ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಚಾರ್ಯರ ಕಾಲಿಗೆ ಬಿದ್ದ ಅತಿಥಿ ಉಪನ್ಯಾಸಕ !

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಶಿರಸಿ: ‘ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಯಲು ಅವಕಾಶ ಮಾಡಿಕೊಡಿ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಸ್ಕೃತ ವಿಷಯದ ಅತಿಥಿ ಉಪನ್ಯಾಸಕ ವಿನಾಯಕ ಭಟ್ ಶುಕ್ರವಾರ ಇಲ್ಲಿ ಪ್ರಾಚಾರ್ಯ ಜನಾರ್ದನ ಭಟ್ ಅವರ ಕಾಲು ಹಿಡಿದು ಬೇಡಿಕೊಂಡರು.

‘ಸಂಸ್ಕೃತ ಕಲಿಯಲು ಇಚ್ಛಿಸಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅರ್ಜಿ ತುಂಬಲು ಅವಕಾಶ ಮಾಡಿಕೊಡಬೇಕು’ ಎಂದು ಪ್ರಾಚಾರ್ಯರನ್ನು ವಿನಂತಿಸಿಕೊಂಡ ಅವರು ನೂರಾರು ವಿದ್ಯಾರ್ಥಿಗಳ ಎದುರು ಪ್ರಾಚಾರ್ಯರ ಕಾಲು ಹಿಡಿದು ಗೋಗರೆದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಚಾರ್ಯರು ‘ವಿದ್ಯಾರ್ಥಿಗಳು ಕನ್ನಡವನ್ನೇ ಕಲಿಯಲಿ’ ಎಂದು ಹೇಳಿ ಹೊರಟು ಹೋದರು.

‘ಅತಿಥಿ ಉಪನ್ಯಾಸಕರ ಹೋರಾಟದ ಮುಂಚೂಣಿಯಲ್ಲಿದ್ದ ಕಾರಣ ಪ್ರಾಚಾರ್ಯರು ವಿನಾಯಕ ಅವರ ಮೇಲೆ ವೈಯಕ್ತಿಕ ದ್ವೇಷ ಹೊಂದಿದ್ದರು. ಈ ಕಾರಣಕ್ಕೆ ಪದವಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಸಂಸ್ಕೃತ ವಿಷಯವನ್ನು ಆಯ್ಕೆ ಮಾಡಿಕೊಂಡರೆ ಅದಕ್ಕೆ ಬದಲಾಗಿ ಬೇರೆ ವಿಷಯ ತೆಗೆದುಕೊಳ್ಳುವಂತೆ ಪ್ರಾಚಾರ್ಯರು ಸೂಚಿಸುತ್ತಿದ್ದರು. ಪ್ರಸ್ತುತ ಪರೀಕ್ಷೆಯ ಅರ್ಜಿ ತುಂಬುವ ಸಂದರ್ಭದಲ್ಲಿ ಸಹ ಪ್ರಾಚಾರ್ಯರು ಸಂಸ್ಕೃತ ವಿಷಯ ಆಯ್ದುಕೊಳ್ಳಲು ಬಿಡುತ್ತಿಲ್ಲ’ ಎಂದು ವಿದ್ಯಾರ್ಥಿಯೊಬ್ಬರು ಹೇಳಿದರು.

‘ಸಂಸ್ಕೃತ ವಿಷಯ ಆಯ್ಕೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳನ್ನು ಕರೆದು ಈ ವಿಭಾಗ ನಡೆಸಲು ಕನಿಷ್ಠ ಐವರು ವಿದ್ಯಾರ್ಥಿಗಳು ಬೇಕು. ಬೇರೆ ಯಾವ ವಿದ್ಯಾರ್ಥಿಯೂ ಇಲ್ಲದ ಕಾರಣ ಕನ್ನಡ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ ಎಂದು ಪ್ರಾಚಾರ್ಯರು ಹೇಳುತ್ತಿದ್ದರು. ಕೆಲವರು ಒಲ್ಲದ ಮನಸ್ಸಿನಿಂದ ಇದನ್ನು ಒಪ್ಪಿಕೊಂಡರು. 15ಕ್ಕೂ ಹೆಚ್ಚು ವಿದ್ಯಾರ್ಥಿಗಳ ಬಳಿ ಪ್ರಾಚಾರ್ಯರು ಹೀಗೆ ಹೇಳಿರುವುದು ವಿದ್ಯಾರ್ಥಿಗಳ ವಲಯದಲ್ಲಿ ಗೊತ್ತಾದಾಗ ನಾವು ಪ್ರಾಚಾರ್ಯರನ್ನು ಪ್ರಶ್ನಿಸಿದೆವು. ಈಗ ವಿಳಂಬವಾಗಿರುವ ಕಾರಣ ಸಂಸ್ಕೃತ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು. ಸಂಸ್ಕೃತ ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ಎರಡು ತಿಂಗಳಿಂದ ಪಾಠವಿಲ್ಲದೇ ಅತಂತ್ರರಾಗಿದ್ದಾರೆ’ ಎಂದು ಇನ್ನೊಬ್ಬ ವಿದ್ಯಾರ್ಥಿ ಹೇಳಿದರು.

‘ಪರೀಕ್ಷೆ ಅರ್ಜಿ ತುಂಬುವ ವೇಳೆ ವಿಷಯ ಬದಲಾಯಿಸಬಹುದು. 15 ವಿದ್ಯಾರ್ಥಿಗಳಿದ್ದರೆ ಸಂಸ್ಕೃತ ಕಲಿಯಲು ವಿಶ್ವವಿದ್ಯಾಲಯ ಅವಕಾಶ ಕಲ್ಪಿಸುತ್ತದೆ. ಆದರೆ ಅದಕ್ಕೆ ಪ್ರಾಚಾರ್ಯರ ಪ್ರಯತ್ನ ಅಗತ್ಯವಿರುತ್ತದೆ’ ಎಂದು ಅತಿಥಿ ಉಪನ್ಯಾಸಕರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT