ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಶ್ಮೀರ ವಿವಾದ ಪರಿಹಾರಕ್ಕೆ ವಿಶೇಷ ಪ್ರತಿನಿಧಿ ನೇಮಕವಾಗಲಿ'

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ‘ಕಾಶ್ಮೀರ ವಿವಾದ ಪರಿಹರಿಸಲು ವಿಶ್ವಸಂಸ್ಥೆ ವಿಶೇಷ ಪ್ರತಿನಿಧಿಯನ್ನು ನೇಮಕ ಮಾಡಬೇಕು’ ಎಂದು ಪಾಕಿಸ್ತಾನ ಪ್ರಧಾನಿ ಶಾಹಿದ್‌ ಖಕಾನ್‌ ಅಬ್ಬಾಸಿ ಆಗ್ರಹಿಸಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇದೇ ಮೊದಲ ಬಾರಿಗೆ ಮಾತನಾಡಿದ ಅವರು, ಭಾರತವು ಕಾಶ್ಮೀರ ವಿಷಯವನ್ನು ‘ಕ್ರೂರವಾಗಿ ನಿರ್ವಹಣೆ’ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ. ‘ಕಾಶ್ಮೀರ ವಿವಾದವನ್ನು ಶಾಂತಿಯುವಾಗಿ ಪರಿಹರಿಸಲು ಭಾರತ ಬಯಸುವುದಿಲ್ಲ.  ಜಮ್ಮು ಮತ್ತು ಕಾಶ್ಮೀರದ ವಿಷಯವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕೈಗೊಂಡಿರುವ ನಿರ್ಣಯಗಳನ್ನು ಜಾರಿಗೊಳಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಭಾರತ– ಪಾಕಿಸ್ತಾನ ಗಡಿಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 600 ಬಾರಿ ಕದನ ವಿರಾಮ ಉಲ್ಲಂಘನೆಯಾಗಿದೆ. ಆದರೂ ಪಾಕಿಸ್ತಾನ ಸಂಯಮದಿಂದ ವರ್ತಿಸಿದೆ’ ಎಂದಿದ್ದಾರೆ.

‘ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಪೆಲೆಟ್‌ ಬಂದೂಕು ದಾಳಿಗೆ ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಅಂಧರಾಗಿದ್ದಾರೆ. ಇದು ಜಿನೇವಾ ಒಪ್ಪಂಧದ ಉಲ್ಲಂಘನೆಯಾಗಿದೆ’ ಎಂದೂ ಹೇಳಿದ್ದಾರೆ.

‘ಕಾಶ್ಮೀರದಲ್ಲಿ ನಡೆದಿರುವ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇದಕ್ಕಾಗಿ ತನಿಖಾ ಆಯೋಗವೊಂದನ್ನು ನೇಮಕ ಮಾಡಬೇಕು’ ಎಂದೂ ಒತ್ತಾಯಿಸಿದ್ದಾರೆ. 

‘ಕಾಶ್ಮೀರ ವಿವಾದ ಸೇರಿದಂತೆ ಹಲವು ವಿಷಯಗಳನ್ನು ಶಾಂತಿಯುತವಾಗಿ ಪರಿಹರಿಸಲು ಪಾಕಿಸ್ತಾನ ಬಯುಸುತ್ತಿದೆ. ಇದಕ್ಕಾಗಿ ಭಾರತದ ಜೊತೆ ಚರ್ಚೆ ನಡೆಸಲು ಸಿದ್ಧರಿದ್ದೇವೆ. ಈ ಚರ್ಚೆಯ ಬಳಿಕ ಪಾಕಿಸ್ತಾನ ಭಯೋತ್ಪಾದಕರನ್ನು ಪ್ರಾಯೋಜಿಸುವ ದೇಶ ಎಂದು ಪ್ರಚಾರ ಮಾಡುವುದನ್ನು ಭಾರತ ನಿಲ್ಲಿಸಬೇಕು’ ಎಂದು ಅಬ್ಬಾಸಿ ಹೇಳಿದ್ದಾರೆ.

ಭಯೋತ್ಪಾದನೆ ವಿರುದ್ಧ ಸಮರಕ್ಕೆ ದೃಢ ನಿರ್ಧಾರ

ವಿಶ್ವದ ಎಲ್ಲ ಬಗೆಯ ಭಯೋತ್ಪಾದನೆಯನ್ನು ಖಂಡಿಸಿರುವ ಬ್ರಿಕ್ಸ್‌ ರಾಷ್ಟ್ರಗಳು, ಭಯೋತ್ಪಾದನೆಯನ್ನು ಎದುರಿಸುವ ನಿಟ್ಟಿನಲ್ಲಿ ಭಾರತ ಮತ್ತು ಸಹವರ್ತಿ ರಾಷ್ಟ್ರಗಳು ಮುಖ್ಯ ಪಾತ್ರವಹಿಸಲು ಪೂರಕವಾಗುವಂತೆ ಸುಧಾರಣೆಗಳನ್ನು ತರಬೇಕು ಎಂದು ವಿಶ್ವಸಂಸ್ಥೆಗೆ ಮನವಿ ಮಾಡಿವೆ.

ಬ್ರಿಕ್ಸ್‌ ರಾಷ್ಟ್ರಗಳಾದ ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳು ವಿಶ್ವಸಂಸ್ಥೆಯ ವಾರ್ಷಿಕ ಸಭೆಯ ವೇಳೆ ಪ್ರತ್ಯೇಕವಾಗಿ ಮಾತುಕತೆ ನಡೆಸಿವೆ.

ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲ್‌ ಸೇರಿದಂತೆ ಅಗತ್ಯ ಸುಧಾರಣೆಗಳನ್ನು ತರಬೇಕು ಎಂದು ಎಲ್ಲ ನಾಯಕರು ಜಂಟಿ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲ್‌ಗೆ ರಷ್ಯಾ ಮತ್ತು ಚೀನಾ ಶಾಶ್ವತ ಸದಸ್ಯ ರಾಷ್ಟ್ರಗಳು. ತಮ್ಮ ಹೇಳಿಕೆಯಲ್ಲಿ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಬ್ರೆಜಿಲ್‌, ಭಾರತ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಪ್ರಾಮುಖ್ಯವನ್ನು ಎತ್ತಿ ಹಿಡಿದಿವೆ.

ಚೀನಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ನಂತರ ವಾರಾಂತ್ಯದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ಹಾಜರಿದ್ದ ಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ಪ್ರಬಲ ವಿರೋಧ ವ್ಯಕ್ತವಾಗಿದೆ. ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ, ಜೈಶಿ -ಎ-ಮೊಹಮ್ಮದ್ ಮುಂತಾದ ಭಯೋತ್ಪಾದಕ ಸಂಘಟನೆಗಳು ಹಿಂಸೆಗೆ ಕಾರಣವಾಗಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕಿಮ್‌ ಜಾಂಗ್‌

ಬೆದರಿಸಿದರೆ, ಭಾರಿ ಬೆಲೆ ತೆರಬೇಕಾದೀತು...

ಸೋಲ್‌ (ಎಎಫ್‌ಪಿ): ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ‘ಮಾನಸಿಕ ಅಸ್ವಸ್ಥನಂತೆ’ ವರ್ತಿಸುತ್ತಿದ್ದಾರೆ ಎಂದು ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್‌ ಉನ್‌ ಲೇವಡಿ ಮಾಡಿದ್ದಾರೆ.

‘ಪರಮಾಣು ಕಾರ್ಯಕ್ರಮಗಳಿಂದ ಹಿಂದೆ ಸರಿಯದಿದ್ದರೆ, ಉತ್ತರ ಕೊರಿಯಾವನ್ನು ಸಂಪೂರ್ಣ ನಾಶಮಾಡುತ್ತೇವೆ’ ಎಂದು ವಿಶ್ವಸಂಸ್ಥೆಯ ಮಹಾ ಅಧಿವೇಶನದ ಚೊಚ್ಚಲ ಭಾಷಣದಲ್ಲಿ ಟ್ರಂಪ್‌ ಎಚ್ಚರಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕಿಮ್‌,  ‘ಹಾಗೊಮ್ಮೆ ನಿರ್ಧಾರ ತೆಗೆದುಕೊಂಡರೆ, ಅದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ತನ್ನನ್ನು ‘ರಾಕೆಟ್‌ಮ್ಯಾನ್‌’ ಎಂದು ಕರೆದಿರುವ ಟ್ರಂಪ್‌ ಅವರನ್ನು ಕಿಮ್‌ ಪ್ರಶ್ನಿಸಿದ್ದು, ಸಂಪೂರ್ಣವಾಗಿ ಮಾನಸಿಕ ಅಸ್ವಸ್ಥನಂತಿರುವ ಅಮೆರಿಕದ ಅಧ್ಯಕ್ಷರು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಸಾರ್ವಭೌಮ ರಾಷ್ಟ್ರವನ್ನು ಸಂಪೂರ್ಣ ನಾಶಮಾಡುವುದಾಗಿ ತಿಳಿಸಿರುವುದು ಅನೈತಿಕವಾದುದು ಎಂದು ಆರೋಪಿಸಿದ್ದಾರೆ.

ಆಕ್ರಮಣಕಾರಿ ಅಮೆರಿಕದಿಂದ ರಕ್ಷಿಸಿಕೊಳ್ಳಲು ಪರಮಾಣು ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ತಿಳಿಸಿರುವ ಉತ್ತರ ಕೊರಿಯಾ, ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

‘ನನ್ನ ಮನವರಿಕೆ ಮಾಡಲಿ, ಇಲ್ಲವೇ ಬೆದರಿಕೆ ಹುಟ್ಟಿಸುವುದನ್ನು ನಿಲ್ಲಿಸಲಿ. ನಾನು ಆಯ್ದುಕೊಂಡಿರುವ ಮಾರ್ಗ ಸರಿಯಾಗಿದೆ. ಕೊನೇ ತನಕವೂ ಅದನ್ನು ಪಾಲಿಸುತ್ತೇನೆ’ ಎಂದು ಕಿಮ್‌ ಜಾಂಗ್‌ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT