ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವೂದ್‌ ಪಾಕ್‌ನಲ್ಲಿದ್ದಾನೆ: ಕಸ್ಕರ್‌

Last Updated 22 ಸೆಪ್ಟೆಂಬರ್ 2017, 19:33 IST
ಅಕ್ಷರ ಗಾತ್ರ

ಠಾಣೆ: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಈಗಲೂ ಪಾಕಿಸ್ತಾನದಲ್ಲಿ ಇರುವುದನ್ನು ಆತನ ಸಹೋದರ ಇಕ್ಬಾಲ್‌ ಕಸ್ಕರ್‌ ಖಚಿತಪಡಿಸಿದ್ದಾನೆ.

ಕಸ್ಕರ್‌ನನ್ನು ಇತ್ತೀಚೆಗೆ ಹಣ ಸುಲಿಗೆ ಪ್ರಕರಣಕ್ಕಾಗಿ ಠಾಣೆ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದರು. ಈತನ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಗುಪ್ತದಳ ಮತ್ತು ಠಾಣೆ ಪೊಲೀಸ್‌ ಅಪರಾಧ ವಿಭಾಗದ ಅಧಿಕಾರಿಗಳಿಗೆ ದಾವೂದ್‌ ಪಾಕಿಸ್ತಾನದಲ್ಲಿರುವ ವಿಷಯ ತಿಳಿಸಿದ್ದಾನೆ.

ದಾವೂದ್‌ಗೆ ಸಂಬಂಧಿಸಿದಂತೆ ಮಹತ್ವದ ಕೆಲವು ವಿಷಯಗಳನ್ನು ಕಸ್ಕರ್‌ ಬಹಿರಂಗಪಡಿಸಿದ್ದಾನೆ. ದಾವೂದ್‌ನ ಪಾಕಿಸ್ತಾನದ
ನಾಲ್ಕೈದು ವಿಳಾಸಗಳನ್ನು ಸಹ ತಿಳಿಸಿದ್ದಾನೆ. ದಾವೂದ್‌ ಮತ್ತು ಆತನ ಜತೆ ಇರುವ ಇನ್ನೊಬ್ಬ ಸಹೋದರ ಅನೀಸ್‌ ಮತ್ತು ಚೋಟಾ ಶಕೀಲ್‌ ಕರಾಚಿಯ ಪ್ರತಿಷ್ಠಿತ ಕಾಲೋನಿಯೊಂದರಲ್ಲಿ ವಾಸಿಸುತ್ತಿದ್ದಾರೆ. ದಾವೂದ್‌ನ ಆರೋಗ್ಯವು ಉತ್ತಮವಾಗಿದ್ದು, ಯಾವುದೇ ಕಾಯಿಲೆಯಿಂದ ಬಳಲುತ್ತಿಲ್ಲ ಎಂದು ತಿಳಿಸಿದ್ದಾನೆ.

ಫೋನ್‌ ಕದ್ದಾಲಿಕೆ ಮಾಡುವ ಭಯದಿಂದ ಕಳೆದ ಮೂರು ವರ್ಷಗಳಿಂದ ದಾವೂದ್‌ ತನ್ನ ಸಂಬಂಧಿಕರಿಗೆ ಮತ್ತು ಸಹಚರರಿಗೆ ಕರೆ ಮಾಡುವುದನ್ನು ನಿಲ್ಲಿಸಿದ್ದಾನೆ.  ದಾವೂದ್‌ ಜತೆ ಇರುವಇನ್ನೊಬ್ಬ ಸಹೋದರ ಅನೀಸ್‌ ಜತೆ ಇತ್ತೀಚಿನ ದಿನಗಳಲ್ಲಿ ನಾಲ್ಕೈದು ಬಾರಿ ಮಾತ್ರ ತಾನು ಮಾತುಕತೆ ನಡೆಸಿರುವುದಾಗಿ ಕಸ್ಕರ್‌ ತಿಳಿಸಿದ್ದಾನೆ. ಕಸ್ಕರ್‌ ನೀಡಿರುವ ಮಾಹಿತಿಯಿಂದ ದಾವೂದ್‌ ಇಬ್ರಾಹಿಂ ವಿರುದ್ಧಮುಂಬೈ ಮತ್ತು ಠಾಣೆಗಳಲ್ಲಿ ದಾಖಲಾಗಿರುವ ಹಲವು ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಸಹಕಾರಿಯಾಗಲಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕಸ್ಕರ್‌ ಬಂಧನದ ಬಳಿಕ ಮತ್ತೆ ಇಬ್ಬರು ಹಣ ಸುಲಿಗೆ ಬಗ್ಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ. 2013ರಿಂದ ಠಾಣೆಯಲ್ಲಿನ ಪ್ರಮುಖ ಬಿಲ್ಡರ್‌ವೊಬ್ಬರಿಗೆ ದಾವೂದ್‌ ಹೆಸರಿನಲ್ಲಿ ಕಸ್ಕರ್‌ ಮತ್ತು ಆತನ ಸಹಚರರು ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದರು. ಆ ಉದ್ಯಮಿಯಿಂದ ಇದುವರೆಗೆ ₹30 ಲಕ್ಷ ಮತ್ತು ನಾಲ್ಕು ಫ್ಲ್ಯಾಟ್‌ಗಳನ್ನು ಪಡೆದಿದ್ದರು ಎಂದು ತಿಳಿಸಿದ್ದಾರೆ.

ದಾವೂದ್‌ನ ಮಾದಕ ದ್ರವ್ಯ ವ್ಯವಹಾರ ಆಫ್ರಿಕಾ, ದಕ್ಷಿಣಅಮೆರಿಕದವರೆಗೆ ವಿಸ್ತರಿಸಿದೆ. ಕಸ್ಕರ್‌ ಮುಂಬೈನಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈಗೆ ಭೇಟಿ ನೀಡಿದ್ದ ದಾವೂದ್ ಪತ್ನಿ

ದಾವೂದ್‌ನ ಪತ್ನಿ ಮೆಹಜಬಿನ್‌ ಕಳೆದ ವರ್ಷ ತನ್ನ ತಂದೆಯನ್ನು ನೋಡಲು ಮುಂಬೈಗೆ ಭೇಟಿ ನೀಡಿದ್ದರು ಎನ್ನುವ ವಿಷಯವನ್ನು ಕಸ್ಕರ್‌ ಪೊಲೀಸರಿಗೆ ತಿಳಿಸಿದ್ದಾನೆ.

ತಮ್ಮ ತಂದೆ ಸಲಿಂ ಕಾಶ್ಮೀರಿ ಅವರನ್ನು ಭೇಟಿಯಾದ ಬಳಿಕ ಯಾರಿಗೂ ಗೊತ್ತಾಗದ ರೀತಿಯಲ್ಲಿ ಮತ್ತೆ ಭಾರತದಿಂದ ತೆರಳಿದ್ದರು ಎಂದು ಕಸ್ಕರ್‌ ವಿಚಾರಣೆ ವೇಳೆ ತಿಳಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT