ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲದೀಪ್‌, ಚಾಹಲ್‌ ಮೇಲೆ ಭರವಸೆ

ಹೋಲ್ಕರ್ ಕ್ರೀಡಾಂಗಣದ ಪಿಚ್ ಬಗ್ಗೆ ಚೌಹಾಣ್‌ ಮಾಹಿತಿ
Last Updated 22 ಸೆಪ್ಟೆಂಬರ್ 2017, 20:41 IST
ಅಕ್ಷರ ಗಾತ್ರ

ಇಂದೋರ್, ಮಧ್ಯಪ್ರದೇಶ: ‘ಇಲ್ಲಿನ ಹೋಳ್ಕರ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವಾಗಿದೆ. ಆದರೆ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್‌ ಅವರಿಗೆ ಇಲ್ಲಿ ನೆರವು ಸಿಗಲಿದೆ’ ಎಂದು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಕ್ಯೂರೇಟರ್ ಸಮುಂದರ್ ಸಿಂಗ್ ಚೌಹಾಣ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯ ಇಲ್ಲಿನ ಹೋಳ್ಕರ್‌ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 24ರಂದು ನಡೆಯಲಿದ್ದು ಈಗಾಗಲೇ 2–0 ಮುನ್ನಡೆ ಸಾಧಿಸಿರುವ ಭಾರತ ಸರಣಿ ಗೆಲ್ಲುವ ಭರವಸೆಯಲ್ಲಿದೆ. ಎರಡು ಪಂದ್ಯಗಳಲ್ಲಿಯೂ ಭಾರತ ತಂಡವು ಮೊದಲು ಬ್ಯಾಟಿಂಗ್ ಮಾಡಿತ್ತು.

‘ಇದು ಉತ್ತಮ ಬ್ಯಾಟಿಂಗ್ ಪಿಚ್‌ ಆದ್ದರಿಂದ ದೊಡ್ಡ ಮೊತ್ತ ಕಲೆ ಹಾಕಲು ಅವಕಾಶವಿದೆ. ಆದರೆ ಸ್ಪಿನ್‌ ಬೌಲರ್‌ಗಳು ಮಿಂಚುವ ಎಲ್ಲ ಸಾಧ್ಯತೆಗಳೂ ಇವೆ. ರಾಜ್ಯದ ವಿವಿಧ ಕಡೆಯಿಂದ ತೆಗೆದುಕೊಂಡು ಬಂದಿರುವ ಎರಿಮಣ್ಣನ್ನು ಪಿಚ್‌ಗೆ ಬಳಸಿದ್ದೇವೆ. ಇಲ್ಲಿನ ವಾತಾವರಣದಲ್ಲಿ ಪಿಚ್‌ನಲ್ಲಿ ಬಿರುಕು ಬಿಡುವ ಅಥವಾ ಹೆಚ್ಚು ಗಟ್ಟಿಯಾಗುವ ಸಾಧ್ಯತೆ ಕಡಿಮೆ. ನೀರು ಹೀರಿಕೊಳ್ಳುವ ಸಾಮರ್ಥ್ಯ ಈ ಪಿಚ್‌ಗೆ ಇದೆ’ ಎಂದು ಚೌಹಾಣ್ ಹೇಳಿದರು.

ಸ್ಪಿನ್‌ ಜೋಡಿ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್‌ ಮೊದಲ ಎರಡು ಪಂದ್ಯಗಳಲ್ಲಿ ಪ್ರವಾಸಿ ತಂಡದ ಬ್ಯಾಟ್ಸ್‌ನ್‌ಗಳನ್ನು ಕಾಡಿದ್ದರು. ಎರಡನೇ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಕುಲದೀಪ್‌ ಏಕದಿನ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೂರನೇ ಬೌಲರ್ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ.

‘ಈ ಪಿಚ್‌ನಲ್ಲಿ ಸೆಪ್ಟೆಂಬರ್‌ ಏಳು ಮತ್ತು ಎಂಟರಂದು ರಾಜ್ಯದ ರಣಜಿ ಆಟಗಾರರು ಅಭ್ಯಾಸ ಪಂದ್ಯ ಆಡಿದ್ದಾರೆ. ಎರಡೂ ದಿನ ತಲಾ 90 ಓವರ್‌ಗಳ ಆಟ ನಡೆದಿದ್ದು ಉತ್ತಮ ಮೊತ್ತ ದಾಖಲಾಗಿತ್ತು’ ಎಂದು ಚೌಹಾಣ್ ಹೇಳಿದರು.

2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದಿದ್ದ  ಏಕದಿನ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್‌ ಅವರು ಧ್ವಿಶತಕ (219 ರನ್‌) ಗಳಿಸಿದ್ದರು.  ನ್ಯೂಜಿಲೆಂಡ್ ವಿರುದ್ಧ ಕಳೆದ ವರ್ಷ ಇಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ವಿರಾಟ್‌ ಕೊಹ್ಲಿ ದ್ವಿಶತಕ ಸಿಡಿಸಿದ್ದರು. ಅದೇ ಪಂದ್ಯದಲ್ಲಿ ಅಜಿಂಕ್ಯ ರಹಾನೆ 188 ರನ್‌ ಗಳಿಸಿದ್ದರು.

ಮಳೆ ಸಾಧ್ಯತೆ?: ಇಂದೋರ್‌ನಲ್ಲಿ ಕೆಲವು ದಿನಗಳಿಂದ ಮಳೆ ಸುರಿಯುತ್ತಿದೆ. ಮುಂದಿನ ಎರಡು ದಿನ ಚದುರಿದ ಮಳೆಯಾಗುವ ಸಾಧ್ಯತೆ ಇದೆ
ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇಂದೋರ್‌ಗೆ ಬಂದ ತಂಡಗಳು: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಶುಕ್ರವಾರ ಇಂದೋರ್‌ಗೆ ಬಂದಿವೆ. ಕೋಲ್ಕತ್ತಾದಿಂದ ವಿಶೇಷ ವಿಮಾನದಲ್ಲಿ ಬಂದ ತಂಡದ ಆಟಗಾರರಿಗೆ ಇಲ್ಲಿನ ಅಹಲ್ಯಾಬಾಯಿ ಹೋಳ್ಕರ್‌ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ನೀಡಲಾಯಿತು.  ಟಗಾರರನ್ನು ನೋಡಲು ವಿಮಾನ ನಿಲ್ದಾಣದ ಹೊರಗೆ ನೂರಾರು ಅಭಿಮಾನಿಗಳು ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT