ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಅಲ್ಲ ಉಗ್ರಸ್ಥಾನ: ವಿಶ್ವಸಂಸ್ಥೆಯಲ್ಲಿ ಪಾಕ್‌ ಪ್ರಧಾನಿ ಶಾಹಿದ್‌ ಅಬ್ಬಾಸಿ ಆರೋಪಕ್ಕೆ ಭಾರತದ ತಿರುಗೇಟು

Last Updated 22 ಸೆಪ್ಟೆಂಬರ್ 2017, 19:40 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ : ಪಾಕಿಸ್ತಾನದಿಂದ ನಡೆಯುತ್ತಿರುವ ಭಯೋತ್ಪಾದನೆಯನ್ನು ಅತ್ಯಂತ ಕಟು ಪದಗಳನ್ನು ಖಂಡಿಸಿರುವ ಭಾರತ, ಆ ದೇಶವನ್ನು ‘ಉಗ್ರಸ್ಥಾನ’ ಎಂದು ಜರೆದಿದೆ. ಅದೊಂದು ‘ಭಯೋತ್ಪಾದನೆಯ ನೆಲೆವೀಡಾಗಿದ್ದು, ಜಾಗತಿಕ ಉಗ್ರವಾದವನ್ನು ಉತ್ಪಾದಿಸಿ ರಫ್ತು ಮಾಡುವ ಸಮೃದ್ಧ ಉದ್ಯಮವನ್ನು ಪೋಷಿಸುತ್ತಿದೆ ಎಂದು ಟೀಕಿಸಿದೆ.

ಒಸಾಮಾ ಬಿನ್‌ ಲಾಡೆನ್‌ ಮತ್ತು ಮುಲ್ಲಾ ಉಮರ್‌ನಂತಹ ಉಗ್ರರಿಗೆ ರಕ್ಷಣೆ ಕೊಟ್ಟ ದೇಶವೊಂದು ತಾನೇ ಭಯೋತ್ಪಾದನೆಯ ಸಂತ್ರಸ್ತ ಎಂದು ಹೇಳಿಕೊಳ್ಳುವ ಛಾತಿ ತೋರುತ್ತಿರುವುದೇ ವಿಲಕ್ಷಣವಾಗಿ ಕಾಣುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ನಿಯೋಗದ ಪ್ರತಿನಿಧಿ ಈನಂ ಗಂಭೀರ್‌ ಹೇಳಿದರು.

ಪಾಕಿಸ್ತಾನದ ಪ್ರಧಾನಿ ಶಾಹಿದ್‌ ಖಕಾನ್‌ ಅಬ್ಬಾಸಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿವಾದದ ಬಗ್ಗೆ ಮಾತಾಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಭಾರತ, ಪಾಕಿಸ್ತಾನದ ವಿರೋಧಾಭಾಸಕರ ನಿಲುವುಗಳನ್ನು ಎತ್ತಿ ತೋರಿಸಿತು.

ಮಾಹಿತಿ ತಿರುಚುವಿಕೆ, ಮೋಸ ಮತ್ತು ವಂಚನೆ ಮೂಲಕ ಪರ್ಯಾಯ ವಾಸ್ತವವೊಂದನ್ನು ಸೃಷ್ಟಿಸುವ ತಂತ್ರವನ್ನು ಪಾಕಿಸ್ತಾನ ಅನುಸರಿಸುತ್ತಿದೆ ಎಂಬುದು ಆ ದೇಶದ ನೆರೆಯ ಎಲ್ಲ ರಾಷ್ಟ್ರಗಳ ಅರಿವಿಗೂ ಬಂದಿದೆ. ಸುಳ್ಳುಗಳನ್ನು ಹೆಣೆದು ಕತೆ ಕಟ್ಟಿದರೆ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಭಾರತ ಗಟ್ಟಿ ಧ್ವನಿಯಲ್ಲಿ ಹೇಳಿದೆ. ‘ಅಲ್ಪಾವಧಿಯ ಇತಿಹಾಸದಲ್ಲಿಯೇ ಪಾಕಿಸ್ತಾನವು ಭಯೋತ್ಪಾದನೆಗೆ ಪರ್ಯಾಯ ಪದವೇ ಆಗಿ ಬದಲಾಗಿದೆ’ ಎಂದು ಈನಂ ಹೇಳಿದರು.

ಪಾಕಿಸ್ತಾನ ಎಂದರೆ ಪರಿಶುದ್ಧ ನಾಡು ಎಂದು ಅರ್ಥ. ಆದರೆ ಇನ್ನಷ್ಟು ನೆಲವನ್ನು ಸ್ವಾಧೀನಕ್ಕೆ ಪಡೆಯುವ ತುಡಿತ ಆ ದೇಶವನ್ನು ‘ಶುದ್ಧ ಭಯೋತ್ಪಾದನೆ’ಯ ನಾಡನ್ನಾಗಿ ಬದಲಾಯಿಸಿದೆ. ಭಯೋತ್ಪಾದನಾ ಸಂಘಟನೆ ಎಂದು ವಿಶ್ವಸಂಸ್ಥೆಯು ಘೋಷಿಸಿರುವ ಲಷ್ಕರ್‌ ಎ ತಯಬಾದ ಮುಖ್ಯಸ್ಥ ಮೊಹಮ್ಮದ್ ಸಯೀದ್‌ ಈಗ ರಾಜಕೀಯ ಪಕ್ಷವೊಂದರ ಮುಖ್ಯಸ್ಥ ಎಂಬ ಸ್ಥಾನ ಪಡೆದು ತನ್ನ ಕಾರ್ಯಾಚರಣೆಯನ್ನು ಕಾನೂನುಬದ್ಧಗೊಳಿಸಿಕೊಳ್ಳಲು ಬಯಸಿದ್ದಾನೆ. ಆ ದೇಶದ ಪರಿಸ್ಥಿತಿ ಏನು ಎಂಬುದನ್ನು ಇದರಿಂದಲೇ ಅಳೆಯಬಹುದು ಎಂದು ಈನಂ ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT