ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜುಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಡ್ಡಾಯ

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಹಾಗೂ ಪೊಲೀಸ್ ಇಲಾಖೆ ಈ ಸೂಚನೆ ನೀಡಿದೆ. ಹೀಗಾಗಿ ಒಂದು ತಿಂಗಳ ಅವಧಿಯೊಳಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಇದಕ್ಕೆ ತಗಲುವ ವೆಚ್ಚವನ್ನು ಕಾಲೇಜು ಅಭಿವೃದ್ಧಿ ನಿಧಿ, ಕಾಲೇಜು ಅಭಿವೃದ್ಧಿ ಸಮಿತಿ ಮತ್ತು ಓದುವ ಕೊಠಡಿಗಳ (ರೀಡಿಂಗ್ ರೂಂ) ನಿರ್ವಹಣೆಗಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಶುಲ್ಕದಲ್ಲಿಯೇ ಭರಿಸಬೇಕು ಎಂದು ಆಯುಕ್ತ ಎಂ.ಎನ್. ಅಜಯ್‌ ನಾಗಭೂಷಣ್ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಯೋಗಾಲಯ ಸಮವಸ್ತ್ರ:

ಪ್ರಯೋಗಾಲಯ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಮತ್ತು ಬೋಧಕರು ಕಡ್ಡಾಯವಾಗಿ ಪ್ರಯೋಗಾಲಯ ಸಮವಸ್ತ್ರ ಧರಿಸಬೇಕು ಎಂದು ಸೂಚಿಸಲಾಗಿದೆ.

ಒಂದು ವೇಳೆ ಸಮವಸ್ತ್ರ ಧರಿಸದೆ ಪ್ರಯೋಗಾಲಯಕ್ಕೆ ಬಂದಲ್ಲಿ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಲಾಗಿದೆ.

ವಾರಕ್ಕೆ 40 ತಾಸು ಬೋಧನಾ ಅವಧಿ

ವಿಶ್ವವಿದ್ಯಾಲಯ ಅನುದಾನ ಆಯೋಗದ ನಿಯಮಗಳ ಅನ್ವಯ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ ಬೋಧನಾ ಅವಧಿಯನ್ನು ವಾರಕ್ಕೆ 40 ತಾಸು ನಿಗದಿ ಮಾಡಲಾಗಿದೆ.

ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಹಾಗೂ ಪ್ರಾಧ್ಯಾಪಕರು ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.

ಪ್ರಾಯೋಗಿಕ ತರಗತಿ ಇರುವ ಕೋರ್ಸ್‌ಗಳಿಗೆ ಬೋಧನೆ ಮತ್ತು ಪ್ರಾಯೋಗಿಕ ಸೇರಿ 20 ತಾಸು ಮತ್ತು ಸಾಮಾನ್ಯ ಕೋರ್ಸ್‌ಗಳಿಗೆ 16 ತಾಸು ನೇರ ಬೋಧನೆಗಾಗಿ ಸಮಯ ನಿಗದಿಪಡಿಸಲಾಗಿದೆ.

ಇದಲ್ಲದೆ, ಪರೀಕ್ಷೆಗಳು, ಟ್ಯುಟೋರಿಯಲ್ ತರಗತಿ, ಪಾಠ ಪ್ರವಚನಗಳ ತಯಾರಿ, ಪಠ್ಯೇತರ ಚಟುವಟಿಕೆ ಹಾಗೂ ಪ್ರಾಂಶುಪಾಲರಿಗೆ ಆಡಳಿತದಲ್ಲಿ ಸಹಾಯಕ್ಕಾಗಿ ಸಮಯ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT