ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ಗೆ ಬಿಜಾಪುರ ಬುಲ್ಸ್‌

ಕೆಪಿಎಲ್‌: ಕ್ಯಾಚ್‌ ಬಿಟ್ಟು ಪಂದ್ಯ ಸೋತ ಶಿವಮೊಗ್ಗ, ಜಯ ತಂದುಕೊಟ್ಟ ಮಿಥುನ್‌–ದಿಕ್ಷಾಂಶು
Last Updated 22 ಸೆಪ್ಟೆಂಬರ್ 2017, 20:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇನ್ನೇನು ಗೆಲುವು ಕೈತಪ್ಪಿ ಹೋಯಿತು ಎಂದು ನಿರಾಸೆಯಲ್ಲಿದ್ದ ಬಿಜಾಪುರ ಬುಲ್ಸ್ ತಂಡದ ಅಭಿಮಾನಿಗಳಿಗೆ ಗೆಲುವಿನ ರಸದೌತಣ ನೀಡಿದ್ದು ಅಭಿಮನ್ಯು ಮಿಥುನ್‌ ಮತ್ತು ದಿಕ್ಷಾಂಶು ನೇಗಿ.

ಪಂದ್ಯದ ಕೊನೆಯ ಐದು ಓವರ್‌ಗಳು ಇವರು ಆಡಿದ ಅಮೋಘ ಬ್ಯಾಟಿಂಗ್‌ ಮುಂದೆ ನಮ್ಮ ಶಿವಮೊಗ್ಗ ತಂಡ ಕಕ್ಕಾಬಿಕ್ಕಿಯಾಗಿ ಹೋಯಿತು. ಪರಿಣಾಮ ಬುಲ್ಸ್ ತಂಡ ಕೆಪಿಎಲ್‌ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತು.

ಶನಿವಾರ ಇಲ್ಲಿನ ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಬುಲ್ಸ್‌ ತಂಡ ಬೆಳಗಾವಿ ಪ್ಯಾಂಥರ್ಸ್‌ ಎದುರು ಪೈಪೋಟಿ ನಡೆಸಲಿದೆ.

ನಿತ್ಯ ಮಳೆಯ ಕಾಟದಿಂದ ಬೇಸತ್ತು ಹೋಗಿದ್ದ ಇಲ್ಲಿನ ಕ್ರಿಕೆಟ್‌ ಪ್ರೇಮಿಗಳಿಗೆ ಶುಕ್ರವಾರ ಭಾರಿ ಖುಷಿಯಲ್ಲಿ ತೇಲಿದರು. ವರುಣನ ಕಾಟವಿಲ್ಲದೇ ನಿರಾಳವಾಗಿ ಪಂದ್ಯ ವೀಕ್ಷಿಸಿದರು.

ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ತಂಡದವರು 20 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು 157 ರನ್ ಗಳಿಸಿದರು. ಈ ಗುರಿಯನ್ನು ಬುಲ್ಸ್‌ 19.4 ಓವರ್‌ಗಳಲ್ಲಿ ತಲುಪಿ ಟೂರ್ನಿಯಲ್ಲಿ ಎರಡನೇ ಬಾರಿ ಫೈನಲ್ ಪ್ರವೇಶಿಸಿತು.

ರೋಮಾಂಚಕ ರಾತ್ರಿ: ಸವಾಲಿನ ಗುರಿ ಬೆನ್ನು ಹತ್ತಿದ ಬುಲ್ಸ್ ತಂಡಕ್ಕೆ ಉತ್ತಮ ಆರಂಭ ಲಭಿಸಲಿಲ್ಲ. ಮೊಹಮ್ಮದ್ ತಹಾ, ಭರತ್‌ ಚಿಪ್ಲಿ ಎಂ.ಜಿ. ನವೀನ್‌ ಬೇಗನೆ ವಿಕೆಟ್ ಒಪ್ಪಿಸಿದರು. ಆದ್ದರಿಂದ ಬುಲ್ಸ್ ಪಡೆಗೆ ಕೊನೆಯ ಆರು ಓವರ್‌ಗಳಲ್ಲಿ 70 ರನ್ ಗಳಿಸಬೇಕಾದ ಸವಾಲಿತ್ತು.

ಪ್ರತಿ ಓವರ್‌ನಿಂದ ಓವರ್‌ಗೆ ರನ್ ಅಂತರ ಕಡಿಮೆ ಮಾಡಿಕೊಂಡ ಬುಲ್ಸ್‌ ತಂಡ ನಿಧಾನವಾಗಿ ಗೆಲುವಿನ ಸನಿಹ ಹೆಜ್ಜೆ ಹಾಕಿತು. ಈ ತಂಡ 30 ಎಸೆತಗಳಲ್ಲಿ 63 ರನ್ ಗಳಿಸಬೇಕಿತ್ತು. ಕೊನೆಯಲ್ಲಿ ಮಿಥುನ್‌ (ಔಟಾಗದೆ 32, 12 ಎಸೆತ, 2 ಬೌಂಡರಿ, 3 ಸಿಕ್ಸರ್) ದಿಕ್ಷಾಂಶು ನೇಗಿ (ಔಟಾಗದೆ 24, 20 ಎಸೆತ, 2 ಬೌಂಡರಿ) ವೇಗವಾಗಿ ರನ್ ಗಳಿಸಿ ಗೆಲುವಿನ ಹಾದಿ ಸುಗಮ ಮಾಡಿದರು.

ಮಿಥುನ್‌ ರನ್‌ ಖಾತೆ ಆರಂಭಿಸುವ ಮೊದಲೇ ಬೌಂಡರಿ ಗೆರೆ ಬಳಿ ನೀಡಿದ್ದ ಕ್ಯಾಚ್‌ ಅನ್ನು ಲಿಯಾನ್‌ ಖಾನ್ ಬಿಟ್ಟರು. ಇದೇ ಅವಕಾಶ ಬಳಸಿಕೊಂಡು ಮಿಥುನ್‌ ರಾಜನಗರದ ಅಂಗಳದ ‘ಹೀರೋ’ ಆಗಿ ಮೆರೆದಾಡಿದರು.

17ನೇ ಓವರ್‌ನಲ್ಲಿ 21 ರನ್ ಬಂದವು. 19ನೇ ಓವರ್‌ನಲ್ಲಿ 18 ರನ್‌ ದಾಖಲಾದವು. ಈ ಎರಡು ಓವರ್‌ಗಳಲ್ಲಿ ಸುರಿದ ರನ್ ಮಳೆ ಬುಲ್ಸ್ ತಂಡದ ಸಂಭ್ರಮಕ್ಕೆ ಕಾರಣವಾಯಿತು. ಕೊನೆಯ ಓವರ್‌ನಲ್ಲಿ ಬೇಕಿದ್ದ 9 ರನ್‌ ನಾಲ್ಕು ಎಸೆತಗಳಲ್ಲಿ ಬಂದವು. ಬುಲ್ಸ್‌ ಪಡೆ ಪಂದ್ಯ ಗೆಲ್ಲುತ್ತಿದ್ದಂತೆ ಡಗ್‌ ಔಟ್‌ನಲ್ಲಿ ಕುಳಿತಿದ್ದ ಆಟಗಾರರು ಮೈದಾನದಲ್ಲಿ ಓಡಿಹೋಗಿ ಸಂಭ್ರಮಿಸಿದರು. ತಂಡವನ್ನು ಬೆಂಬಲಿಸಲು ವಿಜಯಪುರದಿಂದ ಬಂದಿದ್ದ ಅಭಿಮಾನಿಗಳು ಗ್ಯಾಲರಿಯಲ್ಲಿಯೇ ಕುಣಿದಾಡಿದರು.

ಖಾನ್‌, ಮ್ಯಾನೇಜರ್‌ ಆಸರೆ:  ಆರಂಭಿಕ ಬ್ಯಾಟ್ಸ್‌ಮನ್‌ ಲಿಯಾನ್ ಖಾನ್ 48 ರನ್ ಗಳಿಸಿ ಆರಂಭದಲ್ಲಿ ಆಸರೆಯಾದರು. ಕೊನೆಯ ಐದು ಓವರ್‌ಗಳಲ್ಲಿ ಬಾಲಚಂದ್ರ ಅಖಿಲ್‌ ಮತ್ತು ಶೊಯಬ್ ಮ್ಯಾನೇಜರ್ ನಡುವೆ ಉತ್ತಮ ಜೊತೆಯಾಟ ಮೂಡಿಬಂತು. ಇವರು ಆರನೇ ವಿಕೆಟ್‌ಗೆ ಕೇವಲ 20 ಎಸೆತಗಳಲ್ಲಿ 51 ರನ್‌ ಕಲೆ ಹಾಕಿದರು.

12 ಎಸೆತಗಳಲ್ಲಿ ಶಿವಮೊಗ್ಗ ತಂಡದ ಖಾತೆಗೆ 36 ರನ್ ಸೇರಿದವು. ಮ್ಯಾನೇಜರ್‌ ಕೇವಲ 12 ಎಸೆತಗಳಲ್ಲಿ 36 ರನ್ ಬಾರಿಸಿದರು. ಇದರಲ್ಲಿ 30 ರನ್‌ಗಳು ಬೌಂಡರಿ ಹಾಗೂ ಸಿಕ್ಸರ್‌ಗಳಿಂದ ಬಂದವು.

ಸಂಕ್ಷಿಪ್ತ ಸ್ಕೋರು: ನಮ್ಮ ಶಿವಮೊಗ್ಗ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 157 (ಲಿಯಾನ್‌ ಖಾನ್‌ 45, ಅಬ್ದುಲ್ ಮಜಿದ್‌ 17, ಆರ್‌. ಜೊನಾಥನ್‌ 22, ಬಾಲಚಂದ್ರ ಅಖಿಲ್‌ 14, ಶೋಯಬ್‌ ಮ್ಯಾನೇಜರ್‌ 36; ಎಂ.ಜಿ. ನವೀನ್‌ 27ಕ್ಕೆ2, ಎಚ್.ಎಸ್‌.ಶರತ್‌ 33ಕ್ಕೆ1).

ಬಿಜಾಪುರ ಬುಲ್ಸ್‌: 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 159 (ಮೊಹಮ್ಮದ್ ತಹಾ 10, ಭರತ್‌ ಚಿಪ್ಲಿ 10, ಎಂ.ಜಿ.ನವೀನ್‌ 19, ದಿಕ್ಷಾಂಶು ನೇಗಿ ಔಟಾಗದೆ 24, ಎಚ್‌.ಎಸ್‌. ಶರತ್‌ 17, ಎಂ. ನಿದೇಶ್‌ 25, ಎ.ಎಂ. ಕಿರಣ್‌ 15, ಅಭಿಮನ್ಯು ಮಿಥುನ್ ಔಟಾಗದೆ 32; ಬಾಲಚಂದ್ರ ಅಖಿಲ್ 20ಕ್ಕೆ2). ಫಲಿತಾಂಶ: ಬಿಜಾಪುರ ಬುಲ್ಸ್ ತಂಡಕ್ಕೆ 4 ವಿಕೆಟ್‌ ಗೆಲುವು. ಪಂದ್ಯ ಶ್ರೇಷ್ಠ: ಅಭಿಮನ್ಯು ಮಿಥುನ್‌.

*
ಫೈನಲ್‌ ಪಂದ್ಯಕ್ಕೆ ಉಚಿತ ಪ್ರವೇಶ
ಹುಬ್ಬಳ್ಳಿ:
ಶನಿವಾರ ನಡೆಯಲಿರುವ ಕೆಪಿಎಲ್‌ ಟೂರ್ನಿಯ ಫೈನಲ್‌ ಪಂದ್ಯಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

‘ಒಂದೇ ದಿನ ಮಹಿಳಾ ತಂಡದವರ ಟ್ವೆಂಟಿ–20 ಪ್ರದರ್ಶನ ಪಂದ್ಯ ಮತ್ತು ಕೆಪಿಎಲ್‌ ಫೈನಲ್‌ ನಡೆಯಲಿದೆ. ಇವುಗಳನ್ನು ನೋಡಲು ಹೆಚ್ಚು ಜನ ಬರುವಂತಾಗಬೇಕು ಎನ್ನುವ ಕಾರಣಕ್ಕೆ ಎಲ್ಲರಿಗೂ ಉಚಿತ ಪ್ರವೇಶ ನೀಡಲಾಗಿದೆ. ಕ್ರೀಡಾಂಗಣದ ಗೇಟ್‌ ಸಂಖ್ಯೆ ನಾಲ್ಕರಿಂದ ಒಳಗೆ ಬರಬೇಕು’ ಎಂದು ಕೆಎಸ್‌ಸಿಎ ಪ್ರಕಟಣೆಯಲ್ಲಿ ತಿಳಿಸಿದೆ.

ಇಂದು ಪಂದ್ಯ: ಮುಂದಿನ ವರ್ಷ ಮಹಿಳಾ ಕೆಪಿಎಲ್‌ ನಡೆಸುವ ಯೋಜನೆ ಹೊಂದಿರುವ ಕೆಎಸ್‌ಸಿಎ ಪೂರ್ವಭಾವಿಯಾಗಿ ಶನಿವಾರ ಪ್ರದರ್ಶನ ಪಂದ್ಯ ಆಯೋಜಿಸಿದೆ.

ರಾಷ್ಟ್ರೀಯ ತಂಡದಲ್ಲಿ ಆಡಿರುವ ರಾಜೇಶ್ವರಿ ಗಾಯಕ್ವಾಡ್‌, ವೇದಾ ಕೃಷ್ಣಮೂರ್ತಿ, ಕರುಣಾ ಜೈನ್‌, ವಿ.ಆರ್‌. ವನಿತಾ ಅವರು ಈ ಪಂದ್ಯದಲ್ಲಿ ಆಡಲಿದ್ದಾರೆ. ಅಧ್ಯಕ್ಷರ ಇಲೆವೆನ್‌ ಮತ್ತು ಕಾರ್ಯದರ್ಶಿ ಇಲೆವೆನ್‌ ಮಹಿಳಾ ತಂಡಗಳು ಪೈಪೋಟಿ ನಡೆಸಲಿವೆ. ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. 

ಪ್ಯಾಂಥರ್ಸ್‌ಗೆ ಮೊದಲ ಪ್ರಶಸ್ತಿಯ ನಿರೀಕ್ಷೆ
ನಾಲ್ಕು ಆವೃತ್ತಿಗಳ ಬಳಿಕ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿರುವ ಬೆಳಗಾವಿ  ಪ್ಯಾಂಥರ್ಸ್‌ ತಂಡ ಟೂರ್ನಿಯಲ್ಲಿ ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.
ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT