತ್ತಿರುವುದರಿಂದ ಅವಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಅಶುಚಿತ್ವದ ಭಾವನೆಯಿಂದ ಕೂಡಿರುತ್ತಾಳೆ. ಸ್ವತಃ ವೇದನೆಯನ್ನು ಅನುಭವಿಸುತ್ತಿರುತ್ತಾಳೆ.

ಇಂಥ ಸಮಯದಲ್ಲಿ ಅವಳಿಗೆ ಪೂರ್ಣವಿಶ್ರಾಂತಿ ಬೇಕು. ಅವಳು ಗೃಹಕೃತ್ಯಗಳಿಂದ, ಪತಿಯ ಸಹವಾಸದಿಂದ ದೂರವಿರುವುದು ಒಳ್ಳೆಯದು. ವ್ಯಾಸಸ್ಮೃತಿಯು ‘ರಜೋದರ್ಶನತೋ ದೋಷಾತ್ ಸರ್ವಮೇವ ಪರಿತ್ಯಜೇತ್’ –  ರಜೋದರ್ಶನದಿಂದ ದೋಷವು ಪ್ರಾಪ್ತವಾಗುವುದರಿಂದ ಎಲ್ಲ ಕಾರ್ಯಗಳನ್ನೂ ತ್ಯಜಿಸಬೇಕು (ವ್ಯಾಸ. 2–37) ಎನ್ನುತ್ತದೆ. ಹಾಗೆಯೇ ‘ಕೃತಶೌಚಾ ಪುನಃ ಕರ್ಮ ಪೂರ್ವವಚ್ಚ ಸಮಾಚರೇತ್’ - ಶುದ್ಧಳಾದ ನಂತರ ಮತ್ತೆ ಹಿಂದಿನಂತೆ ಕರ್ಮಗಳನ್ನು ಮಾಡಬೇಕು (ಅಲ್ಲೇ 2–41) ಎಂದಿದೆ. ಅಂತೆಯೇ ಪರಾಶರಸ್ಮೃತಿಯಲ್ಲಿ -

ಸ್ನಾತಾ ರಜಸ್ವಲಾ ಯಾ ತು ಚತುರ್ಥೇಹನಿ ಶುಧ್ಯತಿ |
ಕುರ್ಯಾದ್ರಜೋನಿವೃತ್ತೌ ತು ದೈವಪಿತ್ರ್ಯಾದಿಕರ್ಮ ಚ || (8–17)

ಎನ್ನುವ ಮಾತಿದೆ. ಎಂದರೆ, ರಜಸ್ವಲೆಯು ನಾಲ್ಕನೆಯ ದಿನ ಸ್ನಾನವನ್ನು ಮಾಡಿ ಶುದ್ಧಳಾಗುತ್ತಾಳೆ. ರಜೋ ನಿವೃತ್ತಿಯಾದ ನಂತರ ಅವಳು ದೇವಕಾರ್ಯ, ಪಿತೃಕಾರ್ಯಾದಿಗಳನ್ನು ಮಾಡಬಹುದು.

ಕೆಲವರು ನಾಲ್ಕನೆಯ ದಿನವೂ ಸ್ರಾವವಿದ್ದರೆ ನಿಷೇಧಿಸುತ್ತಾರೆ. ‘ಪಂಚಮೇsಹನಿ ಶುದ್ಧ್ಯತಿ’ ಎನ್ನತ್ತಾರೆ. ನಾಲ್ಕನೆಯ ದಿನ ಮನೆಯೊಳಗೆ ಬಂದರೂ ದೇವಪೂಜಾದಿಗ

ಳನ್ನು ಮಾಡಬಾರದೆನ್ನುತ್ತಾರೆ. ಆಪಸ್ತಂಬರೇ ಮುಂತಾದವರು ನಾಲ್ಕನೆಯ ದಿನದಂದು ಸಚೈಲ ಸ್ನಾನದಿಂದ ಶುದ್ಧಿಯನ್ನು ಹೇಳಿದ್ದಾರೆ. ಹೀಗಾಗಿ ಶಾಸ್ತ್ರಗಳು ದೇವಾಲಯಕ್ಕೆ ಹೋಗಬಾರದೆಂದು ಶಬ್ದೋಕ್ತವಾಗಿಸಿಲ್ಲವಾದರೂ ಅಭಿಪ್ರಾಯ ಸ್ಪಷ್ಟವಾಗಿದೆ.

ಬದಲಾದ ಕಾಲದಲ್ಲಿ ಹೆಣ್ಣು ಮನೆಯಲ್ಲಿ ವಿಶ್ರಾಂತಿಯನ್ನು ಪಡೆಯುವುದು ಕಷ್ಟವಾಗಿದೆ. ಸ್ರಾವದ ಮುಜುಗರವನ್ನು ತಪ್ಪಿಸಿಕೊಳ್ಳಲು ಅನುಕೂಲಿಸುವ ಉಪಾಯ ಉಪಕರಣಗಳೂ ಇವೆ. ಹಾಗಾಗಿ ಹಿಂದಿನ ಕಟ್ಟುಪಾಡುಗಳು ಸಡಿಲವಾಗಿದ್ದರೂ ಆಂತರಂಗಿಕವಾದ ತೊಂದರೆ ಇದ್ದೇ ಇದೆ. ಶಾಸ್ತ್ರಗಳು ಸ್ತ್ರೀಯರ ಸ್ವಾಸ್ಥ್ಯ ಹಾಗೂ ರಕ್ಷಣೆಗಳನ್ನು ಗಮನದಲ್ಲಿರಿಸಿಕೊಂಡು ಈ ಕಟ್ಟುಪಾಡುಗಳನ್ನು ಹೇರಿವೆಯೆನ್ನುವುದರಲ್ಲಿ ಸಂಶಯವಿಲ್ಲ.

Comments
ಈ ವಿಭಾಗದಿಂದ ಇನ್ನಷ್ಟು

ವೈಶಾಖದ ಹುಣ್ಣಿಮೆ
ಬಾಲರು ಯಾರು?

ಶಿವರಾತ್ರಿಯಂದು ನಾವು ಜಾಗರಣೆ ಮಾಡುತ್ತೇವೆ, ಅಲ್ಲವೆ? ರಾತ್ರಿ ಮುಂದುವರೆದಂತೆ ನಮಗೆ ನಿದ್ರೆಯ ಸೆಳೆತ ಹೆಚ್ಚುತ್ತಹೋಗುವುದು ಸಹಜ. ಆಗ ‘ಈ ರಾತ್ರಿ ಇನ್ನೂ ಮುಗಿಯುತ್ತಲೇ ಇಲ್ಲ!...

20 Jan, 2018
ಗಾಯನಕ್ಕೆ ಸಿದ್ಧವಾದ ರಾಮಕಥೆ

ರಾಮಾಯಣ ರಸಯಾನ
ಗಾಯನಕ್ಕೆ ಸಿದ್ಧವಾದ ರಾಮಕಥೆ

20 Jan, 2018
ಕಲೆಗಾಗಿ ಕಲೆ ಅಲ್ಲ!

ರಾಮಾಯಣ ರಸಾಯನ 22
ಕಲೆಗಾಗಿ ಕಲೆ ಅಲ್ಲ!

13 Jan, 2018
’ನಮಗೆ ಕಾವೇರಿ ನೀರೇ ಬೇಡ! ’

ವಿಡಂಬನೆ
’ನಮಗೆ ಕಾವೇರಿ ನೀರೇ ಬೇಡ! ’

13 Jan, 2018

ಅಧ್ಯಯನ
ಸೂರ್ಯ: ಜಗತ್ತಿನ ಕಣ್ಣು

ಸೂರ್ಯನು ಹುಟ್ಟಿದ ಕೂಡಲೇ ಕತ್ತಲು ಸರಿಯುತ್ತದೆ; ಎಲ್ಲರ ಕಣ್ಣಿಗೂ ಕಾಣುವಂಥವನು ಅವನು; ಅವನ ಹುಟ್ಟಿಗೂ ಜಗತ್ತಿನ ಆಗುಹೋಗುಗಳಿಗೂ ನೇರ ಸಂಬಂಧವಿದೆ. ಇವೆಲ್ಲವೂ ಸೂರ್ಯನ ಭೌತಿಕ ವಿವರಗಳು. ...

13 Jan, 2018