ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೀಷ್‌, ಪ್ರಜ್ಞಾ ವೇಗಿಗಳು

ಲಾಂಗ್‌ಜಂಪ್‌ನಲ್ಲಿ ಚಿನ್ನ ಗೆದ್ದ ಅನೂಷ್‌, ಪ್ರಿಯಾ
Last Updated 22 ಸೆಪ್ಟೆಂಬರ್ 2017, 20:41 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡಿ ವಿಹಾರ ಕ್ರೀಡಾಂಗಣದ ಟ್ರ್ಯಾಕ್‌ನಲ್ಲಿ ಶುಕ್ರವಾರ ಮಿಂಚು ಹರಿಸಿದ ಮನೀಷ್‌ ಮತ್ತು ಪ್ರಜ್ಞಾ ಎಸ್‌.ಪ್ರಕಾಶ್‌ ಅವರು ದಸರಾ ಕ್ರೀಡಾಕೂಟದ ಅಥ್ಲೆಟಿಕ್ಸ್‌ನಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗಗಳಲ್ಲಿ ‘ವೇಗದ ಸರದಾರರು’ ಎನಿಸಿಕೊಂಡರು.

ಮೈಸೂರು ವಲಯವನ್ನು ಪ್ರತಿ ನಿಧಿಸಿದ ಉಡುಪಿಯ ಎಂಜಿಎಂ ಕಾಲೇಜಿನ ಮನೀಷ್‌ ಪುರುಷರ 100 ಮೀ. ಓಟದಲ್ಲಿ 10.6 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದುಕೊಂಡರು. ಜಿದ್ದಾಜಿದ್ದಿಯ ಓಟದಲ್ಲಿ ಬೆಂಗಳೂರು ನಗರ ವಲಯದ ಕೆ.ಎಂ.ಅಯ್ಯಪ್ಪ (10.7 ಸೆ.) ಮತ್ತು ಮೈಸೂರು ವಲಯದ ಮೊಹಮ್ಮದ್‌ ಪೈಗಂಬರ್‌ (10.8 ಸೆ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಪಡೆದರು.

ಅಯ್ಯಪ್ಪ ಮತ್ತು ಪೈಗಂಬರ್‌ ಆರಂಭದಿಂದಲೇ ಮನೀಷ್‌ಗೆ ಪ್ರಬಲ ಪೈಪೋಟಿ ನೀಡಿದ್ದರು. ಆದರೆ ಕೊನೆಯ 10 ಮೀಟರ್ಸ್ ಇದ್ದಾಗ ಮಿಂಚಿನಂತೆ ಓಡಿದ ಮನೀಷ್‌ ಕೂಟ ದಾಖಲೆ ಸರಿಗಟ್ಟಿದ ಸಾಧನೆ ಮಾಡಿದರು. ಮನೀಷ್‌ ಕಳೆದ ವರ್ಷವೂ ದಸರಾ ಕ್ರೀಡಾಕೂಟದ ‘ವೇಗದ ರಾಜ’ ಎನಿಸಿಕೊಂಡಿದ್ದರು.

‘ಸತತ ಎರಡನೇ ವರ್ಷ ಚಿನ್ನ ಜಯಿಸಿದ್ದು ಸಂತಸ ನೀಡಿದೆ. ಕೋಚ್‌ ಜಹೀರ್‌ ಅಬ್ಬಾಸ್‌ ಅವರ ಮಾರ್ಗದರ್ಶನ ಹಾಗೂ ಕಾಲೇಜು ನೀಡಿದ ಬೆಂಬಲದಿಂದ ಇದು ಸಾಧ್ಯವಾಗಿದೆ’ ಎಂದು ಮನೀಷ್‌ ಪ್ರತಿಕ್ರಿಯಿಸಿದರು. ಇತ್ತೀಚಿಗೆ ನಡೆದ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ಸ್‌ನಲ್ಲಿ ಅವರು ಚಿನ್ನ ಜಯಿಸಿದ್ದರು.

ಮಹಿಳೆಯರ ವಿಭಾಗದಲ್ಲಿ ಬೆಂಗಳೂರು ನಗರ ವಲಯದ ಪ್ರಜ್ಞಾ 11.8 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ನಿರಾಯಾಸವಾಗಿ ಚಿನ್ನ ತಮ್ಮದಾಗಿಸಿಕೊಂಡರು. ಮೈಸೂರು ವಲಯದ ಅಪ್ಸಾನಾ ಬೇಗಂ (12 ಸೆ.) ಮತ್ತು ಬೆಂಗಳೂರು ನಗರ ವಲಯದ ಎ.ಟಿ.ದಾನೇಶ್ವರಿ (12.10 ಸೆ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಬೆಂಗಳೂರಿನ ಅಥ್ಲಾನ್‌ ಫ್ಲೀಟ್‌ ಒಲಿಂಪಸ್‌ ಸ್ಪೋರ್ಟ್ಸ್‌ ಅಕಾಡೆಮಿಯಲ್ಲಿ ಯತೀಶ್‌ ಕುಮಾರ್‌ ಅವರಿಂದ ತರಬೇತಿ ಪಡೆಯುತ್ತಿರುವ ಪ್ರಜ್ಞಾ ಅವರು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಅರಣ್ಯ ಇಲಾಖೆ ಕಚೇರಿಯಲ್ಲಿ ಉದ್ಯೋಗಿಯಾಗಿದ್ದಾರೆ.

ಮೈಸೂರು ವಲಯವನ್ನು ಪ್ರತಿನಿಧಿಸಿದ ಟಿ.ಆರ್‌.ಅನೂಷ್‌ ಮತ್ತು ಎ.ಪ್ರಿಯಾ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ಉಡುಪಿ ಸರ್ಕಾರಿ ಕಾಲೇಜಿನ ಅನೂಷ್‌ 7.29 ಮೀ. ದೂರ ಜಿಗಿದು ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದರು. ಉಜಿರೆಯ ಎಸ್‌ಡಿಎಂ ಕಾಲೇಜಿನ ಪ್ರಿಯಾ 5.45 ಮೀ. ದೂರ ಜಿಗಿದರು.

ಫಲಿತಾಂಶ: ಪುರುಷರ ವಿಭಾಗ: 100 ಮೀ. ಓಟ: ಮನೀಷ್‌ (ಮೈಸೂರು ವಲಯ)–1, ಕೆ.ಎಂ.ಅಯ್ಯಪ್ಪ (ಬೆಂಗಳೂರು ನಗರ ವಲಯ)–2, ಮೊಹಮ್ಮದ್‌ ಪೈಗಂಬರ್‌ (ಮೈಸೂರು ವಲಯ)–3. ಕಾಲ: 10.6 ಸೆ.

800 ಮೀ ಓಟ: ಟಿ.ಎಚ್‌.ದೇವಯ್ಯ (ಬೆಂಗಳೂರು ನಗರ)–1, ಯು.ಪಿ.ಸಚಿನ್‌ ಗೌಡ (ಬೆಂಗಳೂರು ನಗರ)–2, ಎಸ್‌.ಸಂತೋಷ್‌ (ಮೈಸೂರು)–3. ಕಾಲ: 1:59.50 ಸೆ.

4X400 ಮೀ. ರಿಲೇ: ಬೆಂಗಳೂರು ನಗರ (ಟಿ.ಎಚ್‌.ದೇವಯ್ಯ, ಎಂ.ಜಿ.ಸಿದ್ಧಾರ್ಥ್‌, ಎಂ.ಜಿ.ಅಶ್ವಿನ್‌, ಗೌರಿ ಶಂಕರ್‌)–1, ಮೈಸೂರು (ಸಂಪ್ರೀತ್‌ ಕೆ.,ಬೋಪಯ್ಯ ಪ್ರದ್ಯುಮ್ನ, ಎಚ್‌.ಎಸ್‌.ಬಸವರಾಜ್‌, ಆರ್‌.ಅಮರ್‌ ನಾಥ್‌)–2, ಬೆಳಗಾವಿ ವಲಯ (ಗಂಗಾಧರ ಕದಂ, ಈರಯ್ಯ ಆರ್‌.ಎಚ್‌., ಅಶೋಕ್‌ ರಾಥೋಡ್‌, ಆನಂದ್‌)–3. ಕಾಲ: 3:15.8 ಸೆ

ಲಾಂಗ್‌ಜಂಪ್‌: ಟಿ.ಆರ್‌.ಅನೂಶ್‌ (ಮೈಸೂರು)–1, ಮೊಹಮ್ಮದ್‌ ರಫೀಕ್‌ (ಬೆಳಗಾವಿ ವಲಯ)–2, ಎ.ಹಸನ್‌ (ಮೈಸೂರು)–3. ದೂರ: 7.29 ಮೀ.

ಮಹಿಳೆಯರ ವಿಭಾಗ: 100 ಮೀ. ಓಟ: ಪ್ರಜ್ಞಾ ಎಸ್‌.ಪ್ರಕಾಶ್‌ (ಬೆಂಗಳೂರು ನಗರ)–1, ಅಪ್ಸಾನಾ ಬೇಗಂ (ಮೈಸೂರು)–2, ಎ.ಟಿ.ದಾನೇಶ್ವರಿ (ಬೆಂಗಳೂರು ನಗರ) ಕಾಲ: 11.8 ಸೆಕೆಂಡ್‌. 800 ಮೀ ಓಟ: ಇ.ಬಿ.ಅರ್ಪಿತಾ (ಬೆಂಗಳೂರು ನಗರ)–1, ಎನ್‌.ವಿ.ಸುಷ್ಮಿತಾ (ಬೆಂಗಳೂರು ಗ್ರಾಮಾಂತರ)–2, ಬಿ.ಸಿ.ಸಕ್ಕುಬಾಯಿ (ಬೆಳಗಾವಿ)–3. ಕಾಲ: 2:22.90 ಸೆ.

4X400 ಮೀ. ರಿಲೇ: ಮೈಸೂರು (ಆರ್‌.ಎ.ಚೈತ್ರಾ, ಎಚ್‌.ಆರ್.ನವಮಿ, ಎಂ.ಲಿಖಿತಾ, ಅಪ್ಸಾನಾ ಬೇಗಂ)–1, ಬೆಂಗಳೂರು ನಗರ (ಉಷಾ, ಎಂ.ಬಿ.ಬಿಬಿಷಾ, ಅರ್ಪಿತಾ, ಸಿ.ಪಿ.ಭುವಿ)–2, ಬೆಳಗಾವಿ (ಜ್ಯೋತಿ ಕಟ್ಟೀಮನಿ, ಸಂಜನಾ, ಮಂಜುಳಾ, ಬಿ.ಸಿ.ಸಕ್ಕುಬಾಯಿ)–3. ಕಾಲ: 3:48.97 ಸೆ.

ಲಾಂಗ್‌ಜಂಪ್‌: ಎ.ಪ್ರಿಯಾ (ಮೈಸೂರು)–1, ದಾನೇಶ್ವರಿ ಎ.ಟಿ. (ಬೆಂಗಳೂರು ನಗರ)–2, ಬಿ.ಎನ್‌.ತುಂಗಶ್ರೀ (ಮೈಸೂರು)–3. ದೂರ: 5.45 ಮೀ. ಶಾಟ್‌ಪಟ್‌: ಮೇಘನಾ ದೇವಾಂಗ (ಮೈಸೂರು)–1, ಟಿ.ನಿವಿತಾ (ಬೆಂಗಳೂರು ನಗರ)–2, ಚೆನ್ನವ್ವ ಸದಾಶಿವಪ್ಪ (ಬೆಳಗಾವಿ)–3. ದೂರ: 13.52 ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT