ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಡೆಯಲ್ಲೇ ಉಳಿದ ನಡುಗಡ್ಡೆ ಜನ

ಬಸವಸಾಗರ ಜಲಾಶಯದಿಂದ ನದಿಗೆ 1.17ಲಕ್ಷ ಕ್ಯುಸೆಕ್‌ ನೀರು ಬಿಡಗಡೆ
Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕಕ್ಕೇರಾ (ಯಾದಗಿರಿ ಜಿಲ್ಲೆ): ಕೂಲಿ ಕೆಲಸ ಅರಸಿ ಬೆಂಗಳೂರಿಗೆ ತೆರಳಿದ್ದ ಇಲ್ಲಿನ ನೀಲಕಂಠರಾಯನ ನಡುಗಡ್ಡೆ ಜನ ದಸರಾ ಹಬ್ಬಕ್ಕಾಗಿ ಮರಳಿದ್ದು, ಕೃಷ್ಣಾ ನದಿಯಲ್ಲಿನ ಪ್ರವಾಹದಿಂದಾಗಿ ಅಲ್ಲಿಗೆ ತಲುಪಲು ಆಗದೆ ತೊಂದರೆಗೆ ಒಳಗಾಗಿದ್ದಾರೆ.

ಬಸವಸಾಗರ ಜಲಾಶಯದಿಂದ ನದಿಗೆ 1.17ಲಕ್ಷ ಕ್ಯುಸೆಕ್‌ ನೀರು ಬಿಡಲಾಗಿದೆ. ಇದರಿಂದ ಕಕ್ಕೇರಾ–ನೀಲಕಂಠರಾಯನ ಗಡ್ಡೆಗೆ ಸಂಪರ್ಕ ಕಡಿದು ಹೋಗಿದೆ.

ಹಬ್ಬಕ್ಕೆ ಬಂದವರು ಬೆಂಚಿಗಡ್ಡಿ, ಕಕ್ಕೇರಾದಲ್ಲಿನ ಸಂಬಂಧಿಕರ ಮನೆಯಲ್ಲಿ ಆಶ್ರಯದಲ್ಲಿ ಪಡೆದಿದ್ದಾರೆ. ಹಬ್ಬದ ದಿನಸಿ ತರಲು ಕಕ್ಕೇರಾ ಸಂತೆಗೆ ಬಂದಿದ್ದ ಗಡ್ಡೆಯ ಹತ್ತು ಮಂದಿ ಇಲ್ಲೇ ಉಳಿದಿದ್ದು, ಜಿಲ್ಲಾಡಳಿತ ಕೂಡಲೇ ಬೋಟ್‌ ವ್ಯವಸ್ಥೆ ಮಾಡಬೇಕು
ಎಂದು ಒತ್ತಾಯಿಸಿದ್ದಾರೆ.

ಬೆಳಿಗ್ಗೆ ಬೋಟ್ ತರಿಸಿ ಗ್ರಾಮಸ್ಥರನ್ನು ಗಡ್ಡೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹುಣಸಗಿ ವಿಶೇಷ ತಹಶೀಲ್ದಾರ್ ಸುರೇಶ್ ಅಂಕಲಗಿ ತಿಳಿಸಿದರು.

ಜಲಾಶಯಕ್ಕೆ 1.33 ಲಕ್ಷ ಕ್ಯುಸೆಕ್‌ ನೀರು: (ವಿಜಯಪುರ ವರದಿ): ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿನ ವಿವಿಧ ಜಲಾಶಯಗಳು ಭರ್ತಿಯಾಗಿದ್ದು, ಕೃಷ್ಣಾ ನದಿ ಪಾತ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ, ಆಲಮಟ್ಟಿ ಜಲಾಶಯದ ಒಳ ಹರಿವು ಹೆಚ್ಚಿದೆ.

ಜಲಾಶಯಕ್ಕೆ 1.33 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಅಷ್ಟೂ ಪ್ರಮಾಣದ ನೀರನ್ನು 20 ಕ್ರೆಸ್ಟ್‌ ಗೇಟ್‌ಗಳ ಮೂಲಕ ನದಿಗೆ ಬಿಡಲಾಗುತ್ತಿದೆ. ಆರು ಜಲ ವಿದ್ಯುತ್‌ ಘಟಕಗಳು ಕಾರ್ಯಾರಂಭ ಮಾಡಿದ್ದು, ನಿತ್ಯ 6.9 ದಶಲಕ್ಷ ಯುನಿಟ್‌ ವಿದ್ಯುತ್‌ಉತ್ಪಾದಿಸಲಾಗುತ್ತಿದೆ ಎಂದು ಕೆ.ಬಿ.ಜೆ.ಎನ್‌.ಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ವರ್ಷ ಇದು ಅತಿ ಹೆಚ್ಚಿನ ಹೊರ ಹರಿವು ಎಂದು ಅವರು ವಿವರಿಸಿದ್ದಾರೆ.

ಮಳೆ ಇಳಿಕೆ: ಸೇತುವೆಗಳು ಸಂಚಾರಕ್ಕೆ ಮುಕ್ತ:ಚಿಕ್ಕೋಡಿ: ನಾಲ್ಕಾರು ದಿನಗಳಿಂದ ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ನಿರಂತರವಾಗಿ ಸುರಿಯುತ್ತಿದ್ದ ಮಳೆ ಪ್ರಮಾಣ ಕ್ಷೀಣಿಸಿದೆ. ಇದರ ಪರಿಣಾಮ ವೇದಗಂಗಾ ನದಿ ನೀರಿನ ಒಳಹರಿವಿನಲ್ಲಿ ಇಳಿಮುಖವಾಗಿದ್ದು, ಅಕ್ಕೋಳ– ಸಿದ್ನಾಳ ಮತ್ತು ಜತ್ರಾಟ–ಭೀವಶಿ ಗ್ರಾಮಗಳ ನಡುವಿನ ಸೇತುವೆಗಳು ಶುಕ್ರವಾರ ಸಂಚಾರಕ್ಕೆ ಮುಕ್ತಗೊಂಡಿವೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ ಮತ್ತು ದೂಧ್‌ಗಂಗಾ ನದಿಗಳಿಂದ ಕೃಷ್ಣಾ ನದಿ ಮೂಲಕ ರಾಜ್ಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದ್ದು, ರಾಜಾಪುರ ಬ್ಯಾರೇಜ್‌ನಿಂದ 81,408 ಕ್ಯುಸೆಕ್‌ ಮತ್ತು ದೂಧ್‌ಗಂಗಾ ನದಿಯಿಂದ 21,648 ಕ್ಯುಸೆಕ್‌ ಸೇರಿದಂತೆ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿ ಮೂಲಕ ಒಟ್ಟು 1.03 ಲಕ್ಷ ಕ್ಯುಸೆಕ್‌ ನೀರು ರಾಜ್ಯಕ್ಕೆ ಬರುತ್ತಿದೆ. ಇದರಿಂದಾಗಿ ತಾಲ್ಲೂಕಿನಲ್ಲಿ ಶುಕ್ರವಾರವೂ ಕೃಷ್ಣಾ ಮತ್ತು ದೂಧ್‌ಗಂಗಾ ನದಿ ಒಳಹರಿವಿನಲ್ಲಿ ಕೊಂಚ ಏರಿಕೆ ದಾಖಲಾಗಿದೆ.

ತಾಲ್ಲೂಕಿನಲ್ಲಿ ಕಲ್ಲೋಳ–ಯಡೂರ, ಮಲಿಕವಾಡ–ದತ್ತವಾಡ, ಕಾರದಗಾ–ಭೋಜ, ಭೋಜವಾಡಿ–ಕುನ್ನೂರ ಹಾಗೂ ಬಾರವಾಡ–ಕುನ್ನೂರ (ಸಂಗಮೇಶ್ವರ ದೇವಸ್ಥಾನ ಬಳಿ) ಕೆಳಮಟ್ಟದ ಸೇತುವಗಳು ಇನ್ನೂ ಮುಳುಗಡೆ ಸ್ಥಿತಿಯಲ್ಲಿಯೇ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT