ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ್ದಲ್ಲ! ‘ಅನ್ವಯ’ದ ಸೇವೆ

Last Updated 22 ಸೆಪ್ಟೆಂಬರ್ 2017, 19:49 IST
ಅಕ್ಷರ ಗಾತ್ರ

ಬೆಂಗಳೂರು: ಬಳಸಿದ ಸೈಕಲ್‌ಗಳನ್ನು ಬಡವಿದ್ಯಾರ್ಥಿಗಳಿಗೆ ಉಚಿತ ವಿತರಣೆ ಮಾಡುವ ಅಭಿಯಾನವನ್ನು ಅನ್ವಯ ಪ್ರತಿಷ್ಠಾನ ಆರಂಭಿಸಿದೆ. ಇದರಲ್ಲಿನ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಉಳ್ಳವರ ಮನೆಯಲ್ಲಿನ, ಬಳಸಬಹುದಾದ ಸೈಕಲ್‌ಗಳನ್ನು ಕಲೆಹಾಕಿ ಅರ್ಹ ಬಡಮಕ್ಕಳಿಗೆ ವಿತರಿಸುವ ‘ಫ್ರೀಡಮ್‌ ಪೆಡಲ್ಸ್‌’ ಅಭಿಯಾನ ಆರಂಭಿಸಿದ್ದಾರೆ.

ಮೂರು ವರ್ಷದ ಹಿಂದೆ ಇಬ್ಬರು ಬಡಮಕ್ಕಳು ಮುರುಕಲು ಸೈಕಲ್‌ನೊಂದಿಗೆ ಆಟವಾಡುತ್ತಿರುವುದು ಪ್ರತಿಷ್ಠಾನದ ಸ್ಥಾಪಕ ಸಂಪತ್‌ ರಾಮಾನುಜಂ ಅವರ ಕಣ್ಣಿಗೆ ಬಿತ್ತಂತೆ. ಅದು ಸರ್ಕಾರಿ ಶಾಲೆಗಳಲ್ಲಿನ ಬಡವಿದ್ಯಾರ್ಥಿಗಳಿಗೆ ಸೈಕಲ್‌ ವಿತರಿಸುವ ಅಭಿಯಾನ ಆರಂಭಿಸಲು ಪ್ರೇರಣೆಯಾಯಿತಂತೆ.

ಈ ಅಭಿಯಾನದ ಮೂಲಕ ರಾಮಾನುಜಂ ಅವರ ತಂಡ 300ಕ್ಕೂ ಹೆಚ್ಚು ಬಡಮಕ್ಕಳಿಗೆ ಉಚಿತವಾಗಿ ಸೈಕಲ್‌ಗಳನ್ನು ವಿತರಿಸಿದೆ. ‘ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಬಹುತೇಕ ವಿದ್ಯಾರ್ಥಿಗಳು ನಡೆದುಕೊಂಡು ಶಾಲೆಗೆ ಹೋಗುತ್ತಾರೆ. ಕೆಲವು ಪೋಷಕರಿಗೆ ಸೈಕಲ್‌ ಕೊಡಿಸುವಷ್ಟು ಶಕ್ತರಾಗಿರುವುದಿಲ್ಲ. ನಮ್ಮ ಅಭಿಯಾನದಿಂದ ಬಡವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ’ ಎನ್ನುತ್ತಾರೆ ಸಂಪತ್‌.

‘ನಾನಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ 50ಕ್ಕೂ ಹೆಚ್ಚು ಸೈಕಲ್‌ಗಳು ಬಳಕೆಯಾಗದೆ ಮೂಲೆ ಸೇರಿದ್ದವು. ನಮ್ಮ ತಂಡವು ನಿವಾಸಿಗಳ ಮನವೊಲಿಸಿ ಅವುಗಳನ್ನು ತಂದು, ರಿಪೇರಿ ಮಾಡಿಸಿ, ಅರ್ಹರಿಗೆ ವಿತರಣೆ ಮಾಡಿದೆ’ ಎಂದು ತಿಳಿಸಿದರು.

ಶಾಲೆಯೊಂದರ ಗರಿಷ್ಠ 50 ಮಕ್ಕಳಿಗೆ ಸೈಕಲ್‌ ವಿತರಿಸಲಾಗುತ್ತಿದೆ. ಇತ್ತೀಚೆಗೆ ಕೆ.ದೊಮ್ಮಸಂದ್ರ ಸರ್ಕಾರಿ ಶಾಲೆಯಲ್ಲಿ ಸೈಕಲ್‌ ವಿತರಣೆ ಮಾಡಲಾಗಿದೆ. ಶನಿವಾರ(ಇಂದು) ಸಿಗೇಹಳ್ಳಿ ಸರ್ಕಾರಿ ಶಾಲೆಯಲ್ಲಿ ಸೈಕಲ್‌ ವಿತರಣೆ ಕಾರ್ಯಕ್ರಮವಿದೆ.

‘ಸೈಕಲ್‌ ಪಡೆದ ಮಕ್ಕಳು ಬಹಳ ಖುಷಿಯಿಂದ ಶಾಲೆಗೆ ಬರುತ್ತಿದ್ದಾರೆ’ ಎಂದು ಕೆ.ದೊಮ್ಮಸಂದ್ರ ಶಾಲೆಯ ಶಿಕ್ಷಕ ವೆಂಕಟರಾಮಯ್ಯ ತಿಳಿಸಿದರು.

ಈ ಅಭಿಯಾನದ ಕುರಿತ ತಿಳಿದ ನಗರದ 200ಕ್ಕೂ ಹೆಚ್ಚು ಜನರು ಸೈಕಲ್‌ಗಳನ್ನು ನೀಡಲು ಮುಂದೆ ಬಂದಿದ್ದಾರೆ. ಅವುಗಳನ್ನು ಸಂಗ್ರಹಿಸಲು ಪ್ರತಿಷ್ಠಾನವೆ ವಾಹನದ ವ್ಯವಸ್ಥೆ ಮಾಡಿದೆ.

ಉಚಿತ ಪಾದರಕ್ಷೆ ವಿತರಣೆ: ಶಾಲೆಗಳಿಗೆ ಮಕ್ಕಳು ಬರಿಗಾಲಿನಲ್ಲಿ ಹೋಗುವುದನ್ನು ಕಂಡ 12ನೇ ತರಗತಿಯ ಆಧ್ಯ ಧುಲೆರ್‌ ಅವರ ಮನ ಕರಗಿತು. ಅಪ್ಪನ ಸಹಾಯದಿಂದ ‘ದಿ ಸೇವ್ಡ್‌ ಸೊಲ್ಸ್‌ ಫೌಂಡೇಷನ್‌’ ಸ್ಥಾಪಿಸಿದ್ದಾರೆ. ಈ ಮೂಲಕ ಬಳಸಲು ಯೋಗ್ಯವಾದ, ಮಕ್ಕಳು ಬಳಸಿದ ಚಪ್ಪಲಿ ಮತ್ತು ಶೂಗಳನ್ನು ಕಲೆಹಾಕುತ್ತಾರೆ. ಅವುಗಳನ್ನು ಅರ್ಹ ಬಡವಿದ್ಯಾರ್ಥಿಗಳಿಗೆ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಇವರೆಗೂ ಸುಮಾರು 2,000  ಜತೆ ಶೂಗಳನ್ನು ವಿತರಣೆ ಮಾಡಿದ್ದಾರೆ.

‘ಬಹುತೇಕ ಪೋಷಕರು, ಮಕ್ಕಳು ದೊಡ್ಡವರಾದ ಬಳಿಕ ಅವರ ಶೂಗಳನ್ನು ಬಿಸಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಬಳಕೆಗೆ ಯೋಗ್ಯವಾಗಿರುವ ಶೂಗಳು ಬಡಮಕ್ಕಳಿಗೆ ಸಿಕ್ಕಾಗ ಅವರ ಮುಖದಲ್ಲೂ ನಗು ಮೂಡುತ್ತದೆ’ ಎನ್ನುತ್ತಾರೆ ಧುಲೆರ್‌ ಅವರ ತಂದೆ ವಿಜಯ್‌.

ತಾವು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಪಾದರಕ್ಷೆ ವಿತರಣಾ ಅಭಿಯಾನದ ಕುರಿತು ಆಧ್ಯ ಮಾಹಿತಿ ನೀಡುತ್ತಿದ್ದಾರೆ. ಇದಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ.

ಮಾಹಿತಿಗೆ: https://www.donatekart.com/Anvaya/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT